ಜೂನಿಯರ್‌ ಬಾಕ್ಸಿಂಗ್‌: ಭಾರತಕ್ಕೆ ಏಳು ಪದಕ; ಕರ್ನಾಟಕದ ಅಂಜುಗೆ ಚಿನ್ನ

ಭಾನುವಾರ, ಜೂಲೈ 21, 2019
28 °C

ಜೂನಿಯರ್‌ ಬಾಕ್ಸಿಂಗ್‌: ಭಾರತಕ್ಕೆ ಏಳು ಪದಕ; ಕರ್ನಾಟಕದ ಅಂಜುಗೆ ಚಿನ್ನ

Published:
Updated:
Prajavani

ನವದೆಹಲಿ: ಭಾರತದ ಜೂನಿಯರ್‌ ಮಹಿಳಾ ಬಾಕ್ಸರ್‌ಗಳು ಜರ್ಮನಿಯ ವಿಲ್ಲಿಂಜೆನ್‌ ಬ್ಲ್ಯಾಕ್‌ ಫಾರೆಸ್ಟ್ ಕಪ್‌ ಟೂರ್ನಿಯಲ್ಲಿ ಭರ್ಜರಿ ಪ್ರದರ್ಶನದಿಂದ ಗಮನಸೆಳೆದರು. ಐದು ಚಿನ್ನ ಸೇರಿದಂತೆ ಏಳು ಪದಕಗಳನ್ನು ಬಾಚಿಕೊಳ್ಳುವ ಮೂಲಕ ಟೂರ್ನಿಯ ಅತ್ಯುತ್ತಮ ತಂಡವೆಂಬ ಗೌರವವನ್ನು ಭಾರತ ಗಳಿಸಿತು.

ನೇಹಾ (54 ಕೆಜಿ ವಿಭಾಗ) ಹಾಗೂ ಅಂಜು ದೇವಿ (50 ಕೆಜಿ ವಿಭಾಗ) ಕ್ರಮವಾಗಿ ಟೂರ್ನಿಯ ಅತ್ಯುತ್ತಮ ಬಾಕ್ಸರ್‌ ಹಾಗೂ ಭರವಸೆಯ ಆಟಗಾರ್ತಿ ಗೌರವ ಸಂಪಾದಿಸಿದರು. ನೇಹಾ ಹರಿಯಾಣದವರು. ಮಣಿಪುರ ಮೂಲದ ಅಂಜು ಬಳ್ಳಾರಿಯ ಇನ್‌ಸ್ಪೈರ್ ಇನ್‌ಸ್ಟಿಟ್ಯೂಟ್ ಆಫ್ ಸ್ಪೋರ್ಟ್ಸ್‌ನಲ್ಲಿ ಅಭ್ಯಾಸ ಮಾಡುತ್ತಿದ್ದಾರೆ.

ತಮನ್ನಾ (48 ಕೆಜಿ), ಅಂಜು, ನೇಹಾ, ಎಚ್‌. ಅಂಬೆಶೋರಿ ದೇವಿ (57 ಕೆಜಿ) ಮತ್ತು ಪ್ರೀತಿ ದಹಿಯಾ (60 ಕೆಜಿ) ಬಂಗಾರದ ಕಿರೀಟ ಧರಿಸಿದರು. ಭಾರತದ ಒಟ್ಟು 13 ಮಂದಿ ಬಾಕ್ಸರ್‌ಗಳು ಟೂರ್ನಿಯಲ್ಲಿ ಭಾಗವಹಿಸಿದ್ದರೆಂದು ಭಾರತ ಬಾಕ್ಸಿಂಗ್‌ ಫೆಡರೇಷನ್‌ ತಿಳಿಸಿದೆ.

ತಮನ್ನಾ ಅವರು ಉಕ್ರೇನ್‌ನ ದರಿಯಾ ಎದುರು ಅಲ್ಪ ಪ್ರತಿರೋಧ ಎದುರಿಸಿದರೂ 4–1ರಿಂದ ಗೆಲುವಿನ ನಗೆ ಬೀರಿದರು. ನೇಹಾ ಅವರು ಲಿಥುವೇನಿಯಾದ ಕಾರಾ ಕೊರ್ನೆಲಿಜಾ ವಿರುದ್ಧ ಅಧಿಕಾರಯುತ ಜಯ ಸಂಪಾದಿಸಿದರು. ಜರ್ಮನಿಯ ಫ್ಯಾಟಿಮಾ ಅವರನ್ನು ಅಂಜು ಸೋಲಿಸಿದರೆ, ಅಂಬೆಶೋರಿ ದೇವಿ ಹಾಗೂ ಪ್ರೀತಿ ಅವರು ಪರಿಣಾಮಕಾರಿ ಪ್ರದರ್ಶನದಿಂದ ಗಮನಸೆಳೆದರು.

ಭಾರತ ಇತರ ಸ್ಪರ್ಧಿಗಳಾದ ತನ್ನು (52 ಕೆಜಿ) ಹಾಗೂ ಆಶ್ರೇಯಾ ದಿನೇಶ್‌ ನಾಯ್ಕ(63 ಕೆಜಿ) ಅವರು ಫೈನಲ್‌ ಪಂದ್ಯಗಳಲ್ಲಿ ನಿರಾಶೆ ಅನುಭವಿಸಿ, ಬೆಳ್ಳಿ ಪದಕಕ್ಕೆ ತೃಪ್ತಿಪಟ್ಟರು.

ಭಾರತ, ಉಕ್ರೇನ್‌, ಜರ್ಮನಿ, ಕಜಕಸ್ತಾನ, ಲಾಟ್ವಿಯಾ, ಹಂಗರಿ, ಲಿಥುವೇನಿಯಾ, ಮಂಗೋಲಿಯಾ, ಗ್ರೀಸ್‌ ಹಾಗೂ ಪೋಲೆಂಡ್‌ ತಂಡಗಳು ಟೂರ್ನಿಯಲ್ಲಿ ಪಾಲ್ಗೊಂಡಿವೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !