ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಥಾಯ್ಲೆಂಡ್ ಓಪನ್ ಬಾಕ್ಸಿಂಗ್: ಗೋವಿಂದ್‌, ಅನಂತ, ಸುಮಿತ್‌ಗೆ ಚಿನ್ನ

ಅಮಿತ್ ಫಂಘಾಲ್‌ಗೆ ಸೋಲು
Last Updated 9 ಏಪ್ರಿಲ್ 2022, 13:30 IST
ಅಕ್ಷರ ಗಾತ್ರ

ನವದೆಹಲಿ: ಭಾರತದ ಗೊವಿಂದ್ ಸಹಾನಿ, ಅನಂತ ಪ್ರಹ್ಲಾದ ಚೋಪ್ಡೆ ಮತ್ತು ಸುಮಿತ್ ಅವರು ಥಾಯ್ಲೆಂಡ್ ಓಪನ್ ಬಾಕ್ಸಿಂಗ್ ಚಾಂಪಿಯನ್‌ಷಿಪ್‌ನಲ್ಲಿ ಶನಿವಾರ ಚಿನ್ನಕ್ಕೆ ಮುತ್ತುನೀಡಿದರು. ಫುಕೆಟ್‌ನಲ್ಲಿ ನಡೆದ ಚಾಂಪಿಯನ್‌ಷಿಪ್‌ನ ಫೈನಲ್‌ನಲ್ಲಿ ಮೂವರೂ ಏಕಪಕ್ಷೀಯವಾಗಿ ಜಯ ಗಳಿಸಿದರು. ನಿರೀಕ್ಷೆ ಮೂಡಿಸಿದ್ದ ಅಮಿತ್ ಫಂಘಾಲ್ ಸೋಲಿಗೆ ಶರಣಾದರು.

75 ಕೆಜಿ ವಿಭಾಗದಲ್ಲಿ ಸುಮಿತ್ ಸ್ಥಳೀಯ ಬಾಕ್ಸರ್ ಪೀತಾಪತ್ ಈಸುಂಗ್‌ನ್ಯಾನ್‌ ಎದುರು 5–0ಯಿಂದ ಜಯ ಗಳಿಸಿದರು. ಗೋವಿಂದ್ ಸಹಾನಿ ಕೂಡ ಸ್ಥಳೀಯ ಕ್ರೀಡಾಪಟು ನತ್ತಾಫನ್ ತುವಾಮ್‌ಚರೊನ್ ಎದುರು 5–0ಯಿಂದ ಗೆದ್ದರು. ಈ ಇಬ್ಬರೂ ಕ್ರಮವಾಗಿ 75 ಕೆಜಿ ಮತ್ತು 48 ಕೆಜಿ ವಿಭಾಗದಲ್ಲಿ ರಾಷ್ಟ್ರೀಯ ಚಾಂಪಿಯನ್ ಆಗಿದ್ದಾರೆ.

54 ಕೆಜಿ ವಿಭಾಗದಲ್ಲಿ ಸ್ಪರ್ಧಿಸಿದ್ದ ಅನಂತ ಆಕ್ರಮಣಕಾರಿ ಮತ್ತು ರಕ್ಷಣಾತ್ಮಕ ಆಟದ ಮೂಲಕ ಎದುರಾಳಿ ಥಾಯ್ಲೆಂಡ್‌ನ ರಿಥಿಯಾಮೊನ್ ಸಾಯಿಂಗ್‌ಸ್ವಾಂಗ್ ಅವರನ್ನು ಗೊಂದಲಕ್ಕೆ ಸಿಲುಕಿಸಿ ಗೆಲುವು ಸಾಧಿಸಿದರು.

ಅಮಿತ್ ಫಂಘಾಲ್‌ಗೆ ಆಘಾತ

52 ಕೆಜಿ ವಿಭಾಗದಲ್ಲಿ ಕಣಕ್ಕೆ ಇಳಿದ 2019ರ ವಿಶ್ವ ಚಾಂಪಿಯನ್‌ಷಿಪ್‌ನ ಬೆಳ್ಳಿ ಪದಕ ವಿಜೇತ ಅಮಿತ್ ಫಂಘಾಲ್ ಪ್ರಬಲ ಪೈಪೋಟಿಯ ನಂತರ ಫಿಲಿಪ್ಪೀನ್ಸ್‌ನ ರಾಗೆನ್ ಲಾಡಾನ್‌ಗೆ 2–3ರಲ್ಲಿ ಮಣಿದರು.

48 ಕೆಜಿ ವಿಭಾಗದಲ್ಲಿ ಮೋನಿಕಾ, 60 ಕೆಜಿಯಲ್ಲಿ ವರಿಂದರ್ ಸಿಂಗ್ ಮತ್ತು 81 ಕೆಜಿ ವಿಭಾಗದಲ್ಲಿ ಆಶಿಶ್ ಕುಮಾರ್ ಕೂಡ ಸೋತರು. 75 ಕೆಜಿ ವಿಭಾಗದಲ್ಲಿ ಕಳೆದ ಬಾರಿ ಚಿನ್ನದ ಪದಕ ಗೆದ್ದುಕೊಂಡಿದ್ದ ಆಶಿಶ್ ಈ ಬಾರಿ 81 ಕೆಜಿ ವಿಭಾಗದಲ್ಲಿ ಸ್ಪರ್ಧಿಸಿದ್ದರು. ಫೈನಲ್‌ನಲ್ಲಿ ಅವರು ಕಜಕಸ್ತಾನದ ನೂರ್‌ಬೆಕ್ ಒರಲ್ಬೆ ವಿರುದ್ಧ 0–5ರಲ್ಲಿ ಸೋತರು.

ಜಿದ್ದಾಜಿದ್ದಿಯ ಪೈಪೋಟಿಯಲ್ಲಿ 26 ವರ್ಷದ ಮೋನಿಕಾ ಸ್ಥಳೀಯ ಬಾಕ್ಸರ್ ಚೂತಾಮಸ್ ರಕ್ಷಾ ವಿರುದ್ಧ 0–5ರಲ್ಲಿ ಸೋತರು. ವರಿಂದರ್ ಸಿಂಗ್ ಅವರನ್ನು ಸ್ಥಳೀಯ ಸ್ಪರ್ಧಿ ಖೂನಾತಿಪ್ ಪಿಡ್ನುಚ್ 0–5ರಲ್ಲಿ ಮಣಿಸಿದರು.

ಮೂರು ಚಿನ್ನ ಮತ್ತು ನಾಲ್ಕು ಬೆಳ್ಳಿ ಸೇರಿದಂತೆ ಭಾರತ ಈ ಬಾರಿ 10 ಪದಕಗಳನ್ನು ಗೆದ್ದುಕೊಂಡಿತು. ಕಳೆದ ಬಾರಿ ಒಂದು ಚಿನ್ನ, ನಾಲ್ಕು ಬೆಳ್ಳಿ ಮತ್ತು ಮೂರು ಕಂಚಿನ ಪದಕಗಳು ಲಭಿಸಿದ್ದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT