ಶುಕ್ರವಾರ, ಸೆಪ್ಟೆಂಬರ್ 25, 2020
23 °C

ಜಿಮ್ನಾಸ್ಟ್‌ ತ್ರಿಶೂಲ್‌ ಎಸ್ಸೆಸ್ಸೆಲ್ಸಿಯಲ್ಲಿಯೂ ಚಾಂಪಿಯನ್

ಗಿರೀಶ ದೊಡ್ಡಮನಿ Updated:

ಅಕ್ಷರ ಗಾತ್ರ : | |

Prajavani

ಕ್ರಿಕೆಟಿಗ ಮಹೇಂದ್ರಸಿಂಗ್ ಧೋನಿ ಜೀವನ ಆಧಾರಿತ ಚಲನಚಿತ್ರದಲ್ಲಿ ಒಂದು ಡೈಲಾಗ್ ಇದೆ.

‘ಪಡೋಗೆ ಲಿಕೋಗೆ ತೋ ಬನೋಗೆ ನವಾಬ್, ಖೇಲೊಗೇ ಖೂದೋಗೆ ತೋ ಹೋಂಗೆ ಖರಾಬ್‌’ ಅಂದರೆ; ಓದು–ಬರಹ ಕಲಿತರೆ ರಾಜನಾಗಬಹುದು, ಆಡುತ್ತ, ಜಿಗಿಯುತ್ತ ಇದ್ದರೆ ಕೆಟ್ಟುಹೋಗ್ತಾರೆ ಎನ್ನುವುದು ಈ ಮಾತಿನ ಅರ್ಥ.

ಆದರೆ, ಬೆಂಗಳೂರಿನ ಬಿ.ಎನ್. ತ್ರಿಶೂಲ್ ಗೌಡ ಮಾತ್ರ ಆಟ ಮತ್ತು ಪಾಠ ಎರಡರಲ್ಲೂ ನವಾಬನಾಗಿದ್ದಾರೆ. ಜಿಮ್ನಾಸ್ಟಿಕ್ಸ್‌ನಂತಹ ಕಠಿಣ ಕ್ರೀಡೆಯಲ್ಲಿ ರಾಷ್ಟ್ರಮಟ್ಟದಲ್ಲಿ ಮಿಂಚುತ್ತಿರುವ ತ್ರಿಶೂಲ್, ಎಸ್ಸೆಸ್ಸೆಲ್ಸಿಯಲ್ಲಿಯೂ  ಶೇ 92ರಷ್ಟು ಅಂಕ ಗಳಿಸಿ ಗಮನ ಸೆಳೆದಿದ್ದಾರೆ. ಒಟ್ಟು 625 ಅಂಕಗಳಲ್ಲಿ 571 ಅಂಕಗಳನ್ನು ಗಳಿಸಿದ್ದಾರೆ.  ನಾಗರಬಾವಿಯ ಸೇಂಟ್ ಸೋಫಿಯಾ ಪ್ರೌಢಶಾಲೆಯ ವಿದ್ಯಾರ್ಥಿಯಾಗಿರುವ ತ್ರಿಶೂಲ್ ಇಂಗ್ಲಿಷ್‌ ಮಾಧ್ಯಮದ ವಿದ್ಯಾರ್ಥಿ ಆದರೆ, ಅವರಿಗೆ ಅತಿ ಹೆಚ್ಚು ಅಂಕ ದೊರೆತಿರುವುದು ಕನ್ನಡದಲ್ಲಿ.

‘ಕನ್ನಡ ವಿಷಯವನ್ನು ನಾನು ಪ್ರಥಮ ಭಾಷೆಯಾಗಿ ತೆಗೆದುಕೊಂಡಿದ್ದೆ. ಅದರಲ್ಲಿ 125ಕ್ಕೆ 121 ಅಂಕ ಗಳಿಸಿದ್ದೇನೆ. ಅದು ಬಿಟ್ಟರೆ  ಇಂಗ್ಲಿಷ್ ಮತ್ತು ವಿಜ್ಞಾನದಲ್ಲಿಯೂ 90ಕ್ಕಿಂತ ಹೆಚ್ಚು ಅಂಕಗಳನ್ನು ಗಳಿಸಿದ್ದೇನೆ’ ಎಂದು ತ್ರಿಶೂಲ್ ಹೆಮ್ಮೆಯಿಂದ ಹೇಳುತ್ತಾರೆ.

ಜಿಮ್ನಾಸ್ಟಿಕ್ಸ್‌ನಲ್ಲಿ ರಾಜ್ಯದ ಚಾಂಪಿಯನ್ ಆಗಿರುವ ತ್ರಿಶೂಲ್, ಶ್ರೀಲಂಕಾದಲ್ಲಿ ನಡೆದಿದ್ದ ಆಹ್ವಾನಿತ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಸಬ್‌ ಜೂನಿಯರ್ ಮತ್ತು ಜೂನಿಯರ್ ವಿಭಾಗದ ಸ್ಪರ್ಧೆಗಳಲ್ಲಿ ಪದಕಗಳನ್ನು ಕೊರಳಿಗೇರಿಸಿಕೊಂಡಿದ್ದಾರೆ. ರೋಮನ್ ರಿಂಗ್ಸ್‌, ಟೇಬಲ್ ವಾಲ್ಟ್‌, ಹೈಬಾರ್ಸ್‌ ವಿಭಾಗಗಳಲ್ಲಿ ಇವರದ್ದು ಎತ್ತಿದ ಕೈ.

‘ಪ್ರತಿದಿನವೂ ಬಹಳಷ್ಟು ಹೊತ್ತು ಜಿಮ್ನಾಸ್ಟಿಕ್ಸ್‌ ಅಭ್ಯಾಸಕ್ಕೆ ಸಮಯ ಹೋಗುತ್ತಿತ್ತು. ಆದರೆ, ಅದರಿಂದ ದೈಹಿಕ ಮತ್ತು ಮಾನಸಿಕ ಸದೃಢತೆ ಗಳಿಸಿದ್ದೇನೆ.  ಏಕಾಗ್ರತೆಯ ಮಟ್ಟ ಬಹಳ ಉನ್ನತವಾಗಿದೆ. ಅಲ್ಲದೇ ಮೂರು ತಿಂಗಳು ಲಾಕ್‌ಡೌನ್‌ನಿಂದಾಗಿ ಪರೀಕ್ಷೆ ಮುಂದೆ ಹೋಗಿದ್ದು ಲಾಭವಾಯಿತು. ಒಂದು ಕಡೆ ಕೂತು ಚೆನ್ನಾಗಿ ಓದಿದೆ. ಈ ಸಾಧನೆ ಮಾಡಿದೆ’ ಎಂದು ತ್ರಿಶೂಲ್ ವಿವರಿಸುತ್ತಾರೆ.

ಕೆಳ ಮಧ್ಯಮವರ್ಗದ ಕುಟುಂಬದ ಬವಣೆಗಳ ಅರಿವು ತ್ರಿಶೂಲ್‌ಗೆ ಚೆನ್ನಾಗಿದೆ. ಕೊರಿಯರ್ ಡೆಲಿವರಿ   ಕಾರ್ಯನಿರ್ವಹಿಸುವ ತಂದೆ ನಾಗರಾಜ ಮತ್ತು ಖಾಸಗಿ ಶಾಲೆಯ ಶಿಕ್ಷಕಿಯಾಗಿರುವ ತಾಯಿ ಕವಿತಾ ಅವರ ಆದಾಯವೇ ಮನೆಗೆ ಆಧಾರ. ತ್ರಿಶೂಲ್ ಅವರ ಅಕ್ಕ ಕೂಡ ಎಂಜಿನಿಯರಿಂಗ್ ಓದುತ್ತಿದ್ದಾರೆ.

‘ಮುಂದೆ ವಿಜ್ಞಾನ ವಿಷಯದಲ್ಲಿ ಪಿಯುಸಿ ಮಾಡುತ್ತೇನೆ. ನಂತರ ನೌಕಾಪಡೆ ಸೇರಲು ಎನ್‌ಡಿಎ ಮಾಡುತ್ತೇನೆ. ಜಿಮ್ನಾಸ್ಟಿಕ್ಸ್‌ ಮುಂದುವರಿಸಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡುತ್ತೇನೆ’ ಎನ್ನುತ್ತಾ ಭವಿಷ್ಯದ ಕನಸು ಬಿಚ್ಚಿಡುತ್ತಾರೆ ತ್ರಿಶೂಲ್. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು