ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಮ್ನಾಸ್ಟಿಕ್‌ನಲ್ಲಿ ಹೊಸ ಅಲೆ

ಹುಬ್ಬಳ್ಳಿ–ಧಾರವಾಡದಲ್ಲಿ ಹೆಚ್ಚುತ್ತಿರುವ ಆಸಕ್ತಿ
Last Updated 29 ಏಪ್ರಿಲ್ 2019, 4:44 IST
ಅಕ್ಷರ ಗಾತ್ರ

ಮೂರು ವರ್ಷಗಳ ಹಿಂದೆ ಬ್ರೆಜಿಲ್‌ನ ರಿಯೊ ಡಿ ಜನೈರೊದಲ್ಲಿ ನಡೆದ ಒಲಿಂಪಿಕ್ಸ್‌ನ ಜಿಮ್ನಾಸ್ಟಿಕ್ ಸ್ಪರ್ಧೆಯಲ್ಲಿ ದೀಪಾ ಕರ್ಮಾಕರ್‌ ಕೂದಲೆಳೆ ಅಂತರದಲ್ಲಿ ಪದಕ ಗೆಲ್ಲುವ ಅವಕಾಶ ಕಳೆದುಕೊಂಡು ನಾಲ್ಕನೇ ಸ್ಥಾನ ಗಳಿಸಿದ್ದರು. ಆದರೂ, ಅವರು ಭಾರತದ ಕೋಟ್ಯಂತರ ಕ್ರೀಡಾಪ್ರೇಮಿಗಳ ಮನಸ್ಸು ಗೆದ್ದಿದ್ದರು. ಇವರ ಈ ಒಂದು ಸಾಧನೆ ಭಾರತದಲ್ಲಿ ಜಿಮ್ನಾಸ್ಟಿಕ್‌ ಸಾಧನೆಯ ಆಕಾಂಕ್ಷಿಗಳಿಗೆ ಬಹುದೊಡ್ಡ ಸ್ಫೂರ್ತಿಯಾಗಿದೆ. ದೀಪಾ, ಒಲಿಂಪಿಕ್ಸ್‌ಗೆ ಅರ್ಹತೆ ಪಡೆದ ಭಾರತದ ಮೊದಲ ಮಹಿಳಾ ಜಿಮ್ನಾಸ್ಟ್‌ ಆಗಿದ್ದಾರೆ. ಆದ್ದರಿಂದ ಅವರ ಸಾಧನೆ ಗ್ರಾಮೀಣ ಭಾಗದ ಸಾಧಕರಲ್ಲಿ ಛಲದ ಕಿಚ್ಚು ಹೊತ್ತಿಸಿದೆ.

ಇದರ ಪ್ರಭಾವ ಧಾರವಾಡ ಜಿಲ್ಲೆಯಲ್ಲಿಯೂ ಆಗುತ್ತಿದೆ. ಧಾರವಾಡದಲ್ಲಿರುವ ಹಾರಾಡಿ ರಾಮಣ್ಣ ಶೆಟ್ಟಿ ಬಾಲಮಾರುತಿ ಜಿಮ್ನಾಸ್ಟಿಕ್‌ ತರಬೇತಿ ಕೇಂದ್ರದಲ್ಲಿ ವರ್ಷದಿಂದ ವರ್ಷಕ್ಕೆ ತರಬೇತಿಗೆ ಬರುವ ‘ಸಾಹಸಿಗಳ’ ಸಂಖ್ಯೆ ಹೆಚ್ಚಾಗುತ್ತಿದೆ. ವಿಠ್ಠಲ ಗೋಪಾಲ ಮೂರ್ತಗುಡ್ಡೆ ತರಬೇತಿ ನೀಡುತ್ತಿದ್ದಾರೆ. ಅಲ್ಲಿ ನೂರು ಜನ ತರಬೇತಿ ಪಡೆಯುತ್ತಿದ್ದಾರೆ.

ಧಾರವಾಡದಲ್ಲಿ ನಾಲ್ಕು ದಶಕಗಳ ಹಿಂದೆಯೇ ಜಿಮ್ನಾಸ್ಟಿಕ್‌ಗೆ ಸಂಬಂಧಿಸಿದ ಹೆಜ್ಜೆಗುರುತುಗಳಿವೆ. ಕರ್ನಾಟಕ ಹೈಸ್ಕೂಲಿನ ಶಿಕ್ಷಕರಾಗಿದ್ದ ಎಸ್‌.ಬಿ. ಆರೋಸ್ಕರ್‌ ಯುವಕರು ದಾರಿ ತಪ್ಪದಿರಲಿ ಎನ್ನುವ ಕಾರಣಕ್ಕೆ ವ್ಯಾಯಾಮ ಕಲಿಸುತ್ತಿದ್ದರು.

ಮಲ್ಲಕಂಬ, ಕುಸ್ತಿ ಹೇಳಿಕೊಡುತ್ತಿದ್ದರು. ಮುಂದಿ ಜಿಮ್ನಾಸ್ಟಿಕ್‌ ನಿಧಾನವಾಗಿ ಬೆಳೆಯಲು ಆರೋಸ್ಕರ್‌ ಮೇಷ್ಟ್ರು ಹಾಕಿಕೊಟ್ಟ ವ್ಯಾಯಾಮಗಳ ಬುನಾದಿ ಕಾರಣವಾಯಿತು ಎಂದು ವಿಠ್ಠಲ್‌ ಅವರು ನೆನಪಿಸಿಕೊಳ್ಳುತ್ತಾರೆ.

1969ರಲ್ಲಿ ಯೂತ್‌ ಕೌನ್ಸಿಲ್‌ ರೀಜನಲ್‌ ಅಧಿಕಾರಿಯಾಗಿ ಮಧ್ಯಪ್ರದೇಶದಿಂದ ಧಾರವಾಡಕ್ಕೆ ಬಂದಿದ್ದ ಎಸ್‌.ಜಿ. ಟಿಕೇಗರ್‌ ಅವರು ಜಿಮ್ನಾಸ್ಟಿಕ್‌, ಅಥ್ಲೆಟಿಕ್ಸ್‌ ಮತ್ತು ಬ್ಯಾಸ್ಕೆಟ್‌ಬಾಲ್‌ ಕ್ರೀಡೆಗೆ ಸಂಬಂಧಿಸಿದ ಶಿಬಿರಗಳನ್ನು ನಡೆಸಿ ಸ್ಥಳೀಯ ಪ್ರತಿಭೆಗಳಿಗೆ ಅವಕಾಶ ಕೊಡುತ್ತಿದ್ದರು. ಇದರಿಂದ ಅನೇಕ ಸಾಹಸಿಗರು ಮುಂದೆ ಬಂದರು. ನಂತರದ ಕೆಲ ವರ್ಷಗಳಲ್ಲಿ ರಾಜ್ಯ ಮತ್ತು ರಾಷ್ಟ್ರೀಯ ಮಟ್ಟದ ಟೂರ್ನಿಗಳಲ್ಲಿ ವಿದ್ಯಾಕಾಶಿಯ ಜಿಮ್ನಾಸ್ಟ್‌ಗಳು ಪದಕಗಳನ್ನು ಜಯಿಸಿದ್ದರು.

ಧಾರವಾಡದಲ್ಲಿ ಪಿಎಸ್‌ಐ ಆಗಿರುವ ಶೀಲಾ ಜಾಂಬೋಟೆ, ಸುಧೀರ ದೇವದಾಸ್‌, ವಿಶಾಲ ಆಲೂರು, ಅಂತರ ವಿಶ್ವವಿದ್ಯಾಲಯಗಳ ಟೂರ್ನಿಯಲ್ಲಿ ಸಂಜಯ ಹಂಪಣ್ಣನವರ, ಪವನ ಮೂರ್ತಗುಡ್ಡೆ, ಪೂರ್ಣಿಮಾ ಗೋಧಿ, ಸಿದ್ಧಾರೂಢ ಕೈನಡಗು, ರಾಷ್ಟ್ರೀಯ ಜೂನಿಯರ್‌ ಟೂರ್ನಿಯಲ್ಲಿ ಅಕ್ಷತಾ ಕುಲಕರ್ಣಿ, ಅಂಕಿತಾ ಕುಲಕರ್ಣಿ, ಬಸವರಾಜ ಸಪ್ಪೂರೆ ಪದಕಗಳನ್ನು ಜಯಿಸಿದ್ದಾರೆ. ಅಮೃತ ನಾಗೇಶ ಮುದ್ರಬೆಟ್ಟ ಹತ್ತು ರಾಷ್ಟ್ರೀಯ ಟೂರ್ನಿಗಳಲ್ಲಿ ಪದಕಗಳನ್ನು ಗೆದ್ದುಕೊಂಡಿದ್ದಾರೆ.

ವಿಜಯಪುರ, ಬೀದರ್‌, ಬೆಂಗಳೂರು, ತುಮಕೂರಿನಿಂದ ಬಂದು ಧಾರವಾಡದಲ್ಲಿ ತರಬೇತಿ ಪಡೆಯುತ್ತಿದ್ದಾರೆ. ಬಾಲಮಾರುತಿ ಸಂಸ್ಥೆ ರಾಜ್ಯಮಟ್ಟದ ಏಳು ಟೂರ್ನಿಗಳನ್ನು ಸಂಘಟಿಸಿದೆ. ಬಾಲಕಿಯರಿಗೆ ವಾಲ್ಟ್‌, ಅನ್‌ ಇವನ್‌ ಬಾರ್ಸ್‌, ಬ್ಯಾಲೆನ್ಸ್‌ ಬೀಮ್‌, ಫ್ಲೋರ್‌ ಬಾಲಕರಿಗೆ ಫ್ಲೋರ್‌, ಪೊಮೆಲ್‌ ಹಾರ್ಸ್‌, ಸ್ಟಿಲ್‌ ರಿಂಗ್ಸ್‌, ವಾಲ್ಟ್‌, ಪ್ಯಾರಮಲ್‌ ಬಾರ್ಸ್‌ ಮತ್ತು ಹಾರಿಜಂಟಲ್‌ ಬಾರ್‌ ವಿಭಾಗದಲ್ಲಿ ತರಬೇತಿ ನೀಡಲಾಗುತ್ತದೆ.

ಹೊಸ ಅಲೆಯ ಹಿಂದಿನ ಸಾಧಕ

ಬ್ಯಾಂಕ್‌ನಲ್ಲಿ ಅಧಿಕಾರಿಯಾಗಿದ್ದ ವಿಠ್ಠಲ ಅವರು ಸ್ವಯಂ ನಿವೃತ್ತಿ ಪಡೆದು ತಮ್ಮ ಜೀವನವನ್ನು ಜಿಮ್ನಾಸ್ಟಿಕ್‌ ತರಬೇತಿಗೆ ಮುಡಿಪಾಗಿಟ್ಟಿದ್ದಾರೆ. 1974ರಿಂದಲೇ ತರಬೇತಿ ಆರಂಭಿಸಿದ್ದರು. ಇವರ ಗರಡಿಯಲ್ಲಿ ತರಬೇತಿ ಪಡೆದ ಜಿಮ್ನಾಸ್ಟ್‌ಗಳು ರಾಷ್ಟ್ರೀಯ ಟೂರ್ನಿಯಲ್ಲಿ ಪದಕಗಳನ್ನು ಜಯಿಸಿದ್ದಾರೆ.

ವಿಠ್ಠಲ್‌ 1973ರಿಂದ 82ರ ತನಕ ರಾಜ್ಯಮಟ್ಟದ ವೈಯಕ್ತಿಕ ಸ್ಪರ್ಧೆಯಲ್ಲಿ ಚಿನ್ನದ ಪದಕ ಜಯಿಸಿದ್ದರು. 1978ರಲ್ಲಿ ಪಂಜಾಬ್‌ನ ರೂಪ್‌ ನಗರದಲ್ಲಿ ನಡೆದ ಅಂತರ ವಿ.ವಿ.ಗಳ ಕ್ರೀಡಾಕೂಟದ ರೋಮನ್‌ ರಿಂಗ್‌ ಸ್ಪರ್ಧೆಯಲ್ಲಿ ಕಂಚು ಜಯಿಸಿದ್ದರು. 1979ರಲ್ಲಿ ಸೂರತ್‌ನಲ್ಲಿ ಜರುಗಿದ ರಾಷ್ಟ್ರೀಯ ಸೀನಿಯರ್‌ ಟೂರ್ನಿಯ ರೋಮನ್‌ ರಿಂಗ್‌ನಲ್ಲಿ ಚಿನ್ನ ಗೆದ್ದಿದ್ದರು. ‘ಈಗಿನ ಜಿಮ್ನಾಸ್ಟ್‌ಗಳಿಗೆ ವೃತ್ತಿಪರ ತರಬೇತಿ ಸಿಗುತ್ತಿದೆ. ಎಲ್ಲ ಸೌಲಭ್ಯಗಳು ಲಭಿಸುತ್ತಿವೆ. ದೀಪಾ ಕರ್ಮಾಕರ್‌ ಒಲಿಂಪಿಕ್ಸ್‌ನಲ್ಲಿ ನಾಲ್ಕನೇ ಸ್ಥಾನ ಪಡೆದ ಬಳಿಕ ಈ ಕ್ರೀಡೆಯಲ್ಲಿ ಹೊಸ ಅಲೆ ಶುರುವಾಗಿದೆ’ ಎಂದು ವಿಠ್ಠಲ್‌ ಹೇಳಿದರು.

‘ಮೊದಲು 14 ವರ್ಷದ ಒಳಗಿನವರಿಗೆ ಮಾತ್ರ ತರಬೇತಿ ನೀಡಲಾಗುತ್ತಿತ್ತು. ಈಗ 10 ವರ್ಷದ ಒಳಗಿನವರಿಗೂ ತರಬೇತಿ ಕೊಡಲಾಗುತ್ತದೆ. ಆರಂಭದ ಎರಡು ಮೂರು ವರ್ಷ ಬೇಸಿಕ್‌ ಕೌಶಲ ತಿಳಿಸಿಕೊಡಲಾಗುತ್ತದೆ. ಬ್ಯಾಲೆನ್ಸ್‌ ಬೀಮ್‌ನಲ್ಲಿ ವೈಜ್ಞಾನಿಕವಾಗಿ ಹಂತಹಂತವಾಗಿ ತರಬೇತಿ ನೀಡುತ್ತೇವೆ’ ಎಂದರು.

‘ಮಕ್ಕಳ ಸಾಧನೆಯ ಹಂಬಲಕ್ಕೆ ಪೋಷಕರು ಕೂಡ ಸಹಕಾರ ನೀಡುತ್ತಿದ್ದಾರೆ. ತಮ್ಮ ಮಕ್ಕಳು ದೊಡ್ಡ ಸಾಧನೆ ಮಾಡಬೇಕು ಎಂದು ಬಯಸುತ್ತಿದ್ದಾರೆ. ಆದ್ದರಿಂದ ಅತ್ಯಂತ ಸಾಹಸದ ಜಿಮ್ನಾಸ್ಟಿಕ್‌ ತರಬೇತಿಗೆ ಕಳುಹಿಸುತ್ತಿದ್ದಾರೆ. ಮೊದಲ ಬೆರಳೆಣಿಕೆ ಸಂಖ್ಯೆಯಷ್ಟಿದ್ದ ಬಾಲಕಿಯರು ಈಗ 20 ಆಗಿದೆ’ ಎಂದರು.

ಹುಬ್ಬಳ್ಳಿಯಲ್ಲಿ ಹೊಸ ಹೆಜ್ಜೆ...

ಹುಬ್ಬಳ್ಳಿಯ ಕೇಶ್ವಾಪುರದಲ್ಲಿ ಯೂನಿಕ್‌ ಜಿಮ್ನಾಸ್ಟಿಕ್‌ ಕೇಂದ್ರ ಆರಂಭವಾಗಿದೆ. ಹತ್ತು ಸ್ಪರ್ಧಿಗಳು ಅಲ್ಲಿ ತರಬೇತಿ ಪಡೆಯುತ್ತಿದ್ದಾರೆ. ರಾಷ್ಟ್ರೀಯ ಮಟ್ಟದ ಟೂರ್ನಿಗಳಲ್ಲಿ ಪದಕ ಗೆದ್ದವರು, ವಿಠ್ಠಲ್‌ ಅವರ ಗರಡಿಯಲ್ಲಿ ಪಳಗಿದವರು ತರಬೇತಿ ನೀಡುತ್ತಿದ್ದಾರೆ. ಶ್ರವಣ್ ಸಾಳುಂಕೆ, ಬಸವರಾಜ ಪಟಾತ ಪ್ರಮುಖ ಕೋಚ್‌ಗಳು. ಹಲವರು ಜಿಮ್ನಾಸ್ಟಿಕ್‌ ವೃತ್ತಿಪರ ತರಬೇತಿ ಪಡೆಯಲು ಬಯಸಿದರೆ, ಇನ್ನೂ ಕೆಲವರು ಫಿಟ್‌ನೆಸ್‌ಗಾಗಿ, ಸೈನ್ಯಕ್ಕೆ ಸೇರಲು ಮತ್ತು ನೃತ್ಯ ಕಲಿಯಲು ಬರುತ್ತಾರೆ. ಬೆಂಗಳೂರು, ಮೈಸೂರು, ಕೊಡಗು ಭಾಗದವರೂ ವಾಣಿಜ್ಯ ನಗರಿಯತ್ತ ಮುಖಮಾಡುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT