ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪದಕ ಗೆಲ್ಲುವ ಕಸರತ್ತು

Last Updated 17 ಮಾರ್ಚ್ 2019, 19:30 IST
ಅಕ್ಷರ ಗಾತ್ರ

ದೊಡ್ಡ ಸಭಾಂಗಣ. ಅದರೊಳಗೆ ಬಗೆ ಬಗೆಯ ಸಾಧನಗಳು, ತೂಗಾಡುವ ದಾರಗಳು. ಅದರಲ್ಲಿ ಕಸರತ್ತು ಮೆರೆಯುವ ಕ್ರೀಡಾಪಟುಗಳು...

ಜಿಮ್ನಾಸ್ಟಿಕ್ಸ್ ಕ್ರೀಡೆಯ ಬಗ್ಗೆ ಅಲ್ಪ ಸ್ವಲ್ಪ ಜ್ಞಾನ ಇರುವ ಕೆಲವೇ ಕೆಲವು ಮಂದಿ ನೀಡಬಲ್ಲ ವಿವರಣೆ ಇದು. ರಾಜ್ಯ ಮಾತ್ರವಲ್ಲ, ದೇಶದಲ್ಲೇ ಜಿಮ್ನಾಸ್ಟಿಕ್ಸ್‌ಗೆ ಇರುವ ‘ಛಾತಿ’ ಅಷ್ಟೇ. ವಿಶ್ವದ ಪ್ರಮುಖ ರಾಷ್ಟ್ರಗಳು ಮತ್ತು ಸಣ್ಣಪುಟ್ಟ ದೇಶಗಳು ಕೂಡ ಜಿಮ್ನಾಸ್ಟಿಕ್ಸ್‌ನಲ್ಲಿ ಸಾಧನೆಗಳ ಮೆಟ್ಟಿಲೇರುತ್ತಿರುವಾಗ ಭಾರತದಲ್ಲಿ ಈ ಕ್ರೀಡೆಯ ಬಗ್ಗೆ ತಿಳಿದವರು ಕಡಿಮೆ. ಇನ್ನು ತೊಡಗಿಸಿಕೊಳ್ಳುವುದು ಎಲ್ಲಿ ಬಂತು?
ಇಂಥ ಕ್ರೀಡೆ ಇತ್ತೀಚಿನ ವರ್ಷಗಳಲ್ಲಿ ಮುನ್ನೆಲೆಗೆ ಬರುತ್ತಿದೆ.

2010ರ ಕಾಮನ್‌ವೆಲ್ತ್ ಕೂಟದಲ್ಲಿ ಆಶಿಶ್‌ ಕುಮಾರ್‌ ಬೆಳ್ಳಿ ಮತ್ತು ಕಂಚು ಗೆದ್ದ ನಂತರ ಜಿಮ್ನಾಸ್ಟಿಕ್ಸ್‌ ಭಾರತದ ಉದ್ದಗಲಕ್ಕೂ ಗಮನ ಸೆಳೆಯಿತು. 2014ರ ಕಾಮನ್‌ವೆಲ್ತ್ ಕೂಟದಲ್ಲಿ ದೀಪಾ ಕರ್ಮಾಕರ್ ಕಂಚು ಗೆದ್ದ ಮೇಲೆ ಈ ಕ್ರೀಡೆ ಇನ್ನಷ್ಟು ಬೆಳಕಿಗೆ ಬಂತು. ರಿಯೊ ಒಲಿಂಪಿಕ್ಸ್‌ನಲ್ಲಿ, ವಾಲ್ಟ್ ಆಫ್ ಡೆತ್‌ ಎಂದೇ ಹೆಸರಿರುವ ಅಪಾಯಕಾರಿ ಪ್ರೊಡೊನೋವ ವಿಭಾಗದಲ್ಲಿ ಸ್ಪರ್ಧಿಸಿ ನಾಲ್ಕನೇ ಸ್ಥಾನ ಗಳಿಸಿದ ದೀಪಾ ಅವರು ಜಿಮ್ನಾಸ್ಟಿಕ್ಸ್‌ಗೆ ಮತ್ತಷ್ಟು ಹೆಸರು ಗಳಿಸಿಕೊಟ್ಟರು.

ಈಗ ಮತ್ತೊಂದು ಪ್ರಮುಖ ಟೂರ್ನಿ ಭಾರತದ ಮುಂದೆ ಇದೆ. ದೋಹಾದಲ್ಲಿ ನಡೆಯುವ ವಿಶ್ವ ಕಪ್‌ನಲ್ಲಿ ಭಾರತ ಭರವಸೆಯಿಂದಲೇ ಕಣಕ್ಕೆ ಇಳಿಯಲು ಸಜ್ಜಾಗಿದೆ. ಒಲಿಂಪಿಕ್ಸ್‌ನಲ್ಲಿ ಕೂದಲೆಳೆ ಅಂತರ ದಲ್ಲಿ ಕಂಚಿನ ಪದಕ ಕಳೆದುಕೊಂಡ ದೀಪಾ ಕರ್ಮಾಕರ್‌ ಮೇಲೆ ಎಲ್ಲರ ಕಣ್ಣು ನೆಟ್ಟಿದ್ದಾರೆ. ಅವರೊಂದಿಗೆಯೋಗೇಶ್ವರ್ ಸಿಂಗ್ ಕೂಡ ಭಾರತ ತಂಡದಲ್ಲಿದ್ದಾರೆ.

ಕರ್ನಾಟಕದ ಉಜ್ವಲ್‌ ರೆಡ್ಡಿ ತಂಡದಲ್ಲಿರುವುದು ರಾಜ್ಯದ ಜಿಮ್ನಾಸ್ಟಿಕ್‌ಗೆ ಹೊಸ ಆಯಾಮ ತಂದುಕೊಡಲಿದೆ. ಪ್ರಪಂಚದ 50ಕ್ಕೂ ಹೆಚ್ಚು ರಾಷ್ಟ್ರಗಳು ವಿಶ್ವಕಪ್‌ನಲ್ಲಿ ಒಂದಕ್ಕಿಂತ ಹೆಚ್ಚು ಪದಕ ಗೆದ್ದಿವೆ. ಭಾರತಕ್ಕೆ ಈ ವರೆಗೆ ಒಂದು ಪದಕ ಮಾತ್ರ ಬಂದಿದ್ದು ಈ ಬಾರಿ ಹೊಸ ಅಧ್ಯಾಯ ತೆರೆಯಲು ಸಜ್ಜಾಗಿದೆ.

ವಿಭಿನ್ನ ವಿಧಾನ

ಜಿಮ್ನಾಸ್ಟಿಕ್ಸ್‌ನಲ್ಲಿ ವಿಶ್ವಕಪ್‌, ವಿಶ್ವ ಚಾಂಪಿಯನ್‌ಷಿಪ್‌ ಮತ್ತು ವಿಶ್ವಕಪ್ ಫೈನಲ್‌ಗಳೆಂಬ ಮೂರು ವಿಧಾನಗಳಲ್ಲಿ ಮಹತ್ವದ ಸ್ಪರ್ಧೆಗಳಿರುತ್ತವೆ. ವಿಶ್ವ ಚಾಂಪಿಯನ್‌ಷಿಪ್‌ ಪ್ರತಿ ನಾಲ್ಕು ವರ್ಷಗಳಿಗೊಮ್ಮೆ ನಡೆಯುತ್ತದೆ. ವಿಶ್ವಕಪ್ ಪ್ರತಿವರ್ಷವೂ ನಡೆಯುತ್ತದೆ.

1975ರಲ್ಲಿ ಆರಂಭಗೊಂಡ ವಿಶ್ವಕಪ್‌ 1990ರಲ್ಲಿ ನಿಂತಿತು. 1998ರ‌ಲ್ಲಿ ಪುನರಾರಂಭಗೊಂಡ ಸ್ಪರ್ಧೆಯಲ್ಲಿ ಬದಲಾವಣೆ ತರಲಾಯಿತು. ಎರಡು ವರ್ಷಗಳ ಸ್ಪರ್ಧೆ ನಡೆಸಿ ಕೊನೆಗೆ ವಿಶ್ವಕಪ್ ಫೈನಲ್‌ ಕೂಟವನ್ನು ಆಯೋಜಿಸುವ ಚಿಂತನೆ ನಡೆಯಿತು. ಹಲವಾರು ಬದಲಾವಣೆಗಳ ನಂತರ 2013ರಲ್ಲಿ ಟೂರ್ನಿಗೆ ಹೊಸ ಸ್ವರೂಪ ನೀಡಲಾಯಿತು. ಇಂಡಿವಿಜುವಲ್ ಅಪಾರಟಸ್‌ ವಿಶ್ವಕಪ್‌ ಸೀರೀಸ್‌ ಮತ್ತು ಆಲ್‌ರೌಂಡ್‌ ವಿಶ್ವಕಪ್ ಸೀರೀಸ್‌ ಜಾರಿಗೆ ತರಲಾಯಿತು.

ಎಂಟು ಹಂತಗಳಲ್ಲಿ ವಿಶ್ವಕಪ್‌ ನಡೆಯುತ್ತದೆ. ಈ ಬಾರಿ ಫೆಬ್ರುವರಿಯಲ್ಲೇ ಆರಂಭಗೊಂಡಿದ್ದು ಮುಂದಿನ ವರ್ಷದ ಫೆಬ್ರುವರಿ ವರೆಗೂ ಸ್ಪರ್ಧೆಗಳು ಇರುತ್ತವೆ. ಎಲ್ಲ ಹಂತಗಳಲ್ಲೂ ಪಾಲ್ಗೊಳ್ಳುವ ಅವಕಾಶ ಜಿಮ್ನಾಸ್ಟ್‌ಗಳಿಗೆ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT