ಶುಕ್ರವಾರ, ನವೆಂಬರ್ 22, 2019
19 °C

ಹಾಫ್ ಮ್ಯಾರಥಾನ್ ದಾಖಲೆ ಮುರಿದ ಜೆಫ್ರಿ ಕ್ಯಾಮರೊರ್

Published:
Updated:
Prajavani

ಕಾಪೆನ್‌ಹೇಗನ್: ಒಂದು ತಾಸಿನ ಒಳಗೆ ಗುರಿ ಮುಟ್ಟಿದ ಕೆನ್ಯಾದ ಜೆಫ್ರಿ ಕ್ಯಾಮರೊರ್ ಅವರು ಹಾಫ್ ಮ್ಯಾರಥಾನ್‌ನಲ್ಲಿ ವಿಶ್ವ ದಾಖಲೆಯನ್ನು ಹಿಂದಿಕ್ಕಿ ಚಿನ್ನ ಗಳಿಸಿದರು. ಅಂತರರಾಷ್ಟ್ರೀಯ ಅಥ್ಲೆ ಟಿಕ್‌ ಫೆಡರೇಷನ್ (ಐಎಎಎಫ್) ಭಾನುವಾರ ಆಯೋಜಿಸಿದ್ದ ಗೋಲ್ಡ್ ಲೇಬಲ್ ರೋಡ್ ರೇಸ್‌ನಲ್ಲಿ ಅವರು 58 ನಿಮಿಷ ಒಂದು ಸೆಕೆಂಡಿನಲ್ಲಿ ಅಂತಿಮ ಗೆರೆ ತುಳಿದರು.

ಕಳೆದ ವರ್ಷ ವೆಲೆನ್ಸಿಯಾದಲ್ಲಿ ನಡೆದಿದ್ದ ಸ್ಪರ್ಧೆಯಲ್ಲಿ ಕೆನ್ಯಾದವರೇ ಆದ ಅಬ್ರಹಾಂ ಕಿಪ್ಟಮ್‌ 58 ನಿಮಿಷ 18 ಸೆಕೆಂಡುಗಳಲ್ಲಿ ಸ್ಪರ್ಧೆ ಮುಗಿಸಿ ದಾಖಲೆ ನಿರ್ಮಿಸಿದ್ದರು. 17 ನಿಮಿಷಗಳ ಅಂತರದಲ್ಲಿ ಕ್ಯಾಮರೊರ್ ದಾಖಲೆಯನ್ನು ತಮ್ಮ ಹೆಸರಿಗೆ ಬರೆಸಿಕೊಂಡರು.

2014ರಲ್ಲಿ ಕಾಪೆನ್‌ಹೇಗನ್‌ನಲ್ಲೇ ಕ್ಯಾಮರೊರ್ ಮೊತ್ತಮೊದಲ ವಿಶ್ವ ಹಾಫ್ ಮ್ಯಾರಥಾನ್ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದರು. 26 ವರ್ಷದ ಅವರು ಇದೇ ಸ್ಥಳದಲ್ಲಿ ದಾಖಲೆಯನ್ನೂ ಮುರಿದು ಭಾನುವಾರ ಸಂಭ್ರಮಿಸಿದರು. 

ಕೆನ್ಯಾದ ಬರ್ನಾರ್ಡ್‌ ಕಿಪ್‌ಕೊರಿರ್ 59 ನಿಮಿಷ 16 ಸೆಕೆಂಡುಗಳಲ್ಲಿ ಗುರಿ ಮುಟ್ಟಿ ಬೆಳ್ಳಿ ಪದಕ ತಮ್ಮದಾಗಿಸಿಕೊಂಡರು. ಇಥಿಯೋಪಿಯಾದ ಬೆರೆಹನು ವೆಂಡೆಮು ಸೇಗು 59 ನಿಮಿಷ 22 ಸೆಕೆಂಡುಗಳ ಸಾಧನೆಯೊಂದಿಗೆ ಕಂಚಿನ ಪದಕ ಗಳಿಸಿದರು.

ಮೊದಲ ಐದು ಕಿಲೋಮೀಟರ್ ದೂರದ ವರೆಗೆ ಕ್ಯಾಮರೊರ್ ದೊಡ್ಡ ಅಂತರವನ್ನು ಕಾಯ್ದುಕೊಂಡಿರಲಿಲ್ಲ. ನಂತರ ವೇಗ ಹೆಚ್ಚಿಸಿಕೊಂಡ ಅವರು ಕೊನೆಯ 11 ಕಿಲೋಮೀಟರ್‌ ವರೆಗೆ ಮುನ್ನಡೆಯನ್ನು ಕಾಯ್ದುಕೊಂಡೇ ಸಾಗಿದರು. ಕೊನೆಯಲ್ಲಿ ಮಳೆ ಕಾಡಿದರೂ ಕೆಚ್ಚೆದೆಯಿಂದ ಮುನ್ನುಗ್ಗಿದ ಅವರು ಗೆಲುವಿನ ನಗೆ ಸೂಸಿದರು.

ಪ್ರತಿಕ್ರಿಯಿಸಿ (+)