ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರ್ಕೀಟ್‌ ಲ್ಯಾಪ್ ದಾಖಲೆ ಮುರಿದ ಹ್ಯಾಮಿಲ್ಟನ್

Last Updated 18 ಜುಲೈ 2020, 21:46 IST
ಅಕ್ಷರ ಗಾತ್ರ

ಬುಡಾಪೆಸ್ಟ್: ಲೂಯಿಸ್ ಹ್ಯಾಮಿಲ್ಟನ್ ಅವರು ಮೋಟರ್ ರ‍್ಯಾಲಿಯಲ್ಲಿ ಮತ್ತೊಂದು ಮೈಲುಗಲ್ಲು ಸ್ಥಾಪಿಸಿದರು. ಶನಿವಾರ ನಡೆದ ಹಂಗೆರಿಯನ್ ಗ್ರ್ಯಾನ್‌ ಪ್ರಿಕ್ಸ್‌ನ ಅರ್ಹತಾ ಸುತ್ತಿನ ರೇಸ್‌ನಲ್ಲಿ ಮಿಂಚಿನ ವೇಗದ ಚಾಲನೆ ಮಾಡಿದ ಅವರು ಸರ್ಕೀಟ್‌ನ ಲ್ಯಾಪ್ ದಾಖಲೆ ಮುರಿದು ಸಂಭ್ರಮಿಸಿದರು. ಈ ಮೂಲಕ ವೃತ್ತಿ ಜೀವನದಲ್ಲಿ 90ನೇ ಬಾರಿ ಅಗ್ರ ಸ್ಥಾನ ಗಳಿಸಿದರು.

ಆರು ಬಾರಿಯ ವಿಶ್ವ ಚಾಂಪಿಯನ್‌ ಹ್ಯಾಮಿಲ್ಟನ್ ಒಂದು ನಿಮಿಷ 13.447 ಸೆಕೆಂಡ್‌ಗಳ ಸಾಧನೆಯೊಂದಿಗೆ ತಂಡದ ಮತ್ತೊಬ್ಬ ಚಾಲಕ ವಾಲ್ಟರಿ ಬೊತಾಸ್ ಅವರನ್ನು ಹಿಂದಿಕ್ಕಿದರು. ಈ ಮೂಲಕ ಮರ್ಸಿಡಿಸ್‌ಗೆ ಮತ್ತೊಂದು ಗರಿ ಮೂಡಿಸುವತ್ತ ದಾಪುಗಾಲು ಹಾಕಿದರು. ಭಾನುವಾರ ಪ್ರಶಸ್ತಿ ಸುತ್ತಿನ ರೇಸ್ ನಡೆಯಲಿದೆ.

ಕೊರೊನಾ ಹಾವಳಿಯಿಂದಾಗಿ ಸ್ಥಗಿತಗೊಂಡಿದ್ದ ರೇಸ್‌ಗಳು ಪುನರಾರಂಭಗೊಂಡ ನಂತರ ಲೂಯಿಸ್ ಗಳಿಸಿದ ಸತತ ಎರಡನೇ ಅಗ್ರಸ್ಥಾನ ಇದಾಗಿದೆ. ಈ ಮೂಲಕ ಅವರು ಹಂಗೆರಿಯನ್ ಗ್ರ್ಯಾನ್‌ ಪ್ರಿಕ್ಸ್‌ನಲ್ಲಿ ಏಳನೇ ಬಾರಿ ಅಗ್ರಸ್ಥಾನಕ್ಕೇರಿ ಶುಮಾಕರ್ ದಾಖಲೆ ಸರಿಗಟ್ಟಿದರು.

’ಇದು ಅತ್ಯಂತ ಖುಷಿ ನೀಡಿದ ಕ್ಷಣ. ಕಳೆದ ಕೆಲವು ದಿನಗಳಿಂದ ಪ್ರತಿಭಾವಂತರ ಜೊತೆ ಕಳೆಯುತ್ತಿದ್ದೇನೆ. ನನ್ನ ಸಾಧನೆಯಲ್ಲಿ ಅವರು ಮಹತ್ವದ ಪಾತ್ರ ವಹಿಸಿದ್ದಾರೆ. ವಾಲ್ಟರಿ ಅವರಿಂದ ಭಾರಿ ಸ್ಪರ್ಧೆ ಎದುರಾಗಿತ್ತು. ಹೀಗಾಗಿ ಪ್ರತಿ ಲ್ಯಾಪ್ ಕೂಡ ಸವಾಲಿನದ್ದಾಗಿತ್ತು‘ ಎಂದು ಲೂಯಿಸ್ ಹೇಳಿದರು.

’ತುರುಸಿನ ಸ್ಪರ್ಧೆ ಏರ್ಪಡಲಿದೆ ಎಂದು ತಿಳಿದೇ ಇತ್ತು. ನನ್ನ ಲ್ಯಾಪ್‌ಗಳಲ್ಲಿ ತೃಪ್ತಿ ಇದೆ. ಆದರೂ ನಿರೀಕ್ಷೆಗೆ ತಕ್ಕ ವೇಗ ಪಡೆದುಕೊಳ್ಳಲು ಆಗಲಿಲ್ಲ‘ ಎಂದು ವಾಲ್ಟರಿ ಅಭಿಪ್ರಾಯಪಟ್ಟರು.

ಫೆರಾರಿಯ ಸೆಬಾಸ್ಟಿಯನ್ ವೆಟೆಲ್ ಮತ್ತು ಚಾರ್ಲ್ಸ್‌ ಲ್ಯಾಕ್ಲೆರ್ಕ್‌ ಕೂಡ ಗಮನಾರ್ಹ ಸಾಧನೆ ಮಾಡಿದರು. ಆದರೆ ರೆಡ್‌ಬುಲ್‌ನ ಮ್ಯಾಕ್ಸ್ ವೆಸ್ಟಾಪನ್ ಏಳನೇ ಸ್ಥಾನಕ್ಕೆ ಕುಸಿದು ನಿರಾಸೆ ಅನುಭವಿಸಿದರು. ಮೆಕ್ಲಾರೆನ್‌ನ ಲ್ಯಾಂಡೊ ನೊರಿಸ್ ಎಂಟನೇ ಸ್ಥಾನ ಗಳಿಸಿದರು. ತಂಡದ ಸದಸ್ಯ, ವೈಯಕ್ತಿಕ 50ನೇ ಗ್ರ್ಯಾನ್‌ಪ್ರಿಯಲ್ಲಿ ಪಾಲ್ಗೊಂಡ ಕಾರ್ಲೋಸ್ ಸೇನ್ಸ್‌ ಅವರನ್ನು ಲ್ಯಾಂಡೊ ಹಿಂದಿಕ್ಕಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT