ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಹುಲಿರಾಯ’ನಿಂದ ‘ಉಡುಂಬಾ’ಕಡೆಗೆ

Last Updated 8 ಮಾರ್ಚ್ 2018, 19:30 IST
ಅಕ್ಷರ ಗಾತ್ರ

‘ಚಂದನವನ’ದಲ್ಲಿ ಈಗಷ್ಟೇ ಹೆಜ್ಜೆಗುರುತುಗಳನ್ನು ಮೂಡಿ ಸುತ್ತಿರುವ ಕಡಲ ತಡಿಯ ಬೆಡಗಿ ಚಿರಶ್ರೀ ಅಂಚನ್. ನಟ ಬಾಲು ನಾಗೇಂದ್ರ ಜೊತೆ ‘ಹುಲಿರಾಯ’ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದ ಚಿರಶ್ರೀ ಈಗ ಶಿವರಾಜ್‌ ನಿರ್ದೇಶನದ ‘ಉಡುಂಬಾ’ ಚಿತ್ರದ ಒಂದು ಪಾತ್ರಕ್ಕೆ ಜೀವ ತುಂಬುವ ಕೆಲಸ ಮಾಡಿದ್ದಾರೆ. ‘ಉಡುಂಬಾ’ ಚಿತ್ರ ಕಡಲತಡಿಯ ಸಮುದಾಯವೊಂದರ ಕಥೆ.

ತುಳು ಸಿನಿಮಾಗಳ ಮೂಲಕ ಬೆಳ್ಳಿತೆರೆಯತ್ತ ಹೆಜ್ಜೆ ಹಾಕಿದ ಚಿರಶ್ರೀ, ‘ಚಂದನವನ’ದ ಜೊತೆ ಮಾತನಾಡಿದ್ದಾರೆ. ‘ಉಡುಂಬಾ ಕನ್ನಡದಲ್ಲಿ ನನ್ನ ಎರಡನೆಯ ಸಿನಿಮಾ. ಹುಲಿರಾಯ ಸಿನಿಮಾದಲ್ಲಿ ನಟಿಸುವ ಮೊದಲು ನಾನು ತುಳು ಭಾಷೆಯ ಪವಿತ್ರ, ರಂಭಾ ರೊಟ್ಟಿ ಸಿನಿಮಾಗಳಲ್ಲಿ ನಟಿಸಿದ್ದೆ. ಆ ಎರಡು ಸಿನಿಮಾಗಳಲ್ಲಿ ನಟಿಸಿದ ನಂತರ ಸಿಕ್ಕಿದ್ದು ಉಡುಂಬಾ ಚಿತ್ರದಲ್ಲಿನ ಅವಕಾಶ. ಆದರೆ ಕನ್ನಡದಲ್ಲಿ ಬಿಡುಗಡೆಯಾದ ಮೊದಲ ಸಿನಿಮಾ ಹುಲಿರಾಯ’ ಎಂದರು ಚಿರಶ್ರೀ. ಇವರು ತೆಲುಗು ಮತ್ತು ತಮಿಳಿನ ಸಿನಿಮಾಗಳಲ್ಲಿ ಕೂಡ ಅಭಿನಯಿಸಿದ್ದಾರೆ.

ಇವರದ್ದು ಒಂದರ್ಥದಲ್ಲಿ ಅಭಿನಯದ ಜೊತೆ ಸಂಬಂಧ ಇರುವ ಕುಟುಂಬ. ಇವರ ತಂದೆ ನಾಟಕಗಳ ಜೊತೆ ನಂಟು ಹೊಂದಿದ್ದವರು. ‘ಹುಲಿರಾಯ’ ಮತ್ತು ‘ಉಡುಂಬಾ’ ಸಿನಿಮಾಗಳಲ್ಲಿ ನಿಭಾಯಿಸಿದ ಪಾತ್ರಗಳಲ್ಲಿ ಏನು ವ್ಯತ್ಯಾಸ ಎಂದು ಪ್ರಶ್ನಿಸಿದಾಗ, ‘ಹುಲಿರಾಯ ಸಿನಿಮಾದಲ್ಲಿ ನನ್ನದು ಅರಣ್ಯ ಇಲಾಖೆ ಸಿಬ್ಬಂದಿಯೊಬ್ಬರ ಮಗಳ ಪಾತ್ರ. ಆಕೆ ಮುಗ್ಧೆ. ಆ ಪಾತ್ರದಲ್ಲಿ ಮಾತುಗಳ ಮೂಲಕ ಹೇಳುವುದಕ್ಕಿಂತಲೂ ಮೌನದ ಮೂಲಕ ಹೇಳುವುದೇ ಹೆಚ್ಚಿತ್ತು. ಉಡುಂಬಾ ಚಿತ್ರದಲ್ಲಿ ನನ್ನದು ಬಬ್ಲಿ ಯುವತಿಯ ಪಾತ್ರ’ ಎಂದರು ಚಿರಶ್ರೀ.

ಇವರು ‘ಉಡುಂಬಾ’ ಚಿತ್ರದಲ್ಲಿ ನಟಿಸಲು ಒಪ್ಪಿಕೊಳ್ಳಲು ಪ್ರಮುಖ ಕಾರಣ ಅದರ ಕಥೆ ಮತ್ತು ಪಾತ್ರ. ಅಕ್ಷರ ಕಲಿಯಲು ನಗರಕ್ಕೆ ಹೋಗಿ, ಹಳ್ಳಿಗೆ ವಾಪಸ್ ಬಂದ ನಂತರ ಇವರಿಗೆ ನಾಯಕನ ಜೊತೆ ಪ್ರೀತಿ ಮೂಡುತ್ತದೆಯಂತೆ. ‘ಇದರಲ್ಲಿ ನನಗೆ ಅಭಿನಯಕ್ಕೆ ಅವಕಾಶ ಇದೆ. ನನ್ನ ಪಾತ್ರಕ್ಕೆ ನಾಯಕನ ಪಾತ್ರಕ್ಕೆ ಸಮಾನವಾದ ಪ್ರಾಮುಖ್ಯ ಇದೆ’ ಎಂದರು.

ಕನ್ನಡ, ತುಳು, ತಮಿಳು, ತೆಲುಗು ಸಿನಿಮಾಗಳಲ್ಲಿನ ಅಭಿನಯದ ಪಯಣ ಇವರಲ್ಲಿನ ನಟನಾ ಸಾಮರ್ಥ್ಯವನ್ನು ಹೆಚ್ಚಿಸಿದೆಯಂತೆ. ‘ನನ್ನ ಅಭಿನಯ ಸುಧಾರಿಸುತ್ತಿದೆ. ಯಾವ ದೃಶ್ಯಗಳಿಗೆ ಯಾವ ರೀತಿಯಲ್ಲಿ ಭಾವವನ್ನು ಅಭಿವ್ಯಕ್ತಿಸಬೇಕು ಎಂಬುದನ್ನು ಒಂದು ಸಿನಿಮಾದಿಂದ ಇನ್ನೊಂದು ಸಿನಿಮಾಕ್ಕೆ ನಾನು ಹೆಚ್ಚೆಚ್ಚು ಕಲಿಯುತ್ತಿದ್ದೇನೆ’ ಎಂದು ಅವರು ಖುಷಿಯಿಂದ ಹೇಳಿಕೊಳ್ಳುತ್ತಾರೆ. ಹಾಗೆಯೇ ನಟನೆಯ ವಿಚಾರವಾಗಿ ಹೊಸಬರಿಗೆ ಒಂದು ಕಿವಿಮಾತು ಕೂಡ ಹೇಳುತ್ತಾರೆ. ‘ಕಷ್ಟಪಟ್ಟು ಕೆಲಸ ಮಾಡಿ. ಆಗ ಯಶಸ್ಸು ಖಂಡಿತ ಸಿಗುತ್ತದೆ’ ಎನ್ನುವುದು ಆ ಮಾತು.

ಚಿರಶ್ರೀ ಅವರಿಗೆ ಆ್ಯಕ್ಷನ್ ಚಿತ್ರಗಳು ಅಚ್ಚುಮೆಚ್ಚು. ನಟರಾದ ಯಶ್, ದರ್ಶನ್, ಸುದೀಪ್, ನಟಿಯರಾದ ಮಾಲಾಶ್ರೀ ಮತ್ತು ರಾಧಿಕಾ ಪಂಡಿತ್ ಇವರಿಗೆ ಬಹಳ ಇಷ್ಟ. ಇವರ ಇಷ್ಟಗಳ ಪಟ್ಟಿಯಲ್ಲಿ ಆ್ಯಕ್ಷನ್‌ ನಟರೇ ಹೆಚ್ಚಿರುವುದನ್ನು ಗುರುತಿಸುವುದು ಕಷ್ಟದ ಕೆಲಸವೇನೂ ಅಲ್ಲ. ‘ರಿಷಬ್ ಶೆಟ್ಟಿ ನಿರ್ದೇಶನದ ಸಿನಿಮಾದಲ್ಲಿ ಕೆಲಸ ಮಾಡಬೇಕು ಎಂಬ ಆಸೆ ಇದೆ. ಅವರಲ್ಲಿ ಅವಕಾಶ ಕೇಳಿಲ್ಲ, ಅವಕಾಶ ಬಂದರೆ ಖಂಡಿತ ಅಭಿನಯಿಸುವೆ’ ಎನ್ನುವುದು ಚಿರಶ್ರೀ ಮಾತು.

ಹೊಸದಾಗಿ ಚಿತ್ರರಂಗಕ್ಕೆ ಬರುವ ನಟಿಯಲ್ಲಿ ಕೇಳುವ ಸಾಮಾನ್ಯ ಪ್ರಶ್ನೆ, ‘ನಿಮಗೆ ಗ್ಲಾಮರ್‌ ಪಾತ್ರ ಇಷ್ಟವೋ, ಇತರ ಪಾತ್ರಗಳು ಇಷ್ಟವೋ’ ಎಂಬುದು. ಈ ಪ್ರಶ್ನೆಗೆ ಚಿರಶ್ರೀ ಅವರು, ‘ನನಗೆ ಗ್ಲಾಮರಸ್ ಪಾತ್ರಗಳಿಗಿಂತಲೂ ಹೋಮ್ಲಿ ಹುಡುಗಿಯ ಪಾತ್ರ ನಿಭಾಯಿಸುವುದು ಹೆಚ್ಚು ಇಷ್ಟ. ಮೊದಲಿಂದಲೂ ಅಂಥ ಪಾತ್ರಗಳನ್ನೇ ಮಾಡಿಕೊಂಡು ಬಂದಿದ್ದೇನೆ’ ಎಂದು ಉತ್ತರಿಸುತ್ತಾರೆ.

‘ಉಡುಂಬಾ’ ಚಿತ್ರ ಏಪ್ರಿಲ್‌ನಲ್ಲಿ ಬಿಡುಗಡೆ ಆಗುವ ನಿರೀಕ್ಷೆ ಇದೆ. ದಕ್ಷಿಣ ಕನ್ನಡ ಜಿಲ್ಲೆಯ ಮುಲ್ಕಿ ಸಮೀಪದ ಹಳೆಯಂಗಡಿಯ ಚಿರಶ್ರೀ ಕೊನೆಯಲ್ಲಿ ಒಂದು ಮಾತು ಸೇರಿಸುತ್ತಾರೆ: ‘ನನಗೆ ಎಲ್ಲ ಭಾಷೆಗಳಲ್ಲೂ ಸಿನಿಮಾ ಮಾಡಬೇಕು ಎಂಬ ಆಸೆ ಇದೆ. ಕಲಾವಿದೆಗೆ ಭಾಷೆ ಎಂಬುದು ಮಿತಿ ಆಗಬಾರದು. ಆದರೆ, ತುಳು ಸಿನಿಮಾ ಜೊತೆಗಿನ ನಂಟನ್ನು ಯಾವತ್ತಿಗೂ ಬಿಡುವುದಿಲ್ಲ. ಕೊನೆಯವರೆಗೂ ಅದರ ಜೊತೆ ನಂಟು ಇಟ್ಟುಕೊಳ್ಳುವೆ.’

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT