ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾಕಿ ವಿಶ್ವಕಪ್ ಎಂಟರಘಟ್ಟಕ್ಕೇರಲು ಭಾರತಕ್ಕೆ ಗೆಲುವು ಅಗತ್ಯ

ಕ್ರಾಸ್‌ಓವರ್ ಪಂದ್ಯದಲ್ಲಿ ನ್ಯೂಜಿಲೆಂಡ್‌ ಎದುರಾಳಿ: ಹಾರ್ದಿಕ್ ಸಿಂಗ್‌ ಅಲಭ್ಯ
Last Updated 21 ಜನವರಿ 2023, 13:53 IST
ಅಕ್ಷರ ಗಾತ್ರ

ಭುವನೇಶ್ವರ: ಕ್ವಾರ್ಟರ್‌ಫೈನಲ್‌ಗೆ ನೇರ ಪ್ರವೇಶ ಗಳಿಸಲು ವಿಫಲವಾಗಿರುವ ಭಾರತ ತಂಡವು ಪುರುಷರ ವಿಶ್ವಕಪ್ ಹಾಕಿ ಟೂರ್ನಿಯಲ್ಲಿ ಭಾನುವಾರ ಕ್ರಾಸ್‌ಓವರ್‌ ಪಂದ್ಯದಲ್ಲಿ ನ್ಯೂಜಿಲೆಂಡ್ ಎದುರು ಸೆಣಸಲಿದೆ. ಕಳಿಂಗ ಕ್ರೀಡಾಂಗಣದಲ್ಲಿ ಪಂದ್ಯ ನಡೆಯಲಿದೆ.

ಗುರುವಾರ ನಡೆದ ಪಂದ್ಯದಲ್ಲಿ ಭಾರತ ತಂಡ 4–2ರಿಂದ ವೇಲ್ಸ್‌ ವಿರುದ್ಧ ಗೆದ್ದಿತು. ಭಾರತವು ಎಂಟರ ಘಟಕ್ಕೆ ನೇರಪ್ರವೇಶ ಪಡೆಯಲು ಈ ಪಂದ್ಯದಲ್ಲಿ ಎಂಟು ಗೋಲುಗಳ ಅಂತರದಿಂದ ಜಯಿಸಬೇಕಿತ್ತು. ಆದರೆ ಸಾಧ್ಯವಾಗಿರಲಿಲ್ಲ. ಇದರಿಂದಾಗಿ ಡಿ ಗುಂಪಿನಲ್ಲಿ ಇಂಗ್ಲೆಂಡ್ ಅಗ್ರಸ್ಥಾನ ಪಡೆದು ಕ್ವಾರ್ಟರ್‌ಫೈನಲ್ ಪ್ರವೇಶಿಸಿತ್ತು.

ಸಿ ಗುಂಪಿನಲ್ಲಿ ಮೂರನೇ ಸ್ಥಾನ ಪಡೆದಿರುವ ನ್ಯೂಜಿಲೆಂಡ್‌ ಎದುರು ಹರ್ಮನ್‌ಪ್ರೀತ್ ಸಿಂಗ್ ಬಳಗವು ಗೆದ್ದು ಎಂಟರಘಟ್ಟ ತಲುಪುವ ವಿಶ್ವಾಸದಲ್ಲಿದೆ.

ವಿಶ್ವ ರ‍್ಯಾಂಕಿಂಗ್‌ನಲ್ಲಿ 12ನೇ ಸ್ಥಾನದಲ್ಲಿರುವ ಕಿವೀಸ್‌ ಬಳಗದ ಎದುರು ಆರನೇ ಸ್ಥಾನದಲ್ಲಿರುವ ಭಾರತ ಗೆಲ್ಲುವ ನೆಚ್ಚಿನ ತಂಡ ಎನಿಸಿದೆ. ಮಂಡಿರಜ್ಜು ಗಾಯದಿಂದ ಬಳಲುತ್ತಿರುವ ಹಾರ್ದಿಕ್‌ ಸಿಂಗ್ ಅವರು ಟೂರ್ನಿಯಿಂದಲೇ ಹೊರಗುಳಿದಿರುವುದು ತಂಡಕ್ಕೆ ಹಿನ್ನಡೆಯಾಗಿ ಪರಿಣಮಿಸಿದೆ. ಜನವರಿ 15ರಂದು ನಡೆದ ಇಂಗ್ಲೆಂಡ್‌ ಎದುರಿನ ಪಂದ್ಯದಲ್ಲಿ ಅವರು ಗಾಯಗೊಂಡಿದ್ದರು. ಅವರ ಬದಲಿಗೆ ರಾಜ್‌ಕುಮಾರ್ ಪಾಲ್ ಅವರನ್ನು ತಂಡಕ್ಕೆ ಸೇರಿಸಿಕೊಳ್ಳಲಾಗಿದೆ.

ಹಾರ್ದಿಕ್ ಅವರ ಅನುಪಸ್ಥಿತಿಯಿಂದಾಗಿ ಅನುಭವಿ ಆಟಗಾರರಾದ ಮನದೀಪ್ ಸಿಂಗ್ ಮತ್ತು ಆಕಾಶದೀಪ್ ಸಿಂಗ್ ಅವರ ಪ್ರದರ್ಶನ ಭಾರತಕ್ಕೆ ಮಹತ್ವದ್ದೆನಿಸಿದೆ.

‘ನ್ಯೂಜಿಲೆಂಡ್ ಎದುರಿನ ಹಣಾಹಣಿ ಸುಲಭದ್ದಲ್ಲ. ಎಫ್‌ಐಎಚ್‌ ಪ್ರೊ ಲೀಗ್‌ನಲ್ಲಿ ಆ ತಂಡವು ಚೆನ್ನಾಗಿ ಆಡಿತ್ತು. ನಮ್ಮ ಶ್ರೇಷ್ಠ ಆಟದ ಸಾಮರ್ಥ್ಯವನ್ನು ತೋರಬೇಕಿದೆ‘ ಎಂದು ಭಾರತ ತಂಡದ ಕೋಚ್‌ ಗ್ರಹಾಂ ರೀಡ್‌ ಹೇಳಿದ್ದಾರೆ.

ಇಲ್ಲಿ ನ್ಯೂಜಿಲೆಂಡ್ ತಂಡವನ್ನು ಮಣಿಸಿದರೆ ಭಾರತಕ್ಕೆ ಕ್ವಾರ್ಟರ್‌ಫೈನಲ್‌ನಲ್ಲಿ ಹಾಲಿ ಚಾಂಪಿಯನ್‌ ಬೆಲ್ಜಿಯಂ ತಂಡದ ಸವಾಲು ಎದುರಾಗುವ ನಿರೀಕ್ಷೆಯಿದೆ.

ಇನ್ನೊಂದು ಕ್ರಾಸ್‌ಓವರ್‌ ಪಂದ್ಯದಲ್ಲಿ ಮಲೇಷ್ಯಾ ಮತ್ತು ಸ್ಪೇನ್ ತಂಡಗಳು ಮುಖಾಮುಖಿಯಾಗಲಿವೆ.

ಮುಖಾಮುಖಿ ಪಂದ್ಯಗಳು 44

ಭಾರತ ಗೆಲುವು 24

ನ್ಯೂಜಿಲೆಂಡ್‌ ಜಯ 15

ಡ್ರಾ 5

ಇಂದಿನ ಪಂದ್ಯಗಳು

ಮಲೇಷ್ಯಾ– ಸ್ಪೇನ್‌

ಸಂಜೆ 4.30

ಭಾರತ– ನ್ಯೂಜಿಲೆಂಡ್‌

ಸಂಜೆ 7ರಿಂದ

ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT