ಸೋಮವಾರ, ಆಗಸ್ಟ್ 8, 2022
23 °C

ಆನ್‌ಲೈನ್‌ ಚೆಸ್ ಟೂರ್ನಿಯಲ್ಲಿ ಹರಿಕೃಷ್ಣಗೆ ಮಿಶ್ರಫಲ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಚೆನ್ನೈ: ಭಾರತದ ಗ್ರ್ಯಾಂಡ್‌ಮಾಸ್ಟರ್‌ ಪೆಂಟಾಲ ಹರಿಕೃಷ್ಣ ಅವರು ಸೇಂಟ್‌ ಲೂಯಿಸ್‌ ರ‍್ಯಾಪಿಡ್ ಮತ್ತು ಬ್ಲಿಟ್ಜ್‌ ಆನ್‌ಲೈನ್‌ ಚೆಸ್‌ ಟೂರ್ನಿಯಲ್ಲಿ ಗುರುವಾರ ಮಿಶ್ರಫಲ ಕಂಡರು. ರ‍್ಯಾಪಿಡ್‌ ವಿಭಾಗದ ಕೊನೆಯ ಮೂರು ಸುತ್ತುಗಳಲ್ಲಿ ಆಡಿದ ಹರಿಕೃಷ್ಣ ಅವರು, ಮೊದಲ ಪಂದ್ಯದಲ್ಲಿ ಅಮೆರಿಕದ ಜೆಫರಿ ಕ್ಸಿಯೊಂಗ್‌ ಎದುರು ಗೆದ್ದರು.  ಬಳಿಕ ಮತ್ತೊಬ್ಬ ಅಮೆರಿಕ ಪಟು ಹಿಕಾರು ನಕಮುರಾ ಎದುರು ಡ್ರಾ ಸಾಧಿಸಿದರು. ಕೊನೆಯ ಸುತ್ತಿನಲ್ಲಿ ಅಮೆರಿಕದವರೇ ಆದ ವೆಸ್ಲೆ ಸೋ ಅವರ ವಿರುದ್ಧ ಹರಿಕೃಷ್ಣ ಪರಾಭವಗೊಂಡರು.

ಸದ್ಯ ಹರಿಕೃಷ್ಣ ಅವರು ಟೂರ್ನಿಯಲ್ಲಿ ಐದನೇ ಸ್ಥಾನದಲ್ಲೇ ಮುಂದುವರಿದಿದ್ದಾರೆ.

ಟೂರ್ನಿಯ ಮೊದಲ ದಿನ ಹರಿಕೃಷ್ಣ,  ಎರಡು ಸುತ್ತುಗಳಲ್ಲಿ ಗೆಲ್ಲುವುದರೊಂದಿಗೆ ಶುಭಾರಂಭ ಮಾಡಿದ್ದರು. ಇನ್ನುಳಿದ ಆರು ಪಂದ್ಯಗಳ ಪೈಕಿ ಅವರು ಕೇವಲ ಒಂದರಲ್ಲಿ ಮಾತ್ರ ಗೆಲ್ಲುವಲ್ಲಿ ಯಶಸ್ವಿಯಾದರು.

ಹರಿಕೃಷ್ಣ ಎದುರಿನ ಗೆಲುವಿನೊಂದಿಗೆ ವೆಸ್ಲೆ ಅವರು ಒಟ್ಟು 13 ಪಾಯಿಂಟ್ಸ್‌ ಗಳಿಸಿ ಟೂರ್ನಿಯಲ್ಲಿ ಅಗ್ರಸ್ಥಾನಕ್ಕೇರಿದರು. ಇನ್ನು ಬ್ಲಿಟ್ಜ್‌ ವಿಭಾಗದಲ್ಲಿ ಸ್ಪರ್ಧೆಗಳು ನಡೆಯಲಿವೆ. ಮತ್ತೊಂದು ಪಂದ್ಯದಲ್ಲಿ ವಿಶ್ವ ಚಾಂಪಿಯನ್‌ ನಾರ್ವೆಯ ಮ್ಯಾಗ್ನಸ್‌ ಕಾರ್ಲ್‌ಸನ್‌ ಅವರು ಅಲೆಕ್ಸಾಂಡರ್‌ ಗ್ರಿಶ್ಚುಕ್ ಎದುರು 46 ನಡೆಗಳಲ್ಲಿ ಮಣಿದರು. 

12 ಪಾಯಿಂಟ್ಸ್‌ ಗಳಿಸಿರುವ ಕಾರ್ಲ್‌ಸನ್‌ ಅವರು ಟೂರ್ನಿಯಲ್ಲಿ ಎರಡನೇ ಸ್ಥಾನದಲ್ಲಿದ್ದರೆ, ತಲಾ 10 ಪಾಯಿಂಟ್ಸ್ ಕಲೆಹಾಕಿರುವ ರಷ್ಯಾದ ಇಯಾನ್‌ ನೆಪೊಮ್ನಿಯಾಟ್ಜಿ ಹಾಗೂ ಅಲೆಕ್ಸಾಂಡರ್‌ ಗ್ರಿಶ್ಚುಕ್‌ ಜಂಟಿ ಮೂರನೇ ಸ್ಥಾನದಲ್ಲಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು