ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Cmmonwealth Games | ವೇಟ್‌ಲಿಫ್ಟಿಂಗ್‌: ಹರ್ಜಿಂದರ್‌ಗೆ ಕೌರ್‌ ಕೊರಳಿಗೆ ಕಂಚು

ಮಹಿಳೆಯರ 71 ಕೆ.ಜಿ. ವಿಭಾಗದಲ್ಲಿ ಸಾಧನೆ
Last Updated 2 ಆಗಸ್ಟ್ 2022, 13:06 IST
ಅಕ್ಷರ ಗಾತ್ರ

ಬರ್ಮಿಂಗ್‌ಹ್ಯಾಮ್ (ಪಿಟಿಐ): ಭಾರತದ ವೇಟ್‌ಲಿಫ್ಟರ್‌ ಹರ್ಜಿಂದರ್‌ ಕೌರ್‌ ಅವರು ಮಹಿಳೆಯರ 71 ಕೆ.ಜಿ. ವಿಭಾಗದಲ್ಲಿ ಕಂಚು ಗೆದ್ದರು.

ಸೋಮವಾರ ರಾತ್ರಿ ನಡೆದ ಸ್ಪರ್ಧೆಯಲ್ಲಿ ಅದೃಷ್ಟವೂ ಕೌರ್‌ ಜತೆಗಿತ್ತು. ಇಲ್ಲಿ ಚಿನ್ನ ಗೆಲ್ಲುವ ನೆಚ್ಚಿನ ಸ್ಪರ್ಧಿ ಎನಿಸಿದ್ದ ನೈಜೀರಿಯದ ಜೋಯ್ ಇಜೆ ಅವರು ಕ್ಲೀನ್‌– ಜರ್ಕ್‌ನಲ್ಲಿ ಮೂರು ಪ್ರಯತ್ನಗಳಲ್ಲಿ ವಿಫಲವಾದ ಕಾರಣ ಹರ್ಜಿಂದರ್‌ ಅಗ್ರ ಮೂವರಲ್ಲಿ ಕಾಣಿಸಿಕೊಂಡರು.

ಪಂಜಾಬ್‌ನ ಪಟಿಯಾಲದ ಲಿಫ್ಟರ್‌ ಒಟ್ಟು 212 ಕೆ.ಜಿ (93+ 119) ಭಾರ ಎತ್ತುವಲ್ಲಿ ಯಶಸ್ವಿಯಾದರು. 229 ಕೆ.ಜಿ. ಎತ್ತಿದ ಇಂಗ್ಲೆಂಡ್‌ನ ಸಾರಾ ಡೇವಿಸ್‌ ಚಿನ್ನ ಗೆದ್ದರೆ, ಕೆನಡಾದ ಅಲೆಕ್ಸಿಸ್‌ ಆ್ಯಶ್‌ವರ್ತ್‌ (214 ಕೆ.ಜಿ) ಕಂಚು ಗಳಿಸಿದರು. ಸಾರಾ ಅವರು ಕೂಟ ದಾಖಲೆಯನ್ನೂ ಮಾಡಿದರು.

ಸ್ನ್ಯಾಚ್‌ನಲ್ಲಿ 90 ಕೆ.ಜಿ ಯೊಂದಿಗೆ ಸ್ಪರ್ಧೆ ಆರಂಭಿಸಿದ ಹರ್ಜಿಂದರ್‌, ಮೊದಲ ಪ್ರಯತ್ನದಲ್ಲಿ ವಿಫಲರಾದರು. ಒತ್ತಡಕ್ಕೆ ಒಳಗಾದರೂ ಅವರು ಎರಡನೇ ಪ್ರಯತ್ನದಲ್ಲಿ ಯಶ ಕಂಡರು. ಮೂರನೇ ಪ್ರಯತ್ನದಲ್ಲಿ 93 ಕೆ.ಜಿ ಎತ್ತಿದರು.

ಸ್ನ್ಯಾಚ್‌ ವಿಭಾಗದ ಬಳಿಕ ಹರ್ಜಿಂದರ್‌ ಮತ್ತು ಆಸ್ಟ್ರೇಲಿಯಾದ ಕಿಯಾನ ಎಲಿಯಟ್‌ ನಡುವೆ ಮೂರನೇ ಸ್ಥಾನಕ್ಕಾಗಿ ಪೈಪೋಟಿಯಿತ್ತು.

ಕ್ಲೀನ್‌–ಜರ್ಕ್‌ನಲ್ಲಿ ಭಾರತದ ಲಿಫ್ಟರ್‌ ಮೊದಲ ಪ್ರಯತ್ನದಲ್ಲಿ 113 ಕೆ.ಜಿ. ಎತ್ತಿದರು. ಎರಡನೇ ಪ್ರಯತ್ನದಲ್ಲಿ 116 ಕೆ.ಜಿ ಹಾಗೂ ಕೊನೆಯ ಅವಕಾಶದಲ್ಲಿ 119 ಕೆ.ಜಿ. ಭಾರ ಎತ್ತುವಲ್ಲಿ ಯಶಸ್ವಿಯಾಗಿ ಕಂಚಿನ ಪದಕ ಕೊರಳಿಗೇರಿಸಿಕೊಂಡರು.

ಪೂನಂ ಯಾದವ್‌ಗೆ ಕೊನೆಯ ಸ್ಥಾನ: ಮಹಿಳೆಯರ 76 ಕೆ.ಜಿ. ವಿಭಾಗದಲ್ಲಿ ಕಣದಲ್ಲಿದ್ದ ಭಾರತದ ಪೂನಂ ಯಾದವ್‌ ಕೊನೆಯ ಸ್ಥಾನ ಪಡೆದು ನಿರಾಸೆ ಅನುಭವಿಸಿದರು.

ಸ್ನ್ಯಾಚ್‌ನಲ್ಲಿ 98 ಕೆ.ಜಿ. ಭಾರ ಎತ್ತಿದ ಅವರು ಕ್ಲೀನ್‌–ಜರ್ಕ್‌ನಲ್ಲಿ ಮೂರೂ ಪ್ರಯತ್ನಗಳಲ್ಲಿ ವಿಫಲರಾದ ಕಾರಣ ಪದಕದ ಅವಕಾಶ ಕಳೆದುಕೊಂಡರು.

ಸ್ನ್ಯಾಚ್‌ ವಿಭಾಗದ ಸ್ಪರ್ಧೆ ಕೊನೆಗೊಂಡಾಗ ಪೂನಂ, ಕೆನಡಾದ ಮಯಾ ಲೇಲರ್‌ (100 ಕೆ.ಜಿ.) ಬಳಿಕ ಎರಡನೇ ಸ್ಥಾನದಲ್ಲಿದ್ದರು. ಆದರೆ ಕ್ಲೀನ್‌–ಜರ್ಕ್‌ನಲ್ಲಿ 116 ಕೆ.ಜಿ. ಭಾರ ಎತ್ತಲು ಮುಂದಾದ ಅವರಿಗೆ ಮೂರು ಪ್ರಯತ್ನಗಳಲ್ಲೂ ಯಶಸ್ಸು ದೊರೆಯಲಿಲ್ಲ.

ಒಟ್ಟು 228 ಕೆ.ಜಿ ಸಾಧನೆಯೊಂದಿಗೆ (100+128) ಲೇಲರ್‌ ಚಿನ್ನ ಗೆದ್ದರು. ನೈಜೀರಿಯದ ತಯವೊ ಲಿಯಡಿ (96+120) ಬೆಳ್ಳಿ ಹಾಗೂ ಮ್ಯಾಕ್ಸಿಮಿನ ಯುಯೆಪ ಕಂಚು ಪಡೆದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT