ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಿಳಾ ಹಾಕಿ: ಸೆಮಿಫೈನಲ್‌ನಲ್ಲಿ ಎಡವಿದ ಭಾರತ

ಪೆನಾಲ್ಟಿ ಶೂಟೌಟ್‌ನಲ್ಲಿ ಆಸ್ಟ್ರೇಲಿಯಾ ಎದುರು ಸೋಲು
Last Updated 6 ಆಗಸ್ಟ್ 2022, 14:28 IST
ಅಕ್ಷರ ಗಾತ್ರ

ಬರ್ಮಿಂಗ್‌ಹ್ಯಾಮ್: ಭಾರತ ಮಹಿಳಾ ಹಾಕಿ ತಂಡದವರು ಕಾಮನ್‌ವೆಲ್ತ್ ಕೂಟದ ಸೆಮಿಫೈನಲ್‌ನಲ್ಲಿ ಆಸ್ಟ್ರೇಲಿಯಾ ಎದುರು ವೀರೋಚಿತ ಸೋಲು ಅನುಭವಿಸಿದರು.

ಶುಕ್ರವಾರ ರಾತ್ರಿ ನಡೆದ ರೋಚಕ ಪಂದ್ಯದಲ್ಲಿ ಸವಿತಾ ಪೂನಿಯಾ ಬಳಗ ಪೆನಾಲ್ಟಿ ಶೂಟೌಟ್‌ನಲ್ಲಿ 0–3 ರಲ್ಲಿ ಪರಾಭವಗೊಂಡಿತು. ಕಂಚಿನ ಪದಕಕ್ಕಾಗಿ ಭಾನುವಾರ ನಡೆಯುವ ಪಂದ್ಯದಲ್ಲಿ ಭಾರತ ತಂಡ, ನ್ಯೂಜಿಲೆಂಡ್‌ನ ಸವಾಲು ಎದುರಿಸಲಿದೆ.

ಫೈನಲ್‌ ಮೇಲೆ ಕಣ್ಣಿಟ್ಟಿದ್ದ ಎರಡೂ ತಂಡಗಳು ಆಕ್ರಮಣಕಾರಿ ಆಟವಾಡಿದವು. 10ನೇ ನಿಮಿಷದಲ್ಲಿ ರೆಬೆಕಾ ಗ್ರೈನೆರ್‌ ಅವರು ಗೋಲು ಗಳಿಸಿ ಆಸ್ಟ್ರೇಲಿಯಾಕ್ಕೆ ಮುನ್ನಡೆ ತಂದಿತ್ತರು. ಅಂಬ್ರೋಸಿಯಾ ಮಲೊನ್‌ ಅವರ ಪಾಸ್‌ನಿಂದ ಚೆಂಡನ್ನು ನಿಯಂತ್ರಣಕ್ಕೆ ಪಡೆದುಕೊಂಡ ರೆಬೆಕಾ ಗುರಿ ಸೇರಿಸಿದರು.

49ನೇ ನಿಮಿಷದಲ್ಲಿ ವಂದನಾ ಕಟಾರಿಯಾ ತಂದಿತ್ತ ಗೋಲಿನ ನೆರವಿನಿಂದ ಭಾರತ ಸಮಬಲ ಮಾಡಿಕೊಂಡಿತು. ಸುಶೀಲಾ ಚಾನು ಅವರು ನೀಡಿದ ಪಾಸ್‌ನಿಂದ ಈ ಗೋಲು ಬಂತು.

ಕೊನೆಯ 10 ನಿಮಿಷಗಳಲ್ಲಿ ಉಭಯ ತಂಡಗಳು ಗೆಲುವಿನ ಗೋಲಿಗಾಗಿ ನಡೆಸಿದ ಪ್ರಯತ್ನಗಳಿಗೆ ಫಲ ಸಿಗಲಿಲ್ಲ. ಉಭಯ ತಂಡಗಳಿಗೆ ಸಾಕಷ್ಟು ಪೆನಾಲ್ಟಿ ಕಾರ್ನರ್‌ ಅವಕಾಶಗಳು ಲಭಿಸಿದರೂ, ಅವನ್ನು ಗೋಲಾಗಿ ಪರಿವರ್ತಿಸಲು ಆಗಲಿಲ್ಲ. ನಿಗದಿತ ಅವಧಿಯ ಆಟ 1–1 ರಲ್ಲಿ ಸಮಬಲದಲ್ಲಿ ಕೊನೆಗೊಂಡ ಕಾರಣ ವಿಜೇತರನ್ನು ನಿರ್ಣಯಿಸಲು ಪೆನಾಲ್ಟಿ ಶೂಟೌಟ್‌ ಮೊರೆ ಹೋಗಲಾಯಿತು.

ಪೆನಾಲ್ಟಿ ಶೂಟೌಟ್‌ನಲ್ಲಿ ಭಾರತಕ್ಕೆ ಅದೃಷ್ಟ ಕೈಕೊಟ್ಟಿತು. ಲಾಲ್‌ರೆಮ್ಸಿಯಾಮಿ, ನೇಹಾ ಗೋಯಲ್‌ ಮತ್ತು ನವನೀತ್‌ ಕೌರ್‌ ಅವರು ಮೊದಲ ಮೂರು ಪ್ರಯತ್ನಗಳಲ್ಲಿ ಗೋಲು ಗಳಿಸಲು ವಿಫಲರಾದರು.

ಆಸ್ಟ್ರೇಲಿಯಾದ ಮೊದಲ ಮೂರೂ ಅವಕಾಶಗಳನ್ನು ರೋಸಿ ಮಲೊನ್, ಕೈಟ್ಲಿನ್ ನಾಬ್ಸ್‌ ಮತ್ತು ಆಮಿ ಲಾಟನ್‌ ಗೋಲಾಗಿ ಪರಿವರ್ತಿಸಿದರು. ಮಲೊನ್‌ ಆರಂಭದಲ್ಲಿ ಗೋಲು ಗಳಿಸಲು ವಿಫಲರಾಗಿದ್ದರು. ಆದರೆ ಅವರು ಪೆನಾಲ್ಟಿ ತೆಗೆದುಕೊಳ್ಳುವಾಗ ಟೈಮರ್‌ನಲ್ಲಿ ಎಂಟು ಸೆಕೆಂಡುಗಳ ಕೌಂಟ್‌ಡೌನ್‌ ಆರಂಭವಾಗಿಲ್ಲ ಎಂದು ರೆಫರಿ ಮತ್ತೊಂದು ಅವಕಾಶ ನೀಡಿದರು.

ಮಹಿಳೆಯರ ವಿಭಾಗದ ಇನ್ನೊಂದು ಸೆಮಿಫೈನಲ್‌ನಲ್ಲಿ ಇಂಗ್ಲೆಂಡ್‌ ತಂಡ ಪೆನಾಲ್ಟಿ ಶೂಟೌಟ್‌ನಲ್ಲಿ 2–0 ಗೋಲುಗಳಿಂದ ನ್ಯೂಜಿಲೆಂಡ್‌ ಎದುರು ಜಯಿಸಿತು.

ಟೈಮರ್‌ ವಿವಾದ: ಎಫ್‌ಐಎಚ್‌ ಕ್ಷಮೆಯಾಚನೆ

ಸೆಮಿ ಪಂದ್ಯದ ವೇಳೆ ಟೈಮರ್‌ಗೆ ಸಂಬಂಧಿಸಿದಂತೆ ಉಂಟಾದ ವಿವಾದಕ್ಕೆ ಅಂತರರಾಷ್ಟ್ರೀಯ ಹಾಕಿ ಫೆಡರೇಷನ್‌ (ಎಫ್‌ಐಎಚ್‌) ಕ್ಷಮೆಯಾಚಿಸಿದೆ.

ಪೆನಾಲ್ಟಿ ಶೂಟೌಟ್‌ನಲ್ಲಿ ಆಸ್ಟ್ರೇಲಿಯಾದ ರೋಸಿ ಮಲೊನ್‌ ಅವರು ಮೊದಲ ಪ್ರಯತ್ನದಲ್ಲಿ ಗೋಲು ಗಳಿಸಲು ವಿಫಲರಾಗಿದ್ದರು. ನಂತರ ಭಾರತದ ಲಾಲ್‌ರೆಮ್ಸಿಯಾಮಿ ಪೆನಾಲ್ಟಿ ಶೂಟೌಟ್‌ಗೆ ಮುಂದಾದರು.

ಈ ವೇಳೆ ಮಧ್ಯ ಪ್ರವೇಶಿಸಿದ ರೆಫರಿ, ಮಲೊನ್ ಶೂಟೌಟ್‌ ವೇಳೆ ಕ್ಲಾಕ್‌ನಲ್ಲಿ (ಟೈಮರ್‌) ಕೌಂಟ್‌ಡೌನ್‌ ಆರಂಭವಾಗಿರಲಿಲ್ಲ ಎಂದು ಮತ್ತೊಂದು ಅವಕಾಶ ನೀಡಿದರು. ಆ ಅವಕಾಶದಲ್ಲಿ ಮಲೊನ್‌ ಗೋಲು ಗಳಿಸಿದರು.

‘ಕಾಮನ್‌ವೆಲ್ತ್‌ ಕೂಟದಲ್ಲಿ ಭಾರತ– ಆಸ್ಟ್ರೇಲಿಯಾ ಸೆಮಿಫೈನಲ್‌ ಪಂದ್ಯದ ವೇಳೆ ಟೈಮರ್‌ನಲ್ಲಿ ಕೌಂಟ್‌ಡೌನ್‌ ಆರಂಭವಾಗುವುದಕ್ಕೆ ಮುನ್ನವೇ ಪೆನಾಲ್ಟಿ ಶೂಟೌಟ್‌ ತೆಗೆದುಕೊಳ್ಳಲಾಗಿತ್ತು. ಈ ತಪ್ಪಿಗೆ ಕ್ಷಮೆಯಾಚಿಸುತ್ತೇವೆ. ಮುಂದೆ ಇಂತಹ ಪ್ರಮಾದ ಅಗದಂತೆ ಎಚ್ಚರವಹಿಸಲಾಗುವುದು’ ಎಂದು ಎಫ್‌ಐಎಚ್‌ ಪ್ರಕಟಣೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT