ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತ ಹಾಕಿ ಆಟಗಾರ್ತಿಯರಿಗೆ ಕಟ್ಟುನಿಟ್ಟಿನ ಪಥ್ಯ

ಮಿಷನ್‌ ಟೋಕಿಯೊ– ಸಿಹಿ, ಮಸಾಲೆ ಪದಾರ್ಥ ಸೇವನೆಗಿಲ್ಲ ಅವಕಾಶ
Last Updated 23 ಜುಲೈ 2019, 19:30 IST
ಅಕ್ಷರ ಗಾತ್ರ

ನವದೆಹಲಿ: ಮುಂದಿನ ವರ್ಷದ ಟೋಕಿಯೋ ಒಲಿಂಪಿಕ್ಸ್‌ಗೆ ಅರ್ಹತೆ ಗಳಿಸುವ ಅವಕಾಶ ಹೆಚ್ಚಿಸಲು ಕಟ್ಟುನಿಟ್ಟಿನ ‘ಡಯಟ್‌’ ಪಾಲಿಸುವಂತೆ ಭಾರತ ಹಾಕಿ ತಂಡದ ಆಟಗಾರ್ತಿಯರಿಗೆ ಸೂಚನೆ ನೀಡಲಾಗಿದೆ. ಇದರ ಭಾಗವಾಗಿ ಅಚ್ಚುಮೆಚ್ಚಿನ ಮಸಾಲೆ ಪದಾರ್ಥ ಮತ್ತು ಸಿಹಿ ತಿಂಡಿಗಳಿಂದ ದೂರವಿರಬೇಕಾಗಿದೆ.

ಹಿರೋಷಿಮಾದಲ್ಲಿ ಕಳೆದ ತಿಂಗಳು ಎಫ್‌ಐಎಚ್‌ ಹಾಕಿ ಸರಣಿಯನ್ನು ಗೆದ್ದ ನಂತರ ಮಹಿಳಾ ತಂಡ, ನವೆಂಬರ್‌ನಲ್ಲಿ ನಿಗದಿಯಾಗಿರುವ ಒಲಿಂಪಿಕ್ ಅರ್ಹತಾ ಟೂರ್ನಿಗೆ ತೀವ್ರ ರೀತಿಯಲ್ಲಿ ತಾಲೀಮು ನಡೆಸುತ್ತಿದೆ.

ಈಗಿನ ತಂಡ, ಇತ್ತೀಚಿನ ವರ್ಷಗಳಲ್ಲಿ ಅತ್ಯಂತ ಫಿಟ್‌ ಆಗಿರುವ ತಂಡವಾಗಿದೆ ಎಂದಿರುವ ನಾಯಕಿ ರಾಣಿ ರಾಂಪಾಲ್‌, ಈ ಪರಿವರ್ತನೆಗೆಕಾರಣವಾಗಿರುವ ವೈಜ್ಞಾನಿಕ ಸಲಹೆಗಾರ ವೇಯ್ನ್ ಲೊಂಬಾರ್ಡ್‌ ಅವರನ್ನು ಶ್ಲಾಘಿಸಿದರು.

‘ನಾನು ಇದುವರೆಗೆ ಕಂಡಿರುವ ತಂಡಗಳಲ್ಲೇ ಅತ್ಯುತ್ತಮ ದೈಹಿಕ ಕ್ಷಮತೆ ಹೊಂದಿರುವ ತಂಡ ಇದು. ತಂಡ ಮತ್ತು ಪ್ರತಿ ಆಟಗಾರ್ತಿಯರ ಫಿಟ್ನೆಸ್ ಕಡೆ ಕಠಿಣ ಶ್ರಮ ಹಾಕುತ್ತಿದ್ದಾರೆ. ನಾವೆಲ್ಲ ಅವರು ಸೂಚಿಸಿರುವ ಪಥ್ಯಾಹಾರವನ್ನು ಪಾಲಿಸುತ್ತಿದ್ದು, ಎಲ್ಲರಲ್ಲೂ ಬದಲಾವಣೆ ಕಾಣಬಹುದಾಗಿದೆ. ನಾವು ಚೆನ್ನಾಗಿ ಆಡಬೇಕಾದರೆ, ಆರೋಗ್ಯಪೂರ್ಣ ಡಯಟ್‌ ಹೊಂದಿರಬೇಕು’ ಎಂದು ರಾಣಿ ಸುದ್ದಿಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.

‘ನಾವು ಸಿಹಿ ತಿನಿಸು, ಚಾಕೊಲೇಟ್‌, ಖಾರ ಮತ್ತು ಕರಿದ ಪದಾರ್ಥಗಳನ್ನು ವರ್ಜಿಸಿದ್ದೇವೆ. ಕಡಿಮೆ ಕಾರ್ಬೊಹೈಡ್ರೇಟ್ಸ್‌ ಹೊಂದಿರುವ ಆಹಾರ ಸೇವಿಸುತ್ತಿದ್ದು, ಉಲ್ಲಾಸ ಕಾಣುತ್ತಿದೆ’ ಎಂದಿದ್ದಾರೆ.

‘ನಾನು ಜಪಾನ್‌ನಿಂದ ಮರಳಿಬಂದಾಗ ಅಮ್ಮ ತಯಾರಿಸುವ ರಾಜ್ಮಾ–ಅನ್ನದ ಊಟ ಮಾಡಲು ಹಾತೊರೆದಿದ್ದೆ. ನಮಗೆ ಇಷ್ಟವಾದುದನ್ನು ತಿನ್ನಲು ಅವಕಾಶ ಸಿಗುವಂತೆ ಮಾಡುತ್ತಾರೆ. ಆದರೆ ಎಲ್ಲ ಸಂದರ್ಭಗಲ್ಲಿ ಹಾಗೆ ಮಾಡಲು ಬಿಡುವುದಿಲ್ಲ’ ಎಂದು ನಸುನಕ್ಕರು.

1980ರ ಮಾಸ್ಕೊ ಒಲಿಂಪಿಕ್ಸ್‌ನಲ್ಲಿ ಮೊದಲ ಬಾರಿಗೆ ಹಾಕಿ ಸೇಪರ್ಡೆ ಮಾಡಿದಾಗ, ತಂಡ ನಾಲ್ಕನೇ ಸ್ಥಾನ ಪಡೆದಿತ್ತು. ಅದುವೇ ಇದುವರೆಗಿನ ಉತ್ತಮ ಸಾಧನೆಯಾಗಿದೆ. ನಂತರ ಅರ್ಹತೆ ಪಡೆಯಲಿಕ್ಕೇ ಪರದಾಡಬೇಕಾಯಿತು. 36 ವರ್ಷಗಳ ನಂತರ, ರಿಯೊ ಒಲಿಂಪಿಕ್ಸ್‌ನಲ್ಲಿ ಅವಕಾಶ ದೊರೆತಾಗ, ತಂಡ 12ನೇ ಸ್ಥಾನ ಗಳಿಸಿತ್ತು.

‘ರಿಯೊ ಒಲಿಂಪಿಕ್ಸ್‌ ನಮಗೆ ಅನುಭವ ಕಲಿಸಿತು. ಆ ಮಟ್ಟದಲ್ಲಿ ನಾವು ಉತ್ತಮ ಸಾಧನೆ ತೋರಲಾಗಲಿಲ್ಲ. ನಾವು ನಂತರ ಚೆನ್ನಾಗಿ ಆಡತೊಡಗಿದೆವು. ಉತ್ತಮ ಪ್ರದರ್ಶನ ನೀಡಲು ಎಲ್ಲರೂ ತುದಿಗಾಲಲ್ಲಿದ್ದೇವೆ’ ಎಂದರು.

ಪದಕ ಗಳಿಸುವ ವಿಶ್ವಾಸವಿದೆಯೇ ಎಂಬ ಪ್ರಶ್ನೆಗೆ ಸಕಾರಾತ್ಮಕವಾಗಿ ಉತ್ತರಿಸಿದರು. ‘ಮೊದಲು ನಾವು ಅರ್ಹತೆ ಗಳಿಸಬೇಕಾಗಿದೆ. ಅದರ ವಿಶ್ವಾಸವಿದೆ. ನಮಗೆ ಪದಕ ಗೆಲ್ಲುವ ಸಾಮರ್ಥ್ಯವಿದೆ. ವಿಶ್ವ ಕ್ರಮಾಂಕಗಳು ಪರಿಗಣನೆಗೆ ಬರುವುದಿಲ್ಲ. ನೆದರ್ಲೆಂಡ್‌ ಹೊರತುಪಡಿಸಿ ಯಾವುದೇ ತಂಡ ತನ್ನ ಉತ್ತಮ ಆಟ ಹೊರಬಂದರೆ ಯಾರನ್ನು ಬೇಕಾದರೂ ಸೋಲಿಸಬಹುದು. ಹೀಗಾಗಿ ಪದಕ ಬಗ್ಗೆ ಆಶಾವಾದ ಹೊಂದಿದ್ದೇವೆ’ ಎಂದರು. ಅನುಭವಿ ಫಾರ್ವರ್ಡ್‌ ಆಟಗಾರ್ತಿ ಆಗಿರುವ ರಾಣಿ, ಎಫ್‌ಐಎಚ್‌ ವಿಶ್ವ ಸರಣಿಯಲ್ಲಿ ಅವರು ‘ಸರಣಿಯ ಆಟಗಾರ್ತಿ’ ಆಗಿದ್ದರು.

ಹಾಕಿ ಆಟಗಾರ್ತಿಯರು, ಹಿಮಾ ದಾಸ್‌ ಮತ್ತು ಧ್ಯುತಿ ಚಾಂದ್‌ ಅವರ ಇತ್ತೀಚಿನ ಸಾಧನೆಗಳಿಂದ ಪ್ರೇರಣೆ ಪಡೆದಿದ್ದಾರೆ ಎಂದರು.

‘ಖ್ಯಾತನಾಮ ಡಿಫೆಂಡರ್‌ ಆಗಿದ್ದ ಫರ್ಗುಸ್‌ ಕವನಾಘ್‌ ಅವರು ನಡೆಸಿಕೊಟ್ಟ ಶಿಬಿರ ಫಲಪ್ರದವಾಗಿತ್ತು. ನಾವು ರಕ್ಷಣೆ, ದಾಳಿ, ಪೆನಾಲಿ ಕಾರ್ನರ್‌ ಮತ್ತು ಹೊಂದಾಣಿಕೆ ಕಡೆ ಒತ್ತು ನೀಡುತ್ತಿದ್ದೇವೆ. ಮೈದಾನದಲ್ಲಿ ತಕ್ಷಣ ನಿರ್ಧಾರಕ್ಕೆ ಬರಲು ಕಲಿಯುತ್ತಿದ್ದೇವೆ’ ಎಂದರು.

ಭಾರತ, ಮುಂದಿನ ತಿಂಗಳು ಟೋಕಿಯೊದಲ್ಲಿ ನಾಲ್ಕು ರಾಷ್ಟ್ರಗಳ ಟೂರ್ನಿಯಲ್ಲಿ ಆಡಲಿದೆ. ಚೀನಾ, ಆಸ್ಟ್ರೇಲಿಯಾ ಜೊತೆ ಆತಿಥೇಯ ಜಪಾನ್‌ ಕೂಡ ಆಡಲಿದೆ. ನಂತರ ಇಂಗ್ಲೆಂಡ್‌ ವಿರುದ್ಧ ಟೆಸ್ಟ್ ಸರಣಿ ಆಡಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT