ಶನಿವಾರ, ಫೆಬ್ರವರಿ 22, 2020
19 °C

ಡಕಾರ್‌ ‘ಹೀರೊ’...

ಜಿ.ಶಿವಕುಮಾರ Updated:

ಅಕ್ಷರ ಗಾತ್ರ : | |

prajavani

ವಿಶ್ವ ಪ್ರಸಿದ್ಧ ಡಕಾರ್‌ ರ‍್ಯಾಲಿಯಲ್ಲಿ ಸತತ ಆರು ಬಾರಿ ಭಾಗವಹಿಸಿದ ಭಾರತದ ಏಕೈಕ ಬೈಕ್‌ ಸಾಹಸಿ ಚುಂಚನಗುಪ್ಪೆ ಶಿವಶಂಕರ್‌ ಸಂತೋಷ್‌. ಸುಮಾರು 8,000 ಕಿಲೊ ಮೀಟರ್ಸ್‌ ದೂರದ ಈ ರ‍್ಯಾಲಿಯನ್ನು ಮೂರು ಸಲ ಪೂರ್ಣಗೊಳಿಸಿದ ಹಿರಿಮೆ ಅವರದ್ದು.

15 ವರ್ಷಗಳ ಹಿಂದೆ ಮೋಟರ್‌ಸ್ಪೋರ್ಟ್ಸ್‌ಗೆ ಕಾಲಿಟ್ಟ ಕನ್ನಡಿಗ ಸಿ.ಎಸ್‌.ಸಂತೋಷ್‌, ಅತ್ಯಂತ ಅಪಾಯಕಾರಿ ಎನಿಸಿರುವ ಈ ಕ್ರೀಡೆಯಲ್ಲಿ ಅಚ್ಚಳಿಯದ ಹೆಜ್ಜೆ ಗುರುತು ಮೂಡಿಸಿದ್ದಾರೆ. ಡೆಸರ್ಟ್‌ ಸ್ಟಾರ್ಮ್‌ ರ‍್ಯಾಲಿಯಲ್ಲಿ ‘ಹ್ಯಾಟ್ರಿಕ್‌’ (2014, 2015 ಮತ್ತು 2016) ಪ್ರಶಸ್ತಿ ಗೆದ್ದ ಹೆಗ್ಗಳಿಕೆ ಹೊಂದಿರುವ 36 ವರ್ಷ ವಯಸ್ಸಿನ ಸಂತೋಷ್‌, ರಾಷ್ಟ್ರೀಯ ಸೂಪರ್‌ ಕ್ರಾಸ್‌ ಮತ್ತು ಮೋಟೊ ಕ್ರಾಸ್‌ಗಳಲ್ಲೂ ಮೋಡಿ ಮಾಡಿದ್ದಾರೆ.

ಹೀರೊ ಮೋಟರ್‌ ಸ್ಪೋರ್ಟ್ಸ್‌ ತಂಡದ ಈ ಸಾಹಸಿ, ಈ ವರ್ಷ ನಡೆದಿದ್ದ 42ನೇ ಆವೃತ್ತಿಯ ಡಕಾರ್‌ ರ‍್ಯಾಲಿಯಲ್ಲೂ ಪಾಲ್ಗೊಂಡು ಗಮನ ಸೆಳೆದಿದ್ದಾರೆ. ಅವರು ರ‍್ಯಾಲಿಯ ಅನುಭವದ ಕುರಿತು ‘ಪ್ರಜಾವಾಣಿ’ ಜೊತೆ ಮಾತನಾಡಿದ್ದಾರೆ.

*ಸತತ ಆರನೇ ಬಾರಿ ಡಕಾರ್‌ ರ‍್ಯಾಲಿಯಲ್ಲಿ ಭಾಗವಹಿಸಿದ್ದೀರಿ. ಈ ಸಾಧನೆ ಮಾಡಿದ ಭಾರತದ ಮೊದಲ ಬೈಕ್‌ ಸಾಹಸಿ ನೀವು. ಈ ಬಗ್ಗೆ ಹೇಳಿ?

ಹಿಂದಿನ ಐದು ರೇಸ್‌ಗಳು ದಕ್ಷಿಣ ಅಮೆರಿಕದಲ್ಲಿ ನಡೆದಿದ್ದವು. ಈ ವರ್ಷ ಸೌದಿ ಅರೇಬಿಯಾದಲ್ಲಿ ಸ್ಪರ್ಧೆ ಆಯೋಜನೆಯಾಗಿದ್ದರಿಂದ ಅಲ್ಲಿನ ಪರಿಸ್ಥಿತಿಗೆ ಹೊಂದಿಕೊಳ್ಳಲು ಹಿಂದಿನಷ್ಟು ಕಷ್ಟ ಆಗಲಿಲ್ಲ. ಸತತ ಆರನೇ ಬಾರಿ ರ‍್ಯಾಲಿಯಲ್ಲಿ ಪಾಲ್ಗೊಂಡಿದ್ದು ನಿಜಕ್ಕೂ ಹೆಮ್ಮೆಯ ಸಂಗತಿ.

*ಈ ಬಾರಿ ಸ್ಪರ್ಧೆ ಹೇಗಿತ್ತು?

ಹಿಂದಿನಂತೆ ಈ ಸಲವೂ ವಿಶ್ವಶ್ರೇಷ್ಠ ಬೈಕ್‌ ಸಾಹಸಿಗಳು ಭಾಗವಹಿಸಿದ್ದರು. ಹೀಗಾಗಿ ಸ್ಪರ್ಧೆ ತುಂಬಾ ಕಠಿಣವಾಗಿತ್ತು.

*ಈ ಸಲ ರ‍್ಯಾಲಿಯ ವೇಳೆ ನಿಮ್ಮ ತಂಡದ ಚಾಲಕ ಸೇರಿ ಇಬ್ಬರು ದುರ್ಮರಣ ಹೊಂದಿದರು. ಈ ಘಟನೆಯ ಬಗ್ಗೆ ಹೇಳಿ?

ಮೋಟರ್‌ ಸ್ಪೋರ್ಟ್ಸ್‌ನಲ್ಲಿ ಅವಘಡಗಳು ಸಂಭವಿಸುವುದು ಸಾಮಾನ್ಯ. ರಿಯಾದ್‌ನಲ್ಲಿ ನಡೆದಿದ್ದ ಏಳನೇ ಹಂತದ ಸ್ಪರ್ಧೆಯ ವೇಳೆ ಸಂಭವಿಸಿದ ಅಪಘಾತದಲ್ಲಿ ನಮ್ಮ ತಂಡದ ಪೌಲೊ ಗೊಂಜಾಲ್ವೆಸ್‌ ದುರ್ಮರಣ ಹೊಂದಿದರು. ವಿಶ್ವಶ್ರೇಷ್ಠ ಚಾಲಕರಲ್ಲಿ ಒಬ್ಬರಾಗಿದ್ದ ಪೌಲೊ ಅವರ ನಿಧನ ನಮ್ಮನ್ನೆಲ್ಲಾ ದಿಗ್ಭ್ರಾಂತರನ್ನಾಗಿ ಮಾಡಿತ್ತು. ಆ ಆಘಾತದಿಂದ ಹೊರಬರಲು ಆಗಲೇ ಇಲ್ಲ. ಹೀಗಾಗಿ ರೇಸ್‌ ಅನ್ನು ಅರ್ಧದಲ್ಲೇ ಮೊಟಕುಗೊಳಿಸಿದೆವು.

*ಡಕಾರ್‌ನಲ್ಲಿ ಇಂತಹ ಘಟನೆಗಳು ಮರುಕಳಿಸುತ್ತಲೇ ಇವೆಯಲ್ಲ. ಆಯೋಜಕರು ಮುನ್ನೆಚ್ಚರಿಕೆ ವಹಿಸುವುದಿಲ್ಲವೇ?

ಡಕಾರ್‌, ವಿಶ್ವದ ಅತ್ಯಂತ ಅಪಾಯಕಾರಿ ರ‍್ಯಾಲಿ. ಕಣಿವೆಗಳು, ಬೆಟ್ಟಗುಡ್ಡಗಳ ನಡುವಿನ ಕಡಿದಾದ ಕಚ್ಚಾ ರಸ್ತೆಗಳು ಹಾಗೂ ಮರಳಿನ ಪ್ರಪಾತಗಳಲ್ಲಿ ಶರವೇಗದಲ್ಲಿ ಸಾಗುವಾಗ ತುಂಬಾ ಜಾಗೃತೆಯಿಂದ ಇರಬೇಕು. ಜೊತೆಗೆ ಏಕಾಗ್ರತೆಯೂ ಬಹಳ ಅಗತ್ಯ. ಮನಸ್ಸು ಚಂಚಲವಾಯಿತೋ, ಪ್ರಾಣ ಪಕ್ಷಿ ಹಾರಿಹೋಯಿತೆಂದೇ ಅರ್ಥ. ಎಲ್ಲರಿಗೂ ಜೀವದ ಮೇಲೆ ಆಸೆ ಇರುತ್ತದೆ. ರ‍್ಯಾಲಿಯ ವೇಳೆ ಸಣ್ಣ ತಪ್ಪಾದರೂ ಪ್ರಾಣಕ್ಕೆ ಸಂಚಕಾರವೇ. ಈ ದುರ್ಘಟನೆಗಳಿಗೆ ಯಾರನ್ನೂ ದೂರಲು ಆಗುವುದಿಲ್ಲ.

*ಹೋದ ವರ್ಷದ ರ‍್ಯಾಲಿಯ ವೇಳೆ ನೀವು ಗಂಭೀರವಾಗಿ ಗಾಯಗೊಂಡಿದ್ದಿರಿ. ಆಗ ಈ ಬೈಕ್‌ ಸಾಹಸದ ಸಹವಾಸವೇ ಬೇಡ ಅಂತ ಅನಿಸಲಿಲ್ಲವೇ?

ಮೋಟರ್‌ ರೇಸ್‌ ಪ್ರಾಣಕ್ಕೆ ಕುತ್ತು ತರುತ್ತದೆ ಎಂಬುದು ಗೊತ್ತಿದ್ದರೂ ಇದನ್ನು ವೃತ್ತಿಪರವಾಗಿ ಸ್ವೀಕರಿಸಿದ್ದೀನಿ. ಹೀಗಾಗಿ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆ ಸೇರಿದರೂ ಮನಸ್ಸು ರ‍್ಯಾಲಿಯತ್ತಲೇ ತುಡಿಯುತ್ತಿರುತ್ತದೆ. ಮೋಟರ್‌ಸ್ಪೋರ್ಟ್ಸ್‌ನಿಂದ ವಿಮುಖವಾಗುವ ಆಲೋಚನೆ ಕನಸು ಮನಸ್ಸಿನಲ್ಲೂ ಸುಳಿಯುವುದಿಲ್ಲ.

ಸಿ.ಎಸ್‌.ಸಂತೋಷ್‌ ಅವರು ಗುರಿಯತ್ತ ಸಾಗಿದ ಕ್ಷಣ

*ಡಕಾರ್‌ ರ‍್ಯಾಲಿ ವೇಳೆ ವಿಶ್ರಾಂತಿ ಪಡೆಯುವುದಕ್ಕೂ ಸಮಯ ಸಿಗುವುದಿಲ್ಲವಂತಲ್ಲ?

ಡಕಾರ್‌, ಒಂದರ್ಥದಲ್ಲಿ ಮ್ಯಾರಥಾನ್‌ ರ‍್ಯಾಲಿ ಇದ್ದ ಹಾಗೆ. ಒಂದು ಸ್ಟೇಜ್‌ ಮುಗಿಸಿ ಕೊಠಡಿಗೆ ಮರಳಿದ ಬಳಿಕ ಮುಂದಿನ ಸ್ಟೇಜ್‌ನ ರೂಪುರೇಷೆ ಸಿದ್ಧಪಡಿಸುವುದರಲ್ಲಿ ತಲ್ಲೀನರಾಗಬೇಕು. ಹೀಗಾಗಿ ವಿಶ್ರಾಂತಿಗೆ ಹೆಚ್ಚು ಸಮಯ ಸಿಗುವುದಿಲ್ಲ.

*ಡಕಾರ್‌ನಲ್ಲಿ ನೀವು ಬಳಸುವ ಬೈಕ್‌ನ ವೈಶಿಷ್ಟ್ಯವೇನು?

ನಾನು ಬಳಸುವುದು ಎಂಡ್ಯೂರೆನ್ಸ್‌ ಬೈಕ್‌. ಆಫ್‌ರೋಡ್‌ ರ‍್ಯಾಲಿಗೆಂದೇ ಇದನ್ನು ವಿಶೇಷವಾಗಿ ತಯಾರಿಸಲಾಗುತ್ತದೆ. 30 ಲೀಟರ್‌ ಇಂಧನ ಸಾಮರ್ಥ್ಯ ಹೊಂದಿರುವ ಈ ಬೈಕ್‌ನಲ್ಲಿ ದಿಕ್ಸೂಚಿಗೆ ಅನುವಾಗುವಂತಹ ಸಲಕರಣೆಗಳನ್ನೂ ಅಳವಡಿಸಲಾಗಿರುತ್ತದೆ. ಈ ಬೈಕ್‌ ಹೆಚ್ಚು ತುಂಬಾ ಹಗುರವಾಗಿರುತ್ತದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು