ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾಕಿ ಸ್ಟಿಕ್ ಎಂಬ ಮಂತ್ರದಂಡ

Last Updated 15 ಡಿಸೆಂಬರ್ 2018, 19:45 IST
ಅಕ್ಷರ ಗಾತ್ರ

ಸೆಟ್ಲ್‌ಮೆಂಟ್ ಪ್ರದೇಶ...
ಹುಬ್ಬಳ್ಳಿಯ ಈ ಪ್ರದೇಶಕ್ಕೆ ಇವತ್ತು ಕಾಲಿಟ್ಟರೆ ಹತ್ತಾರು ಶಾಲೆ, ಕಾಲೇಜುಗಳು, ಕಚೇರಿಗಳು, ಹೋಟೆಲ್, ಅಂಗಡಿಗಳು, ಅಲಂಕೃತ ಕಟ್ಟಡಗಳು ಕಣ್ಣಿಗೆ ಬೀಳುತ್ತವೆ. ಕಾರು, ಬೈಕ್‌ಗಳ ಭರಾಟೆ ಇದೆ. ನಗರ ಜೀವನದ ಆಧುನಿಕ ನಡವಳಿಕೆಗಳು ಇಲ್ಲಿವೆ. ಈ ಪ್ರದೇಶದ ಗಂಗಾಧರ ನಗರಕ್ಕೆ ಕಾಲಿಟ್ಟರೆ ಅಲ್ಲೊಂದು ದೊಡ್ಡ ಮೈದಾನ ಕಾಣುತ್ತದೆ. ಆದರೆ ಅಲ್ಲಿ ಟೆನಿಸ್‌ ಬಾಲ್ ಕ್ರಿಕೆಟ್ ಆಡುವ ಮಕ್ಕಳು, ಯುವಕರು ಕಾಣುವುದಿಲ್ಲ. ಹಾಫ್‌ ಪ್ಯಾಂಟ್, ಟೀಶರ್ಟ್‌, ಸ್ಪೈಕ್‌ ಮತ್ತು ಸ್ಟಾಕಿಂಗ್ಸ್‌ ಹಾಕಿದ ಹುಡುಗರು ಹಾಕಿ ಆಡುವ ನೋಟ ಗಮನ ಸೆಳೆಯುತ್ತದೆ.

ಹೌದು; ಈ ಏರಿಯಾದ ಸಾಂಸ್ಕೃತಿಕ ಕುರುಹು ಈ ಹಾಕಿ ಕ್ರೀಡೆ. ಒಂದು ಕಾಲದಲ್ಲಿ ಸೆಟ್ಲ್‌ಮೆಂಟ್ ಪ್ರದೇಶವೆಂದರೆ ಗುನ್ಹೇಗಾರರ (ಅಪರಾಧಿಗಳು) ವಾಸಸ್ಥಳ ಎಂಬ ಭಯವಿತ್ತು. ಆದರೆ, ಇವತ್ತು ಆ ರೀತಿಯ ಭೀತಿ ಮತ್ತು ಕಳಂಕ ಎರಡೂ ಕಡಿಮೆಯಾಗಿವೆ. ಅದಕ್ಕೆ ಹಲವು ಕಾರಣಗಳಿವೆ. ಶಿಕ್ಷಣ, ಉದ್ಯೋಗ, ವ್ಯಾಪಾರ ಮತ್ತು ಬೆಳೆದ ನಗರದ ನಂಟುಗಳು ಕಾರಣ. ಆದರೆ ಇದೆಲ್ಲಕ್ಕಿಂತ ಪ್ರಮುಖವಾದದ್ದು ಹಾಕಿ ಆಟ. ಹಾಕಿ ಸ್ಟಿಕ್ ಈ ಪ್ರದೇಶಕ್ಕೆ ‘ಮಂತ್ರದಂಡ’ದಂತೆ ಮೋಡಿ ಮಾಡಿತು.

1924ರಲ್ಲಿ ಬ್ರಿಟಿಷರು ದೇಶದ 52 ಕಡೆ ಸೆಟ್ಲ್‌ಮೆಂಟ್ ಪ್ರದೇಶಗಳನ್ನು ಮಾಡಿದ್ದರು. ಕೊರವರ, ಗಂಟಿಚೋರ್, ಚಪ್ಪರಬಂದ್, ಕಂಜರಭಾಟ್ ಜನಾಂಗಗಳ ಜನರನ್ನು ಗುನ್ಹೇಗಾರರು (ಅಪರಾಧಿಗಳು) ಎಂದು ಹಣೆಪಟ್ಟಿ ಹಚ್ಚಿದ್ದ ಬ್ರಿಟಿಷ್ ಆಡಳಿತ ಅವರನ್ನು ಸೆಟ್ಲ್‌ಮೆಂಟ್‌ನಲ್ಲಿ ಕೂಡಿ ಹಾಕುತ್ತಿತ್ತು. ಕರ್ನಾಟಕದಲ್ಲಿ ಹುಬ್ಬಳ್ಳಿ, ಗದಗ, ಬೆಳಗಾವಿ, ವಿಜಯಪುರ, ಬಾಗಲಕೋಟೆ, ಬಳ್ಳಾರಿ ಮತ್ತು ಗೋಕಾಕದಲ್ಲಿ ಈ ಪ್ರದೇಶಗಳಿವೆ. ಇಡೀ ಪ್ರದೇಶಕ್ಕೆ ಮುಳ್ಳಿನ ದೊಡ್ಡ ಬೇಲಿ ಹಾಕಿದ್ದರು. ಜೊತೆಗೆ ಬ್ರಿಟಿಷ್ ಪೊಲೀಸರ ಕಾವಲು ಕೂಡ ಇರುತ್ತಿತ್ತು. ಅದರೊಳಗೆ ಗುಡಿಸಲುಗಳು ಇದ್ದವು. ಹೊರಗಡೆ ಹೋದವರು ಸೂರ್ಯ ಮುಳುಗುವ ವೇಳೆಗೆ ಮನೆ ಸೇರಬೇಕಿತ್ತು. ದೈಹಿಕವಾಗಿ ಬಲಶಾಲಿಗಳಾಗಿದ್ದ ಈ ಜನರು ಬೇಲಿ ಹಾರಿ ಹೊರಗಡೆ ಹೋಗುತ್ತಿದ್ದರು. ಕಳ್ಳತನ, ಸುಲಿಗೆಗಳನ್ನು ಮಾಡುತ್ತಿದ್ದರು. ಇವರ ದೇಹದಾರ್ಢ್ಯವನ್ನು ನೋಡಿದ ಕೆಲ ಅಧಿಕಾರಿಗಳು ಆಟೋಟಗಳಲ್ಲಿ ತೊಡಗಿಸಿಕೊಳ್ಳಲು ಅನುವು ಮಾಡಿಕೊಟ್ಟರು. ಶ್ರಮಜೀವಿ ಕಲ್ಯಾಣ ಸಂಘ ರಚಿಸಿ ಹಾಕಿ ಆಟವನ್ನೂ ಹೇಳಿಕೊಟ್ಟರು. 1928ರ ಒಲಿಂಪಿಕ್ಸ್‌ನಲ್ಲಿ ಭಾರತವು ಹಾಕಿಯಲ್ಲಿ ಚಿನ್ನ ಗೆದ್ದಿದ್ದು ಕೂಡ ಹಲವರನ್ನು ಈ ಆಟದತ್ತ ಆಕರ್ಷಿಸಿತ್ತು. ನಂತರದ ಒಲಿಂಪಿಕ್ಸ್‌ಗಳಲ್ಲಿಯೂ ಭಾರತದ ಸಾಧನೆಯು ಈ ಆಟದ ಜನಪ್ರಿಯತೆಯನ್ನು ಹೆಚ್ಚಿಸಿತ್ತು. ಇದು ಸೆಟ್ಲ್‌ಮೆಂಟ್ ಪ್ರದೇಶಗಳಲ್ಲಿ ಸಂಚಲನ ಮೂಡಿಸಿತ್ತು.

ಅದರಲ್ಲೂ ಹುಬ್ಬಳ್ಳಿ ಮತ್ತು ಗದಗ ಸೆಟ್ಲಮೆಂಟ್‌ಗಳ ಆಟಗಾರರಿಗೆ ಈ ಕ್ರೀಡೆ ಕುಟುಂಬದ ಆಟವಾಯಿತು. ಸ್ವಾತಂತ್ರ್ಯ ಲಭಿಸಿದ ನಂತರವೂ ಇಲ್ಲಿಯ ಜನರ ಆರ್ಥಿಕ ಪರಿಸ್ಥಿತಿ ಬದಲಾಗಿರಲಿಲ್ಲ. ಆದ್ದರಿಂದ ಕೆಲವರು ಅಪರಾಧ ಚಟುವಟಿಕೆಗಳೊಂದಿಗಿನ ನಂಟನ್ನು ಕೂಡ ಬಿಟ್ಟಿರಲಿಲ್ಲ. ಇನ್ನೊಂದೆಡೆ ಹಾಕಿ ಅಂಗಳದಲ್ಲಿ ಉತ್ಸಾಹವೂ ಕುಂದಿರಲಿಲ್ಲ. ಗದಗ– ಬೆಟಗೇರಿಯಲ್ಲಿರುವ ಹನುಮಾನ್ ಬ್ಲೆಸಿಂಗ್ಸ್‌ ಕ್ಲಬ್‌ನಿಂದ ಹಲವು ಆಟಗಾರರು ಬೆಳಕಿಗೆ ಬಂದರು. 1970ರಿಂದಲೂ ನಿರಂತರವಾಗಿ ಈ ಕ್ಲಬ್ ಕಾರ್ಯನಿರ್ವಹಿಸುತ್ತಿದೆ. ಹುಬ್ಬಳ್ಳಿಯ ಯಂಗ್‌ಸ್ಟರ್ ಸ್ಪೋರ್ಟ್ಸ್‌ ಕ್ಲಬ್‌ ಕೂಡ ಇದೇ ಹಾದಿಯಲ್ಲಿತ್ತು.

ಈ ಪ್ರದೇಶಗಳಲ್ಲಿ ಬೆಳೆದ ಹಲವು ಆಟಗಾರರು ರಾಜ್ಯ, ರಾಷ್ಟ್ರೀಯ ತಂಡಗಳಲ್ಲಿ ಆಡಿದರು. ಪರ ಊರು, ದೇಶಗಳ ಸಂಸ್ಕೃತಿ, ನಡೆ ನುಡಿಗಳನ್ನು ನೋಡಿ ಬಂದರು. ತಮ್ಮ ಕುಟುಂಬ, ಏರಿಯಾಕ್ಕೂ ಅದರ ಪರಿಚಯ ಮಾಡಿಸಿದರು. ಶಿಕ್ಷಣದತ್ತ ಒಲವು ಬೆಳೆಸಿಕೊಂಡರು. ಶಾಲೆ, ಕಾಲೇಜು, ವಿಶ್ವವಿದ್ಯಾಲಯಗಳಲ್ಲಿಯೂ ಹಾಕಿ ಆಟ ಬಲಗೊಂಡಿತು. ಕ್ರಮೇಣ ಈ ಪ್ರದೇಶಗಳ ಹಣೆಪಟ್ಟಿ ಬದಲಾಗುತ್ತ ಬಂದಿತು. ಇತ್ತೀಚಿನ ವರ್ಷಗಳಲ್ಲಿ ಇಲ್ಲಿಯ ಕೆಲವು ಯುವಕ, ಯುವತಿಯರು ಐಐಟಿ, ಐಐಎಂಗಳಲ್ಲಿಯೂ ಓದುತ್ತಿದ್ದಾರೆ. ಹುಬ್ಬಳ್ಳಿಯ ಸೆಟ್ಲ್‌ಮೆಂಟ್ ಪ್ರದೇಶದಲ್ಲಿಯೇ ಹತ್ತಕ್ಕೂ ಹೆಚ್ಚು ಪ್ರತಿಷ್ಠಿತ ವಿದ್ಯಾ ಸಂಸ್ಥೆಗಳು ಇವೆ. ಆದರೆ, ಈ ಬದಲಾವಣೆಯು ರಾತ್ರಿ ಬೆಳಗಾಗುವುದರಲ್ಲಿ ಬಂದಿದ್ದಲ್ಲ. ಇದರ ಹಿಂದೆ ಹಲವರ ಶ್ರಮ, ಕಷ್ಟ,ನಷ್ಟಗಳ ಕಥೆಗಳು ಇವೆ.

60ರ ದಶಕದಲ್ಲಿ ಏಳೆಂಟು ರೂಪಾಯಿಗೆ ಒಂದು ಸ್ಟಿಕ್‌ ಸಿಗುತ್ತಿತ್ತು. ಆದರೆ ಆ ಹಣವನ್ನು ಭರಿಸುವುದು ಆಟಗಾರರಿಗೆ ಕಷ್ಟವಾಗಿತ್ತು. ಆದರೂ ಕೆಲವು ಇಲಾಖೆಗಳ ಅಧಿಕಾರಿಗಳು ಮತ್ತಿತರರ ಸಹಾಯದಿಂದ ಹಣ ಹೊಂದಿಸಿಕೊಂಡು ಆಡುತ್ತಿದ್ದರು. ಆಟಗಾರರನ್ನು ಪ್ರೋತ್ಸಾಹಿಸಲು 1957ರಲ್ಲಿ ಗದಗ– ಬೆಟಗೇರಿ ಕ್ರೀಡಾ ಕ್ಲಬ್ ಆರಂಭವಾಯಿತು. ಒಂದು ಅಖಿಲ ಭಾರತ ಟೂರ್ನಿಯೂ ಆಯೋಜನೆಗೊಂಡಿತು. ಉದಾಮ್ ಸಿಂಗ್, ಬಲ್‌ಬೀರ್‌ ಸಿಂಗ್, ಭಕ್ಷಿಸಿಂಗ್ ಅವರಂತಹ ದಿಗ್ಗಜರು ಬಂದು ಆಡಿದ್ದರು.

ಗದುಗಿನ ಬೇನು ಭಾಟ್, ಎಚ್‌.ವೈ ಸಿದ್ಲಿಂಗ್, ರಾಚಯ್ಯ, ರಾಜು ಬಗಾಡೆ ಅವರು ಅಂತರರಾಷ್ಟ್ರೀಯ ಮಟ್ಟದಲ್ಲಿ ಆಡಿದವರು. ಮಾಣಿಕ್ ಭಾಟ್, ಸಿದ್ಧಪ್ಪ ಬಾಲೆ ಹೊಸೂರು, ಎಚ್‌.ಬಿ. ವೀರಾಪುರ, ಜಾಕ್ಸನ್ ಭಾಟ್, ಕೆ.ಆರ್. ಹಬೀಬ್, ಕಾರ್ಲಟನ್ ಗೋಮ್ಸ್‌ ರಾಷ್ಟ್ರಮಟ್ಟದಲ್ಲಿ ಆಡಿ ಗಮನ ಸೆಳೆದಿದ್ದರು. ರಾಜು ಬಗಾಡೆ 90ರ ದಶಕದಲ್ಲಿ ಬೆಂಗಳೂರಿನ ಕ್ರೀಡಾ ಹಾಸ್ಟೆಲ್‌ನಲ್ಲಿ ಕೆಲವು ವರ್ಷ ಆಡಿದ್ದರು. ಬೆಂಗಳೂರು ವಿಶ್ವವಿದ್ಯಾಲಯ ತಂಡದ ನಾಯಕನಾಗಿ ಅಖಿಲ ಭಾರತ ಅಂತರ ವಿವಿ ಟೂರ್ನಿಯಲ್ಲಿ ಮಿಂಚಿದ್ದರು. ಆದರೆ ಕರ್ನಾಟಕ ತಂಡದ ಆಯ್ಕೆಯಲ್ಲಿ ಅವರಿಗೆ ಮನ್ನಣೆ ಸಿಗಲಿಲ್ಲ. ಇದರಿಂದಾಗಿ ಮುಂಬೈನ ಟಾಟಾ ಸಂಸ್ಥೆ ಸೇರಿಕೊಂಡರು. ಮುಂಬೈ ಲೀಗ್‌ನಲ್ಲಿ ಶ್ರೇಷ್ಠ ಆಟಗಾರ ಆದರು. ನಂತರ ಭಾರತ ತಂಡದಲ್ಲಿ ಸ್ಥಾನ ಪಡೆದರು. ಸ್ಪೇನ್, ಹಾಲೆಂಡ್, ಜರ್ಮನಿ ಪ್ರವಾಸಗಳಲ್ಲಿ ಆಡಿದರು. 1993ರಲ್ಲಿ ಅಭ್ಯಾಸ ಶಿಬಿರದಲ್ಲಿ ಗಾಯಗೊಂಡ ಅವರ ವೃತ್ತಿ ಜೀವನಕ್ಕೆ ವಿರಾಮ ಬಿದ್ದಿತು. ಅದರ ನಂತರ ಕೋಚ್ ಆಗಿ ಹೆಸರು ಮಾಡಿದ್ದಾರೆ. ಸದ್ಯ ಮುಂಬೈ ರೈಲ್ವೆಯಲ್ಲಿ ಇದ್ದಾರೆ. ಅವರ ಸಹೋದರ ಗದುಗಿನ ಕ್ರೀಡಾ ಹಾಸ್ಟೆಲ್‌ನಲ್ಲಿ ಹಾಕಿ ತರಬೇತುದಾರರಾಗಿದ್ದಾರೆ.

‘ಗದುಗಿನ ಬೇನು ಭಾಟ್ ಅವರು ಅಪ್ರತಿಮ ಆಟಗಾರ. ಅವರು ತಮ್ಮ 56–57ನೇ ವಯಸ್ಸಿನವರೆಗೂ ಹಾಕಿ ಆಡಿದ್ದಾರೆ. ಅವರೊಂದಿಗೆ ಕೆಲವು ಪಂದ್ಯಗಳಲ್ಲಿ ಆಡುವ ಅವಕಾಶ ನನಗೆ ಸಿಕ್ಕಿತ್ತು. ಅಂತರರಾಷ್ಟ್ರೀಯ ಮಟ್ಟದಲ್ಲಿ ಆಡಿದ್ದ ಹಮ್ಮು, ಬಿಮ್ಮುಗಳಿಲ್ಲದ ಸ್ನೇಹಜೀವಿ. ಬಡತನದ ಬೇಗೆ ಇಲ್ಲದಿದ್ದರೆ ಅವರು ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಆಡಬೇಕಿತ್ತು. ಇಳಿವಯಸ್ಸಿನಲ್ಲಿರುವ ಅವರಿಗೆ ಈಗಲೂ ಆಟದ ಮೇಲೆ ಅಪಾರ ಪ್ರೀತಿ ಇದೆ’ ಎಂದು ಹುಬ್ಬಳ್ಳಿಯ ಯಂಗ್‌ಸ್ಟರ್ಸ್‌ ಸ್ಪೋರ್ಟ್ಸ್‌ ಕ್ಲಬ್‌ನ ಚಂದ್ರಶೇಖರ ಗೋಕಾಕ್ ನೆನಪಿಸಿಕೊಳ್ಳುತ್ತಾರೆ.

ಇದೇ ಹಂತದಲ್ಲಿ ಗದುಗಿನ ರವಿ ನಾಯ್ಕರ್ 1992ರ ಒಲಿಂಪಿಕ್ಸ್‌ನಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿದ್ದರು. ಬೆಳಗಾವಿಯ ಬಂಡು ಪಾಟೀಲ ಅವರ ನಂತರ ಒಲಿಂಪಿಕ್ಸ್‌ನಲ್ಲಿ ಪ್ರತಿನಿಧಿಸಿದ ಉತ್ತರ ಕರ್ನಾಟಕದ ಮತ್ತೊಬ್ಬ ಆಟಗಾರ ಎಂಬ ಹೆಗ್ಗಳಿಕೆ ರವಿ ಅವರದ್ದು. ಸದ್ಯ ಅವರು ಹಾಸನದಲ್ಲಿ ಬಿ.ಪಿ.ಸಿ.ಎಲ್‌ ನಲ್ಲಿ ಅಧಿಕಾರಿಯಾಗಿದ್ದಾರೆ. ಹುಬ್ಬಳ್ಳಿಯ ಸೆಟ್ಲ್‌ಮೆಂಟ್‌ನ ಸುಭಾಷ್ ಮಲ್ಲಾಡ, ರಾಮಪ್ಪ ಭಜಂತ್ರಿ, ವಾಸು ಬಳ್ಳಾರಿ, ಪುಂಡಲೀಕ ಬಳ್ಳಾರಿ, ಮಂಜುನಾಥ್ ಬಳ್ಳಾರಿ, ಚಂದ್ರು ಗೋಕಾಕ, ವಿನಾಯಕ ಬಿಜವಾಡ ಮತ್ತಿತರರು ಹಾಕಿ ಪ್ರೀತಿಯನ್ನು ಗಟ್ಟಿಗೊಳಿಸಿದವರು. ಆದರೆ 2003ರಲ್ಲಿ ಪುಂಡಲೀಕ ಬಳ್ಳಾರಿ ಅವರು ಭಾರತ ತಂಡದೊಂದಿಗೆ ಈಜಿಪ್ತ್‌ಗೆ ಬಂದ ನಂತರ ಮತ್ತಾರೂ ಅಂತರರಾಷ್ಟ್ರೀಯ ಮಟ್ಟಕ್ಕೆ ಬೆಳೆಯಲಿಲ್ಲ.

‘ನಾವು ಆಡುವಾಗ ಸೌಲಭ್ಯಗಳು ಹೆಚ್ಚು ಇರಲಿಲ್ಲ. ನಮ್ಮ ಭಾಗದಲ್ಲಿ ಟರ್ಫ್‌ ಸೌಲಭ್ಯ ಈಗ ಬರುತ್ತಿದೆ. ಆದರೆ ಕೊಡಗು ಜಿಲ್ಲೆಯೊಂದರಲ್ಲಿಯೇ ಮೂರು ಆಸ್ಟ್ರೋ ಟರ್ಫ್‌ಗಳಿವೆ. ಹಾಸ್ಟೆಲ್ ಸೌಲಭ್ಯ ಇದೆ. ದೊಡ್ಡ ಮಟ್ಟದ ಟೂರ್ನಿಗಳು ನಡೆಯುತ್ತಿರುತ್ತವೆ. ಅದೇ ರೀತಿಯ ಚಟುವಟಿಕೆಗಳು ಉತ್ತರ ಕರ್ನಾಟಕದಲ್ಲಿಯೂ ಆಗಬೇಕು. ಬಾಗಲಕೋಟೆ, ಗದಗ, ಬೆಳಗಾವಿ, ಹುಬ್ಬಳ್ಳಿಯಲ್ಲಿ ಮೊದಲಿನಿಂದಲೂ ಹಾಕಿ ಪ್ರತಿಭೆಗಳಿಗೆ ಕೊರತೆ ಇಲ್ಲ. ಆದರೆ ಸೂಕ್ತ ಪ್ರೋತ್ಸಾಹ ನೀಡಬೇಕು. ನಾನು ಹಾಕಿ ಕ್ರೀಡೆಯಿಂದಲೇ ಈ ಮಟ್ಟಕ್ಕೆ ಬೆಳೆದಿದ್ದೇನೆ. ಉತ್ತಮ ನೌಕರಿಯಲ್ಲಿ ಇದ್ದೇನೆ. ನಮ್ಮ ಕುಟುಂಬವೂ ಗೌರವದಿಂದ ಜೀವನ ಮಾಡುತ್ತಿದೆ. ಆಟದ ಬೆಳವಣಿಗೆಗೆ ಶ್ರಮಿಸಲು ನಾವು ಸದಾ ಸಿದ್ಧರಾಗಿದ್ದೇವೆ’ ಎಂದು ಹೈದರಾಬಾದ್‌ ಬಿ.ಪಿ.ಸಿ.ಎಲ್‌ನಲ್ಲಿರುವ ಪುಂಡಲೀಕ ಬಳ್ಳಾರಿ ಹೇಳುತ್ತಾರೆ.

ಭಾರತ ತಂಡದಲ್ಲಿ ಕನ್ನಡಿಗರಿಲ್ಲ!
ಈ ಪ್ರದೇಶಗಳಲ್ಲಿ ಈಗಲೂ ಒಂದು ಸುತ್ತು ಹಾಕಿ ಬಂದರೆ, ಹಾಕಿ ಆಡುವ ಉತ್ಸಾಹ ಬತ್ತಿಲ್ಲ ಎಂಬುದು ಕಾಣುತ್ತದೆ. ಇಲ್ಲಿಯ ಯುವಪ್ರತಿಭೆಗಳ ಕಾಲುಗಳಲ್ಲಿರುವ ಅದಮ್ಯ ಶಕ್ತಿಯನ್ನು ಬಳಸಿಕೊಂಡರೆ ಬಲಿಷ್ಠ ಕರ್ನಾಟಕ ಹಾಕಿ ತಂಡ ಕಟ್ಟುವುದು ಕಷ್ಟವೇನಲ್ಲ. ಇದೀಗ ಒಡಿಶಾದಲ್ಲಿ ನಡೆಯುತ್ತಿರುವ ವಿಶ್ವಕಪ್ ಹಾಕಿ ಟೂರ್ನಿಯಲ್ಲಿ ಆಡುತ್ತಿರುವ ಭಾರತ ತಂಡದಲ್ಲಿ ಕನ್ನಡಿಗರೇ ಇಲ್ಲ. ಮುಂದಿನ ವಿಶ್ವಕಪ್‌ ಟೂರ್ನಿಗಾದರೂ ಈ ಕೊರತೆ ನೀಗಬೇಕಾದರೆ, ಕರ್ನಾಟಕದ ಹಾಕಿ ಅಂಗಳದಲ್ಲಿ ಸುಧಾರಣೆಯ ಗಾಳಿ ಬೀಸಬೇಕು.

ಒಡಿಶಾ ಹಾಕಿಗೆ ಆದಿವಾಸಿ ಶಕ್ತಿ
ವಿಶ್ವಕಪ್ ಟೂರ್ನಿಯೊಂದನ್ನು ಆಯೋಜಿಸುವುದು ಸುಲಭದ ಮಾತಲ್ಲ. ಆದರೆ ಒಡಿಶಾ ರಾಜ್ಯವು ಈಗ ಹಾಕಿ ವಿಶ್ವಕಪ್ ಟೂರ್ನಿ ಆಯೋಜಿಸಿ ಜಗತ್ತಿನ ಗಮನ ಸೆಳೆದಿದೆ. ಆದರೆ ಇದು ಕೇವಲ ರಾಜಕೀಯ ಇಚ್ಛಾಶಕ್ತಿಯಿಂದ ಆಗಿದ್ದಲ್ಲ. ಇದರ ಹಿಂದೆ ಇಲ್ಲಿಯ ಹಾಕಿ ಆಟಗಾರರ ಯಶೋಗಾಥೆಗಳಿವೆ. ಆದಿವಾಸಿ ಸಮುದಾಯದ ಯೋಗದಾನವಿದೆ. 1995ರಿಂದ 2005ರವರೆಗೂ ಭಾರತ ತಂಡದಲ್ಲಿ ಆಡಿದ ದಿಲೀಪ್ ಟಿರ್ಕಿ ಇಲ್ಲಿಯ ಸುಂದರಗಡದ ಆದಿವಾಸಿ ಕುಟುಂಬದವರು. ಎರಡೂ ಒಲಿಂಪಿಕ್ಸ್‌ಗಳಲ್ಲಿ ಆಡಿದ್ದ ದಿಲೀಪ್ ನಿವೃತ್ತಿಯ ನಂತರ ರಾಜಕಾರಣಿಯಾದವರು. ರಾಜ್ಯಸಭಾ ಸದಸ್ಯರಾಗಿದ್ದಾರೆ. ಇವರ ಯಶಸ್ಸು ಇಲ್ಲಿಯ ಆದಿವಾಸಿ ಪ್ರತಿಭೆಗಳಲ್ಲಿ ಉತ್ಸಾಹ ಹೆಚ್ಚಿಸಿತು. ನಿರಂತರವಾಗಿ ಹಾಕಿ ಚಟುವಟಿಕೆಗಳು ಇಲ್ಲಿ ನಡೆಯುತ್ತಿವೆ. ಒಡಿಶಾ ಸರ್ಕಾರವು ಹಾಕಿ ಕ್ರೀಡೆಯನ್ನು ತನ್ನ ಪ್ರವಾಸೋದ್ಯಮ ಅಭಿವೃದ್ಧಿಗೂ ಬಳಸಿಕೊಳ್ಳುತ್ತಿದೆ. ಟಿರ್ಕಿ ಅವರ ಒತ್ತಾಸೆಯಿಂದ ಇಲ್ಲಿಯ ಅಕಾಡೆಮಿಗಳು ಆದಿವಾಸಿ ಪ್ರತಿಭೆಗಳಿಗೆ ಹೆಚ್ಚು ಮನ್ನಣೆ ನೀಡುತ್ತಿವೆ. ಸಾಯ್ ಕೇಂದ್ರಗಳೂ ತರಬೇತಿ ನೀಡುತ್ತಿವೆ. ಛತ್ತೀಸಗಡ, ಜಾರ್ಖಂಡ್‌ನಲ್ಲಿಯೂ ಇಂತಹದೊಂದು ಅಭಿಯಾನ ಜೋರಾಗಿಯೇ ನಡೆಯುತ್ತಿದೆ. ಅದರಲ್ಲಿಯೂ ಆದಿವಾಸಿ ಬಾಲಕಿಯರ ಸಬಲೀಕರಣಕ್ಕೆ ಹಾಕಿ ಕ್ರೀಡೆಯು ಮಾಧ್ಯಮವಾಗಿ ಬಳಕೆಯಾಗುತ್ತಿರುವುದು ವಿಶೇಷ. ಸವಿತಾ ಪೂರ್ತಿ, ಆಶಾ ಕೆರ್ಕೆಟ್ಟಾ, ಸುನಿತಾ ಲಾಕ್ರಾ ಅವರೆಲ್ಲರೂ ಆದಿವಾಸಿ ಕುಟುಂಬದ ಕುಡಿಗಳು. ಕರ್ನಾಟಕದಲ್ಲಿಯೂ ಇಂತಹ ಪ್ರಯತ್ನಕ್ಕೆ ವಿಪುಲ ಅವಕಾಶಗಳು ಇವೆ. ಮಾಡುವವರು ಬೇಕಷ್ಟೇ.

***
ಟೂರ್ನಿಗಳು ಹೆಚ್ಚಲಿ
ಕೊಡಗು ಬಿಟ್ಟರೆ ರಾಜ್ಯದಲ್ಲಿ ಹಾಕಿ ಕ್ರೀಡೆ ಇರುವುದೇ ಉತ್ತರ ಕರ್ನಾಟಕದಲ್ಲಿ. ದಶಕಗಳ ಹಿಂದೆ ಇಲ್ಲಿ ಬಹಳಷ್ಟು ಅಖಿಲ ಭಾರತ ಟೂರ್ನಿಗಳು ನಡೆಯುತ್ತಿದ್ದವು. ಈಗ ಕಡಿಮೆಯಾಗಿವೆ. ವಸತಿ ನಿಲಯವೂ ಇಲ್ಲ. ಟರ್ಫ್‌ ಕೂಡ ಇಲ್ಲ. ಕ್ರಿಕೆಟ್‌ ಮಾದರಿಯಲ್ಲಿ ಹಾಕಿ ಬೆಳವಣಿಗೆ ಆಗಬೇಕು. ನಮ್ಮ ರಾಜ್ಯದಲ್ಲಿ ಎಂ.ಪಿ. ಗಣೇಶ್ ಅವರಂತಹ ದಿಗ್ಗಜ ಆಟಗಾರರು ಬಹಳಷ್ಟಿದ್ದಾರೆ. ಅವರ ವರ್ಚಸ್ಸು ಮತ್ತು ಮಾರ್ಗದರ್ಶನ ಪಡೆದು ಸರ್ಕಾರದ ಮೇಲೆ ಒತ್ತಡ ತರಬೇಕು. ಪ್ರಾಯೋಜಕತ್ವಗಳನ್ನು ಪಡೆಯಬೇಕು. ಪ್ರತಿಭೆಗಳನ್ನು ಹುಡುಕಿ ತರಬೇತಿ ನೀಡಬೇಕು.
–ಪುಲಿಕೇಶಿ ಶೆಟ್ಟೆಪ್ಪನವರ, ಹಿರಿಯ ಕೋಚ್, ಮೈಸೂರು ವಿಶ್ವವಿದ್ಯಾಲಯ.

*
ಕಿಟ್‌ ತುಟ್ಟಿ
ನಮ್ಮ ಕ್ಲಬ್‌ನಲ್ಲಿ ಈಗ 30 ಆಟಗಾರರು ಇದ್ದಾರೆ. ಗದುಗಿನಲ್ಲಿ ಟರ್ಫ್‌ ಮೈದಾನ ಆಗಿದೆ. ಈಗಲೂ ಇಲ್ಲಿಂದ ಹಲವು ಹುಡುಗರು ಬೆಂಗಳೂರು ಕ್ರೀಡಾ ಹಾಸ್ಟೆಲ್‌ನಲ್ಲಿ ಹೋಗಿ ತರಬೇತಿ ಪಡೆಯುತ್ತಿದ್ದಾರೆ. ಆದರೆ ಹಾಕಿ ಕಿಟ್‌ ಒದಗಿಸಲು ನಮಗೆ ಕಷ್ಟವಾಗುತ್ತಿದೆ. ದುಬಾರಿಯಾಗಿರುವುದರಿಂದ ಈ ಸೌಲಭ್ಯ ನೀಡಲು ಸರ್ಕಾರ ಸಹಾಯ ಮಾಡಬೇಕು.
–ಚಂದ್ರು ಗೋಕಾಕ, ಯಂಗ್‌ಸ್ಟರ್ ಸ್ಪೋರ್ಟ್ಸ್‌ ಕ್ಲಬ್ ಹುಬ್ಬಳ್ಳಿ

*
ಒಂದಾಗಬೇಕು
ಕರ್ನಾಟಕದಲ್ಲಿ ಈಗ ಎರಡು ಮೂರು ಸಂಸ್ಥೆಗಳಾಗಿವೆ. ಎಲ್ಲ ಸೇರಿ ಒಂದಾಗಬೇಕು. ಪ್ರತಿ ಜಿಲ್ಲೆಯಲ್ಲಿ ಹಾಕಿ ಚಟುವಟಿಕೆ ಶಾಲಾ ಮಟ್ಟದಲ್ಲಿ ನಡೆಯಬೇಕು.
–ರವಿ ನಾಯ್ಕರ್, ಒಲಿಂಪಿಯನ್ ಹಾಕಿ ಪಟು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT