ಶುಕ್ರವಾರ, ಸೆಪ್ಟೆಂಬರ್ 25, 2020
21 °C

ಹಾಕಿ ತಂಡದ ನಾಯಕ ಮನ್‌ಪ್ರೀತ್‌ಗೆ ಕೋವಿಡ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಭಾರತ ಹಾಕಿ ತಂಡದ ನಾಯಕ ಮನ್‌ಪ್ರೀತ್ ಸಿಂಗ್ ಮತ್ತು ಇನ್ನೂ ಮೂವರು ಆಟಗಾರರಿಗೆ ಕೋವಿಡ್ –19 ಸೋಂಕು ಖಚಿತವಾಗಿದೆ.

ಇಲ್ಲಿಯ ಭಾರತೀಯ ಕ್ರೀಡಾ ಪ್ರಾಧಿಕಾರದ ವಸತಿ ನಿಲಯದಲ್ಲಿ ಮನ್‌ಪ್ರೀತ್, ರಕ್ಷಣಾ ಆಟಗಾರರಾದ ಸುರೇಂದರ್ ಕುಮಾರ್, ಜಸ್ಕರಣ್ ಸಿಂಗ್ ಮತ್ತು ಡ್ರ್ಯಾಗ್‌ಫ್ಲಿಕರ್ ವರುಣ್ ಕುಮಾರ್ ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ.

’ಸಾಯ್‌ನಲ್ಲಿ ನಡೆಯುತ್ತಿರುವ ಶಿಬಿರದಲ್ಲಿದ್ದೇವೆ. ಇಲ್ಲಿಯೇ ಸ್ವಯಂ ಪ್ರತ್ಯೇಕವಾಸ ಮಾಡಿಕೊಂಡಿದ್ದೇವೆ. ಇಲ್ಲಿಯ ಅಧಿಕಾರಿಗಳು ಮತ್ತು ಸಿಬ್ಬಂದಿಯು ಉತ್ತಮವಾಗಿ ಆರೈಕೆ ಮಾಡುತ್ತಿದ್ದಾರೆ. ನಾನು ಚೆನ್ನಾಗಿದ್ದೇನೆ. ಬಹುಬೇಗ ಗುಣಮುಖನಾಗುತ್ತೇನೆ‘ ಎಂದು 28 ವರ್ಷದ ಮನ್‌ಪ್ರೀತ್ ಸಿಂಗ್ ಹೇಳಿದ್ದಾರೆ. ಈ ಕುರಿತು ಸಾಯ್ ಪ್ರಕಟಣೆ ಬಿಡುಗಡೆ ಮಾಡಿದೆ.

’ಅಥ್ಲೀಟ್‌ಗಳಿಗೆ ಇಲ್ಲಿ ಕೋವಿಡ್ ಪರೀಕ್ಷೆ ಕಡ್ಡಾಯ ಮಾಡಿರುವುದು ಒಳ್ಳೆಯದಾಯಿತು. ಅದರಿಂದಾಗಿ ನಮಗೆ ಸೋಂಕು ಇರುವುದು ಆರಂಭದಲ್ಲಿಯೇ ತಿಳಿಯಿತು. ಚಿಕಿತ್ಸೆಯೂ ದೊರೆಯಿತು. ಯಾವುದೇ ಆತಂಕವಿಲ್ಲ‘ ಎಂದಿದ್ದಾರೆ.

ಮಾರ್ಚ್‌ನಲ್ಲಿ ದೇಶಾದ್ಯಂತ ಲಾಕ್‌ಡೌನ್ ಜಾರಿಗೊಳಿಸಲಾಗಿತ್ತು. ಆಗ ಎರಡು ತಿಂಗಳುಗಳ ಕಾಲ ತಂಡವು ಬೆಂಗಳೂರಿನ ಸಾಯ್‌ನಲ್ಲಿಯೇ ತಂಗಿತ್ತು. ಜೂನ್‌ ತಿಂಗಳಲ್ಲಿ ಆಟಗಾರರಿಗೆ ಅವರ ತವರೂರಿಗೆ ತೆರಳಲು ಅವಕಾಶ ನೀಡಲಾಗಿತ್ತು. 

’ಈಚೆಗೆಮತ್ತೆ ಶಿಬಿರ ಆರಂಭಿಸಲಾಗಿತ್ತು. ಆದ್ದರಿಂದ ಮತ್ತೆ ತಂಡದ ಆಟಗಾರರು ಮರಳಿಬರಬೇಕಾಯಿತು. ಇಲ್ಲಿಗೆ ಬಂದ ಕೂಡಲೇ ಎಲ್ಲರಿಗೂ ಕೊರೊನಾ ವೈರಸ್‌ ಸೋಂಕು ಪರೀಕ್ಷೆ ಮಾಡಲಾಯಿತು. ಇದೀಗ ಸೋಂಕು ಖಚಿತಪಟ್ಟಿರುವ ಆಟಗಾರರು ಜೊತೆಯಾಗಿಯೇ ಪ್ರಯಾಣ ಮಾಡಿದ್ದರು. ಈ ಸಂದರ್ಭದಲ್ಲಿ ಅವರಿಗೆ ಸೋಂಕು ತಗುಲಿರುವ ಸಾಧ್ಯತೆ ಇದೆ‘ ಎಂದು ಸಾಯ್ ಪ್ರಕಟಣೆಯಲ್ಲಿ ತಿಳಿಸಿದೆ. 

’ಆರೋಗ್ಯ ಇಲಾಖೆಯು ನೀಡಿರುವ ಮಾರ್ಗಸೂಚಿಯನ್ವಯ ಶಿಬಿರಕ್ಕೆ ಬಂದ ಎಲ್ಲ ಆಟಗಾರರಿಗೂ 14 ದಿನಗಳ ಕ್ವಾರಂಟೈನ್‌ನಲ್ಲಿ ಇರಿಸಲಾಗಿದೆ. ಸೋಂಕಿತ ಆಟಗಾರರು ಸದ್ಯ ಇಲ್ಲಿರುವ ಬೇರೆ  ಆಟಗಾರರ ಸಂಪರ್ಕಕ್ಕೆ ಬರದಂತೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ‘ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

 

 

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು