ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತ ತಂಡಕ್ಕೆ ಮಲೇಷ್ಯಾ ಸವಾಲು

ಜಪಾನ್‌ನಲ್ಲಿ ಇಂದಿನಿಂದ ಒಲಿಂಪಿಕ್ಸ್ ಹಾಕಿ ‘ಟೆಸ್ಟ್’
Last Updated 16 ಆಗಸ್ಟ್ 2019, 18:45 IST
ಅಕ್ಷರ ಗಾತ್ರ

ಟೋಕಿಯೊ (ಪಿಟಿಐ): 2020ರ ಟೋಕಿಯೊ ಒಲಿಂಪಿಕ್ಸ್‌ಹಾಕಿ ‘ಟೆಸ್ಟ್‌’ ಶನಿವಾರ ಆರಂಭವಾಗಲಿದೆ. ಭಾರತ ಪುರುಷರ ತಂಡ ಮೊದಲ ಪಂದ್ಯದಲ್ಲಿ ಮಲೇಷ್ಯಾ ಸವಾಲು ಎದುರಿಸಲಿದ್ದರೆ, ಮಹಿಳಾ ತಂಡ ಜಪಾನ್‌ ವಿರುದ್ಧ ಪೈಪೋಟಿ ನಡೆಸಲಿದೆ.

ಎಫ್‌ಐಎಚ್‌ ಸಿರೀಸ್‌ ಫೈನಲ್ಸ್‌ ಪ್ರಶಸ್ತಿ ಮುಡಿಗೇರಿಸಿಕೊಳ್ಳುವ ಮೂಲಕ ಭಾರತದ ಉಭಯ ತಂಡಗಳು ಈಗಾಗಲೇ ಎಫ್‌ಐಎಚ್‌ ಒಲಿಂಪಿಕ್ಸ್ ಅರ್ಹತಾ ಟೂರ್ನಿಗೆ ಪ್ರವೇಶ ಪಡೆದಿವೆ. ವಿಶ್ವ ಕ್ರಮಾಂಕದಲ್ಲಿ ಐದನೇ ಸ್ಥಾನದಲ್ಲಿರುವ ಭಾರತ ಪುರುಷರ ತಂಡ ಟೂರ್ನಿಯಲ್ಲಿ ಅಗ್ರಸ್ಥಾನ ಪಡೆದಿದೆ. ಮಲೇಷ್ಯಾ ತಂಡ ವಿಶ್ವ ಕ್ರಮಾಂಕದಲ್ಲಿ 12ನೇ ಸ್ಥಾನದಲ್ಲಿದೆ.

ನಾಯಕ ಮನ್‌ಪ್ರೀತ್‌ ಸಿಂಗ್‌ ಹಾಗೂ ಗೋಲ್‌ಕೀಪರ್‌ ಪಿ. ಆರ್‌. ಶ್ರೀಜೇಶ್‌ ಅವರಿಗೆ ವಿಶ್ರಾಂತಿ ನೀಡಲಾಗಿದ್ದು ಕೆಲವು ಯುವ ಆಟಗಾರರಿಗೆ ತಂಡ ದಲ್ಲಿ ಅವಕಾಶ ಕಲ್ಪಿಸಲಾಗಿದೆ. ಮನ್‌ ಪ್ರೀತ್‌ ಸಿಂಗ್‌ ಅನುಪಸ್ಥಿತಿಯಲ್ಲಿ ಡ್ರ್ಯಾಗ್‌ಫ್ಲಿಕರ್‌ ಹರ್ಮನ್‌ಪ್ರೀತ್‌ ಸಿಂಗ್‌ ಹೆಗಲಿಗೆ ನಾಯಕತ್ವದ ಹೊಣೆ ಬಿದ್ದಿದೆ. ಮನ್‌ದೀಪ್‌ ಸಿಂಗ್‌ ಉಪನಾಯಕ ಸ್ಥಾನ ನಿಭಾಯಿಸುವರು.

ಉಪಖಂಡದ ಮಟ್ಟದಲ್ಲಿ ಮಲೇಷ್ಯಾ ತಂಡವು ಭಾರತ ಸೇರಿ ಪ್ರಮುಖ ತಂಡಗಳನ್ನು ಮಣಿಸಿದ ಅನುಭವ ಹೊಂದಿದೆ. 2010ರಲ್ಲಿ ಗುವಾಂಗ್ಜುನಲ್ಲಿ ನಡೆದ ಏಷ್ಯನ್‌ ಗೇಮ್ಸ್ ಸೆಮಿಫೈನಲ್‌ನಲ್ಲಿ 4–3 ಗೋಲುಗಳಿಂದ ಭಾರತ ತಂಡವನ್ನು ಮಲೇಷ್ಯಾ ಸೋಲಿಸಿತ್ತು. 2018ರ ಏಷ್ಯನ್‌ ಗೇಮ್ಸ್ ನಾಲ್ಕರ ಘಟ್ಟದ ಪಂದ್ಯದಲ್ಲಿಯೇ ಮಲೇಷ್ಯಾ ಎದುರು ಭಾರತ ಮುಗ್ಗರಿಸಿತ್ತು.

ಆದರೆ ಸುಲ್ತಾನ್ ಅಜ್ಲಾನ್‌ ಶಾ ಕಪ್‌ ಪಂದ್ಯಾವಳಿಯಲ್ಲಿ ಭಾರತ 4–2ರಿಂದ ಮಲೇಷ್ಯಾವನ್ನು ಸೋಲಿಸಿ ಸೇಡು ತೀರಿಸಿಕೊಂಡಿತ್ತು. ಉಭಯ ತಂಡಗಳ ಮಧ್ಯೆ ನಡೆದ ಈ ಹಿಂದಿನ 10 ಪಂದ್ಯಗಳಲ್ಲಿ ಭಾರತ ಆರು ಪಂದ್ಯಗಳಲ್ಲಿ ಗೆದ್ದಿದ್ದರೆ, ಮಲೇಷ್ಯಾ ಕೇವಲ ಮೂರರಲ್ಲಿ ಯಶಸ್ಸು ಕಂಡಿದೆ.

ಇನ್ನೊಂದೆಡೆ ವಿಶ್ವ ಕ್ರಮಾಂಕದಲ್ಲಿ 10ನೇ ಸ್ಥಾನದಲ್ಲಿರುವ ಭಾರತ ಮಹಿಳಾ ತಂಡ, ಜಪಾನ್‌ ಎದುರು ಮೊದಲ ಪಂದ್ಯ ಆಡಲಿದ್ದು, ಸುಲಭ ಗೆಲುವಿನ ನಿರೀಕ್ಷೆಯಲ್ಲಿದೆ. ಜಪಾನ್‌ನ ಹೀರೋಶಿಮಾದಲ್ಲಿ ನಡೆದ ಎಫ್‌ಐಎಚ್‌ ಸಿರೀಸ್‌ ಫೈನಲ್ಸ್‌ನ ಅಂತಿಮ ಪಂದ್ಯದಲ್ಲಿ ಜಪಾನ್‌ ತಂಡವನ್ನು ಭಾರತ 3–1ರಿಂದ ಮಣಿಸಿತ್ತು. ಆದರೆ ಭಾರತ ತಂಡದ ವಿರುದ್ಧ ಆಡಿದ ಈ ಹಿಂದಿನ 10 ಪಂದ್ಯಗಳಲ್ಲಿ ಜಪಾನ್‌ ಮೇಲುಗೈ ಸಾಧಿಸಿದೆ. ನಾಲ್ಕು ಪಂದ್ಯಗಳನ್ನು ಜಪಾನ್‌ ಗೆದ್ದುಕೊಂಡಿದ್ದರೆ, ಮೂರು ಪಂದ್ಯಗಳಲ್ಲಿ ಭಾರತ ಜಯ ಸಾಧಿಸಿದೆ. ಮೂರು ಹಣಾಹಣಿಗಳು ಡ್ರಾ ಕಂಡಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT