ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅ.9ರ ಒಳಗಾಗಿ ಹಾಕಿ ಇಂಡಿಯಾ ಚುನಾವಣೆ

ಪರಿಷ್ಕೃತ ನಿಯಮಾವಳಿಯ ಕರಡು ಎಫ್‌ಐಎಚ್‌ಗೆ ಸಲ್ಲಿಕೆ
Last Updated 17 ಆಗಸ್ಟ್ 2022, 14:53 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ‘ಹಾಕಿ ಇಂಡಿಯಾದ (ಎಚ್‌ಐ) ಚುನಾವಣೆ ಪ್ರಕ್ರಿಯೆ ಅ.9ರ ಒಳಗಾಗಿ ಪೂರ್ಣಗೊಳ್ಳಲಿದೆ’ ಎಂದು ದೇಶದಲ್ಲಿ ಹಾಕಿ ಕ್ರೀಡೆಯ ವ್ಯವಹಾರ ನೋಡಿಕೊಳ್ಳುತ್ತಿರುವ ಆಡಳಿತ ಸಮಿತಿ (ಸಿಒಎ) ಹೇಳಿದೆ.

ಹಾಕಿ ಇಂಡಿಯಾದ ಪರಿಷ್ಕೃತ ನಿಯಮಾವಳಿಗಳ ಮೊದಲ ಕರಡನ್ನು ಅಂತರರಾಷ್ಟ್ರೀ ಹಾಕಿ ಫೆಡರೇಷನ್‌ಗೆ (ಎಫ್‌ಐಎಚ್‌) ಬುಧವಾರ ಸಲ್ಲಿಸಲಾಯಿತು.

ಈ ವೇಳೆ ಸಿಒಎ ಮತ್ತು ಎಫ್‌ಐಎಚ್‌ ಜಂಟಿ ಹೇಳಿಕೆ ಬಿಡುಗಡೆ ಮಾಡಿದ್ದು, ‘ನಿಯಮಾವಳಿಯ ಅಂತಿಮ ಕರಡು ಮುಂದಿನ 10 ದಿನಗಳ ಒಳಗಾಗಿ ಸ್ವಿಟ್ಜರ್‌ಲೆಂಡ್‌ನ ಲಾಸನ್‌ನಲ್ಲಿರುವ ಎಫ್‌ಐಎಚ್ ಕೇಂದ್ರ ಕಚೇರಿಗೆ ಸಲ್ಲಿಸಲಾಗುವುದು’ ಎಂದು ತಿಳಿಸಿದೆ.

‘ದೆಹಲಿ ಹೈಕೋರ್ಟ್‌ ನಿರ್ದೇಶನದಂತೆ ಸಿದ್ಧಪಡಿಸಿರುವ ಪರಿಷ್ಕೃತ ನಿಯಮಾವಳಿಯ ಮೊದಲ ಕರಡು ಬುಧವಾರ ಸಲ್ಲಿಕೆಯಾಗಿದೆ. ಎಚ್‌ಐ ಚುನಾವಣೆ ಪ್ರಕ್ರಿಯೆಯನ್ನು ಅ.9ರ ಒಳಗಾಗಿ ಪೂರ್ಣಗೊಳಿಸಲು ಒಮ್ಮತದಿಂದ ನಿರ್ಧರಿಸಲಾಗಿದೆ’ ಎಂದು ಪ್ರಕಟಣೆಯಲ್ಲಿ ಹೇಳಿದೆ.

ಹಾಕಿ ಇಂಡಿಯಾವು ಎಫ್‌ಐಎಚ್‌ನಿಂದ ಅಮಾನತಿಗೆ ಒಳಗಾಗುವುದನ್ನು ತಪ್ಪಿಸುವ ನಿಟ್ಟಿನಲ್ಲಿ ಎಫ್‌ಐಎಚ್‌ನ ಇಬ್ಬರು ಸದಸ್ಯರ ನಿಯೋಗವು ಸಿಒಎ ಜತೆ ಮಾತುಕತೆಗೆ ನವದೆಹಲಿಗೆ ಭೇಟಿ ನೀಡಿದೆ.

ಎಫ್‌ಐಎಚ್‌ ಹಂಗಾಮಿ ಅಧ್ಯಕ್ಷ ಸೈಫ್‌ ಅಹ್ಮದ್‌, ಸಿಇಒ ಥಿಯರಿ ವೇಲ್ ಹಾಗೂ ಸಿಒಎ ಸದಸ್ಯರಾದ ಸುಪ್ರೀಂ ಕೋರ್ಟ್‌ ನಿವೃತ್ತ ನ್ಯಾಯಮೂರ್ತಿ ಎ.ಆರ್.ದವೆ, ಮಾಜಿ ಮುಖ್ಯ ಚುನಾವಣಾ ಆಯುಕ್ತ ಎಸ್.ವೈ ಖುರೇಷಿ ಮತ್ತು ಒಲಿಂಪಿಯನ್‌ ಆಟಗಾರ ಜಫರ್‌ ಇಕ್ಬಾಲ್‌ ಅವರು ಸಭೆಯಲ್ಲಿ ಪಾಲ್ಗೊಂಡಿದ್ದರು.

‘ಎಫ್‌ಐಎಚ್‌ ಪ್ರತಿನಿಧಿಗಳ ಜತೆಗಿನ ಮಾತುಕತೆ ಫಲಪ್ರದವಾಗಿದೆ. ಹಾಕಿ ಇಂಡಿಯಾದ ದೈನಂದಿನ ವ್ಯವಹಾರ ಸುಗಮವಾಗಿ ನಡೆಯುವುದಕ್ಕೆ ಸಂಬಂಧಿಸಿದಂತೆ ಕೆಲವು ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳಲಾಗಿದೆ’ ಎಂದು ಎ.ಆರ್‌.ದವೆ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT