ಸೋಮವಾರ, ಸೆಪ್ಟೆಂಬರ್ 16, 2019
24 °C
ಅಂತಿಮ ಹೋರಾಟದಲ್ಲಿ ಮನಪ್ರೀತ್‌ ಪಡೆಗೆ ನಿರಾಸೆ

ಆಸ್ಟ್ರೇಲಿಯಾಕ್ಕೆ ಶರಣಾದ ಭಾರತ

Published:
Updated:
Prajavani

ಪರ್ತ್‌ (ಪಿಟಿಐ): ಭಾರತ ತಂಡದವರು ಆಸ್ಟ್ರೇಲಿಯಾ ಪ್ರವಾಸದ ಅಂತಿಮ ಹಣಾಹಣಿಯಲ್ಲಿ ಸೋತಿದ್ದಾರೆ.

ಪರ್ತ್‌ ಕ್ರೀಡಾಂಗಣದಲ್ಲಿ ಶುಕ್ರವಾರ ನಡೆದ ಪೈಪೋಟಿಯಲ್ಲಿ ಮನಪ್ರೀತ್‌ ಸಿಂಗ್‌ ಬಳಗವು 2–5 ಗೋಲುಗಳಿಂದ ಆತಿಥೇಯರಿಗೆ ಮಣಿಯಿತು.

ಆರಂಭದಿಂದಲೇ ಆಕ್ರಮಣಕಾರಿ ಆಟಕ್ಕೆ ಮುಂದಾದ ಆಸ್ಟ್ರೇಲಿಯಾಕ್ಕೆ ಮೊದಲ ಕ್ವಾರ್ಟರ್‌ನ ಮೊದಲ ನಿಮಿಷದಲ್ಲೇ ಗೋಲು ಗಳಿಸುವ ಅವಕಾಶ ಸಿಕ್ಕಿತ್ತು. ಆತಿಥೇಯ ತಂಡದ ಎಡ್ಡಿ ಒಕೆಂಡೆನ್‌ ‘ಫ್ಲಿಕ್‌’ ಮಾಡಿದ ಚೆಂಡನ್ನು ಭಾರತದ ಗೋಲ್‌ಕೀಪರ್‌ ಕೃಷ್ಣ ಪಾಠಕ್‌ ಅಮೋಘ ರೀತಿಯಲ್ಲಿ ತಡೆದರು.

ವಿಶ್ವ ಕ್ರಮಾಂಕ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿರುವ ಆಸ್ಟ್ರೇಲಿಯಾವು ನಂತರ ಇನ್ನಷ್ಟು ಚುರುಕಾಗಿ ಆಡಿತು. ಮೂರನೇ ನಿಮಿಷದಲ್ಲಿ ಆತಿಥೇಯರು ಖಾತೆ ತೆರೆದರು. ಫ್ಲಿನ್‌ ಒಗಿಲ್ವಿ ಚೆಂಡನ್ನು ಗುರಿ ಸೇರಿಸಿ ಸಂಭ್ರಮಿಸಿದರು.

ಎಂಟನೇ ನಿಮಿಷದಲ್ಲಿ ಭಾರತಕ್ಕೆ ಪೆನಾಲ್ಟಿ ಕಾರ್ನರ್‌ ಲಭ್ಯವಾಗಿತ್ತು. ಈ ಅವಕಾಶವನ್ನು ನೀಲಕಂಠ ಶರ್ಮಾ ಹಾಳು ಮಾಡಿದರು. ಹೀಗಾಗಿ ಸಮಬಲದ ಗೋಲು ಗಳಿಸುವ ತಂಡದ ಕನಸು ಕೈಗೂಡಲಿಲ್ಲ. 10ನೇ ನಿಮಿಷದಲ್ಲಿ ಲಭಿಸಿದ ಮೊದಲ ಪೆನಾಲ್ಟಿ ಕಾರ್ನರ್‌ ಅವಕಾಶವನ್ನು ಆಸ್ಟ್ರೇಲಿಯಾ ಆಟಗಾರರೂ ಕೈಚೆಲ್ಲಿದರು.

11ನೇ ನಿಮಿಷದಲ್ಲಿ ಆತಿಥೇಯರು ಮುನ್ನಡೆ ಹೆಚ್ಚಿಸಿಕೊಂಡರು. ಟ್ರೆಂಟ್‌ ಮಿಟ್ಟನ್‌, ಭಾರತದ ಗೋಲ್‌ಕೀಪರ್‌ ಪಾಠಕ್‌ ಅವರ ಕಣ್ತಪ್ಪಿಸಿ ಚೆಂಡನ್ನು ಗುರಿ ಮುಟ್ಟಿಸುವಲ್ಲಿ ಯಶಸ್ವಿಯಾದರು. ಈ ಖುಷಿ ಎದುರಾಳಿ ಪಾಳಯದಲ್ಲಿ ಹೆಚ್ಚು ಸಮಯ ಇರಲು ಭಾರತದ ನೀಲಕಂಠ ಶರ್ಮಾ ಅವಕಾಶ ನೀಡಲಿಲ್ಲ. 12ನೇ ನಿಮಿಷದಲ್ಲಿ ಕೈಚಳಕ ತೋರಿದ ಶರ್ಮಾ, ಪ್ರವಾಸಿ ಪಡೆಯ ಹಿನ್ನಡೆಯನ್ನು 1–2ಕ್ಕೆ ತಗ್ಗಿಸಿದರು.

ತವರಿನ ಅಭಿಮಾನಿಗಳ ಎದುರು ಆಡಿದ ಆಸ್ಟ್ರೇಲಿಯಾವು ಎರಡನೇ ಕ್ವಾರ್ಟರ್‌ನಲ್ಲಿ ಇನ್ನಷ್ಟು ಪರಿಣಾಮಕಾರಿ ಸಾಮರ್ಥ್ಯಕ್ಕೆ ‍ಒತ್ತು ನೀಡಿತು. ಭಾರತ ಕೂಡಾ ಚುರುಕಿನ ಆಟಕ್ಕೆ ಮುಂದಾಯಿತು. 19ನೇ ನಿಮಿಷದಲ್ಲಿ ಚೆಂಡಿನೊಂದಿಗೆ ಎದುರಾಳಿ ಆವರಣ ಪ್ರವೇಶಿಸಿದ ಮನದೀಪ್‌ ಸಿಂಗ್‌ ಅದನ್ನು ಗುರಿ ತಲುಪಿಸಲು ವಿಫಲರಾದರು. 23ನೇ ನಿಮಿಷದಲ್ಲಿ ಲಭಿಸಿದ ಅವಕಾಶವನ್ನು ಮನದೀಪ್‌ ಹಾಳು ಮಾಡಿದರು. ವಿವೇಕ್‌ ಸಾಗರ್‌ ಪ್ರಸಾದ್‌ ತಮ್ಮತ್ತ ತಳ್ಳಿದ ಚೆಂಡಿನ ಮೇಲೆ ನಿಯಂತ್ರಣ ಸಾಧಿಸಿ ಅದನ್ನು ಗುರಿ ಮುಟ್ಟಿಸಲು ಮನದೀಪ್‌ಗೆ ಆಗಲಿಲ್ಲ.

24ನೇ ನಿಮಿಷದಲ್ಲಿ ಮಿಟ್ಟನ್‌ ಮೋಡಿ ಮಾಡಿದರು. ಆಸ್ಟ್ರೇಲಿಯಾದ ಖಾತೆಗೆ ಮತ್ತೊಂದು ಗೋಲು ಸೇರ್ಪಡೆ ಮಾಡಿದ ಅವರು ತಂಡದ ಮುನ್ನಡೆಯನ್ನು 3–1ಕ್ಕೆ ಹಿಗ್ಗಿಸಿದರು. ಈ ಮೂಲಕ ಆತಿಥೇಯರ ಗೆಲುವಿನ ಹಾದಿಯನ್ನು ಸುಗಮ ಮಾಡಿದರು.

28ನೇ ನಿಮಿಷದಲ್ಲಿ ಭಾರತದ ಗುರಿಂದರ್‌ ಸಿಂಗ್‌ ಮಾಡಿದ ತಪ್ಪಿನಿಂದಾಗಿ ಆಸ್ಟ್ರೇಲಿಯಾಕ್ಕೆ ಪೆನಾಲ್ಟಿ ಕಾರ್ನರ್‌ ಸಿಕ್ಕಿತು. ಈ ಅವಕಾಶವನ್ನು ಬ್ಲೇಕ್‌ ಗೋವರ್ಸ್‌ ಸದುಪಯೋಗ ಪಡಿಸಿಕೊಂಡರು. ಅವರು ಮಿಂಚಿನ ಗತಿಯಲ್ಲಿ ಬಾರಿಸಿದ ಚೆಂಡು, ಪ್ರವಾಸಿ ಪಡೆಯ ಗೋಲ್‌ಕೀಪರ್‌ ಪಿ.ಆರ್‌.ಶ್ರೀಜೇಶ್‌ (ಬದಲಿ) ಅವರನ್ನು ವಂಚಿಸಿ ಗೋಲು ಪೆಟ್ಟಿಗೆಯೊಳಗೆ ಸೇರುತ್ತಿದ್ದಂತೆ ಆತಿಥೇಯರ ಪಾಳಯದಲ್ಲಿ ಸಂಭ್ರಮ ಮೇಳೈಸಿತು.

4–1ರ ಮುನ್ನಡೆಯೊಂದಿಗೆ ವಿರಾಮಕ್ಕೆ ಹೋದ ಆಸ್ಟ್ರೇಲಿಯಾ ತಂಡ ದ್ವಿತೀಯಾರ್ಧದಲ್ಲೂ ಗೋಲು ಗಳಿಸುವ ಪ್ರಯತ್ನ ಮುಂದುವರಿಸಿತು. 43ನೇ ನಿಮಿಷದಲ್ಲಿ ಮಿಂಚಿದ ಟಿಮ್‌ ಬ್ರಾಂಡ್‌, ಆತಿಥೇಯರ ಗೆಲುವನ್ನು ಖಾತ್ರಿ ಪಡಿಸಿದರು.

ಅಂತಿಮ ಕ್ವಾರ್ಟರ್‌ನಲ್ಲಿ ಭಾರತವು ಚೇತರಿಕೆಯ ಆಟ ಆಡಿತು. 53ನೇ ನಿಮಿಷದಲ್ಲಿ ರೂಪಿಂದರ್‌ ಪಾಲ್‌ ಮೋಡಿ ಮಾಡಿದರು. ಪೆನಾಲ್ಟಿ ಕಾರ್ನರ್‌ ಅವಕಾಶವನ್ನು ಗೋಲಾಗಿ ಪರಿವರ್ತಿಸಿದ ಅವರು ಹಿನ್ನಡೆಯನ್ನು 2–5ಕ್ಕೆ ತಗ್ಗಿಸಿದರು.

ನಂತರ ಮನಪ್ರೀತ್‌ ಪಡೆಯ ಆಟಗಾರರು ಆಕ್ರಮಣಕಾರಿ ಆಟಕ್ಕೆ ಮುಂದಾದರು. ಹೀಗಿದ್ದರೂ ಸೋಲಿನಿಂದ ಪಾರಾಗಲು ತಂಡಕ್ಕೆ ಆಗಲಿಲ್ಲ.

Post Comments (+)