ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆತಿಥೇಯರಿಗೆ ಮೊದಲ ಜಯದ ಸಿಹಿ

ಬೆಂಗಳೂರು ಕಪ್‌ ಅಖಿಲ ಭಾರತ ಆಹ್ವಾನಿತ ಹಾಕಿ: ಸೋಮಯ್ಯ, ನಿಕಿನ್‌ ಸೊಬಗಿನ ಆಟ
Last Updated 12 ಆಗಸ್ಟ್ 2019, 19:45 IST
ಅಕ್ಷರ ಗಾತ್ರ

ಬೆಂಗಳೂರು: ನಾಯಕ ನಿಕಿನ್‌ ತಿಮ್ಮಯ್ಯ ಮತ್ತು ಮುಂಚೂಣಿ ವಿಭಾಗದ ಆಟಗಾರ ಕೆ.ಪಿ.ಸೋಮಯ್ಯ ಅವರು ಆಕರ್ಷಕ ಆಟದ ಮೂಲಕ ಶಾಂತಿನಗರದಲ್ಲಿರುವ ಫೀಲ್ಡ್‌ ಮಾರ್ಷಲ್‌ ಕೆ.ಎಂ.ಕಾರ್ಯಪ್ಪ ಅರೇನಾದಲ್ಲಿ ಸೇರಿದ್ದ ಹಾಕಿ ಪ್ರಿಯರನ್ನು ರಂಜಿಸಿದರು.

ತಲಾ ಒಮ್ಮೆ ಚೆಂಡನ್ನು ಗುರಿ ಮುಟ್ಟಿಸಿದ ಇವರು, ಬೆಂಗಳೂರು ಕಪ್‌ ಅಖಿಲ ಭಾರತ ಆಹ್ವಾನಿತ ಟೂರ್ನಿಯಲ್ಲಿ ಹಾಕಿ ಕರ್ನಾಟಕ ತಂಡಕ್ಕೆ ಗೆಲುವಿನ ಸಿಹಿ ಉಣಬಡಿಸಿದರು.

ಟೂರ್ನಿಯಲ್ಲಿ ದಾಖಲಾದ ಮೊದಲ ಗೆಲುವು ಇದು. ಶನಿವಾರ ಮತ್ತು ಭಾನುವಾರ ನಡೆದಿದ್ದ ಒಟ್ಟು ನಾಲ್ಕು ಪಂದ್ಯಗಳು ಡ್ರಾ ಆಗಿದ್ದವು.

ಸೋಮವಾರ ನಡೆದ ‘ಬಿ’ ಗುಂಪಿನ ಹಣಾಹಣಿಯಲ್ಲಿ ಹಾಕಿ ಕರ್ನಾಟಕ 2–1 ಗೋಲುಗಳಿಂದ ನವದೆಹಲಿಯ ಇಂಡಿಯನ್‌ ಏರ್‌ ಫೋರ್ಸ್‌ ತಂಡವನ್ನು ಪರಾಭವಗೊಳಿಸಿತು. ಈ ಜಯದೊಂದಿಗೆ ನಿಕಿನ್‌ ಬಳಗವು ‘ಬಿ’ ಗುಂಪಿನ ಪಾಯಿಂಟ್ಸ್‌ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿ ಸೆಮಿಫೈನಲ್‌ ಹಾದಿ ಸುಗಮ ಮಾಡಿಕೊಂಡಿತು.

ತವರಿನ ಅಭಿಮಾನಿಗಳ ಎದುರು ಆಡಿದ ಹಾಕಿ ಕರ್ನಾಟಕ ತಂಡವು ಮೊದಲ ಕ್ವಾರ್ಟರ್‌ನಲ್ಲಿ ಆಕ್ರಮಣಕಾರಿ ಆಟಕ್ಕೆ ಮುಂದಾಯಿತು. ಎಂಟನೇ ನಿಮಿಷದಲ್ಲಿ ಆತಿಥೇಯರಿಗೆ ಯಶಸ್ಸು ಸಿಕ್ಕಿತು. ನಾಯಕ ನಿಕಿನ್‌, ಫೀಲ್ಡ್‌ ಗೋಲು ಗಳಿಸಿ ಸಂಭ್ರಮಿಸಿದರು.

ಎರಡನೇ ಕ್ವಾರ್ಟರ್‌ನಲ್ಲೂ ಆತಿಥೇಯರ ಆಟ ರಂಗೇರಿತು. 16ನೇ ನಿಮಿಷದಲ್ಲಿ ಸೋಮಯ್ಯ ಕೈಚಳಕ ತೋರಿದರು. ಅವರು ಆಕರ್ಷಕ ಫೀಲ್ಡ್‌ ಗೋಲು ಹೊಡೆದರು. ಹೀಗಾಗಿ ತಂಡವು 2–0 ಮುನ್ನಡೆಯೊಂದಿಗೆ ವಿರಾಮಕ್ಕೆ ಹೋಯಿತು.

ಇದರಿಂದ ಒತ್ತಡಕ್ಕೆ ಒಳಗಾದಂತೆ ಕಂಡ ಏರ್‌ ಫೋರ್ಸ್‌ ತಂಡ ದ್ವಿತೀಯಾರ್ಧದಲ್ಲಿ ಗುಣಮಟ್ಟದ ಆಟಕ್ಕೆ ಮುಂದಾಯಿತು. ಈ ತಂಡದ ಆಟಗಾರರು ಪದೇ ಪದೇ ಹಾಕಿ ಕರ್ನಾಟಕ ತಂಡದ ಆವರಣ ಪ್ರವೇಶಿಸಿದರು. ಆದರೆ ಆತಿಥೇಯರ ಬಲಿಷ್ಠ ರಕ್ಷಣಾ ಕೋಟೆ ಭೇದಿಸಿ ಚೆಂಡನ್ನು ಗುರಿ ಮುಟ್ಟಿಸಲು ಯಾರಿಗೂ ಆಗಲಿಲ್ಲ.

ನಾಲ್ಕನೇ ಕ್ವಾರ್ಟರ್‌ನಲ್ಲೂ ಉಭಯ ತಂಡಗಳ ನಡುವೆ ಜಿದ್ದಾಜಿದ್ದಿನ ಪೈಪೋಟಿ ಕಂಡುಬಂತು. 58ನೇ ನಿಮಿಷದಲ್ಲಿ ಏರ್‌ ಫೋರ್ಸ್‌ ತಂಡ ಖಾತೆ ತೆರೆಯುವಲ್ಲಿ ಯಶಸ್ವಿಯಾಯಿತು. ಆನಂದ್‌ ಲಾಕ್ರಾ ಚೆಂಡನ್ನು ಗುರಿ ಮುಟ್ಟಿಸಿದಾಗ ಆತಿಥೇಯರಲ್ಲಿ ಆತಂಕ ಮನೆಮಾಡಿತ್ತು. ನಂತರದ ಎರಡು ನಿಮಿಷ ಜಾಗರೂಕತೆಯಿಂದ ಆಡಿದ ನಿಕಿನ್‌ ಪಡೆ ನಿಟ್ಟುಸಿರು ಬಿಟ್ಟಿತು.

ಇಂಡಿಯನ್‌ ನೇವಿ ಜಯಭೇರಿ: ‘ಎ’ ಗುಂಪಿನ ಪಂದ್ಯದಲ್ಲಿ ಇಂಡಿಯನ್‌ ನೇವಿ, ಜಯಭೇರಿ ಮೊಳಗಿಸಿತು.

ನೇವಿ ತಂಡ 4–1 ಗೋಲುಗಳಿಂದ ಆಲ್‌ ಇಂಡಿಯಾ ಕಸ್ಟಮ್ಸ್‌ ತಂಡವನ್ನು ಸೋಲಿಸಿತು.

ಇಂಡಿಯನ್‌ ನೇವಿ ತಂಡದ ಸನ್ನಿ ಮಲಿಕ್‌ 13ನೇ ನಿಮಿಷದಲ್ಲಿ ಗೋಲು ಬಾರಿಸಿದರು. 26ನೇ ನಿಮಿಷದಲ್ಲಿ ಚೆಂಡನ್ನು ಗುರಿ ಮುಟ್ಟಿಸಿದ ಕಸ್ಟಮ್ಸ್‌ ತಂಡದ ಹಸನ್‌ ಬಾಷಾ 1–1 ಸಮಬಲಕ್ಕೆ ಕಾರಣರಾದರು.

ದ್ವಿತೀಯಾರ್ಧದಲ್ಲಿ ಇಂಡಿಯನ್‌ ನೇವಿ ಪೂರ್ಣ ಪ್ರಾಬಲ್ಯ ಸಾಧಿಸಿತು. ಜುಗರಾಜ್‌ ಸಿಂಗ್‌ 47 ಮತ್ತು 55ನೇ ನಿಮಿಷಗಳಲ್ಲಿ ಗೋಲು ಹೊಡೆದು ತಂಡದ ಜಯ ಖಚಿತಪಡಿಸಿದರು. 56ನೇ ನಿಮಿಷದಲ್ಲಿ ಪಳಂಗಪ್ಪ ಕೈಚಳಕ ತೋರಿದರು.

ಇಂದಿನ ಪಂದ್ಯಗಳು

ಐಒಸಿಎಲ್‌–ಬಿಪಿಸಿಎಲ್‌

ಆರಂಭ: ಮಧ್ಯಾಹ್ನ 2.

ಆರ್ಮಿ ಇಲೆವನ್‌–ಏರ್‌ ಇಂಡಿಯಾ

ಆರಂಭ: ಸಂಜೆ 4.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT