ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾಕಿ ಬೆಳೆಯಲಿ; ಗೌರವ ಉಳಿಯಲಿ: ಇದು ಕನ್ನಡಿಗ ವಿ.ಆರ್.ರಘುನಾಥ್‌ನ ಮಾತು

Last Updated 25 ನವೆಂಬರ್ 2018, 19:30 IST
ಅಕ್ಷರ ಗಾತ್ರ

ಅದು, 2005. ಭಾರತ ಹಾಕಿ ತಂಡದ ರಕ್ಷಣಾ ವಿಭಾಗದಲ್ಲಿ ಸಂದೀಪ್ ಸಿಂಗ್‌, ಇಗ್ನೇಸ್ ಟರ್ಕಿ ಮುಂತಾದವರು ಗಮನ ಸೆಳೆದಿದ್ದ ಸಂದರ್ಭ. ಭಾರತ ತಂಡ ಪಾಕಿಸ್ತಾನದ ಎದುರು ದ್ವಿಪಕ್ಷೀಯ ಪಂದ್ಯ ಆಡಲು ಸಜ್ಜಾಗಿತ್ತು. ದಿಢೀರ್‌ ಆಗಿ ಸಂದೀಪ್‌ ಸಿಂಗ್ ಅವರು ಗಾಯಗೊಂಡಿರುವ ಸುದ್ದಿ ತಂಡಕ್ಕೆ ಆಘಾತ ತಂದಿತ್ತು. ಅವರ ಬದಲಿಗೆ ಕಣಕ್ಕೆ ಇಳಿಸಲು ಸೂಕ್ತ ಆಟಗಾರನ ಶೋಧ ಮಾಡುತ್ತಿದ್ದ ವೇಳೆ ಥಟ್‌ ಅಂತ ಹೊಳೆದ ಹೆಸರು ಕರ್ನಾಟಕದ ವಿ.ಆರ್.ರಘುನಾಥ್‌.

2003ರಲ್ಲಿ ಢಾಕಾದಲ್ಲಿ ನಡೆದಿದ್ದ ಸಬ್‌ ಜೂನಿಯರ್ ಏಷ್ಯಾ ಕಪ್‌ನಲ್ಲಿ ಭಾರತ ಪ್ರಶಸ್ತಿ ಗೆಲ್ಲಲು ಪ್ರಮುಖ ಕಾರಣರಾದವರ ಪೈಕಿ ಒಬ್ಬರಾಗಿದ್ದರು ರಘುನಾಥ್‌. ಹೀಗಾಗಿ ಸಂದೀಪ್ ಬದಲಿಗೆ ಅವರನ್ನೇ ತಂಡಕ್ಕೆ ಸೇರಿಸಲಾಯಿತು.

ಈ ಅನಿರೀಕ್ಷಿತ ಅವಕಾಶವನ್ನು ಸದುಪಯೋಗ ಮಾಡಿಕೊಂಡ ರಘುನಾಥ್‌ ಅವರದು ನಂತರ ನಾಗಾಲೋಟವಾಗಿತ್ತು. ಅನುಭವಿ ಆಟಗಾರರ ನಡುವೆ ತಂಡದಲ್ಲಿ ಸ್ಥಾನ ಗಟ್ಟಿಗೊಳಿಸಬೇಕಾದರೆ ಕಠಿಣ ಶ್ರಮ ಅಗತ್ಯ ಎಂದು ತಿಳಿದುಕೊಂಡ ಅವರು ಸವಾಲುಗಳನ್ನು ಮೆಟ್ಟಿ ನಿಂತು ಮುನ್ನುಗ್ಗಿದರು. ಒಲಿಂಪಿಕ್ಸ್‌, ವಿಶ್ವಕಪ್‌, ಕಾಮನ್‌ವೆಲ್ತ್ ಕೂಟ, ಏಷ್ಯಾ ಕ್ರೀಡಾಕೂಟ, ಏಷ್ಯಾ ಕಪ್‌, ಸುಲ್ತಾನ್ ಅಜ್ಲಾನ್ ಷಾ ಟೂರ್ನಿ, ಚಾಂಪಿಯನ್ಸ್ ಟ್ರೋಫಿ, ಹೀಗೆ ಎಲ್ಲ ಪ್ರಮುಖ ಟೂರ್ನಿಗಳಲ್ಲೂ ಚಾಕಚಕ್ಯತೆ ಮೆರೆದರು.

ಡ್ರಿಬ್ಲಿಂಗ್‌ ಮತ್ತು ಡ್ರ್ಯಾಗ್ ಫ್ಲಿಕ್‌ನಲ್ಲಿ ವಿಶೇಷ ಪರಿಣಿತಿ ಪಡೆದ ರಘುನಾಥ್ ದೂರದಿಂದ ಚೆಂಡನ್ನು ‘ಗುರಿ’ ಮುಟ್ಟಿಸುವ ಸ್ಲ್ಯಾಪ್‌ ಶಾಟ್‌ಗಳಿಗೂ ಹೆಸರಾದರು. 2013ರ ಏಷ್ಯಾಕಪ್‌ನಲ್ಲಿ ಆರು ಗೋಲು ಗಳಿಸಿದ ಅವರು ಟೂರ್ನಿಯ ಉತ್ತಮ ಆಟಗಾರ ಪ್ರಶಸ್ತಿ ಗಳಿಸಿದ್ದರು. 2015ರಲ್ಲಿ ರೂಪಿಂದರ್ ಪಾಲ್ ಸಿಂಗ್ ಅವರ ಅನುಪಸ್ಥಿತಿಯಲ್ಲಿ ತಂಡದ ಏಕೈಕ ಡ್ರ್ಯಾಗ್ ಫ್ಲಿಕ್ಕರ್ ಅಗಿದ್ದರು ರಘುನಾಥ್‌. ಆ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸಿ ಮೆಚ್ಚುಗೆ ಗಳಿಸಿದ್ದರು.

* ಎಲ್ಲ ಪ್ರಮುಖ ಟೂರ್ನಿಗಳಲ್ಲೂ ಭಾರತ ತಂಡವನ್ನು ಪ್ರತಿನಿಧಿಸಿದ ಅನುಭವಿ ಆಟಗಾರ ನೀವು. ಹಿಂತಿರುಗಿ ನೋಡಿದಾಗ ಏನನಿಸುತ್ತದೆ?

ತುಂಬ ಲವಲವಿಕೆಯಿಂದ ದೇಶಕ್ಕಾಗಿ ಆಡಿದ್ದೇನೆ. ನಾನು ದೇಶವನ್ನು ಪ್ರತಿನಿಧಿಸಿದಾಗ ಪ್ರಮಖ ಟೂರ್ನಿಗಳಲ್ಲಿ ಪ್ರಶಸ್ತಿಗಳು ಬಂದವು. ಒಲಿಂಪಿಕ್ಸ್‌ನಲ್ಲಿ ಪದಕ ಗೆಲ್ಲಲು ಆಗಲಿಲ್ಲ ಎಂಬ ಬೇಸರ ಮಾತ್ರ ಸದಾ ಕಾಡುತ್ತಿದೆ.

* ಹಾಕಿ ನಾಡು ಕೊಡಗು ನೀವು ಜನಿಸಿದ ಊರು. ಜನ್ಮನಾಡು ನಿಮ್ಮ ಕ್ರೀಡಾ ಜೀವನದ ಮೇಲೆ ಎಷ್ಟು ಪ್ರಭಾವ ಬೀರಿದೆ?

ಹಾಕಿ, ನಮ್ಮ ಮನೆತನದ ಆಟ. ಕೊಡಗಿನವರು ಧೈರ್ಯಶಾಲಿಗಳು, ಬದುಕಿನಲ್ಲಿ ಸವಾಲುಗಳನ್ನು ಎದುರಿಸಲು ಹಿಂಜರಿಯುವವರಲ್ಲ ಎಂಬ ಮಾತು ಇದೆ. ಅದಕ್ಕೆ ತಕ್ಕಂತೆ ನಾವು ಬದುಕುತ್ತಿದ್ದೇವೆ. ಕ್ರೀಡೆಯಲ್ಲಿ ಸಾಧನೆ ಮಾಡಲು ಈ ಮನಸ್ಥಿತಿ ತುಂಬ ನೆರವಾಗುತ್ತಿದೆ. ಕೊಡಗಿನವರ ಈ ಗುಣ ನನ್ನನ್ನು ಕೂಡ ಬೆಳೆಸಿದೆ.

* ತಂದೆ ಹಾಕಿ ಆಟಗಾರ ಆಗಿರದೇ ಇದ್ದಿದ್ದರೂ ನೀವು ಈ ಕ್ಷೇತ್ರವನ್ನೇ ಆಯ್ಕೆ ಮಾಡುತ್ತಿದ್ದೀರಾ?

ತಂದೆಯವರು ತಮ್ಮ ಜವಾಬ್ದಾರಿಯನ್ನು ಸಮರ್ಪಕವಾಗಿ ನಿಭಾಯಿಸಿದ್ದರಿಂದ ನಾನು ಈ ಮಟ್ಟಕ್ಕೆ ಬೆಳೆಯಲು ಸಾಧ್ಯವಾಯಿತು. ಹಾಕಿಯಲ್ಲಿ ಬೆಳೆಯಲು ಯಾವ ಸಂದರ್ಭದಲ್ಲಿ ಏನು ಮಾಡಬೇಕೋ ಅದೆಲ್ಲವನ್ನೂ ಅವರು ಮಾಡಿದ್ದಾರೆ. ಆದ್ದರಿಂದ ಗೊತ್ತಿದ್ದೋ ಇಲ್ಲದೆಯೋ ನಾನು ಹಾಕಿ ಆಟಗಾರನಾದೆ.

* ಸಬ್‌ ಜೂನಿಯರ್ ವಿಭಾಗದ ಮೊದಲ ಅಂತರರಾಷ್ಟ್ರೀಯ ಪಂದ್ಯದ ಬಗ್ಗೆ ಏನು ಹೇಳಲು ಬಯಸುತ್ತೀರಿ?

ಆಗ ನನಗೆ 16 ವರ್ಷ. ಎಲ್ಲವೂ ಹೊಸದಾಗಿ ಕಾಣುತ್ತಿತ್ತು. ತುಂಬ ರೋಮಾಂಚನಗೊಂಡಿದ್ದೆ. ಸಾಧನೆ ಮಾಡಲು ಮನಸ್ಸು ತುಡಿಯುತ್ತಿತ್ತು. ಅದು ಮುಂದೆ ರಾಷ್ಟ್ರೀಯ ತಂಡದಲ್ಲಿ ಬೆಳೆಯಲು ಸಹಕಾರಿಯಾಯಿತು.

* ಡ್ರಿಬ್ಲಿಂಗ್‌, ಡ್ರ್ಯಾಗ್ ಫ್ಲಿಕಿಂಗ್‌, ಲಾಂಗ್‌ರೇಂಜ್‌ ಸ್ಲ್ಯಾಪ್‌ ಶಾಟ್‌ಗಳಲ್ಲಿ ಪ್ರವೀಣರಾಗಿದ್ದೀರಿ? ಇದು ಹೇಗೆ ಸಾಧ್ಯವಾಯಿತು?

ಇವೆಲ್ಲ ಡಿಫೆಂಡರ್‌ಗೆ ಇರಬೇಕಾದ ಸಾಮರ್ಥ್ಯಗಳು. ಅದನ್ನು ನಾನು ಚೆನ್ನಾಗಿ ನಿಭಾಯಿಸಿದ್ದೇನೆ ಎಂದೆನಿಸುತ್ತದೆ. ಕೋಚ್ ಹೇಳಿಕೊಟ್ಟಿದ್ದಕ್ಕೆ ಪೂರಕವಾಗಿ ಮಾಡಿರುವ ಅಭ್ಯಾಸ, ಕಠಿಣ ಪ್ರಯತ್ನ, ತ್ಯಾಗ ಇವೆಲ್ಲವೂ ನನ್ನನ್ನು ಪರಿಪಕ್ವ ಆಟಗಾರನನ್ನಾಗಿ ಮಾಡಿದೆ ಎಂದು ಹೆಮ್ಮೆಯಿಂದ ಹೇಳುತ್ತೇನೆ.

* ನಿಮ್ಮ ವೃತ್ತಿ ಜೀವನದ ಹೆಚ್ಚು ನೆನಪಿನಲ್ಲಿ ಉಳಿಯುವ ಗೋಲು ಯಾವುದು?

ಹಾಗೆ ಯಾವುದೇ ಒಂದು ಗೋಲನ್ನು ನೆನಪಿಸಿಕೊಳ್ಳುವುದು ಕಷ್ಟ. ಆದರೂ 2016ರ ಚಾಂಪಿಯನ್ಸ್ ಟ್ರೋಫಿಯಲ್ಲಿ ಬೆಲ್ಜಿಯಂ ಮೇಲೆ ಹೊಡೆದ ಗೋಲನ್ನು ಮರೆಯಲು ಸಾಧ್ಯವಿಲ್ಲ.

* ಈ ಬಾರಿ ವಿಶ್ವಕಪ್‌ಗೆ ತೆರಳಿರುವ ಭಾರತ ತಂಡವನ್ನು ಹೇಗೆ ವಿಶ್ಲೇಷಿಸುವಿರಿ?

ತಂಡ ತುಂಬ ಬಲಿಷ್ಠವಾಗಿದೆ. 2008–09ರಲ್ಲಿ ವಿಶ್ವ ರ‍್ಯಾಂಕಿಂಗ್‌ನಲ್ಲಿ 13ನೇ ಸ್ಥಾನದಲ್ಲಿದ್ದ ಭಾರತ ಈಗ ಅಗ್ರ ಐದರಲ್ಲಿ ಸ್ಥಾನ ಗಳಿಸಿದೆ. ಈ ಕ್ರೀಡೆಯನ್ನು ಬೆಳೆಸಿ, ಇನ್ನೂ ಮೇಲೆ ತೆಗೆದುಕೊಂಡು ಹೋಗುವ ಮತ್ತು ದೇಶಕ್ಕೆ ಗೌರವ ತಂದುಕೊಡುವ ಜವಾಬ್ದಾರಿ ತಂಡದ ಆಟಗಾರರ ಮೇಲೆ ಇದೆ. ನಮ್ಮಿಂದ ಆಗುವಷ್ಟು ಮಾಡಿ ಬಂದಿದ್ದೇವೆ. ಹಾಕಿ ಪರಂಪರೆಯನ್ನು ಮುಂದುವರಿಸಲು ಯುವ ಆಟಗಾರರು ಪ್ರಯತ್ನಿಸಬೇಕು.

* ಕರ್ನಾಟಕದ ಪ್ರಮುಖ ಆಟಗಾರರಾದ ಅರ್ಜುನ್ ಹಾಲಪ್ಪ, ಎಸ್‌.ಕೆ. ಉತ್ತಪ್ಪ ಮತ್ತು ಎಸ್‌.ವಿ.ಸುನಿಲ್ ಜೊತೆ ವಿವಿಧ ಟೂರ್ನಿಗಳಲ್ಲಿ ಆಡಿದ ಅನುಭವ ಹೇಗಿತ್ತು?

ರಾಜ್ಯದ ಆಟಗಾರರ ಜೊತೆ ಆಡುವಾಗ ನಮ್ಮವರು ಎಂಬ ಭಾವನೆ ತುಂಬ ಆಪ್ತವಾಗಿರುತ್ತದೆ. ಅಂಗಣದಲ್ಲಿ ತಂತ್ರಗಳನ್ನು ಹೂಡುವುದಕ್ಕೂ ನೆರವಾಗುತ್ತದೆ. ನಮ್ಮದೇ ಭಾಷೆಯಲ್ಲಿ ಮಾತನಾಡುತ್ತ ಆಡುವಾಗ ರೋಮಾಂಚನವಾಗುತ್ತದೆ.

* ಪೊಸಿಷನಿಂಗ್ ಕಡ್ಡಾಯವಾಗಿದ್ದ ಸಂದರ್ಭದಲ್ಲಿ ಫಾರ್ವರ್ಡ್ ಆಟಗಾರರಿಗೆ ಮಾತ್ರ ಗೋಲು ಗಳಿಸಲು ಹೆಚ್ಚು ಅವಕಾಶ ಇತ್ತು. ಈಗ ಸಾಕಷ್ಟು ಬದಲಾವಣೆ ಆಗಿದೆ. ಈ ಬಗ್ಗೆ ಏನು ಹೇಳುತ್ತೀರಿ?

ಆಟದ ಶೈಲಿ, ತಂತ್ರ ಮತ್ತು ಕ್ರೀಡೆಗೆ ಸಂಬಂಧಿಸಿದ ತಂತ್ರಜ್ಞಾನಗಳಲ್ಲಿ ಸಾಕಷ್ಟು ಬದಲಾವಣೆ ಆಗಿದೆ. ಪೊಸಿಷನಿಂಗ್‌ ಕಡ್ಡಾಯ ಇಲ್ಲದ್ದರಿಂದ ಈಗ ಎಲ್ಲರಿಗೂ ಎಲ್ಲ ಕಡೆ ಆಡುವ ಅವಕಾಶ ಲಭಿಸುತ್ತಿದೆ. ಒಬ್ಬನೇ ಆಟಗಾರನಿಗೆ ವಿಭಿನ್ನ ನೆಲೆಯಲ್ಲಿ ಆಡಲು ಸಾಧ್ಯವಾಗುತ್ತಿದೆ. ಅದಕ್ಕೆ ಆಟಗಾರ ಹೊಂದಿಕೊಳ್ಳಲೇಬೇಕಾಗಿದೆ. ಹಾಗೆ ಮಾಡದವರು ಬೆಳೆಯಲು ಸಾಧ್ಯವಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT