ಹಾಕಿ: ಶ್ರೀಜೇಶ್‌ ಪಡೆಗೆ ಆತಿಥೇಯರ ಸವಾಲು

7

ಹಾಕಿ: ಶ್ರೀಜೇಶ್‌ ಪಡೆಗೆ ಆತಿಥೇಯರ ಸವಾಲು

Published:
Updated:
Deccan Herald

ಜಕಾರ್ತ: ಚಾಂಪಿಯನ್ಸ್‌ ಟ್ರೋಫಿ ಮತ್ತು ನ್ಯೂಜಿಲೆಂಡ್‌ ಎದುರಿನ ಟೆಸ್ಟ್‌ ಸರಣಿಯಲ್ಲಿ ಪರಿಣಾಮಕಾರಿ ಸಾಮರ್ಥ್ಯ ತೋರಿ ಗಮನ ಸೆಳೆದಿರುವ ಭಾರತದ ಪುರುಷರ ಹಾಕಿ ತಂಡ ಈಗ ಹೊಸ ಸವಾಲಿಗೆ ಸನ್ನದ್ಧವಾಗಿದೆ.

ಏಷ್ಯನ್‌ ಕ್ರೀಡಾಕೂಟದ ತನ್ನ ಮೊದಲ ಪಂದ್ಯದಲ್ಲಿ ಪಿ.ಆರ್‌.ಶ್ರೀಜೇಶ್‌ ಪಡೆ ಆತಿಥೇಯ ಇಂಡೊನೇಷ್ಯಾ ಎದುರು ಸೆಣಸಲಿದೆ. ಈ ಹೋರಾಟ ಸೋಮವಾರ ನಿಗದಿಯಾಗಿದೆ.

ನಾಲ್ಕು ವರ್ಷಗಳ ಹಿಂದೆ (2014) ಇಂಚೆನ್‌ನಲ್ಲಿ ನಡೆದಿದ್ದ ಕೂಟದಲ್ಲಿ ಚಿನ್ನದ ಪದಕ ಜಯಿಸಿದ್ದ ಭಾರತ ತಂಡ ಈ ಬಾರಿಯೂ ಚಿನ್ನದ ಕನಸಿನೊಂದಿಗೆ ಕಣಕ್ಕಿಳಿಯಲಿದೆ.

ಹರೇಂದ್ರ ಸಿಂಗ್‌ ಮಾರ್ಗದರ್ಶನದಲ್ಲಿ ತರಬೇತುಗೊಂಡಿರುವ ತಂಡ ಎಲ್ಲಾ ವಿಭಾಗಗಳಲ್ಲೂ ಬಲಿಷ್ಠವಾಗಿದೆ. ಆದರೆ ಪೆನಾಲ್ಟಿ ಆವರಣದಲ್ಲಿ ತಪ್ಪುಗಳು ಆಗದಂತೆ ಎಚ್ಚರವಹಿಸಬೇಕಿದೆ.

ಮುಂಚೂಣಿ ವಿಭಾಗದ ಆಟಗಾರರಾದ ಆಕಾಶ್‌ದೀಪ್ ಸಿಂಗ್‌, ಲಲಿತ್‌ ಕುಮಾರ್‌ ಉಪಾಧ್ಯಾಯ, ಕರ್ನಾಟಕದ ಎಸ್‌.ವಿ.ಸುನಿಲ್‌, ಮನದೀಪ್‌ ಸಿಂಗ್‌ ಮತ್ತು ದಿಲ್‌‍ಪ್ರೀತ್‌ ಸಿಂಗ್‌ ಅವರು ಪಾದರಸದಂತಹ ಚಲನೆಯ ಮೂಲಕ ಎದುರಾಳಿ ತಂಡದ ರಕ್ಷಣಾ ಕೋಟೆಯನ್ನು ಸುಲಭವಾಗಿ ಭೇದಿಸುವ ಸಾಮರ್ಥ್ಯ ಹೊಂದಿದ್ದಾರೆ.

ವಿವೇಕ್‌ ಸಾಗರ್‌ ಪ್ರಸಾದ್‌, ಸಿಮ್ರನ್‌ಜೀತ್‌ ಸಿಂಗ್‌, ಅನುಭವಿ ಸರ್ದಾರ್‌ ಸಿಂಗ್‌ ಮತ್ತು ಮನ್‌ಪ್ರೀತ್‌ ಸಿಂಗ್‌ ಅವರ ಮೇಲೂ ಭರವಸೆ ಇಡಬಹುದಾಗಿದೆ.

ರೂ‍ಪಿಂದರ್‌ ಪಾಲ್‌ ಸಿಂಗ್‌, ಸುರೇಂದರ್‌ ಕುಮಾರ್‌, ಹರ್ಮನ್‌ಪ್ರೀತ್‌ ಸಿಂಗ್‌ ಮತ್ತು ವರುಣ್‌ ಕುಮಾರ್‌ ಅವರು ರಕ್ಷಣಾ ವಿಭಾಗದಲ್ಲಿ ತಂಡದ ಬೆನ್ನೆಲುಬಾಗಿದ್ದಾರೆ.

ತವರಿನ ಅಭಿಮಾನಿಗಳ ಎದುರು ಆಡುತ್ತಿರುವ ಇಂಡೊನೇಷ್ಯಾ ಕೂಡಾ ಗೆಲುವಿನ ಮುನ್ನುಡಿ ಬರೆಯಲು ಕಾಯುತ್ತಿದೆ.

ಬುದಿ ರೊಮನ್‌ಸ್ಯಾಹ್‌, ಮುಲಿಯಾ ಹೆಂಡ್ರಿ, ಸಿರೆಗರ್‌ ಹ್ಯಾರಿಸ್‌ ಫಾದಿಲ್ಲಾ ಅವರಂತಹ ಪ್ರತಿಭಾಶಾಲಿಗಳು ಈ ತಂಡದಲ್ಲಿದ್ದಾರೆ.

Tags: 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !