ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮನಪ್ರೀತ್‌ ಪಡೆಗೆ ಮಲೇಷ್ಯಾ ಸವಾಲು

ಸುಲ್ತಾನ್‌ ಅಜ್ಲಾನ್‌ ಶಾ ಕಪ್‌ ಹಾಕಿ: ಇಂದು ಮೂರನೇ ಲೀಗ್‌ ಪಂದ್ಯ
Last Updated 25 ಮಾರ್ಚ್ 2019, 18:30 IST
ಅಕ್ಷರ ಗಾತ್ರ

ಇಫೊ, ಮಲೇಷ್ಯಾ: ಸುಲ್ತಾನ್‌ ಅಜ್ಲಾನ್‌ ಶಾ ಕಪ್‌ ಹಾಕಿ ಟೂರ್ನಿಯಲ್ಲಿ ಆರನೇ ಪ್ರಶಸ್ತಿಗೆ ಮುತ್ತಿಕ್ಕುವ ಕನಸು ಹೊಂದಿರುವ ಭಾರತ ತಂಡಕ್ಕೆ ಈಗ ಅಗ್ನಿ ಪರೀಕ್ಷೆ ಎದುರಾಗಿದೆ.

ಮಂಗಳವಾರ ನಡೆಯುವ ತನ್ನ ಮೂರನೇ ಲೀಗ್ ಹೋರಾಟದಲ್ಲಿ ಮನಪ್ರೀತ್‌ ಸಿಂಗ್‌ ಬಳಗ ಬಲಿಷ್ಠ ಮಲೇಷ್ಯಾ ಎದುರು ಸೆಣಸಲಿದೆ.

ಮೊದಲ ಹಣಾಹಣಿಯಲ್ಲಿ ಜಪಾನ್‌ ತಂಡವನ್ನು ಸೋಲಿಸಿ ವಿಶ್ವಾಸದಿಂದ ಬೀಗುತ್ತಿದ್ದ ಭಾರತ, ಭಾನುವಾರ ನಡೆದಿದ್ದ ದಕ್ಷಿಣ ಕೊರಿಯಾ ಎದುರಿನ ಪೈಪೋಟಿಯಲ್ಲಿ ಜಯದ ಅವಕಾಶವನ್ನು ಕೈಚೆಲ್ಲಿತ್ತು.

ಪಂದ್ಯ ಮುಗಿಯಲು 22 ಸೆಕೆಂಡುಗಳು ಬಾಕಿ ಇದ್ದಾಗ ಮನಪ್ರೀತ್‌ ಪಡೆಯ ಆಟಗಾರರು ಎದುರಾಳಿಗಳಿಗೆ ಗೋಲು ಬಿಟ್ಟುಕೊಟ್ಟಿದ್ದರು. ಹಿಂದಿನ ಈ ತಪ್ಪನ್ನು ತಿದ್ದಿಕೊಂಡು ಆಡುವ ಸವಾಲು ಈಗ ಭಾರತದ ಎದುರಿಗಿದೆ.

ಎರಡು ಪಂದ್ಯಗಳಿಂದ ನಾಲ್ಕು ಪಾಯಿಂಟ್ಸ್‌ ಕಲೆಹಾಕಿರುವ ಮನಪ್ರೀತ್‌ ಬಳಗ, ಪಾಯಿಂಟ್ಸ್‌ ಪಟ್ಟಿಯಲ್ಲಿ ನಾಲ್ಕನೇ ಸ್ಥಾನ ಹೊಂದಿದೆ. ಮಲೇಷ್ಯಾ ಅಗ್ರಸ್ಥಾನದಲ್ಲಿದೆ. ಈ ತಂಡ ತಾನಾಡಿರುವ ಎರಡು ಪಂದ್ಯಗಳಲ್ಲೂ ಗೆದ್ದಿದೆ. ಮೊದಲ ಪೈಪೋಟಿಯಲ್ಲಿ 5–1 ಗೋಲುಗಳಿಂದ ಪೋಲೆಂಡ್‌ ತಂಡವನ್ನು ಹಣಿದಿದ್ದ ಈ ತಂಡ ನಂತರದ ಹೋರಾಟದಲ್ಲಿ 4–3 ಗೋಲುಗಳಿಂದ ಜಪಾನ್‌ ತಂಡವನ್ನು ಮಣಿಸಿತ್ತು.

ಹಿಂದಿನ ಎರಡು ಪಂದ್ಯಗಳಲ್ಲಿ ಆತಿಥೇಯರು ಆಡಿರುವ ರೀತಿ ನೋಡಿದರೆ ಭಾರತದ ಗೆಲುವಿನ ಹಾದಿ ಸುಲಭವಲ್ಲ ಎಂಬುದು ಮನದಟ್ಟಾಗುತ್ತದೆ.

2010ರಲ್ಲಿ ಗುವಾಂಗ್‌ಜೌನಲ್ಲಿ ನಡೆದಿದ್ದ ಏಷ್ಯನ್‌ ಕ್ರೀಡಾಕೂಟದ ಸೆಮಿಫೈನಲ್‌ನಲ್ಲಿ ಎರಡು ತಂಡಗಳು ಎದುರಾಗಿದ್ದವು. ಆಗ ಮಲೇಷ್ಯಾ 4–3 ಗೋಲುಗಳಿಂದ ಭಾರತಕ್ಕೆ ಆಘಾತ ನೀಡಿತ್ತು. ಹೋದ ವರ್ಷ ಜಕಾರ್ತದಲ್ಲಿ ನಡೆದಿದ್ದ ಏಷ್ಯನ್‌ ಕೂಟದ ಸೆಮಿಫೈನಲ್‌ನಲ್ಲೂ ಉಭಯ ತಂಡಗಳು ಎದುರಾಗಿದ್ದವು. ಆಗಲೂ ಮಲೇಷ್ಯಾ ಪೆನಾಲ್ಟಿ ಶೂಟೌಟ್‌ನಲ್ಲಿ ದಿಟ್ಟ ಆಟ ಆಡಿ ಗೆದ್ದಿತ್ತು.

ಹಿಂದಿನ ಈ ಎರಡು ಸೋಲುಗಳಿಗೆ ಮುಯ್ಯಿ ತೀರಿಸಿಕೊಳ್ಳಲು ಭಾರತ ತಂಡ ಕಾತರವಾಗಿದೆ.

ಮನದೀಪ್‌ ಸಿಂಗ್‌, ಸಿಮ್ರನ್‌ಜೀತ್‌ ಸಿಂಗ್‌ ಮತ್ತು ವರುಣ್‌ ಕುಮಾರ್‌ ಹಿಂದಿನ ಪಂದ್ಯಗಳಲ್ಲಿ ಗೋಲು ದಾಖಲಿಸಿದ್ದರು. ಉತ್ತಮ ಲಯದಲ್ಲಿರುವ ಇವರು ಮಲೇಷ್ಯಾ ಎದುರೂ ಮೋಡಿ ಮಾಡಲು ಉತ್ಸುಕರಾಗಿದ್ದಾರೆ. ನಾಯಕ ಮನದೀಪ್‌, ಅನುಭವಿ ಗೋಲ್‌ಕೀಪರ್‌ ಪಿ.ಆರ್‌.ಶ್ರೀಜೇಶ್‌, ಡಿಫೆಂಡರ್‌ ಸುರೇಂದರ್‌ ಕುಮಾರ್‌ ಹಾಗೂ ಮಿಡ್‌ಫೀಲ್ಡರ್‌ ವಿವೇಕ್‌ ಸಾಗರ್‌ ಪ್ರಸಾದ್‌ ಅವರ ಮೇಲೂ ಹೆಚ್ಚಿನ ಜವಾಬ್ದಾರಿ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT