ಬುಧವಾರ, ಡಿಸೆಂಬರ್ 11, 2019
27 °C
‘ಬಿ’ ಗುಂಪಿನ ಪಾಯಿಂಟ್ಸ್‌ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದ ಆ್ಯರನ್‌ ಬಳಗ

ಆಸ್ಟ್ರೇಲಿಯಾಗೆ ಶರಣಾದ ಇಂಗ್ಲೆಂಡ್‌

Published:
Updated:
Deccan Herald

ಭುವನೇಶ್ವರ: ಹಾಕಿ ವಿಶ್ವಕಪ್‌ನಲ್ಲಿ ‘ಹ್ಯಾಟ್ರಿಕ್‌’ ಪ್ರಶಸ್ತಿ ಜಯದ ಮೇಲೆ ಕಣ್ಣಿಟ್ಟಿರುವ ಆಸ್ಟ್ರೇಲಿಯಾ ತಂಡ ಈ ಹಾದಿಯಲ್ಲಿ ದಿಟ್ಟ ಹೆಜ್ಜೆ ಇಟ್ಟಿದೆ.

ಆ್ಯರನ್‌ ಜಲೇವ್‌ಸ್ಕಿ ಬಳಗ ಈ ಬಾರಿ ಸತತ ಎರಡನೇ ಗೆಲುವು ದಾಖಲಿಸಿ ‘ಬಿ’ ಗುಂಪಿನ ಪಾಯಿಂಟ್ಸ್‌ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ.

ಕಳಿಂಗ ಕ್ರೀಡಾಂಗಣದಲ್ಲಿ ಮಂಗಳವಾರ ನಡೆದ ಹೋರಾಟದಲ್ಲಿ ಆಸ್ಟ್ರೇ ಲಿಯಾ 3–0 ಗೋಲುಗಳಿಂದ ಇಂಗ್ಲೆಂಡ್‌ ತಂಡವನ್ನು ಸೋಲಿಸಿತು. ಇದರೊಂದಿಗೆ ಆಂಗ್ಲರ ನಾಡಿನ ತಂಡದ ಎದುರಿನ ಗೆಲುವಿನ ದಾಖಲೆಯನ್ನು 9–2ಕ್ಕೆ ಹೆಚ್ಚಿಸಿಕೊಂಡಿತು.

ವಿಶ್ವಕಪ್‌ನಲ್ಲಿ ಈ ಹಿಂದೆ ಉಭಯ ತಂಡಗಳು 10 ಸಲ ಮುಖಾಮುಖಿಯಾಗಿದ್ದವು. ಈ ಪೈಕಿ ಆಸ್ಟ್ರೇಲಿಯಾ ಎಂಟು ಪಂದ್ಯಗಳಲ್ಲಿ ಜಯಿಸಿತ್ತು. ಹೀಗಾಗಿ ಮಂಗಳವಾರದ ಹಣಾಹಣಿಯಲ್ಲಿ ಆ್ಯರನ್ ಪಡೆ ವಿಶ್ವಾಸದಿಂದಲೇ ಕಣಕ್ಕಿಳಿದಿತ್ತು.

ಉಭಯ ತಂಡಗಳು ಆರಂಭ ದಿಂದಲೇ ಜಿದ್ದಾಜಿದ್ದಿನ ಪೈಪೋಟಿ ನಡೆ ಸಿದವು. 12ನೇ ನಿಮಿಷದಲ್ಲಿ ಇಂಗ್ಲೆಂಡ್‌ ತಂಡಕ್ಕೆ ಖಾತೆ ತೆರೆಯುವ ಅವಕಾಶ ಸಿಕ್ಕಿತ್ತು. ಬೇರಿ ಮಿಡಲ್‌ಟನ್‌ ಬಾರಿಸಿದ ಚೆಂಡನ್ನು ಆಸ್ಟ್ರೇಲಿಯಾ ಗೋಲ್‌ಕೀಪರ್‌ ಟೇಲರ್‌ ಲವೆಲ್‌ ಅಮೋಘ ರೀತಿಯಲ್ಲಿ ತಡೆದರು. ನಂತರ ಎರಡೂ ತಂಡಗಳು  ರಕ್ಷಣಾ ವಿಭಾಗದಲ್ಲಿ ಪರಿಣಾಮಕಾರಿ ಸಾಮರ್ಥ್ಯ ತೋರಿದ್ದರಿಂದ ಮೊದಲ ಕ್ವಾರ್ಟರ್‌ನ ಆಟ ಗೋಲು ರಹಿತವಾಗಿ ಅಂತ್ಯವಾಯಿತು.

ವಿಶ್ವ ಕ್ರಮಾಂಕ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ಆಸ್ಟ್ರೇಲಿಯಾ ಎರಡನೇ ಕ್ವಾರ್ಟರ್‌ನಲ್ಲಿ ಮಿಂಚಿತು.

ಆ್ಯರನ್‌ ಪಡೆ 21ನೇ ನಿಮಿಷದಲ್ಲಿ ಸತತ ಎರಡು ಪೆನಾಲ್ಟಿ ಕಾರ್ನರ್‌ ಅವಕಾಶ ಪಡೆದಿತ್ತು.

ಆದರೆ ಚೆಂಡನ್ನು ಗುರಿ ಮುಟ್ಟಿಸಲು ಹಾಲಿ ಚಾಂಪಿಯನ್ನರು ವಿಫಲರಾದರು. ಮೂರನೇ ಕ್ವಾರ್ಟರ್‌ನ ಹೋರಾಟ ಕೂಡಾ ಸಮಬಲದೊಂದಿಗೆ ಮುಗಿಯಿತು.

ನಾಲ್ಕನೇ ಕ್ವಾರ್ಟರ್‌ನಲ್ಲಿ ಆಸ್ಟ್ರೇ ಲಿಯಾ ಆಟಗಾರರು ಮೋಡಿ ಮಾಡಿದರು. 47ನೇ ನಿಮಿಷದಲ್ಲಿ ಜೇಕ್‌ ವೆಟ್ಟನ್‌ ಫೀಲ್ಡ್‌ ಗೋಲು ಬಾರಿಸಿದರು. ಇದರ ಬೆನ್ನಲ್ಲೇ ಬ್ಲೇಕ್‌ ಗೋವರ್ಸ್‌ ಕೈಚಳಕ ತೋರಿದರು. ಫೀಲ್ಡ್‌ ಗೋಲು ಬಾರಿಸಿದ ಗೋವರ್ಸ್‌ ಹಾಕಿ ಪ್ರಿಯರ ಮನ ಗೆದ್ದರು.

ಕೊನೆಯ 10 ನಿಮಿಷಗಳಲ್ಲಿ ಎರಡೂ ತಂಡಗಳು ತುರುಸಿನ ಪೈಪೋಟಿ ನಡೆಸಿದವು. ಹೀಗಾಗಿ ಆಟದ ರೋಚಕತೆ ಹೆಚ್ಚಿತು. 56ನೇ ನಿಮಿಷದಲ್ಲಿ ಆಸ್ಟ್ರೇಲಿಯಾ ಮುನ್ನಡೆ ಹೆಚ್ಚಿಸಿಕೊಂಡು ಗೆಲುವಿನ ಹಾದಿ ಸುಗಮ ಮಾಡಿಕೊಂಡಿತು. ಕೋರಿ ವೇಯರ್‌ ಅವರು ಫೀಲ್ಡ್‌ ಗೋಲು ಬಾರಿಸಿ ಇಂಗ್ಲೆಂಡ್‌ ತಂಡದ ಗೆಲುವಿನ ಕನಸಿಗೆ ತಣ್ಣೀರು ಸುರಿದರು.

ಗುಂಪು ಹಂತದ ತನ್ನ ಕೊನೆಯ ಪಂದ್ಯದಲ್ಲಿ ಆ್ಯರನ್‌ ಪಡೆ ಚೀನಾ ಎದುರು ಸೆಣಸಲಿದೆ. ಈ ಹೋರಾಟ ಡಿಸೆಂಬರ್‌ 7ರಂದು ನಡೆಯಲಿದೆ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು