ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾಕಿ ವಿಶ್ವಕಪ್ : ಕ್ವಾರ್ಟರ್‌ಫೈನಲ್‌ ಮೇಲೆ ಭಾರತದ ಚಿತ್ತ

ಪುರುಷರ ವಿಶ್ವಕಪ್ ಹಾಕಿ: ವೇಲ್ಸ್ ಎದುರು ಗೆಲುವಿನ ನಿರೀಕ್ಷೆ
Last Updated 18 ಜನವರಿ 2023, 13:37 IST
ಅಕ್ಷರ ಗಾತ್ರ

ಭುವನೇಶ್ವರ: ಅಜೇಯ ಓಟ ಮುಂದುವರಿಸುವ ತವಕದಲ್ಲಿರುವ ಭಾರತ ತಂಡವು ವಿಶ್ವಕಪ್ ಹಾಕಿ ಟೂರ್ನಿಯ ಗುಂಪು ಹಂತದ ತನ್ನ ಕೊನೆಯ ಪಂದ್ಯದಲ್ಲಿ ಗುರುವಾರ ವೇಲ್ಸ್ ಸವಾಲು ಎದುರಿಸಲಿದೆ.

ಕ್ವಾರ್ಟರ್‌ಫೈನಲ್‌ ಹಂತಕ್ಕೆ ನೇರ ಪ್ರವೇಶ ಪಡೆಯಲು ಹರ್ಮನ್‌ಪ್ರೀತ್ ಸಿಂಗ್‌ ನಾಯಕತ್ವದ ಬಳಗ ಈ ಪಂದ್ಯವನ್ನು ದೊಡ್ಡ ಅಂತರದಿಂದ ಗೆಲ್ಲಲು ಎದುರು ನೋಡುತ್ತಿದೆ.

ಡಿ ಗುಂಪಿನಲ್ಲಿ ಭಾರತ ಮತ್ತು ಇಂಗ್ಲೆಂಡ್‌ ತಲಾ ಎರಡು ಪಂದ್ಯಗಳಿಂದ ನಾಲ್ಕು ಪಾಯಿಂಟ್ಸ್ ಕಲೆಹಾಕಿವೆ. ಆದರೆ ಗೋಲು ವ್ಯತ್ಯಾಸದಲ್ಲಿ ಇಂಗ್ಲೆಂಡ್‌ (+5) ತಂಡವು ಭಾರತಕ್ಕಿಂತ (+2) ಮುಂದಿದೆ. ಗುರುವಾರ ಭಾರತದ ಪಂದ್ಯಕ್ಕಿಂತ ಮೊದಲು ಇಂಗ್ಲೆಂಡ್ ಹಾಗೂ ಸ್ಪೇನ್ ಸೆಣಸಲಿವೆ. ಹೀಗಾಗಿ ಈ ಪಂದ್ಯದ ಫಲಿತಾಂಶವನ್ನು ಗಮನಿಸಿ ಆಟದ ತಂತ್ರ ರೂಪಿಸುವ ಅವಕಾಶ ಭಾರತಕ್ಕಿದೆ.

ಸ್ಪೇನ್ ಎದುರಿನ ಪಂದ್ಯದಲ್ಲಿ ಇಂಗ್ಲೆಂಡ್‌ ಸೋಲು ಅಥವಾ ಡ್ರಾ ಸಾಧಿಸಿದರೆ, ಭಾರತ ತಂಡದವರಿಗೆ ಯಾವುದೇ ಚಿಂತೆ ಇಲ್ಲ. ಆಗ ಭಾರತ ವೇಲ್ಸ್ ತಂಡವನ್ನು ಸೋಲಿಸಿದರೆ ಸಾಕು. ಒಂದು ವೇಳೆ ಇಂಗ್ಲೆಂಡ್‌ ತಂಡವು ಸ್ಪೇನ್ ವಿರುದ್ಧ ಗೆದ್ದರೆ, ಭಾರತ ಕನಿಷ್ಠ ಐದು ಗೋಲುಗಳಿಂದ ವೇಲ್ಸ್‌ಗೆ ಸೋಲುಣಿಸಬೇಕು.

ವೇಲ್ಸ್‌ ಅನ್ನು ಮಣಿಸಿದರೆ ಭಾರತ ಟೂರ್ನಿಯಿಂದ ಹೊರಬೀಳುವುದಿಲ್ಲ. ಗುಂಪಿನಲ್ಲಿ ಎರಡನೇ ಸ್ಥಾನ ಪಡೆದು ಕ್ರಾಸ್‌ಓವರ್ ಪಂದ್ಯದಲ್ಲಿ ಆಡಲಿದೆ. ಸಿ ಗುಂಪಿನಲ್ಲಿ ಮೂರನೇ ಸ್ಥಾನ ಪಡೆದ ತಂಡವನ್ನು ಎದುರಿಸಲಿದೆ.

ಪೆನಾಲ್ಟಿ ಕಾರ್ನರ್‌ಗಳನ್ನು ಗೋಲುಗಳಲ್ಲಿ ಪರಿವರ್ತಿಸುವಲ್ಲಿ ಭಾರತ ತಂಡವು ಎಡವುತ್ತಿದ್ದು, ಆ ವಿಭಾಗ ಸುಧಾರಿಸಬೇಕಿದೆ.

ವೇಲ್ಸ್ ತಂಡವು ಈ ಪಂದ್ಯವನ್ನು ಕೇವಲ ‘ಗೌರವ’ಕ್ಕಾಗಿ ಆಡಲಿದೆ. ಗುಂಪು ಹಂತದಲ್ಲಿ ಆಡಿರುವ ಎರಡೂ ಪಂದ್ಯಗಳನ್ನು ಭಾರಿ ಅಂತರದಿಂದ ಸೋತಿರುವ ಅದಕ್ಕೆ ಟೂರ್ನಿಯಲ್ಲಿ ಮುನ್ನಡೆಯುವ ಅವಕಾಶ ಇಲ್ಲ.

ಬ್ಲ್ಯಾಕ್‌ ಟಿಕೆಟ್‌ ಮಾರಾಟ;ಬಂಧನ: ವಿಶ್ವಕಪ್ ಟೂರ್ನಿಯ ಪಂದ್ಯಗಳ ಟಿಕೆಟ್‌ಗಳನ್ನು ಬ್ಲ್ಯಾಕ್‌ನಲ್ಲಿ ಮಾರಾಟ ಮಾಡುತ್ತಿದ್ದ ಆರೋಪದ ಮೇಲೆ ಐವರನ್ನು ಒಡಿಶಾ ರಾಜಧಾನಿ ಭುವನೇಶ್ವರನಲ್ಲಿ ಪೊಲೀಸರು ಬಂಧಿಸಿದ್ದಾರೆ. ಕಳಿಂಗ ಕ್ರೀಡಾಂಗಣದಲ್ಲಿ ಇವರು ಬ್ಲ್ಯಾಕ್‌ಟಿಕೆಟ್‌ ಮಾರಾಟದಲ್ಲಿ ತೊಡಗಿದ್ದರು ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT