ರೀಡ್ ಹೆಗಲಿಗೆ ಭಾರತ ಹಾಕಿಯ ‘ಭಾರ’

ಶುಕ್ರವಾರ, ಏಪ್ರಿಲ್ 26, 2019
21 °C

ರೀಡ್ ಹೆಗಲಿಗೆ ಭಾರತ ಹಾಕಿಯ ‘ಭಾರ’

Published:
Updated:
Prajavani

‘ಭಾರತದಂಥ ಬಲಿಷ್ಠ ತಂಡದ ಕೋಚ್ ಆಗಬೇಕು ಎಂಬುದು ವಿದೇಶದ ಪ್ರತಿಯೊಬ್ಬ ಹಾಕಿ ತರಬೇತುದಾರನ ಆಸೆಯಾಗಿರುತ್ತದೆ....’ ಭಾರತ ಪುರುಷರ ಹಾಕಿ ತಂಡದ ಹೊಸ ಕೋಚ್‌, ಆಸ್ಟ್ರೇಲಿಯಾದ ಗ್ರಹಾಂ ರೀಡ್ ನೇಮಕವಾದ ತಕ್ಷಣ ಆಡಿದ ಮಾತು ಇದು.

ಹೌದು, ಅವರ ಮಾತಿನಲ್ಲಿ ಮರ್ಮವಿದೆ. ಸತತ ಆರು ಬಾರಿ ಸೇರಿದಂತೆ ಒಟ್ಟು ಎಂಟು ಸಲ ಒಲಿಂಪಿಕ್‌ ಪದಕ ಗೆದ್ದ, ವಿಶ್ವಕಪ್‌, ಏಷ್ಯಾ ಕಪ್‌, ಏಷ್ಯನ್‌ ಕ್ರೀಡಾಕೂಟ ಮುಂತಾಗಿ ಎಲ್ಲ ಕಡೆಗಳಲ್ಲೂ ಸಾಧನೆಯ ಶಿಖರವೇರಿದ ತಂಡವೊಂದರ ಕೋಚ್ ಆಗುವುದು ಎಂದರೆ ಸಾಮಾನ್ಯ ಮಾತಲ್ಲ.

ಆದರೆ ಗ್ರಹಾಂ ರೀಡ್‌ ಆಡಿರುವ ಮಾತುಗಳಲ್ಲಿ ಅಭಿಮಾನಕ್ಕಿಂತ ‘ಗಳಿಕೆ’ಯ ಆಯಾಮವೇ ಎದ್ದು ಕಾಣುತ್ತದೆ ಎಂಬುದು ಹಿರಿಯ ಆಟಗಾರರು ಮತ್ತು ಭಾರತ ಹಾಕಿ ಕ್ರೀಡೆಯ ತಜ್ಞರ ಅಭಿಮತ. ಭಾರಿ ಮೊತ್ತದ ವೇತನ, ಟೂರ್ನಿಗಳನ್ನು ಗೆದ್ದರೆ ಖ್ಯಾತಿ ಇತ್ಯಾದಿಗಳ ಬೆನ್ನು ಹತ್ತಿ ಬರುವವರೇ ಹೆಚ್ಚು ಇರುವುದರಿಂದ ಈ ಅಭಿಪ್ರಾಯವನ್ನು ಕೇವಲ ಸಗಟಾಗಿ ತಳ್ಳಿ ಹಾಕುವಂತಿಲ್ಲ.

ಭಾರತ ಹಾಕಿ ಅಂಗಣಕ್ಕೆ ‘ಗಳಿಕೆ’ಯ ಉದ್ದೇಶವಿರಿಸಿಕೊಂಡು ಬರುತ್ತಿರುವುದರಿಂದಲೇ ವಿದೇಶಿ ಕೋಚ್‌ಗಳು ಸಾಧನೆಯ ಕಡೆಗೆ ಗಮನ ನೀಡುವುದಿಲ್ಲ ಎಂಬ ಆರೋಪ ಸಾಮಾನ್ಯವಾಗಿ ಕೇಳಿ ಬರುತ್ತಿದೆ. ‘ಬಂದ ಪುಟ್ಟ; ಹೋದ ಪುಟ್ಟ’ ಎಂಬಂತೆ ವಿದೇಶಿ ಕೋಚ್‌ಗಳು ಈ ಬಾಗಿಲಿನಿಂದ ಬಂದು ಆ ಬಾಗಿಲಿನಿಂದ ಹೋದ ಪ್ರಸಂಗಗಳೇ ಹೆಚ್ಚು ಇವುರುವುದರಿಂದ ಈ ಆರೋಪದಲ್ಲೂ ಹುರುಳು ಇದೆ ಎಂದು ತೋಚದೇ ಇರಲಾರದು. 1980ರಲ್ಲಿ ಕೊನೆಯದಾಗಿ ಭಾರತ ಒಲಿಂಪಿಕ್ಸ್ ಪದಕ ಗೆದ್ದ ನಂತರ ಇಲ್ಲಿಯ ವರೆಗೆ ರಾಷ್ಟ್ರೀಯ ಹಾಕಿ ತಂಡ ಒಟ್ಟು 34 ಕೋಚ್‌ಗಳ ಗರಡಿಯಲ್ಲಿ ಅಭ್ಯಾಸ ಮಾಡಿದೆ ಎಂದು ಅಂಕಿ–ಅಂಶ ತಜ್ಞರು ಹೇಳುತ್ತಾರೆ. ಎರಡು ಅಥವಾ ಹೆಚ್ಚು ಬಾರಿ ತಂಡಕ್ಕೆ ತರಬೇತಿ ನೀಡಿದವರ ಹೆಸರನ್ನೂ ಪರಿಗಣಿಸಿದರೆ ಈ ಸಂಖ್ಯೆ 51ಕ್ಕೆ ಏರುತ್ತದೆ. ವರ್ಷಗಳ ಕಾಲ ಒಂದೇ ಕೋಚ್‌ನ ‘ಆಸರೆ’ಯಲ್ಲಿ ಹೆಸರು ಮಾಡುವ ಕ್ರಿಕೆಟ್‌ ತಂಡಕ್ಕೆ ಹೋಲಿಸಿದರೆ ಇದು ಅಚ್ಚರಿ ತರುವ ಲೆಕ್ಕವೇ ಸರಿ.

2015ರ ಜನವರಿಯಿಂದ ಜೂನ್ ವರೆಗೆ ಕಾರ್ಯನಿರ್ವಹಿಸಿದ ಪಾಲ್ ವ್ಯಾನ್ ಆ್ಯಸ್‌ ಅವರಿಂದ ಶೊರ್ಡ್ ಮ್ಯಾರಿಜ್ ವರೆಗೆ ಸತತ ಮೂವರು ವಿದೇಶಿ ಕೋಚ್‌ಗಳನ್ನು ನೇಮಕ ಮಾಡಿದ ಹಾಕಿ ಇಂಡಿಯಾ ನಂತರ ಹರೇಂದ್ರ ಸಿಂಗ್ ಅವರಿಗೆ ಆ ಹುದ್ದೆಯನ್ನು ನೀಡಿದರು. ಏಷ್ಯಾಕಪ್‌ನ ವೈಫಲ್ಯ, ತವರಿನಲ್ಲೇ ನಡೆದ ವಿಶ್ವಕಪ್‌ನಲ್ಲಿ ಶೂನ್ಯ ಸಾಧನೆ ಮಾಡಿದ್ದರಿಂದ ಅವರನ್ನು ಜನವರಿಯಲ್ಲಿ ವಜಾ ಮಾಡಲಾಯಿತು. ಈ ಮೂಲಕ ಆರು ವರ್ಷಗಳಲ್ಲಿ ಆರು ಕೋಚ್‌ಗಳನ್ನು ಹೊರಗಟ್ಟಿದ ‘ದಾಖಲೆ’ ಮಾಡಿತು, ಹಾಕಿ ಇಂಡಿಯಾ.
ಈಗ ಗ್ರಹಾಂ ರೀಡ್ ಅವರ ಹೆಗಲ ಮೇಲೆ ಹೊಸ ಹೊರೆ ಇರಿಸಲಾಗಿದೆ. ಅವರು ಎಷ್ಟು ಕಾಲ, ಎಷ್ಟು ದೂರ ಇದನ್ನು ಹೊತ್ತುಕೊಂಡು ಸಾಗುತ್ತಾರೆ ಎಂಬುದು ಕುತೂಹಲದ ಸಂಗತಿ.

‘ತಂಡವನ್ನು ಸುಸ್ಥಿರವಾಗಿರಿಸುವುದು ಇಂದಿನ ಅಗತ್ಯ. ಆ ನಿಟ್ಟಿನಲ್ಲಿ ನನ್ನನ್ನು ಹೆಚ್ಚು ಕಾಲ ಉಳಿಸುತ್ತಾರೆ ಎಂಬ ವಿಶ್ವಾಸವಿದೆ’ ಎಂದು ರೀಡ್‌ ಹೇಳಿದ್ದಾರೆ. ‘ವಿವಾದಗಳು ಸದಾ ಕಾಡುತ್ತಿರುವ ಭಾರತ ಕ್ರೀಡಾ ಕ್ಷೇತ್ರದಲ್ಲಿ ಯಾರಿಗೂ ಹೆಚ್ಚು ಕಾಲ ಸೇವೆ ಸಲ್ಲಿಸಲು ಸಾಧ್ಯವಿಲ್ಲ. ಹೀಗಾಗಿ ನಾನು ಹೊರಗೆ ಹೋಗಲು ಸದಾ ಸನ್ನದ್ಧನಾಗಿದ್ದೇನೆ. ಒಂದಿಲ್ಲಾ ಒಂದು ದಿನ ನನ್ನನ್ನು ಹೊರಗೆ ಹಾಕುತ್ತಾರೆ ಎಂಬುದನ್ನು ಗಮನದಲ್ಲಿರಿಸಿಕೊಂಡೇ ಈ ಹುದ್ದೆಯನ್ನು ವಹಿಸಿದ್ದೇನೆ’ ಎಂದು ಹೇಳಿದ ರೋಲಂಟ್ ಓಲ್ಟಮನ್ಸ್‌ 26 ತಿಂಗಳು ತಂಡದ ಜೊತೆ ಇದ್ದರು.

ಓಲ್ಟಮನ್ಸ್ ಮತ್ತು ರೀಡ್ ಅವರ ಅಭಿಪ್ರಾಯಗಳಲ್ಲಿ ತುಂಬ ವ್ಯತ್ಯಾಸವಿದೆ. ಆತ್ಮವಿಶ್ವಾಸದೊಂದಿಗೆ ಕಣಕ್ಕೆ ಇಳಿಯಲು ಸಜ್ಜಾಗಿರುವ ರೀಡ್‌ ಸಾಧನೆಯ ಹಾದಿಯಲ್ಲಿ ಸಾಗುವ ಭರವಸೆ ಮೂಡಿಸಿದ್ದಾರೆ. ಅಂದ ಹಾಗೆ ಅವರ ಅಭಿಯಾನ ಆರಂಭವಾಗುವುದು ಬೆಂಗಳೂರಿನಿಂದ. ಇಲ್ಲಿನ ಸಾಯ್ ಆವರಣದಲ್ಲಿ ನಡೆಯುತ್ತಿರುವ ಹಾಕಿ ಶಿಬಿರದಲ್ಲಿ ಅವರು ಏಪ್ರಿಲ್ 18ರಿಂದ ಕಾಣಿಸಿಕೊಳ್ಳಲಿದ್ದಾರೆ. ಅವರ ಗುತ್ತಿಗೆ 2020ರ ವರೆಗೆ ಇದ್ದು ಒಲಿಂಪಿಕ್ಸ್ ಮತ್ತು ವಿಶ್ವಕಪ್‌ನಲ್ಲಿ ತಂಡ ಸಾಧನೆ ಮಾಡಿದರೆ ಗುತ್ತಿಗೆ ಮುಂದುವರಿಯಲಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !