ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಏಷ್ಯಾ ಕಪ್ ಮಹಿಳೆಯರ ಹಾಕಿ ಸೆಮಿಫೈನಲ್ ಇಂದು: ಸವಿತಾ ಬಳಗಕ್ಕೆ ಕೊರಿಯಾ ಸವಾಲು

ಚೀನಾ –ಜಪಾನ್ ಹಣಾಹಣಿ
Last Updated 25 ಜನವರಿ 2022, 19:31 IST
ಅಕ್ಷರ ಗಾತ್ರ

ಮಸ್ಕತ್: ಹಾಲಿ ಚಾಂಪಿಯನ್ ಭಾರತ ತಂಡವು ಬುಧವಾರ ನಡೆಯಲಿರುವ ಏಷ್ಯಾ ಕಪ್ ಮಹಿಳೆಯರ ಹಾಕಿ ಟೂರ್ನಿಯ ಸೆಮಿಫೈನಲ್‌ನಲ್ಲಿ ಕೊರಿಯಾ ಸವಾಲನ್ನು ಎದುರಿಸಲಿದೆ.

ಟೂರ್ನಿಯ ಎ ಗುಂಪಿನ ಮೊದಲ ಪಂದ್ಯದಲ್ಲಿ ಮಲೇಷ್ಯಾ ವಿರುದ್ಧ ಜಯಿಸಿದ್ದ ಸವಿತಾ ಪೂನಿಯಾ ಬಳಗವು ಎರಡನೇ ಹಣಾಹಣಿಯಲ್ಲಿ ಜಪಾನ್ ಎದುರು ಸೋತಿತ್ತು. ಅದರ ನಂತರ ಪುಟಿದೆದ್ದ ತಂಡವು ಸಿಂಗಪುರ ವಿರುದ್ಧ 9–1ರಿಂದ ಭರ್ಜರಿ ಜಯ ಸಾಧಿಸಿ ನಾಲ್ಕರ ಘಟ್ಟಕ್ಕೆ ಪ್ರವೇಶಿಸಿತು.

ಇದೀಗ ಎಫ್‌ಐಎಚ್‌ ರ‍್ಯಾಂಕ್‌ನಲ್ಲಿ ಒಂಬತ್ತನೇ ಸ್ಥಾನದಲ್ಲಿರುವ ತಂಡವು 11ನೇ ಸ್ಥಾನದಲ್ಲಿರುವ ಕೊರಿಯಾವನ್ನು ಎದುರಿಸಲಿದೆ.

ಪ್ರಸ್ತುತ ವರ್ಷದಲ್ಲಿ ಭಾರತ ತಂಡವು ಮಹತ್ವದ ಟೂರ್ನಿಗಳಲ್ಲಿ ಆಡಲಿದೆ.ಬರ್ಮಿಂಗ್‌ಹ್ಯಾಮ್ ಕಾಮನ್‌ವೆಲ್ತ್ ಗೇಮ್ಸ್‌, ಏಷ್ಯನ್ ಗೇಮ್ಸ್‌, ಎಫ್‌ಐಎಚ್‌ ವಿಶ್ವಕಪ್ ಮತ್ತು ಎಫ್‌ಐಎಚ್‌ ಪ್ರೊ ಲೀಗ್‌ನಲ್ಲಿ ತಂಡವು ಆಡಲಿದೆ.

ಅದರಿಂದಾಗಿ ಈ ಟೂರ್ನಿಯಲ್ಲಿ ಪ್ರಶಸ್ತಿ ಗೆದ್ದರೆ ಮುಂದಿನ ಸ್ಪರ್ಧೆಗಳಲ್ಲಿ ತಂಡದ ಆತ್ಮವಿಶ್ವಾಸ ಹೆಚ್ಚಲಿದೆ. ಆದ್ದರಿಂದ ತಂಡವು ಸೆಮಿಫೈನಲ್‌ನಲ್ಲಿ ಗೆಲ್ಲುವತ್ತ ಚಿತ್ತ ನೆಟ್ಟಿದೆ. ಹೋದ ವರ್ಷ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ನಾಲ್ಕನೇ ಸ್ಥಾನ ಪಡೆದು ಇತಿಹಾಸ ರಚಿಸಿದ್ದ ಭಾರತದ ವನಿತೆಯರು ಪ್ಯಾರಿಸ್‌ ಒಲಿಂಪಿಕ್ಸ್‌ಗೆ ಅರ್ಹತೆ ಗಿಟ್ಟಿಸಲು ಈ ವರ್ಷದ ಮಹತ್ವದ ಟೂರ್ನಿಗಳಲ್ಲಿ ಗೆಲ್ಲುವುದು ಮಹತ್ವದ್ದಾಗಲಿದೆ.

ಹೋದ ಪಂದ್ಯದಲ್ಲಿ ಡ್ರ್ಯಾಗ್‌ಫ್ಲಿಕ್ ಪರಿಣತ ಆಟಗಾರ್ತಿ ಗುರ್ಜಿತ್ ಕೌರ್ ಹ್ಯಾಟ್ರಿಕ್ ದಾಖಲಿಸಿದ್ದರು.ವಂದನಾ ಕಟಾರಿಯಾ, ನವನೀತ್ ಕೌರ್ ಅವರು ಉತ್ತಮ ಲಯದಲ್ಲಿದ್ದಾರೆ. ಆದರೂ ಲಭಿಸಿದ 15 ಪೆನಾಲ್ಟಿ ಕಾರ್ನರ್‌ಗಳಲ್ಲಿ ಕೇವಲ ಮೂರರಲ್ಲಿ ಮಾತ್ರ ಗೋಲು ಗಳಿಸಲು ತಂಡಕ್ಕೆ ಸಾಧ್ಯವಾಗಿತ್ತು. ಈ ಲೋಪವನ್ನು ಸರಿಪಡಿಸಿಕೊಂಡರೆ ತಂಡವು ಕೊರಿಯಾದ ರಕ್ಷಣಾ ಗೋಡೆಯನ್ನು ಕೆಡವಲು ಸಾಧ್ಯವಿದೆ.

2019ರಲ್ಲಿ ಭಾರತ ಮತ್ತು ಕೊರಿಯಾ ತಂಡಗಳು ಮೂರು ಪಂದ್ಯಗಳನ್ನು ಆಡಿದ್ದವು. ಆಗ ಭಾರತ ತಂಡವು 1–2ರಿಂದ ಸರಣಿಯಲ್ಲಿ ಹಿನ್ನಡೆ ಅನುಭವಿಸಿತ್ತು.

ಬುಧವಾರ ನಡೆಯುವ ಇನ್ನೊಂದು ಸೆಮಿಫೈನಲ್‌ನಲ್ಲಿ ಜಪಾನ್ ತಂಡವು ಚೀನಾ ವಿರುದ್ಧ ಸೆಣಸಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT