ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೂನಿಯರ್ ವಿಶ್ವಕಪ್ ಹಾಕಿ: ಪೋಲೆಂಡ್‌ ಎದುರಾಳಿ, ಭಾರತಕ್ಕೆ ಗೆಲುವು ಅನಿವಾರ್ಯ

Last Updated 26 ನವೆಂಬರ್ 2021, 14:09 IST
ಅಕ್ಷರ ಗಾತ್ರ

ಭುವನೇಶ್ವರ: ಹಾಲಿ ಚಾಂಪಿಯನ್ ಭಾರತ ತಂಡವು ಜಯ ಅನಿವಾರ್ಯವಾಗಿರುವ ಪಂದ್ಯದಲ್ಲಿ ಪೋಲೆಂಡ್‌ ತಂಡವನ್ನು ಎದುರಿಸಲಿದೆ. ಜೂನಿಯರ್ ಹಾಕಿ ವಿಶ್ವಕಪ್ ಟೂರ್ನಿಯ ‘ಬಿ’ ಗುಂಪಿನ ಈ ಪಂದ್ಯವು ಶನಿವಾರ ನಡೆಯಲಿದೆ.

ಟೂರ್ನಿಯ ಮೊದಲ ಪಂದ್ಯದಲ್ಲಿ ಫ್ರಾನ್ಸ್ ವಿರುದ್ಧ 4–5ರಿಂದ ಮಣಿದಿದ್ದ ಭಾರತ, ಬಳಿಕ ಕೆನಡಾ ತಂಡವನ್ನು 13–1 ಅಂತರದಿಂದ ಮಣಿಸಿತ್ತು. ಆದರೆ ಕ್ವಾರ್ಟರ್‌ಫೈನಲ್ ಹಂತಕ್ಕೇರಲು ವಿವೇಕ್ ಪ್ರಸಾದ್ ಸಾಗರ್ ನಾಯಕತ್ವದ ತಂಡಕ್ಕೆ ಈ ಪಂದ್ಯದಲ್ಲಿ ಗೆಲುವು ಅಗತ್ಯವಾಗಿದೆ.

ಒಂದು ಜಯ ಹಾಗೂ ಸೋಲಿನೊಂದಿಗೆ ಭಾರತ ತಂಡವು ‘ಬಿ’ ಗುಂಪಿನಲ್ಲಿ ಎರಡನೇ ಸ್ಥಾನದಲ್ಲಿದೆ. ಗೋಲುಗಳ ಅಂತರದ ಆಧಾರದಲ್ಲಿ ಪೋಲೆಂಡ್‌ ಮೊದಲ ಸ್ಥಾನದಲ್ಲಿದೆ.

ಭಾರತವು ಒಂದು ವೇಳೆ ಕ್ವಾರ್ಟರ್‌ಫೈನಲ್‌ ತಲುಪಿದರೆ, ಅಗ್ರಶ್ರೇಯಾಂಕದ ಬ್ರೆಜಿಲ್ ತಂಡವನ್ನು ಎದುರಿಸಲಿದೆ.

‘ಫ್ರಾನ್ಸ್ ಎದುರಿನ ಸೋಲು ಮುಗಿದುಹೋದ ಕಥೆ. ಪ್ರಶಸ್ತಿ ಗೆಲುವಿನ ಆಸೆ ಈಡೇರಬೇಕಾದರೆ ಮುಂದಿನ ಎಲ್ಲ ಪಂದ್ಯಗಳನ್ನು ನಾವು ಗೆಲ್ಲಲೇಬೇಕು. ಅದಕ್ಕಿಂತ ಮೊದಲು ಪೋಲೆಂಡ್‌ ಎದುರಿನ ಪಂದ್ಯವನ್ನು ಜಯಿಸುವತ್ತ ಗಮನಹರಿಸಬೇಕಾಗಿದೆ‘ ಎಂದು ಭಾರತ ತಂಡದ ಮುಖ್ಯ ಕೋಚ್ ಗ್ರಹಾಂ ರೀಡ್‌ ಹೇಳಿದ್ದಾರೆ.

ಆಡಿದ ಎರಡೂ ಪಂದ್ಯಗಳಲ್ಲಿ ಭಾರತ ಗೋಲುಗಳಿಕೆಯ ಹಲವು ಅವಕಾಶಗಳನ್ನು ಸೃಷ್ಟಿಸಿಕೊಂಡಿತ್ತು. ಆದರೆ ಬಹುತೇಕ ಅವಕಾಶಗಳನ್ನು ಗೋಲಾಗಿ ಪರಿವರ್ತಿಸುವಲ್ಲಿ ವಿಫಲವಾಗಿತ್ತು.

ಶುಕ್ರವಾರ ನಡೆದ ಪಂದ್ಯಗಳಲ್ಲಿ ಜರ್ಮನಿ ತಂಡವು 3–2ರಿಂದ ಅರ್ಜೆಂಟೀನಾ ಎದುರು, ನೆದರ್ಲೆಂಡ್ಸ್ 2–3ರಿಂದ ಸ್ಪೇನ್ ಎದುರು, ಕೊರಿಯಾ 5–1ರಿಂದ ಅಮೆರಿಕ ಎದುರು, ದಕ್ಷಿಣ ಆಫ್ರಿಕಾ 5–1ರಿಂದ ಚಿಲಿ ಎದುರು ಗೆಲುವು ಸಾಧಿಸಿದವು.

ಶನಿವಾರ ನಡೆಯುವ ‘ಬಿ‘ ಗುಂಪಿನ ಇನ್ನೊಂದು ಪಂದ್ಯದಲ್ಲಿ ಫ್ರಾನ್ಸ್ –ಕೆನಡಾ ಮುಖಾಮುಖಿಯಾಗಲಿವೆ. ‘ಡಿ’ ಗುಂಪಿನಲ್ಲಿ ಪಾಕಿಸ್ತಾನ–ಈಜಿಪ್ಟ್‌, ‘ಎ’ ಗುಂಪಿನಲ್ಲಿ ದಕ್ಷಿಣ ಆಫ್ರಿಕಾ– ಮಲೇಷ್ಯಾ, ಬೆಲ್ಜಿಯಂ–ಚಿಲಿ ಮುಖಾಮುಖಿಯಾಗಲಿವೆ.

ಪಂದ್ಯ ಆರಂಭ: ರಾತ್ರಿ 7.30

ನೇರ ಪ್ರಸಾರ: watch.hockey ವೆಬ್‌ಸೈಟ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT