ಶನಿವಾರ, ಜುಲೈ 31, 2021
28 °C
ಲಾಕ್‌ಡೌನ್‌ನಿಂದಾಗಿ ಬೆಂಗಳೂರಿನ ಸಾಯ್‌ ಕೇಂದ್ರದಲ್ಲಿ ‘ಬಂಧಿ’ಯಾಗಿದ್ದರು

ಮನೆಗಳತ್ತ ಮುಖ ಮಾಡಿದ ಹಾಕಿಪಟುಗಳು

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಕೊರೊನಾ ವೈರಾಣು ಹರಡುವುದನ್ನು ತಡೆಯುವ ಸಲುವಾಗಿ ಜಾರಿಗೊಳಿಸಿದ್ದ ಲಾಕ್‌ಡೌನ್‌ನಿಂದಾಗಿ ಇಲ್ಲಿನ ಭಾರತೀಯ ಕ್ರೀಡಾ ಪ್ರಾಧಿಕಾರದಲ್ಲಿ (ಸಾಯ್‌) ‘ಬಂಧಿ’ಗಳಾಗಿದ್ದ ಭಾರತ ಪುರುಷರ ಮತ್ತು ಮಹಿಳಾ ಹಾಕಿ ತಂಡದ ಸದಸ್ಯರು ಕೊನೆಗೂ ತಮ್ಮ ಮನೆಗಳತ್ತ ಮುಖ ಮಾಡಿದ್ದಾರೆ.

ಸುಮಾರು ಎರಡು ತಿಂಗಳ ಕಾಲ ಸಾಯ್‌ ಕೇಂದ್ರದಲ್ಲಿ ನಾಲ್ಕು ಗೋಡೆಗಳ ಮಧ್ಯೆಯೇ ಇದ್ದು ಬೇಸರಗೊಂಡಿದ್ದ ಕ್ರೀಡಾಪಟುಗಳು, ಮನೆಗಳಿಗೆ ಹೋಗಲು ಅನುಮತಿ ನೀಡುವಂತೆ ಇತ್ತೀಚೆಗೆ ಕೇಂದ್ರ ಕ್ರೀಡಾ ಸಚಿವ ಕಿರಣ್‌ ರಿಜಿಜು ಅವರಿಗೆ ಮನವಿ ಮಾಡಿಕೊಂಡಿದ್ದರು.

‘ಕ್ರೀಡಾಪಟುಗಳಿಗೆ ಒಂದು ತಿಂಗಳ ವಿರಾಮ ನೀಡಲಾಗಿದೆ. ಗೋಲ್‌ಕೀಪರ್‌ ಸೂರಜ್‌ ಕರ್ಕೆರಾ, ವಂದನಾ ಕಟಾರಿಯಾ, ಸುಶೀಲಾ ಚಾನು ಮತ್ತು ಲಾಲ್ರೆಮ್‌ಸಿಯಾಮಿ ಅವರನ್ನು ಬಿಟ್ಟು ಉಳಿದವರೆಲ್ಲಾ ಶುಕ್ರವಾರ ಬೆಳಿಗ್ಗೆ ತಮ್ಮ ಮನೆಗಳತ್ತ ಪ್ರಯಾಣ ಬೆಳೆಸಿದ್ದಾರೆ’ ಎಂದು ಹಾಕಿ ಇಂಡಿಯಾದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

‘ಮಹಾರಾಷ್ಟ್ರದಲ್ಲಿ ಕೋವಿಡ್‌ ಪ್ರಕರಣಗಳು ಹೆಚ್ಚಿರುವ ಕಾರಣ ಮುಂಬೈ ನಿವಾಸಿಯಾಗಿರುವ ಸೂರಜ್‌ ಅವರು ತವರಿಗೆ ಹೋಗಿಲ್ಲ. ಮಣಿಪುರದ ಸುಶೀಲಾ, ಉತ್ತರಾಖಂಡದ ವಂದನಾ ಹಾಗೂ ಮಿಜೋರಾಂನ ಲಾಲ್ರೆಮ್‌ಸಿಯಾಮಿ ಅವರಿಗೂ ಊರಿಗೆ ಹೋಗಲು ಆಗುತ್ತಿಲ್ಲ. ಅಂತರರಾಷ್ಟ್ರೀಯ ವಿಮಾನಯಾನದ ಮೇಲೆ ನಿರ್ಬಂಧ ಹೇರಿರುವ ಕಾರಣ ಪುರುಷರ ತಂಡದ ಮುಖ್ಯ ಕೋಚ್‌ ಗ್ರಹಾಂ ರೀಡ್‌ ಅವರೂ ಸ್ವದೇಶಕ್ಕೆ ಹೋಗಲು ಆಗದೆ ಪರಿತಪಿಸಬೇಕಾಗಿದೆ. ಇವರೆಲ್ಲರೂ ಸಾಯ್‌ ಕೇಂದ್ರದಲ್ಲೇ ಉಳಿಯಲಿದ್ದಾರೆ’ ಎಂದು ಅವರು ಮಾಹಿತಿ ನೀಡಿದ್ದಾರೆ.

‘ಮಹಿಳಾ ತಂಡದ ಮುಖ್ಯ ಕೋಚ್‌ ಶೋರ್ಡ್‌ ಮ್ಯಾರಿಜ್‌ ಮತ್ತು ಅನಾಲಿಟಿಕ್‌ ಕೋಚ್‌ ಜಾನ್ನೆಕ್‌ ಸ್ಕಾಪ್‌ಮನ್‌ ಅವರು ಮುಂಬೈ ಮಾರ್ಗವಾಗಿ ನೆದರ್ಲೆಂಡ್ಸ್‌ಗೆ ತೆರಳಲಿದ್ದಾರೆ’ ಎಂದೂ ಅವರು ಹೇಳಿದ್ದಾರೆ.

ಎಲ್ಲಾ ಕ್ರೀಡಾಪಟುಗಳು ಜುಲೈ 19ಕ್ಕೆ ಸಾಯ್‌ ಕೇಂದ್ರಕ್ಕೆ ಮರಳುವ ನಿರೀಕ್ಷೆ ಇದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು