ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

WFI ಅಧ್ಯಕ್ಷರ ವಿರುದ್ಧ ಆರೋಪಗಳ ತನಿಖೆ ಭರವಸೆ; ಧರಣಿ ಕೈಬಿಟ್ಟ ಕುಸ್ತಿಪಟುಗಳು

Last Updated 21 ಜನವರಿ 2023, 20:36 IST
ಅಕ್ಷರ ಗಾತ್ರ

ನವದೆಹಲಿ: ಭಾರತ ಕುಸ್ತಿ ಫೆಡರೇಷನ್‌ (ಡಬ್ಲ್ಯುಎಫ್‌ಐ) ಅಧ್ಯಕ್ಷರ ತಾತ್ಕಾಲಿಕ ಪದಚ್ಯುತಿ, ಅವರ ಮೇಲಿನ ಆರೋಪಗಳ ತನಿಖೆಗೆ ಸಮಿತಿ ನೇಮಕ ಮಾಡಲಾಗುವುದು ಎಂದು ಕೇಂದ್ರ ಸರ್ಕಾರವು ಭರವಸೆ ನೀಡಿದ್ದರಿಂದ ಕುಸ್ತಿಪಟುಗಳು ಧರಣಿ ಕೈಬಿಟ್ಟಿದ್ದಾರೆ.

ವಿನೇಶಾ ಪೋಗಟ್‌, ರವಿ ದಹಿಯಾ ಮತ್ತು ಬಜರಂಗ್‌ ಪೂನಿಯಾ ಅವರನ್ನೊಳಗೊಂಡ ಕುಸ್ತಿಪಟುಗಳು, ಕೇಂದ್ರ ಕ್ರೀಡಾಸಚಿವ ಅನುರಾಗ್ ಠಾಕೂರ್‌ ಜತೆಗಿನ ಸುದೀರ್ಘ ಮಾತುಕತೆಯ ಬಳಿಕ ಧರಣಿ ಕೈಬಿಡುವ ತೀರ್ಮಾನ ಪ್ರಕಟಿಸಿದರು.

‘ಆರೋಪಗಳ ತನಿಖೆಗೆ ಮೇಲುಸ್ತುವಾರಿ ಸಮಿತಿ ರಚಿಸಲಾಗುವುದು. ಸಮಿತಿಯು ಆರು ವಾರಗಳಲ್ಲಿ ತನಿಖೆ ಪೂರ್ಣಗೊಳಿಸಿ ವರದಿ ಸಲ್ಲಿಸಲಿದೆ. ಅದುವರೆಗೂ ಡಬ್ಲ್ಯುಎಫ್‌ಐ ಅಧ್ಯಕ್ಷ ಬ್ರಿಜ್‌ಭೂಷಣ್ ಶರಣ್ ಸಿಂಗ್ ಅಧಿಕಾರದಿಂದ ದೂರವುಳಿದು, ತನಿಖೆಗೆ ಸಹಕರಿಸಲಿದ್ದಾರೆ. ಡಬ್ಲ್ಯುಎಫ್‌ಐನ ದೈನಂದಿನ ಆಡಳಿತವನ್ನು ಮೇಲುಸ್ತುವಾರಿ ಸಮಿತಿ ನೋಡಿಕೊಳ್ಳಲಿದೆ’ ಎಂದು ಶುಕ್ರವಾರ ತಡರಾತ್ರಿ ಕೊನೆಗೊಂಡ ಸಭೆಯ ಬಳಿಕ ಠಾಕೂರ್‌ ತಿಳಿಸಿದರು.

‘ಮೂವರು ಸದಸ್ಯರ ಸಮಿತಿ ರಚನೆ ಸಂಬಂಧ ಠಾಕೂರ್‌, ಕ್ರೀಡಾ ಸಚಿವಾಲಯದ ಕಾರ್ಯದರ್ಶಿ ಸುಜಾತಾ ಚತುರ್ವೇದಿ ಮತ್ತು ಸಾಯ್ ನಿರ್ದೇಶಕ ಸಂದೀಪ್‌ ಪ್ರಧಾನ್‌ ಅವರು ಶನಿವಾರ ಸಭೆ ನಡೆಸಿದ್ದಾರೆ. ಸಮಿತಿಯ ಸದಸ್ಯರ ಹೆಸರನ್ನು ಭಾನುವಾರ ಪ್ರಕಟಿಸಲಾಗುವುದು’ ಎಂದು ಮೂಲಗಳು ಹೇಳಿವೆ.

ಆರೋಪ ಅಲ್ಲಗಳೆದ ಡಬ್ಲ್ಯುಎಫ್‌ಐ: ಅಧ್ಯಕ್ಷರ ವಿರುದ್ಧ ಕುಸ್ತಿಪಟುಗಳು ಮಾಡಿರುವ ಎಲ್ಲ ಆರೋಪಗಳನ್ನು ಡಬ್ಲ್ಯುಎಫ್‌ಐ ತಳ್ಳಿಹಾಕಿದೆ.

‘ಈ ಪ್ರತಿಭಟನೆಯು ಹಾಲಿ ಆಡಳಿತವನ್ನು ವಜಾಗೊಳಿಸಲು ನಡೆಸಿರುವ ರಹಸ್ಯ ಕಾರ್ಯಸೂಚಿಯ ಒಂದು ಭಾಗ’ ಎಂದು ಸರ್ಕಾರದ ನೋಟಿಸ್‌ಗೆ ನೀಡಿದ ಉತ್ತರದಲ್ಲಿ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT