ಶನಿವಾರ, ಡಿಸೆಂಬರ್ 14, 2019
24 °C
ಕಣ್ಣಿಗೆ ಬಟ್ಟೆ ಧರಿಸಿಕೊಂಡು 51.25 ಸೆಕೆಂಡ್‌ನಲ್ಲಿ 400 ಕ್ರಮಿಸಿದ ಬಾಲೆ

ಸ್ಕೇಟಿಂಗ್‌ನಲ್ಲಿ ಗಿನ್ನಿಸ್ ದಾಖಲೆ ನಿರ್ಮಿಸಿದ ಹುಬ್ಬಳ್ಳಿ ಬಾಲೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹುಬ್ಬಳ್ಳಿ: ವಾಣಿಜ್ಯನಗರಿಯ 12 ವರ್ಷದ ಬಾಲೆ ಓಜಲ್ ಎಸ್. ನಲವಡಿ, ಗುರುವಾರ ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ಕೇವಲ 51.25 ಸೆಕೆಂಡ್‌ನಲ್ಲಿ 400 ಮೀಟರ್ ದೂರ ಸ್ಕೇಟಿಂಗ್ ಮಾಡುವ ಮೂಲಕ, ಗಿನ್ನಿಸ್ ದಾಖಲೆ ಸೇರಿದ್ದಾಳೆ.‌

ಇಲ್ಲಿನ ಅಕ್ಷಯ ಕಾಲೊನಿಯ ಟೆಂಡರ್ ಶ್ಯೂರ್ ರಸ್ತೆಯಲ್ಲಿ ಬೆಳಿಗ್ಗೆ ನಡೆದ ಈ ಸಾಧನೆಯನ್ನು ಬ್ರಿಟನ್‌ನ ಗಿನ್ನಿಸ್ ಬುಕ್ ಆಫ್ ರೆಕಾರ್ಡ್ಸ್‌ ವೀಕ್ಷಕ ವಿಕ್ಟರ್ ಫೆನೆಸ್ ದಾಖಲಿಸಿಕೊಂಡರು. ಬಳಿಕ, ಓಜಲ್‌ಗೆ ಪ್ರಮಾಣಪತ್ರ ನೀಡಿ ಮೆಚ್ಚುಗೆ ವ್ಯಕ್ತಪಡಿಸಿದರು.

ನಾನೇ ಮುರಿಯುವೆ: ‘ಈ ಸಾಧನೆಗಾಗಿ, ಅಕ್ಷಯ ಸೂರ್ಯವಂಶಿ ಮಾರ್ಗದರ್ಶನದಲ್ಲಿ ಸತತ ಎರಡು ವರ್ಷದಿಂದ ಕಠಿಣ ಅಭ್ಯಾಸ ಮಾಡುತ್ತಿದ್ದೆ. ನನ್ನ ಈ ದಾಖಲೆಯನ್ನು ಮುಂದೊಂದು ದಿನ ನಾನೇ ಮುರಿಯುತ್ತೇನೆ’ ಎಂದು ಓಜಲ್ ವಿಶ್ವಾಸ ವ್ಯಕ್ತಪಡಿಸಿದಳು.

ಗಿನ್ನಿಸ್ ಬುಕ್ ಆಫ್ ರೆಕಾರ್ಡ್ಸ್‌ನ ವೀಕ್ಷಕ ವಿಕ್ಟರ್ ಫೆನೆಸ್ ಮಾತನಾಡಿ, ‘ಮಹಿಳಾ ವಿಭಾಗದಲ್ಲಿ ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ಅತ್ಯಂತ ವೇಗವಾಗಿ ಸ್ಕೇಟಿಂಗ್ ಮಾಡಿದ ಮೊದಲ ಗಿನ್ನಿಸ್ ದಾಖಲೆ ಇದಾಗಿದೆ’ ಎಂದರು.

ವಿಆರ್‌ಎಲ್ ಕಂಪನಿಯ ಸಿಎಫ್‌ಒ ಸುನೀಲ್ ಎಸ್. ನಲವಡಿ ಹಾಗೂ ದೀಪಾ ಎಸ್. ನಲವಡಿ ಪುತ್ರಿಯಾದ ಓಜಲ್, 7ನೇ ತರಗತಿ ಓದುತ್ತಿದ್ದಾಳೆ. ಏಷ್ಯಾ ಬುಕ್ ಆಫ್ ರೆಕಾರ್ಡ್ಸ್‌, ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್‌ ಸೇರಿದಂತೆ ಇದುವರೆಗೆ 8 ಎಂಟು ದಾಖಲೆಗಳನ್ನು ಬರೆದಿದ್ದಾಳೆ.

ಮಕ್ಕಳ ದಿನಾಚರಣೆಯಂದೇ ‘ಹೆಣ್ಣು ಮಕ್ಕಳನ್ನು ಪ್ರೋತ್ಸಾಹಿಸಿ’ ಎಂಬ ಘೋಷವಾಕ್ಯದೊಂದಿಗೆ ನಡೆದ ಈ ಅಪರೂಪದ ಸಾಧನೆಗೆ, ನೂರಾರು ಸಾರ್ವಜನಿಕರು ಸಾಕ್ಷಿಯಾದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು