ಶನಿವಾರ, ಮಾರ್ಚ್ 25, 2023
25 °C

ಥಾಮಸ್‌–ಊಬರ್ ಕಪ್ ಟೂರ್ನಿ ಮುಂದೂಡಿಕಗೆ ಏಷ್ಯನ್ ದೇಶಗಳೇ ಕಾರಣ: ವಿಮಲ್ ಟೀಕೆ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಡೆನ್ಮಾರ್ಕ್‌ನಲ್ಲಿ ನಡೆಯಬೇಕಾಗಿದ್ದ ಥಾಮಸ್ ಮತ್ತು ಊಬರ್ ಕಪ್ ಬ್ಯಾಡ್ಮಿಂಟನ್ ಟೂರ್ನಿ ಮುಂದೂಡಿಕಗೆ ಏಷ್ಯಾದ ದೇಶಗಳೇ ಕಾರಣ. ಈ ನಡವಳಿಕೆಯಿಂದಾಗಿ ಕೊರೊನಾ ಕಾಲದ ಕ್ರೀಡಾ ಪುನರುತ್ಥಾನಕ್ಕೆ ಹಿನ್ನಡೆಯಾಗಿದೆ ಎಂದು ಅಂತರರಾಷ್ಟ್ರೀಯ ಬ್ಯಾಡ್ಮಿಂಟನ್ ಕೋಚ್ ವಿಮಲ್ ಕುಮಾರ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಅಕ್ಟೋಬರ್ 3 ರಿಂದ ಆರಂಭವಾಗಬೇಕಿದ್ದ ಟೂರ್ನಿಯಿಂದ ಏಷ್ಯಾದ ಪ್ರಮುಖ ಏಳು ರಾಷ್ಟ್ರಗಳ ತಂಡಗಳು ಹಿಂದೆ ಸರಿದಿವೆ. ಅದರಿಂದಾಗಿ ವಿಶ್ವ ಬ್ಯಾಡ್ಮಿಂಟನ್ ಫೆಡರೇಷನ್ ಟೂರ್ನಿಯನ್ನು ಮುಂದೂಡಿದೆ.

ಈ ಕುರಿತು ಪ್ರತಿಕ್ರಿಯಿಸಿರುವ ಬೆಂಗಳೂರಿನ ವಿಮಲ್, ‘ಏಷ್ಯಾದ ತಂಡಗಳ ಈ ನಡೆಯು ತೀರಾ ಬೇಸರದ ಸಂಗತಿಯಾಗಿದೆ. ಆ ದೇಶಗಳಲ್ಲಿ  ಬೇರೆ ಬಹಳಷ್ಟು ಗಂಭೀರ ವಿಷಯಗಳಿವೆ. ಆದರೆ ತಮ್ಮ ಸ್ಥಳೀಯ ಟೂರ್ನಿಗಳನ್ನು ನಡೆಸಿಕೊಳ್ಳುತ್ತಿದ್ದಾರೆ. ಪ್ರತಿಷ್ಠಿತ ಟೂರ್ನಿಯೊಂದರ ಮುಂದೂಡಿಕೆ ಕಾರಣವಾಗುತ್ತಿರುವುದು ಕ್ರೀಡೆಗೆ ಹಿನ್ನಡೆಯಾಗುತ್ತಿದೆ’ ಎಂದರು.

ಕೊರೊನಾ ವೈರಸ್ ಸೃಷ್ಟಿಸಿದ ಬಿಕ್ಕಟ್ಟಿನಿಂದಾಗಿ ಕಳೆದ ಐದು ತಿಂಗಳುಗಳಿಂದ ಯಾವುದೇ ಪ್ರಮುಖ ಬ್ಯಾಡ್ಮಿಂಟನ್ ಟೂರ್ನಿಗಳು ನಡೆದಿರಲಿಲ್ಲ. ಥಾಮಸ್ ಮತ್ತು ಊಬರ್ ಕಪ್ ಮೂಲಕ ಬ್ಯಾಡ್ಮಿಂಟನ್ ಚಟುವಟಿಕೆಗಳಿಗೆ ಚಾಲನೆ ದೊರೆಯುವ ನಿರೀಕ್ಷೆ ಇತ್ತು.

ಈ ಟೂರ್ನಿಯಲ್ಲಿ ಆಡಲು ಭಾರತವು ತನ್ನ ತಂಡಗಳನ್ನು ಈಚೆಗಷ್ಟೇ ಘೋಷಿಸಿತ್ತು. ಅದರಲ್ಲಿ ಪ್ರಮುಖರಾದ ಒಲಿಂಪಿಯನ್ ಪಿ.ವಿ. ಸಿಂಧು, ಸೈನಾ ನೆಹ್ವಾಲ್, ಕೆ. ಶ್ರೀಕಾಂತ್‌, ಪಿ. ಕಶ್ಯಪ್ ಮತ್ತಿತರರು ಇದ್ದರು. ಆದರೆ, ದಕ್ಷಿಣ ಕೊರಿಯಾ, ಇಂಡೊನೇಷ್ಯಾ, ಥಾಯ್ಲೆಂಡ್, ಆಸ್ಟ್ರೇಲಿಯಾ, ತೈಪೆ ಮತ್ತು ಅಲ್ಜಿರಿಯಾ ತಂಡಗಳು ಹಿಂದೆ ಸರಿದಿದ್ದವು. 

‘ವಿಶ್ವದಲ್ಲಿ ಬ್ಯಾಡ್ಮಿಂಟನ್ ಚಟುವಟಿಕೆಗಳಿಗೆ ಮರುಚಾಲನೆ ನೀಡಲು ಇದೊಂದು ಸದವಕಾಶವಾಗಿತ್ತು. ಈ ಆಟದಲ್ಲಿ ಚೀನಾದಷ್ಟು ಬಲಾಢ್ಯರಲ್ಲದಿದ್ದರೂ ಭಾರತವೂ ಟೂರ್ನಿಯಲ್ಲಿ ಆಡಲು ಸಕಾರಾತ್ಮಕವಾಗಿಯೇ ಸ್ಪಂದಿಸಿತ್ತು. ಆದರೆ ಪ್ರಮುಖ ದೇಶಗಳು ಕಣಕ್ಕಿಳಿಯಲು ನಿರಾಕರಿಸಿದರೆ ಬಿಡಬ್ಲ್ಯುಎಫ್‌ ಏನು ಮಾಡಬೇಕು? ಟೂರ್ನಿಗಳನ್ನು ನಡೆಸಲು ಅದಕ್ಕೆ ಸಾಧ್ಯವಾಗುವುದಾದರೂ ಹೇಗೆ? ಎಲ್ಲ ದೇಶಗಳೂ ಸಹಕರಿಸಬೇಕು’ ಎಂದರು.

ಈ ಕುರಿತು ಪ್ರತಿಕ್ರಿಯಿಸಿರುವ  ಆಟಗಾರ ಪಿ. ಕಶ್ಯಪ್, ‘ನಾವಿನ್ನೂ ಗೊಂದಲದಲ್ಲಿದ್ದೇವೆ. ಈ ಪರಿಸ್ಥಿತಿಯಲ್ಲಿ ಮುಂದುವರಿಯುವುದು ಹೇಗೆಂದು ತಿಳಿಯುತ್ತಿಲ್ಲ. ಸೈನಾ ನೆಹ್ವಾಲ್ ಅವರಿಗೆ ಡೆನ್ಮಾರ್ಕ್‌ಗೆ ತೆರಳಲು ವೀಸಾ ಲಭಿಸಿದೆ. ನಾನು ಕೂಡ ಅರ್ಜಿ ಸಲ್ಲಿಸಿದ್ದೇನೆ. ಹಲವಾರು ಪ್ರಶ್ನೆಗಳು ಕಾಡುತ್ತಿವೆ. ಅಲ್ಲಿಗೆ ಹೋಗಿ ಇಳಿದ ನಂತರ ನಾನು ಕೊರೊನಾ ಪಾಸಿಟಿವ್ ಎಂದು ಖಚಿತವಾದರೆ ಏನು ಗತಿ,  ಚಿಕಿತ್ಸೆ ನೀಡುವ ಹೊಣೆ ಮತ್ತು ವೆಚ್ಚಗಳನ್ನು ಭರಿಸುವವರು ಯಾರು’ ಎಂದು ಕಶ್ಯಪ್ ಪ್ರಶ್ನಿಸುತ್ತಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು