ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

27 ದಿನಗಳ ಹಿಂದೆ ಅಪ್ಪು ಭೇಟಿಯನ್ನು ನೆನೆದು ಯತಿರಾಜ್ ಭಾವುಕ ಸಂದೇಶ

Last Updated 29 ಅಕ್ಟೋಬರ್ 2021, 13:32 IST
ಅಕ್ಷರ ಗಾತ್ರ

ಬೆಂಗಳೂರು: ನಟ ಪುನೀತ್ ರಾಜ್‌ಕುಮಾರ್ ನಿಧನಕ್ಕೆ ಪ್ಯಾರಾಲಿಂಪಿಕ್ಸ್ ಬ್ಯಾಡ್ಮಿಂಟನ್ ಬೆಳ್ಳಿ ಪದಕ ವಿಜೇತ, ನೋಯ್ಡಾ ಜಿಲ್ಲಾಧಿಕಾರಿ ಸುಹಾಸ್ ಯತಿರಾಜ್ ಕಂಬನಿ ಮಿಡಿದಿದ್ದಾರೆ. ಅಲ್ಲದೆ 27 ದಿನಗಳ ಹಿಂದೆ ಪುನೀತ್ ರಾಜ್‌ಕುಮಾರ್ ಭೇಟಿಯನ್ನು ನೆನೆದು ಭಾವುಕ ಸಂದೇಶವನ್ನು ಹಂಚಿದ್ದಾರೆ.

ಪ್ರಿಯ ಅಪ್ಪು,

ಜೀವನದ ಪ್ರಯಾಣದಲ್ಲಿ ನನ್ನ ಪ್ರೀತಿಯ ಗೆಳೆಯನಿಗೆ ಇಷ್ಟು ಬೇಗ ವಿದಾಯ ಹೇಳುತ್ತೇನೆ ಎಂದು ಕನಸಿನಲ್ಲೂ ನೆನೆದಿರಲಿಲ್ಲ.

'ಅಣ್ಣಾವ್ರು ಹೇಳಿದ ಹಾಗೆ ಆಡಿಸುವಾತ ಬೇಸರ ಮೂಡಿ ಆಟ ಮುಗಿಸಿದ, ಕಂಬನಿ ಧಾರೆ ಹರಿಸಲು ನನ್ನ ಜೀವ ಉಳಿಸಿದ'

ಕರ್ನಾಟಕದ ಸಂಸ್ಕೃತಿಯ ರಾಯಭಾರಿಯಾಗಿ, ಕರುನಾಡ ಜನರ ಕಣ್ಮಣಿಯಾಗಿ, ತಂದೆಗೆ ತಕ್ಕ ಮಗನಾಗಿ, ಕರುಣಾಮಯಿಯಾಗಿ, ಸಹೃದಯಿಯಾಗಿ, ಸರ್ವೋತ್ತಮನಾದ ನಿನಗೆ ವಿಧಿಯು ಅಂತಿಮ ಕಾಲಕ್ಕೆ ಕರೆದೊಯ್ದಿದೆ.

27 ದಿನಗಳ ಹಿಂದೆ ಅಕ್ಟೋಬರ್ 2ರಂದು, ನಿಮ್ಮ ಜೊತೆ ಮೂರು ಗಂಟೆಗೂ ಹೆಚ್ಚು ಸಮಯ ಕಳೆಯುವ ಸೌಭಾಗ್ಯ ಕೊಟ್ಟಿರಿ. ಪ್ರೀತಿ ಮತ್ತು ಸನ್ಮಾನ ಎರಡನ್ನು ಕೊಟ್ಟಿರಿ. ಜೊತೆಗೆ ದೆಹಲಿಗೆ ಬಂದಾಗ ಸಿಗುವೆ ಎಂದು ಮಾತು ಕೊಟ್ಟಿರಿ.

ಆ ಮಾತೆ ನೆನಪಾಗಿದೆ...

ಸ್ವಯಂ ಸಾಧಕರಾದ ನೀವು ಪ್ಯಾರಾ ಒಲಿಂಪಿಕ್ಸ್ ಸಾಧನೆಯ ಬಗ್ಗೆ ಆಸಕ್ತಿಯಿಂದ ವಿಚಾರಿಸಿದ್ದೀರಿ. ಇಷ್ಟು ಸಾಧನೆ ಮಾಡಿನೂ ಹೇಗೆ ಅಷ್ಟು ಸರಳವಾಗಿ ಇದ್ದೀರಾ ಎಂದು ನಾನು ನಿಮ್ಮನ್ನು ಕೇಳಿದೆ. ನೀವು ನಕ್ಕು ಬಿಟ್ರಿ...

ಆ ನಗುವೆ ನೆನಪಾಗಿದೆ...

ಕರುನಾಡ ಸಿರಿನುಡಿಯ ನಂದಾದೀಪವಾಗಿ ನೀ ಎಂದೆಂದೂ ಬಾಳಲಿ ಎಂದು ನನ್ನಂತ ಕೋಟಿ ಕನ್ನಡಿಗರು ಪ್ರಾರ್ಥಿಸಿದ್ದಾರೆ. ಕೋಟಿ ಹೃದಯ ಗೆದ್ದ ನಿನ್ನ ಹೃದಯಕ್ಕೆ, ಎಲ್ಲಾ ಹೃದಯಗಳ ಶಕ್ತಿ ಕೊಟ್ಟು ಆ ದೇವರು ಕಾಪಾಡಲಿ ಎಂದು ಪ್ರಾರ್ಥಿಸಿದೆ. ಆ ಪ್ರಾರ್ಥನೆಯೇ ನೆನಪಾಗಿದೆ.

ನಿನ್ನ ನುಡಿಯನ್ನು, ನಿನ್ನ ನಗುವನ್ನು, ಹೃದಯದ ಒಂದು ಮೂಲೆಯಲ್ಲಿ ಸದಾ ಬಚ್ಚಿಟ್ಟುಕೊಂಡು ಕಾಪಾಡುವೆ.

ನಿನ್ನ ಒಲವನ್ನು, ನಿನ್ನ ಗುಣವನ್ನು, ಪ್ರತಿದಿನವೂ ನೆನೆದು ಮೆರೆದಾಡುವೆ.

ನೀ ಹೋಗಿ ಬಾ ಗೆಳೆಯ,

- ಸುಹಾಸ್ ಯತಿರಾಜ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT