ಶನಿವಾರ, ಆಗಸ್ಟ್ 17, 2019
24 °C

ಬ್ಯಾಡ್ಮಿಂಟನ್‌: ಕ್ವಾರ್ಟರ್‌ ಫೈನಲ್‌ಗೆ ಭಾರತ

Published:
Updated:

ನವದೆಹಲಿ (ಪಿಟಿಐ): ಭಾರತ ತಂಡದವರು ಚೀನಾದ ಸುಜೌನಲ್ಲಿ ನಡೆಯುತ್ತಿರುವ ಏಷ್ಯಾ ಜೂನಿಯರ್‌ ಬ್ಯಾಡ್ಮಿಂಟನ್‌ ಚಾಂಪಿಯನ್‌ಷಿಪ್‌ನ (ಮಿಶ್ರ ತಂಡ ವಿಭಾಗ) ಕ್ವಾರ್ಟರ್‌ ಫೈನಲ್‌ನಲ್ಲಿ ಇಂಡೊನೇಷ್ಯಾ ಎದುರು ಹೋರಾಡಲಿದ್ದಾರೆ.

ಭಾನುವಾರ ನಡೆದ ತನ್ನ ಕೊನೆಯ ಲೀಗ್‌ ಪಂದ್ಯದಲ್ಲಿ ಭಾರತ 1–4ರಲ್ಲಿ ದಕ್ಷಿಣ ಕೊರಿಯಾ ಎದುರು ಮಣಿಯಿತು. ಇದರೊಂದಿಗೆ ‘ಸಿ’ ಗುಂಪಿನಲ್ಲಿ ಎರಡನೇ ಸ್ಥಾನ ಪಡೆದು ಎಂಟರ ಘಟ್ಟ ಪ್ರವೇಶಿಸಿತು.

ಬಾಲಕರ ಸಿಂಗಲ್ಸ್‌ ವಿಭಾಗದಲ್ಲಿ ಕಣಕ್ಕಿಳಿದಿದ್ದ ಮೈಸ್ನಮ್‌ ಮೆಯಿರಬಾ ಭಾರತಕ್ಕೆ ಮುನ್ನಡೆ ತಂದುಕೊಟ್ಟರು.

ಮೆಯಿರಬಾ 21–19, 19–21, 21–18ರಲ್ಲಿ ಹೆಯೊನ್‌ ಸೆವುಂಗ್‌ ಪಾರ್ಕ್‌ ಎದುರು ಗೆದ್ದರು. ಈ ಹೋರಾಟ 1 ಗಂಟೆ 32 ನಿಮಿಷ ನಡೆಯಿತು.

ನಂತರದ ನಾಲ್ಕು ಪಂದ್ಯಗಳಲ್ಲಿ ಭಾರತದ ಸ್ಪರ್ಧಿಗಳು ನಿರಾಸೆ ಕಂಡರು.

ಮಿಶ್ರ ಡಬಲ್ಸ್‌ನಲ್ಲಿ ಡಿಂಕು ಸಿಂಗ್‌ ಮತ್ತು ರಿತಿಕಾ ಠಾಕರ್‌ 21–19, 12–21, 12–21ರಲ್ಲಿ ಡಾಂಗ್‌ ಜು ಕಿ ಮತ್ತು ಇವುನ್‌ ಜಿ ಲೀ ಎದುರು ಮಣಿದರು.

ಬಾಲಕಿಯರ ಡಬಲ್ಸ್‌ನಲ್ಲಿ ತನಿಶಾ ಕ್ರಾಸ್ಟೊ ಮತ್ತು ತ್ರಿಷಾ ಜೋಲಿ 16–21, 21–16, 12–21ರಲ್ಲಿ ಯಂಗ್‌ ಬಿನ್‌ ಜಿ ಮತ್ತು ಇವುನ್‌ ಜಿ ಲೀ ವಿರುದ್ಧ ಪರಾಭವಗೊಂಡರು.

ಬಾಲಕರ ಡಬಲ್ಸ್‌ನಲ್ಲಿ ಇಶಾನ್‌ ಭಟ್ನಾಗರ್‌ ಮತ್ತು ವಿಷ್ಣುವರ್ಧನ್‌ 17–21, 15–21 ನೇರ ಗೇಮ್‌ಗಳಿಂದ ಡಾಂಗ್‌ ಜು ಕೀ ಮತ್ತು ಜುನ್‌ ಯಂಗ್‌ ಕಿಮ್‌ ಎದುರು ಶರಣಾದರು.

ಬಾಲಕಿಯರ ಸಿಂಗಲ್ಸ್‌ನಲ್ಲಿ ಕಣದಲ್ಲಿದ್ದ ಮಾಳವಿಕಾ ಬಾನ್ಸೋಡ್‌ 10–21, 8–21ರಲ್ಲಿ ಗಾ ಲಾಮ್‌ ಕಿಮಿನ್‌ ವಿರುದ್ಧ ಸೋಲೊಪ್ಪಿಕೊಂಡರು.

Post Comments (+)