ಏಷ್ಯಾ ಬ್ಯಾಸ್ಕೆಟ್‌ಬಾಲ್‌: ಭಾರತಕ್ಕೆ ಚಾಂಪಿಯನ್‌ ಪಟ್ಟ

7
18 ವರ್ಷದೊಳಗಿನ ಬಾಲಕಿಯರ ಏಷ್ಯಾ ಬ್ಯಾಸ್ಕೆಟ್‌ಬಾಲ್; ಎ ವಿಭಾಗಕ್ಕೆ ಆತಿಥೇಯರ ಲಗ್ಗೆ

ಏಷ್ಯಾ ಬ್ಯಾಸ್ಕೆಟ್‌ಬಾಲ್‌: ಭಾರತಕ್ಕೆ ಚಾಂಪಿಯನ್‌ ಪಟ್ಟ

Published:
Updated:
Deccan Herald

ಬೆಂಗಳೂರು: ಚುರುಕಿನ ಆಟದ ಮೂಲಕ ಎದುರಾಳಿ ತಂಡವನ್ನು ಕಂಗೆಡಿಸಿದ ಭಾರತದ ಆಟಗಾರ್ತಿಯರು ಲಭಿಸಿದ ಅವಕಾಶಗಳನ್ನು ಸದುಪಯೋಗಪಡಿಸಿಕೊಂಡರು. ಈ ಮೂಲಕ 18 ವರ್ಷದೊಳಗಿನ ಬಾಲಕಿಯರ ಏಷ್ಯಾ ಬ್ಯಾಸ್ಕೆಟ್‌ಬಾಲ್ ಚಾಂಪಿಯನ್‌ಷಿಪ್‌ನ ಫೈನಲ್‌ ಪಂದ್ಯದಲ್ಲಿ ಗೆದ್ದರು.

‘ಬಿ’ ವಿಭಾಗದ ಚಾಂಪಿಯನ್ ಪಟ್ಟ ಅಲಂಕರಿಸಿದ ತಂಡ ‘ಎ’ ವಿಭಾಗಕ್ಕೆ ಬಡ್ತಿ ಪಡೆಯಿತು. ಕನ್ನಡತಿ ಹರ್ಷಿತಾ ಕಲ್ಲೇಟಿರ ಬೋಪಯ್ಯ ಅವರ ಆಲ್‌ರೌಂಡ್ ಸಾಮರ್ಥ್ಯ, ದರ್ಶಿನಿ ತಿರುವಕ್ಕರಸು ಮತ್ತು ನಾಯಕಿ ಪುಷ್ಪಾ ಸೆಂಥಿಲ್ ಕುಮಾರ್‌ ಅವರ ಮೋಹಕ ಆಟ, ಭಾರತದ ಗೆಲುವಿಗೆ ಕಾರಣವಾಯಿತು.

ಮೊದಲ ನಿಮಿಷಗಳಲ್ಲಿ ಉಭಯ ತಂಡಗಳು ರಕ್ಷಣಾತ್ಮಕ ಆಟಕ್ಕೆ ಮೊರೆ ಹೋದವು. ಐದನೇ ನಿಮಿಷದಲ್ಲಿ ಪಂದ್ಯದ ಮೊದಲ ಪಾಯಿಂಟ್ ಗಳಿಸುವುದರೊಂದಿಗೆ ಕಜಕಸ್ತಾನಕ್ಕೆ ಜೀನಿಯಾ ಅಬ್ದುರಶಿಟೋವ ಮುನ್ನಡೆ ಗಳಿಸಿಕೊಟ್ಟರು. ಮರುನಿಮಿಷದಲ್ಲೇ ತಿರುಗೇಟು ನೀಡಿದ ದರ್ಶಿನಿ ತಿರುವಕ್ಕರಸು ಎರಡು ಪಾಯಿಂಟ್‌ ಗಳಿಸಿ ಭಾರತ ಸಮಬಲ ಸಾಧಿಸಲು ನೆರವಾದರು. ಭಾರತ ನಂತರ ಹೊಂದಾಣಿಕೆಯ ಆಟದ ಮೂಲಕ ಸತತವಾಗಿ ಪಾಯಿಂಟ್‌ ಗಳಿಸಿತು. ಹೀಗಾಗಿ ಮೊದಲ ಕ್ವಾರ್ಟರ್‌ನ ಮುಕ್ತಾಯಕ್ಕೆ 16–9ರಿಂದ ಮುನ್ನಡೆಯಿತು. ಪಂದ್ಯದ ಮೊದಲಾರ್ಧದ ಮುಕ್ತಾಯಕ್ಕೆ ಭಾರತದ ಮುನ್ನಡೆ 32–16ಕ್ಕೇರಿತು.

ಮೂರನೇ ಕ್ವಾರ್ಟರ್‌ನಲ್ಲಿ ನಿರಾಳವಾಗಿ ಆಡಿದ ಭಾರತ 22 ಪಾಯಿಂಟ್ ಬಗಲಿಗೆ ಹಾಕಿಕೊಂಡಿತು. ಈ ಅವಧಿಯಲ್ಲಿ ಎದುರಾಳಿಗಳಿಗೆ ಕೇವಲ 12 ಪಾಯಿಂಟ್‌ ಬಿಟ್ಟುಕೊಟ್ಟಿತು. ಮೂರನೇ ಕ್ವಾರ್ಟರ್‌ನ ಎಂಟನೇ ನಿಮಿಷದಲ್ಲಿ ಅನು ಮರಿಯಾ ಗಳಿಸಿದ ಒಂದು ಪಾಯಿಂಟ್‌ನೊಂದಿಗೆ ಭಾರತ ಅರ್ಧಶತಕವನ್ನು ದಾಟಿತು. ಆಗ ಎದುರಾಳಿ ತಂಡದ ಖಾತೆಯಲ್ಲಿದ್ದದ್ದು 26 ಪಾಯಿಂಟ್ ಮಾತ್ರ.

ಕೊನೆಯ ಅವಧಿಯಲ್ಲಿ ಪಂದ್ಯಕ್ಕೆ ಮರಳಲು ಕಜಕಸ್ತಾನ ಭಾರಿ ಪ್ರಯತ್ನ ನಡೆಸಿತು. ಹೀಗಾಗಿ ಆ ತಂಡಕ್ಕೆ 21 ಪಾಯಿಂಟ್‌ಗಳು ಹರಿದು ಬಂದವು. ಒತ್ತಡವಿಲ್ಲದೆ ಆಡಿದ ಭಾರತದ ಆಟಗಾರ್ತಿಯರು ಈ ಅವಧಿಯಲ್ಲಿ 19 ಪಾಯಿಂಟ್‌ ಗಳಿಸಿದರು; ಪಂದ್ಯ ಗೆದ್ದು ಕುಣಿದು ಕುಪ್ಪಳಿಸಿದರು.

ಸಿರಿಯಾಗೆ ಮೂರನೇ ಸ್ಥಾನ: ಮೂರನೇ ಸ್ಥಾನಕ್ಕಾಗಿ ನಡೆದ ರೋಮಾಂಚಕ ಪೈಪೋಟಿಯಲ್ಲಿ ಹಾಂಕಾಂಗ್‌ ವಿರುದ್ಧ ಸಿರಿಯಾ 75–68ರಿಂದ ಗೆದ್ದಿತು. ಸಿರಿಯಾ ಪರವಾಗಿ ನೌರಾ ಶರಾ 29 ‍ಪಾಯಿಂಟ್‌ ಮತ್ತು 12 ರೀಬೌಂಡ್ ಗಳಿಸಿದರು. ವಿಂಗ್‌ ನಾ ಪೂನ್‌ ಅವರು ಹಾಂಕಾಂಗ್ ಪರ 22 ಪಾಯಿಂಟ್ ಕಲೆ ಹಾಕಿದರು. ಸಿನ್‌ ಟಿನ್‌ ಲೀ ಐದು ರೀಬೌಂಡ್ ಗಳಿಸಿದರು.

ಸ್ಕೋರ್‌ ವಿವರ
ಭಾರತ; ಕಜಕಸ್ತಾನ
ಕ್ವಾರ್ಟರ್‌ 1‍; 16; 9
ಕ್ವಾರ್ಟರ್‌  2; 16; 7
ಕ್ವಾರ್ಟರ್‌ 3; 22; 12
ಕ್ವಾರ್ಟರ್‌ 4; 19; 21

ಬರಹ ಇಷ್ಟವಾಯಿತೆ?

 • 3

  Happy
 • 0

  Amused
 • 1

  Sad
 • 0

  Frustrated
 • 0

  Angry

Comments:

0 comments

Write the first review for this !