ಬುಧವಾರ, ನವೆಂಬರ್ 13, 2019
17 °C
ಒಲಿಂಪಿಕ್ಸ್ ಅರ್ಹತಾ ಸುತ್ತಿನ ಹಾಕಿ ಪಂದ್ಯ: ಭಾರತಕ್ಕೆ 5–1 ಗೋಲುಗಳ ಅಮೋಘ ಗೆಲುವು

ಆತಿಥೇಯರಿಗೆ ಮಣಿದ ಅಮೆರಿಕ

Published:
Updated:
Prajavani

ಭುವನೇಶ್ವರ (ಪಿಟಿಐ): ಎಲ್ಲ ಕ್ವಾರ್ಟರ್‌ಗಳಲ್ಲೂ ಆಧಿಪತ್ಯ ಸ್ಥಾಪಿಸಿದ ಭಾರತ ಮಹಿಳಾ ತಂಡದವರು ಒಲಿಂಪಿಕ್ಸ್ ಅರ್ಹತಾ ಹಾಕಿ ಪಂದ್ಯಗಳ ಮೊದಲ ಹಣಾಹಣಿಯಲ್ಲಿ ಯಶಸ್ಸು ಸಾಧಿಸಿದ್ದಾರೆ. ಕಳಿಂಗ ಕ್ರೀಡಾಂಗಣದಲ್ಲಿ ಶುಕ್ರವಾರ ಸಂಜೆ ನಡೆದ ಪಂದ್ಯದಲ್ಲಿ ಆತಿಥೇಯರು ಅಮೆರಿಕವನ್ನು 5–1 ಗೋಲುಗಳಿಂದ ಮಣಿಸಿದರು.

ವಿಶ್ವ ರ‍್ಯಾಂಕಿಂಗ್‌ನಲ್ಲಿ ಒಂಬತ್ತನೇ ಸ್ಥಾನದಲ್ಲಿರುವ ಭಾರತ ಮಹಿಳೆಯರ ತಂಡ ಅಮೆರಿಕಕ್ಕಿಂತ ನಾಲ್ಕು ಸ್ಥಾನಗಳ ಮುಂದೆ ಇದ್ದರೂ ಈ ವರೆಗೆ ನಡೆದ ಮುಖಾಮುಖಿಯಲ್ಲಿ ಅಮೆರಿಕವೇ ಮೇಲುಗೈ ಸಾಧಿಸಿತ್ತು. ಎರಡೂ ತಂಡಗಳು ಒಟ್ಟು 33 ಬಾರಿ ಮುಖಾಮುಖಿಯಾಗಿದ್ದು 29 ಪಂದ್ಯಗಳಲ್ಲಿ ಅಮೆರಿಕ ಗೆಲುವು ಸಾಧಿಸಿತ್ತು. ಹೀಗಾಗಿ ಒತ್ತಡದಲ್ಲೇ ಭಾರತ ಕಣಕ್ಕೆ ಇಳಿದಿತ್ತು. ಸಾವಿರಾರು ಪ್ರೇಕ್ಷಕರ ಸಮ್ಮುಖದಲ್ಲಿ ನಡೆದ ಪಂದ್ಯದಲ್ಲಿ ರಾಣಿ ರಾಂಪಾಲ್ ಬಳಗ ಕೆಚ್ಚೆದೆಯಿಂದ ಮುನ್ನುಗ್ಗಿತು.

ಆರಂಭದಿಂದಲೇ ಭಾರತ ತಂಡ ಚೆಂಡಿನ ಮೇಲೆ ಆಧಿಪತ್ಯ ಸ್ಥಾಪಿಸುವಲ್ಲಿ ಯಶಸ್ವಿಯಾಯಿತು. ಆದರೆ ಮೊದಲ ಕ್ವಾರ್ಟರ್‌ನಲ್ಲಿ ಅಮೆರಿಕದ ರಕ್ಷಣಾ ವಿಭಾಗದ ತಂತ್ರಗಳನ್ನು ಭೇದಿಸಿ ಗೋಲು ಗಳಿಸುವ ಅವಕಾಶಗಳನ್ನು ಸೃಷ್ಟಿಸಲು ಸಾಧ್ಯವಾಗಲಿಲ್ಲ.

ಗೋಲು ಗಳಿಸುವ ಮೊದಲ ಅವಕಾಶ (7ನೇ ನಿಮಿಷ) ಲಭಿಸಿದ್ದು ಅಮೆರಿಕಕ್ಕೆ. ಆದರೆ ಅಲಿಸಾ ಪಾರ್ಕರ್ ಹೊಡೆದ ಚೆಂಡು ಗೋಲು ಪೆಟ್ಟಿಗೆಯ ಹೊರಗೆ ಚಿಮ್ಮಿತು. 10 ಮತ್ತು 12ನೇ ನಿಮಿಷಗಳಲ್ಲಿ ಲಭಿಸಿದ ಅವಕಾಶಗಳನ್ನೂ ಪ್ರವಾಸಿ ತಂಡ ಕೈಚೆಲ್ಲಿತು. ಎದುರಾಳಿಗಳ ಆಕ್ರಮಣಕ್ಕೆ ಬೆದರಿದ ಭಾರತ ತಂಡ ಒತ್ತಡಕ್ಕೆ ಒಳಗಾಯಿತು. 13ನೇ ನಿಮಿಷದಲ್ಲಿ ಲಿಲಿಮಾ ಮಿನೆಜ್‌ಗೆ ಗ್ರೀನ್ ಕಾರ್ಡ್ ತೋರಿಸಲಾಯಿತು. ಹೀಗಾಗಿ ರಾಣಿ ಬಳಗದ ಆತಂಕ ಹೆಚ್ಚಾಯಿತು.

ಎರಡನೇ ಕ್ವಾರ್ಟರ್‌ನ ಆರಂಭದಲ್ಲೇ ಭಾರತಕ್ಕೆ ಅಮೋಘ ಅವಕಾಶ ಲಭಿಸಿತ್ತು. ಚೆಂಡನ್ನು ನಿಯಂತ್ರಿಸಲಾಗದ ಶರ್ಮಿಳಾ ಪ್ರೇಕ್ಷಕರಲ್ಲಿ ನಿರಾಸೆ ಮೂಡಿಸಿದರು. ದ್ವಿತೀಯ ಕ್ವಾರ್ಟರ್‌ನ 5ನೇ ನಿಮಿಷದ ನಂತರ ಭಾರತ ಪಂದ್ಯದ ಮೇಲೆ ಬಿಗಿ ಹಿಡಿತ ಸಾಧಿಸಿತು. 22ನೇ ನಿಮಿಷದಲ್ಲಿ ಭಾರತಕ್ಕೆ ಮೊದಲ ಪೆನಾಲ್ಟಿ ಅವಕಾಶ ಲಭಿಸಿತು. ಆದರೆ ಚೆಂಡು ಗುರಿ ಸೇರಲಿಲ್ಲ. 29ನೇ ನಿಮಿಷದಲ್ಲಿ ಸಿಕ್ಕಿದ ಮತ್ತೊಂದು ಪೆನಾಲ್ಟಿಯಲ್ಲಿ ಲಿಲಿಮಾ ಮಿನೆಜ್ ಯಶಸ್ಸು ಸಾಧಿಸಿದರು.

ಶರ್ಮಿಳಾ, ರಾಣಿ, ಗುರ್ಜೀತ್ ಮಿಂಚು: 38ನೇ ನಿಮಿಷದಲ್ಲಿ ಭಾರತಕ್ಕೆ 5ನೇ ಪೆನಾಲ್ಟಿ ಲಭಿಸಿತು. ಆದರೆ ಎದುರಾಳಿ ತಂಡದ ಗೋಲ್‌ಕೀಪರ್ ಕೆಲ್ಸಿ ರಾಬಲ್ಸ್‌ ಅಮೋಘ ಸಾಮರ್ಥ್ಯದ ಮೂಲಕ ಚೆಂಡನ್ನು ತಡೆದರು. 40ನೇ ನಿಮಿಷದಲ್ಲಿ ಶರ್ಮಿಳಾ ದೇವಿ ಚಾಣಾಕ್ಷ ಆಟವಾಡಿ ಭಾರತಕ್ಕೆ 2–0 ಮುನ್ನಡೆ ಗಳಿಸಿಕೊಟ್ಟರು. 2 ನಿಮಿಷಗಳ ನಂತರ ರಾಣಿ ರಾಂಪಾಲ್ ಅವರ ಮೋಹಕ ಆಟಕ್ಕೆ ಮತ್ತೊಂದು ಪೆನಾಲ್ಟಿ ಅವಕಾಶ ಲಭಿಸಿತು. ಗುರ್ಜೀತ್ ಕೌರ್ ಅವರ ಪ್ರಭಾವಿ ಡ್ರ್ಯಾಗ್‌ಫ್ಲಿಕ್‌ನಿಂದಾಗಿ ಭಾರತದ ಮುನ್ನಡೆ 3–0ಗೆ ಏರಿತು. 

ಭರವಸೆಯಿಂದಲೇ 4ನೇ ಕ್ವಾರ್ಟರ್‌ನಲ್ಲಿ ಕಣಕ್ಕೆ ಇಳಿದ ಭಾರತ 46 ನಿಮಿಷದಲ್ಲಿ 4ನೇ ಗೋಲು ಗಳಿಸಿತು. ಸಲೀಮಾ ಟೇಟೆ ನಾಜೂಕಿನ ಆಟದ ಮೂಲಕ ತಂದುಕೊಟ್ಟ ಚೆಂಡನ್ನು ನವನೀತ್ ಕೌರ್ ಸೊಗಸಾಗಿ ಗುರಿ ಮುಟ್ಟಿಸಿದರು. 51ನೇ ನಿಮಿಷದಲ್ಲಿ ಮತ್ತೊಂದು ಗೋಲು ಗಳಿಸಿದ ಗುರ್ಜೀತ್ ಕೌರ್ ಮುನ್ನಡೆಯನ್ನು 5–0ಗೆ ಏರಿಸಿದರು. ಪಂದ್ಯದ ಕೊನೆಯ ಹಂತದಲ್ಲಿ ಎರಿನ್‌ ಮ್ಯಾಟ್ಸನ್ ಗಳಿಸಿದ ಗೋಲಿನ ಮೂಲಕ ಅಮೆರಿಕ ಸಮಾಧಾನಪಟ್ಟುಕೊಂಡಿತು.

ಪ್ರತಿಕ್ರಿಯಿಸಿ (+)