ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫಿಬಾ ಮಹಿಳೆಯರ ಏಷ್ಯಾಕಪ್ ಟೂರ್ನಿ: ಭಾರತಕ್ಕೆ ‘ಮೊದಲ’ ಗೆಲುವಿನ ನಿರೀಕ್ಷೆ

ಟೂರ್ನಿಗೆ ಇಂದು ಚಾಲನೆ; ಕರ್ನಾಟಕದ ಮೂವರ ಮೇಲೆ ನಿರೀಕ್ಷೆ
Last Updated 24 ಸೆಪ್ಟೆಂಬರ್ 2019, 7:26 IST
ಅಕ್ಷರ ಗಾತ್ರ

ಬೆಂಗಳೂರು: ಉದ್ಯಾನ ನಗರಿಯಲ್ಲಿ ಮತ್ತೆ ಬ್ಯಾಸ್ಕೆಟ್‌ಬಾಲ್ ವೈಭವ. ಸತತ ಎರಡನೇ ಬಾರಿ ಮಹಿಳೆಯರ ಏಷ್ಯಾ ಕಪ್ ಬ್ಯಾಸ್ಕೆಟ್‌ಬಾಲ್ ಟೂರ್ನಿಗೆ ಆತಿಥ್ಯ ವಹಿಸುತ್ತಿರುವ ಬೆಂಗಳೂರಿನಲ್ಲಿ ಮಂಗಳವಾರದಿಂದ ಏಷ್ಯಾದ ಬಲಿಷ್ಠ ತಂಡಗಳ ಪೈಪೋಟಿ ರಂಗೇರಲಿದೆ.

ಇದೇ ಮೊದಲ ಬಾರಿ ‘ಎ’ ವಲಯಕ್ಕೆ ಬಡ್ತಿ ಪಡೆದಿರುವ ಆತಿಥೇಯ ಭಾರತ ಮಹಿಳಾ ತಂಡದವರು ಚೊಚ್ಚಲ ಚಾಂಪಿಯನ್‌ಷಿಪ್‌ ಮೇಲೆ ಕಣ್ಣಿಟ್ಟು ಕಣಕ್ಕೆ ಇಳಿಯಲಿದ್ದಾರೆ. ಕಳೆದ ಬಾರಿ ಬಿ ವಲಯದಲ್ಲಿದ್ದ ಭಾರತ ಎಲ್ಲ ಪಂದ್ಯಗಳನ್ನು ಗೆದ್ದಿತ್ತು. ಇದೇ ಅಂಗಣದಲ್ಲಿ ನಡೆದ ಫೈನಲ್‌ನಲ್ಲಿ ಕಜಕಸ್ತಾನವನ್ನು 75–73ರಲ್ಲಿ ಮಣಿಸಿತ್ತು. ಹೀಗಾಗಿ ಈ ಬಾರಿ ತಂಡದ ನಿರೀಕ್ಷೆ ಗರಿಗೆದರಿದೆ.

ಭಾರತ ತಂಡದಲ್ಲಿ ಈ ಬಾರಿ ಕರ್ನಾಟಕದ ಮೂವರು ಸ್ಥಾನ ಪಡೆದಿದ್ದಾರೆ. ರೈಲ್ವೆ ತಂಡದಲ್ಲಿ ಆಡುವ ಎಚ್‌.ಬಾಂಧವ್ಯ ಮತ್ತು ಪಟ್ಟೆಮನೆ ನವನೀತ ಅವರೊಂದಿಗೆ ಸೀನಿಯರ್ ತಂಡದಲ್ಲಿ ಮೊದಲ ಬಾರಿ ಮಹತ್ವದ ಅಂತರರಾಷ್ಟ್ರೀಯ ಟೂರ್ನಿಗೆ ಆಯ್ಕೆಯಾಗಿರುವ ಸುಂಟಿಕೊಪ್ಪದ ಕೊಕ್ಕಲೇರ ತಿಮ್ಮಯ್ಯ ಪೋಪಮುದ್ರ ಭರವಸೆ ಮೂಡಿಸಿದ್ದಾರೆ.

‘ಎ’ ಗುಂಪಿನಲ್ಲಿರುವ ಭಾರತಕ್ಕೆ ಏಷ್ಯಾದ ಪ್ರಬಲ ತಂಡಗಳ ಸವಾಲು ಎದುರಾಗಿದೆ. ಸತತ ಮೂರುಪ್ರಶಸ್ತಿ ಗೆದ್ದಿರುವ, ಹಾಲಿ ಚಾಂಪಿಯನ್ ಜಪಾನ್ ಎದುರು ಆರ್.ರಾಜಪ್ರಿಯದರ್ಶಿನಿ ನೇತೃತ್ವದ ಭಾರತ ತಂಡ ಮಂಗಳವಾರ ಮೊದಲ ಪಂದ್ಯವನ್ನು ಆಡಲಿದೆ. ಚುರುಕಿನ ಆಟ ಮತ್ತು ನಿಖರ ತಂತ್ರಗಳಿಗೆ ಹೆಸರಾಗಿರುವ ಜಪಾನ್ ಎದುರು ಭಾರತ ಏಷ್ಯಾಕಪ್‌ನಲ್ಲಿ ಈ ವರೆಗೆ ಗೆಲುವು ಸಾಧಿಸಿಲ್ಲ. ಆರಂಭದ ಪಂದ್ಯದಲ್ಲೇ ಎದುರಾಳಿಗಳ ವಿರುದ್ಧ ‘ಮೊದಲ’ ಜಯ ಸಾಧಿಸಿದರೆ ತಂಡದ ಭರವಸೆ ನೂರ್ಮಡಿಯಾಗಲಿದೆ.

ಏಷ್ಯಾಕಪ್‌ನಲ್ಲಿ ಎರಡು ಬಾರಿ ತಂಡಕ್ಕೆ ಪ್ರಶಸ್ತಿ ಗಳಿಸಿಕೊಟ್ಟ ‍ಪವರ್ ಫಾರ್ವರ್ಡ್‌ ರಮು ಟೊಕಶಿಕಿ ಅವರನ್ನು ಕಟ್ಟಿಹಾಕುವ ಸವಾಲು ಆತಿಥೇಯರಿಗಿದೆ. ಸ್ಮಾಲ್ ಫಾರ್ವರ್ಡ್‌ಗಳಾದ ಯುಕಿ ಮಿಯಜವಾ ಮತ್ತು ಮೊಯ್ಕೊ ನಗವೊಕ ಸೇರಿದಂತೆ ಕಳೆದ ಬಾರಿ ಆಡಿದ್ದ ಐದು ಮಂದಿ ಈ ಬಾರಿಯೂ ಜಪಾನ್ ತಂಡದಲ್ಲಿದ್ದಾರೆ.

ಲಿಮಯೆ, ರಾಜಪ್ರಿಯದರ್ಶಿನಿ ಮೇಲೆ ನಿರೀಕ್ಷೆ: ಭಾರತ ತಂಡದಲ್ಲೂ ಕಳೆದ ಬಾರಿ ಆಡಿದ ಐವರು ಇದ್ದಾರೆ. ಫೈನಲ್‌ನಲ್ಲಿ ಮಿಂಚಿದ್ದ ಮಹಾರಾಷ್ಟ್ರದ ಶ್ರೀನ್ ವಿಜಯ ಲಿಮಯೆ, ನಾಕೌಟ್ ಹಂತದಲ್ಲಿ ಅಮೋಘ ಆಟ ಆಡಿದ್ದ ರಾಜಪ್ರಿಯದರ್ಶಿನಿ, ಅನುಭವಿ ಆಟಗಾರ್ತಿಯರಾದ ಬಾಂಧವ್ಯ, ನವನೀತ ಮುಂತಾದವರ ಮೇಲೆ ತಂಡ ನಿರೀಕ್ಷೆ ಇರಿಸಿದೆ.

ಯುವ ಆಟಗಾರ್ತಿ ಲೋಪಮದ್ರಾ ಅವರು ಫಿಬಾ 16 ವರ್ಷದೊಳಗಿನವರ ಚಾಂಪಿಯನ್‌ಷಿಪ್‌ನಲ್ಲಿ ಆಲ್‌ರೌಂಡ್ ಆಟದ ಮೂಲಕ ಗಮನ ಸೆಳೆದಿದ್ದರು. ಹೀಗಾಗಿ ಇಲ್ಲಿಯೂ ಮಿಂಚುವ ನಿರೀಕ್ಷೆ ಇದೆ. ಕೋಚ್ ಜೊರಾನ್ ವಿಜಿಕ್ ಅವರ ಬಳಿ ತಂಡ 75 ದಿನ ಕಠಿಣ ಅಭ್ಯಾಸ ನಡೆಸಿದೆ.

ಗುಂಪುಗಳು ಮತ್ತು ತಂಡಗಳು

ಎ ಗುಂಪು

ಭಾರತ

ಜಪಾನ್

ದಕ್ಷಿಣ ಕೊರಿಯಾ

ಚೀನಾ ತೈಪೆ

ಬಿ ಗುಂಪು

ಚೀನಾ

ಆಸ್ಟ್ರೇಲಿಯಾ

ನ್ಯೂಜಿಲೆಂಡ್

ಫಿಲಿಪ್ಪೀನ್ಸ್

ಫಿಬಾ ವಿಶ್ವ ರ‍್ಯಾಂಕಿಂಗ್‌

ಭಾರತ 45

ಜಪಾನ್ 10

ಏಷ್ಯಾಕಪ್‌ನಲ್ಲಿ ಉಭಯ ತಂಡಗಳ ಮುಖಾಮುಖಿ

ವರ್ಷ;ಸ್ಥಳ;ಫಲಿತಾಂಶ;ಅಂತರ

2009;ಚೆನ್ನೈ;ಜಪಾನ್‌ಗೆ ಜಯ;108–58

2011;ಜಪಾನ್‌;ಜಪಾನ್‌ಗೆ ಜಯ;79–51

2013;ಥಾಯ್ಲೆಂಡ್;ಜಪಾನ್‌ಗೆ ಜಯ;81–40

2015;ಚೀನಾ;ಜಪಾನ್‌ಗೆ ಜಯ;131–31

ಇಂದಿನ ಪಂದ್ಯಗಳು

ಆಸ್ಟ್ರೇಲಿಯಾ – ಫಿಲಿಪ್ಪೈನ್ಸ್

ಆರಂಭ: ಮಧ್ಯಾಹ್ನ 1.15

ದ.ಕೊರಿಯಾ – ಚೀನಾ ತೈಪೆ

ಆರಂಭ: ಮಧ್ಯಾಹ್ನ 3.30

ಚೀನಾ – ನ್ಯೂಜಿಲೆಂಡ್

ಆರಂಭ: ಸಂಜೆ 5.45

ಭಾರತ – ಜಪಾನ್

ಆರಂಭ: ರಾತ್ರಿ 8.00

ಸ್ಥಳ: ಕಂಠೀರವ ಕ್ರೀಡಾಂಗಣ

ನೇರ ಪ್ರಸಾರ: ಫಿಬಾ.ಟಿವಿ

ಪ್ರಮುಖ ಅಂಶಗಳು

* ಸೆಪ್ಟೆಂಬರ್ 24ರಿಂದ 26ರ ವರೆಗೆ ಗುಂಪು ಹಂತದ ಪಂದ್ಯಗಳು ನಡೆಯಲಿವೆ. ಎ ಮತ್ತು ಬಿ ಗುಂಪಿನಲ್ಲಿ ತಲಾ ನಾಲ್ಕು ತಂಡಗಳಿದ್ದು ಪ್ರತಿ ತಂಡಗಳು ಗುಂಪು ಹಂತದಲ್ಲಿ ಪರಸ್ಪರ ಸೆಣಸಲಿವೆ.

* ಪ್ರತಿ ಗುಂಪಿನಲ್ಲಿ ಅಗ್ರ ಸ್ಥಾನ ಗಳಿಸುವ ತಂಡಗಳು (ಗ್ರೂಪ್ ಚಾಂಪಿಯನ್ಸ್‌) ನೇರವಾಗಿ ಸೆಮಿಫೈನಲ್‌ ಹಂತಕ್ಕೆ ಪ್ರವೇಶಿಸಲಿವೆ. ಎರಡು ಮತ್ತು ಮೂರನೇ ಸ್ಥಾನ ಗಳಿಸುವ ತಂಡಗಳು ಸೆಮಿಫೈನಲ್ ಅರ್ಹತಾ ಪಂದ್ಯಗಳನ್ನು ಆಡಲಿವೆ. (ಎ2–ಬಿ3; ಎ3–ಬಿ2, ಎ4–ಬಿ4).

* ಗುಂಪು ಹಂತದಲ್ಲಿ ಕೊನೆಯ ಸ್ಥಾನ ಗಳಿಸುವ ತಂಡಗಳು ಎ ವಲಯದಲ್ಲಿ ಸ್ಥಾನ ಉಳಿಸಿಕೊಳ್ಳುವುದಕ್ಕಾಗಿ ಪೈಪೋಟಿ ನಡೆಸಲಿವೆ. ಈ ಹಂತದಲ್ಲಿ ಸೋಲುವ ತಂಡ ಎ ವಲಯದಿಂದ ಬಿ ವಲಯಕ್ಕೆ ಹಿಂಬಡ್ತಿ ಪಡೆಯಲಿದೆ.

* ಸೆಪ್ಟೆಂಬರ್ 27ರಂದು ಕ್ವಾಲಿಫೈಯರ್‌ ಮತ್ತು 28ರಂದು ಸೆಮಿಫೈನಲ್‌ ಪಂದ್ಯಗಳು ನಡೆಯಲಿವೆ. 29ರಂದು ಪ್ರಶಸ್ತಿ ಹಂತದ ಪಂದ್ಯ ನಡೆಯಲಿದೆ. ಎಲ್ಲ ಪಂದ್ಯಗಳಿಗೂ ಕಂಠೀರವ ಕ್ರೀಡಾಂಗಣ ಆತಿಥ್ಯ ವಹಿಸಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT