ಭಾನುವಾರ, ಡಿಸೆಂಬರ್ 8, 2019
21 °C
ರಕ್ಷಣಾ ವಿಭಾಗದಲ್ಲಿ ಬಲಿಷ್ಠವಾಗಿರುವ ಕೆನಡಾ ಎದುರು ಗುಂಪು ಹಂತದ ಕೊನೆಯ ಪಂದ್ಯ

ವಿಶ್ವಕಪ್ ಹಾಕಿ: ಕ್ವಾರ್ಟರ್‌ ಫೈನಲ್‌ ಮೇಲೆ ಭಾರತದ ಕಣ್ಣು

Published:
Updated:
Deccan Herald

ಭುವನೇಶ್ವರ: ಕ್ವಾರ್ಟರ್‌ ಫೈನಲ್‌ ಹಂತದ ಮೇಲೆ ಕಣ್ಣಿಟ್ಟಿರುವ ಆತಿಥೇಯ ಭಾರತ ತಂಡ ವಿಶ್ವಕಪ್ ಹಾಕಿ ಟೂರ್ನಿಯ ಗುಂಪು ಹಂತದ ಕೊನೆಯ ಪಂದ್ಯದಲ್ಲಿ ಶನಿವಾರ ಕೆನಡಾವನ್ನು ಎದುರಿಸಲಿದೆ. ‘ಸಿ’ ಗುಂಪಿನ ಮೊದಲ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾವನ್ನು 5–0ಯಿಂದ ಮಣಿಸಿದ ಭಾರತ ನಂತರ ಬೆಲ್ಜಿಯಂ ಜೊತೆ 2–2ರಿಂದ ಡ್ರಾ ಸಾಧಿಸಿತ್ತು.

ಬೆಲ್ಜಿಯಂ ಮೊದಲ ಪಂದ್ಯದಲ್ಲಿ ಕೆನಡಾ ವಿರುದ್ಧ 2–1ರಿಂದ ಗೆದ್ದಿತ್ತು. ಭಾರತ ಮತ್ತು ಬೆಲ್ಜಿಯಂ ತಲಾ ನಾಲ್ಕು ಪಾಯಿಂಟ್‌ಗಳನ್ನು ಗಳಿಸಿದ್ದು ಹೆಚ್ಚು ಗೋಲು ಗಳಿಕೆಯ ಆಧಾರದಲ್ಲಿ ಪಾಯಿಂಟ್ ಪಟ್ಟಿಯಲ್ಲಿ ಭಾರತ ಅಗ್ರ ಸ್ಥಾನದಲ್ಲಿದೆ.

ಶನಿವಾರದ ಪಂದ್ಯದಲ್ಲಿ ಗೆಲುವು ಸಾಧಿಸಿದರೆ ಭಾರತ ಅಗ್ರ ಸ್ಥಾನವನ್ನು ಉಳಿಸಿಕೊಳ್ಳಲಿದೆ. ಆತಿಥೇಯರನ್ನು ಹಿಂದಿಕ್ಕಬೇಕಾದರೆ ಬೆಲ್ಜಿಯಂ ತಂಡ ದಕ್ಷಿಣ ಆಫ್ರಿಕಾ ಎದುರು ಭಾರಿ ಅಂತರದ ಗೆಲುವು ಸಾಧಿಸಬೇಕು. ಅಗ್ರ ಸ್ಥಾನದಲ್ಲಿ ಉಳಿಯುವ ತಂಡ ನೇರವಾಗಿ ಎಂಟರ ಘಟ್ಟಕ್ಕೆ ಪ್ರವೇಶಿಸಲಿದೆ. ಎರಡು ಮತ್ತು ಮೂರನೇ ಸ್ಥಾನದಲ್ಲಿರುವ ತಂಡಗಳು ಕ್ರಾಸ್ ಓವರ್ ಪಂದ್ಯಗಳನ್ನು ಆಡಬೇಕು. 

ರ‍್ಯಾಂಕಿಂಗ್‌ನಲ್ಲಿ ಕೆನಡಾಗಿಂತ ಮೇಲಿರುವ ಭಾರತ ಹಿಂದಿನ ಪಂದ್ಯಗಳಲ್ಲೂ ಮೇಲುಗೈ ಸಾಧಿಸಿದೆ. 2013ರಿಂದ ಉಭಯ ತಂಡಗಳು ಐದು ಬಾರಿ ಮುಖಾಮುಖಿಯಾಗಿದ್ದು ಭಾರತ ಮೂರು ಪಂದ್ಯಗಳನ್ನು ಗೆದ್ದು ಒಂದರಲ್ಲಿ ಡ್ರಾ ಸಾಧಿಸಿದೆ. ವಿಶ್ವಕಪ್‌ನಲ್ಲಿ ಒಟ್ಟು ನಾಲ್ಕು ಬಾರಿ ಈ ತಂಡಗಳು ಮೂಖಾಮುಖಿಯಾಗಿದ್ದು ತಲಾ ಎರಡರಲ್ಲಿ ಗೆದ್ದಿವೆ.

ಪ್ರಬಲ ರಕ್ಷಣಾ ವಿಭಾಗ: ಕೆನಡಾ ಈಚೆಗೆ ಉತ್ತಮ ಸಾಮರ್ಥ್ಯ ತೋರುತ್ತಿದೆ. ಅದರ ರಕ್ಷಣಾ ವಿಭಾಗ ಪ್ರಬಲವಾಗಿದೆ. ಈ ಸವಾಲನ್ನು ಭಾರತದ ಫಾರ್ವರ್ಡ್ ಆಟಗಾರರು ಸಮರ್ಥವಾಗಿ ನಿಭಾಯಿಸಬೇಕಾಗಿದೆ. ಮನದೀಪ್ ಸಿಂಗ್‌, ಸಿಮ್ರನ್‌ಜೀತ್‌ ಸಿಂಗ್‌, ಆಕಾಶ್‌ ದೀಪ್ ಸಿಂಗ್‌ ಮತ್ತು ಲಲಿತ್ ಉಫಾಧ್ಯಾಯ ಅವರು ಈ ಜವಾಬ್ದಾರಿಯನ್ನು ಹೇಗೆ ನಿಭಾಯಿಸುವರು ಎಂಬುದನ್ನು ಕಾದುನೋಡಬೇಕಾಗಿದೆ.

ಎರಡು ಪಂದ್ಯಗಳಲ್ಲಿ ಭಾರತದ ಆಟಗಾರರು ಎಲ್ಲ ವಿಭಾಗಗಳಲ್ಲೂ ಸಾಮರ್ಥ್ಯ ಮರೆದಿದ್ದಾರೆ. ಕೆನಡಾ ವಿರುದ್ಧವೂ ತಂಡ ಪಾರಮ್ಯ ಮರೆಯುವ ಭರವಸೆ ಇದೆ.

ರ‍್ಯಾಂಕಿಂಗ್‌

ಭಾರತ 5

ಕೆನಡಾ 11

ಇಂದಿನ ಪಂದ್ಯಗಳು

ಬೆಲ್ಜಿಯಂ – ದಕ್ಷಿಣ ಆಫ್ರಿಕಾ

ಸಮಯ: ಸಂಜೆ 5.00

ಭಾರತ – ಕೆನಡಾ‌

ಸಮಯ: ಸಂಜೆ 7.00

ಸ್ಥಳ: ಕಳಿಂಗ ಕ್ರೀಡಾಂಗಣ, ಭುವನೇಶ್ವರ

ನೇರ ಪ್ರಸಾರ: ಸ್ಟಾರ್ ನೆಟ್‌ವರ್ಕ್‌/ದೂರದರ್ಶನ

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು