ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ವ ಅಥ್ಲೆಟಿಕ್ಸ್‌ ಚಾಂಪಿಯನ್‌ಷಿಪ್‌- ಚಿನ್ನದ ಆಸೆ ಹೊತ್ತ ಭಾರತದ ಸ್ಪರ್ಧಿಗಳು

Last Updated 15 ಸೆಪ್ಟೆಂಬರ್ 2019, 19:45 IST
ಅಕ್ಷರ ಗಾತ್ರ

ಪಾಲ್ಗೊಂಡದ್ದು ಸಾಕಷ್ಟು ಇದೆ. ಆದರೆ ಸಾಧನೆ...? ಏನೇನೂ ಇಲ್ಲ. ಹೌದು, ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಷಿಪ್‌ನಲ್ಲಿ ಭಾರತ ಮಾಡಿರುವ ಸಾಧನೆ ಏನೇನೂ ಇಲ್ಲ. ಕೆನ್ಯಾ, ಕ್ಯೂಬಾ, ಇಥಿಯೋಪಿಯಾ, ಸಿರಿಯಾ, ಫಿನ್ಲೆಂಡ್‌, ಅಲ್ಜೀರಿಯಾ ಮುಂತಾದ ದೇಶಗಳು ಚಿನ್ನದ ಪದಕಗಳಿಗೆ ಮುತ್ತಿಕ್ಕಿರುವ, ನೈಜೀರಿಯಾ, ಹಂಗರಿ, ಐವರಿ ಕೋಸ್ಟ್, ಘಾನ ಮುಂತಾದ ದೇಶಗಳು ಬೆಳ್ಳಿ–ಕಂಚು ಗಳಿಸಿರುವ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಭಾರತ ಈ ವರೆಗೆ ಗೆದ್ದಿರುವುದು ಒಂದೇ ಒಂದು ಪದಕ–ಅದು ಕೂಡ ಕಂಚು.

ಅಂಜು ಬಾಬಿ ಜಾರ್ಜ್ 2003ರಲ್ಲಿ ಲಾಂಗ್‌ಜಂಪ್‌ನಲ್ಲಿ ಗೆದ್ದಿರುವ ಪದಕ ಭಾರತದ ಈ ವರೆಗಿನ ‘ಅತ್ಯುನ್ನತ’ ಸಾಧನೆ. 2015ರಲ್ಲಿ ಪುರುಷರ ಡಿಸ್ಕಸ್ ಎಸೆತದಲ್ಲಿ ಕನ್ನಡಿಗ ವಿಕಾಸ್ ಗೌಡ, ಶಾಟ್‌ಪಟ್‌ನಲ್ಲಿ ಇಂದ್ರಜಿತ್ ಸಿಂಗ್‌, ಮಹಿಳೆಯರ 3000 ಮೀಟರ್ಸ್ ಸ್ಟೀಪಲ್ ಚೇಸ್‌ನಲ್ಲಿ ಲಲಿತಾ ಬಾಬರ್‌ ಫೈನಲ್ ಹಂತ ಪ್ರವೇಶಿಸಿದ್ದರೂ ಪದಕ ಗೆಲ್ಲಲು ಸಾಧ್ಯವಾಗಲಿಲ್ಲ.

ಈ ಬಾರಿಯ ಚಾಂಪಿಯನ್‌ಷಿಪ್‌ ಸೆಪ್ಟೆಂಬರ್ 27ರಿಂದ ಅಕ್ಟೋಬರ್ 6ರ ವರೆಗೆ ದೋಹಾದಲ್ಲಿ ನಡೆಯಲಿದ್ದು ಭಾರತ ಅಥ್ಲೆಟಿಕ್ಸ್ ಫೆಡರೇಷನ್‌ ಈಗಾಗಲೇ 25 ಮಂದಿಯನ್ನು ಆಯ್ಕೆ ಮಾಡಿದೆ. ಒಲಿಂಪಿಕ್ಸ್‌, ಕಾಮನ್ವೆಲ್ತ್ ಗೇಮ್ಸ್ ಮುಂತಾದ ಕೂಟಗಳಲ್ಲಿ ಪದಕಗಳನ್ನು ಗೆದ್ದಿರುವ ಭಾರತಕ್ಕೆ ವಿಶ್ವ ಅಥ್ಲೆಟಿಕ್ಸ್‌ನಲ್ಲಿ ಪದಕಗಳ ಬೇಟೆ ಇನ್ನೂ ಕನಸಾಗಿಯೇ ಉಳಿದಿದೆ. ಅಮೆರಿಕ, ಕೆನ್ಯಾ, ರಷ್ಯಾ, ಜರ್ಮನಿ, ಜುಮೈಕಾ ಮೊದಲಾದ ದೇಶಗಳು 100ಕ್ಕೂ ಹೆಚ್ಚು ಪದಕಗಳನ್ನು ಗೆದ್ದು ಸಾಧಕ ದೇಶಗಳ ಪಟ್ಟಿಯ ಅಗ್ರ ಐದರಲ್ಲಿ ಸ್ಥಾನ ಗಳಿಸಿದ್ದರೆ, ಭಾರತ ಇನ್ನೂ ಇರಾನ್‌, ಸೌದಿ ಅರೆಬಿಯಾ, ದಕ್ಷಿಣ ಕೊರಿಯಾ ಮುಂತಾದ ರಾಷ್ಟ್ರಗಳ ಜೊತೆ 92ನೇ ಸ್ಥಾನವನ್ನು ಹಂಚಿಕೊಂಡಿದೆ.

ಎರಡು ವರ್ಷಗಳಿಗೊಮ್ಮೆ ಆಯೋಜನೆಯಾಗುವ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಷಿಪ್‌ಗೆ ಈ ಬಾರಿ ಹೆಚ್ಚು ಮಹತ್ವವಿದೆ. ಯಾಕೆಂದರೆ, ಮುಂದಿನ ವರ್ಷ ನಡೆಯಲಿರುವ ಒಲಿಂಪಿಕ್ಸ್‌ನಲ್ಲಿ ಭರವಸೆಯಿಂದ ಕಣಕ್ಕೆ ಇಳಿಯಬೇಕಾದರೆ ಈ ಕೂಟದಲ್ಲಿ ಸಾಧನೆ ಮಾಡಲೇಬೇಕು.

ಕಾಮನ್ವೆಲ್ತ್ ಗೇಮ್ಸ್‌ ಮತ್ತು ಏಷ್ಯನ್ ಗೇಮ್ಸ್‌ನಲ್ಲಿ ಕಳೆದ ಬಾರಿ ಸಮಾಧಾನಕರ ಸಾಧನೆ ಮಾಡಿರುವ ಭಾರತದ ಅಥ್ಲೀಟ್‌ಗಳು ಈ ಬಾರಿ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ನಿರೀಕ್ಷೆ ಮೂಡಿಸಿದ್ದಾರೆ. ಜಿನ್ಸನ್ ಜಾನ್ಸನ್ ವಿಶ್ವ ಚಾಂಪಿಯನ್‌ಷಿಪ್‌ ಮತ್ತು ಒಲಿಂಪಿಕ್ಸ್‌ ಗುರಿ ಇರಿಸಿಕೊಂಡು ಅಮೆರಿಕದಲ್ಲಿ ಸ್ಕಾಟ್ ಸಿಮನ್ಸ್‌ ಬಳಿ ವಿಶೇಷ ತರಬೇತಿ ಪಡೆಯಲು ತೆರಳಿದ್ದಾರೆ. ಉಳಿದವರು ಭಾರತ ಕ್ರೀಡಾ ಪ್ರಾಧಿಕಾರದಬೆಂಗಳೂರು ಕೇಂದ್ರದಲ್ಲಿ ಅಭ್ಯಾಸ ಮಾಡಿ ದೋಹಾಗೆ ತೆರಳಲು ಸಜ್ಜಾಗಿದ್ದಾರೆ. ಆದರೆ ಟ್ರ್ಯಾಕ್ ಮತ್ತು ಫೀಲ್ಡ್‌ನಲ್ಲಿ ಎದುರಾಳಿಗಳ ಸವಾಲನ್ನು ಮೆಟ್ಟಿ ನಿಲ್ಲಲು ಅವರಿಗೆ ಸಾಧ್ಯವಿದೆಯೇ ಎಂಬ ಆತಂಕ ಇನ್ನೂ ಕಾಡುತ್ತಿದೆ.

ಭರವಸೆ ಮೂಡಿಸಿದ ರಿಲೇ ತಂಡ

ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಪಾಲ್ಗೊಳ್ಳುತ್ತಿರುವ ರಿಲೇ ತಂಡದ ಮೇಲೆ ಭಾರತ ಭರವಸೆ ಇರಿಸಿದೆ. ಮೇ ತಿಂಗಳಲ್ಲಿ ಯೊಕೊಹಾಮದಲ್ಲಿ ನಡೆದ ವಿಶ್ವ ರಿಲೇಯಲ್ಲಿ ಉತ್ತಮ ಸಾಧನೆ ಮಾಡಿರುವುದೇ ಇದಕ್ಕೆ ಕಾರಣ. ಗಲಿನಾ ಬುಖಾರಿನಾ ಬಳಿ ವಿಶೇಷ ತರಬೇತಿ ಪಡೆದಿರುವ ಭಾರತದ ಅಥ್ಲೀಟ್‌ಗಳು ಮಿಂಚುವ ನಿರೀಕ್ಷೆ ಇದೆ. ಮಹಿಳೆಯರ ಮತ್ತು ಮಿಶ್ರ ವಿಭಾಗದಲ್ಲಿ ಕರ್ನಾಟಕದ ಎಂ.ಆರ್‌.ಪೂವಮ್ಮ ಕಣಕ್ಕೆ ಇಳಿಯಲಿದ್ದು ಅವರಿಗೆ ಶಕ್ತಿ ತುಂಬಲು ಹಿಮಾ ದಾಸ್‌, ವಿಸ್ಮಯ, ಜಿಸ್ನಾ ಮ್ಯಾಥ್ಯೂ, ವಿದ್ಯಾ ಮುಂತಾದವರು ಇದ್ದಾರೆ. ಪುರುಷರ ಮತ್ತು ಮಿಶ್ರ ರಿಲೇ ತಂಡದಲ್ಲಿರುವ ಮೊಹಮ್ಮದ್‌ ಅನಾಸ್‌, ಧರುಣ್ ಅಯ್ಯಸಾಮಿ, ಅಲೆಕ್ಸ್ ಆ್ಯಂಟನಿ, ಅಮೋಜ್ ಜೇಕಬ್‌ ಅವರಿಗೂ ಇದು ಹೊಸ ಅನುಭವ ಆಗಲಿದೆ.

1500 ಮೀಟರ್ಸ್ ಓಟದಲ್ಲಿ ಜಿನ್ಸನ್ ಜಾನ್ಸನ್ ತಮ್ಮ ಸಾಮರ್ಥ್ಯದಲ್ಲಿ ಏರಿಕೆಯನ್ನು ಕಾಣುತ್ತಿದ್ದಾರೆ. ಜೂನ್‌ನಲ್ಲಿ ನಿಜೆಮ್ಜೆನ್‌ನಲ್ಲಿ ನಡೆದ ಕೂಟದಲ್ಲಿ 3:37.62 ನಿಮಿಷದಲ್ಲಿ ಗುರಿ ಮುಟ್ಟಿದ್ದ ಅವರು ಸೆಪ್ಟೆಂಬರ್ ಮೊದಲ ವಾರ ಬರ್ಲಿನ್‌ನಲ್ಲಿ 3:35.24 ನಿಮಿಷಗಳ ಸಾಧನೆ ಮಾಡಿದ್ದಾರೆ. ರಾಷ್ಟ್ರೀಯ ಮುಕ್ತ ಕೂಟದಲ್ಲಿ 8.20 ಮೀ ಜಿಗಿದಿರುವ ಲಾಂಗ್ ಜಂಪ್ ಪಟು ಎಂ.ಶ್ರೀಶಂಕರ್ ಕೂಡ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಉತ್ತಮ ಸಾಧನೆಯ ನಿರೀಕ್ಷೆಯಲ್ಲಿದ್ದಾರೆ. 400 ಮೀಟರ್ಸ್ ಓಟಗಾರ ಆರೋಗ್ಯ ರಾಜೀವ್‌, ಜಾವೆಲಿನ್ ಥ್ರೋ ಪಟು ನೀರಜ್ ಚೋಪ್ರಾ, ಸ್ಪ್ರಿಂಟರ್ ದ್ಯತಿ ಚಾಂದ್, ಮ್ಯಾರಥಾನ್ ಓಟಗಾರ ಟಿ.ಗೋಪಿ, ಶಾಟ್‌ಪಟ್‌ ಪಟು ತಜಿಂದರ್ ಪಾಲ್ ತೂರ್ ಕೂಡ ಈ ಬಾರಿ ಚಿನ್ನದ ಆಸೆಯನ್ನು ಈಡೇರಿಸುವ ನಿರೀಕ್ಷೆ ಮೂಡಿಸಿದ್ದಾರೆ.

ಪ್ರತಿಭಟನೆಯೇ ಮೊದಲ ಹೆಜ್ಜೆ

ವಿಶ್ವ ಅಥ್ಲೆಟಿಕ್ ಚಾಂಪಿಯನ್‌ಷಿಪ್ ಆರಂಭಗೊಂಡದ್ದು ಪ್ರತಿಭಟನೆಯ ಮೂಲಕ. 1976ರ ಒಲಿಂಪಿಕ್ಸ್‌ನಿಂದ ಪುರುಷರ 50 ಕಿಮೀ ನಡಿಗೆ ಸ್ಪರ್ಧೆಯನ್ನು ಅಂತರರಾಷ್ಟ್ರೀಯ ಒಲಿಂಪಿಕ್ ಸಮಿತಿ (ಐಒಸಿ) ಕೈಬಿಟ್ಟಿತ್ತು. ಈ ಸ್ಪರ್ಧೆಯನ್ನು ಸೇರಿಸಬೇಕು ಎಂದು ಅಂತ ರರಾಷ್ಟ್ರೀಯ ಅಥ್ಲೆಟಿಕ್ ಫೆಡರೇಷನ್ (ಐಎಎಎಫ್) ಬಗೆ ಬಗೆಯಾಗಿ ಕೋರಿ ಕೊಂಡಿತು. ಆದರೆ ಒಲಿಂಪಿಕ್ ಸಮಿತಿ ಇದಕ್ಕೆ ಕಿವಿಗೊಡಲಿಲ್ಲ. ಬೇಸರಗೊಂಡ ಐಎಎಎಫ್ ಈ ಸ್ಪರ್ಧೆಯೂ ಒಳಗೊಂಡಂತೆ ತನ್ನದೇ ಆದ ಪ್ರತ್ಯೇಕ ಕ್ರೀಡಾಕೂಟ ನಡೆಸಲು ನಿರ್ಧರಿಸಿತು.

ಒಲಿಂಪಿಕ್ಸ್ ಮುಗಿದ ಒಂದೂವರೆ ತಿಂಗಳಲ್ಲಿ ಕೂಟ ನಡೆಸುವಲ್ಲಿ ಯಶಸ್ವಿಯಾಯಿತು. ಎರಡನೇ ಕೂಟ 1980ರಲ್ಲಿ ನಡೆದಿತ್ತು. 1983ರಲ್ಲಿ ಹೆಚ್ಚು ಯಶಸ್ಸು ಸಿಕ್ಕಿತು. 1991ರ ವರೆಗೆ ನಾಲ್ಕು ವರ್ಷಗಳಿಗೆ ಒಮ್ಮೆ ನಡೆಯುತ್ತಿದ್ದ ಕೂಟ ನಂತರ ಪ್ರತಿ ಎರಡು ವರ್ಷಗಳಿಗೆ ಒಮ್ಮೆ ನಡೆಯುತ್ತಿದೆ. 1987ರಿಂದ ಮಹಿಳೆಯರ ವಿವಿಧ ವಿಭಾಗಗಳನ್ನು ಸೇರಿಸಲಾಯಿತು. ಈ ವರ್ಷ ಮೊದಲ ಬಾರಿ ಮಿಶ್ರ ರಿಲೇ ಸ್ಪರ್ಧೆ ನಡೆಯಲಿದೆ.

ಚಾಂಪಿಯನ್‌ಷಿಪ್‌ನಲ್ಲಿ ಪಾಲ್ಗೊಳ್ಳುವ ಕ್ರೀಡಾಪಟುಗಳ ವಿವರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT