ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

₹ 72 ಲಕ್ಷ ದಾಖಲೆ ಮೊತ್ತಕ್ಕೆ ಮುಕ್ತಿ ಬಾವುಟ ಖರೀದಿ

Last Updated 5 ಮಾರ್ಚ್ 2018, 19:49 IST
ಅಕ್ಷರ ಗಾತ್ರ

ನಾಯಕನಹಟ್ಟಿ (ಚಿತ್ರದುರ್ಗ): ಮಧ್ಯ ಕರ್ನಾಟಕದ ಪ್ರಸಿದ್ಧ ಜಾತ್ರೆ ಗುರುತಿಪ್ಪೇರುದ್ರಸ್ವಾಮಿ ರಥೋತ್ಸವ ಸೋಮವಾರ ಮಧ್ಯಾಹ್ನ ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ಸಂಭ್ರಮದಿಂದ ನಡೆಯಿತು.

ರಥೋತ್ಸವಕ್ಕೆ ಮುನ್ನ ಸಂಪ್ರದಾಯದಂತೆ ರಥದ ಮುಕ್ತಿ ಬಾವುಟವನ್ನು ಹರಾಜು ಹಾಕಲಾಯಿತು. ಬೆಂಗಳೂರಿನ ಉದ್ಯಮಿ ಮುಕೇಶ್ ಕುಮಾರ್ ₹ 72 ಲಕ್ಷಕ್ಕೆ ಮುಕ್ತಿ ಬಾವುಟವನ್ನು ಖರೀದಿಸಿದರು. ಈ ಮೂಲಕ ದಾಖಲೆ ಮೊತ್ತಕ್ಕೆ ಮುಕ್ತಿ ಬಾವುಟ ಖರೀದಿ ಮಾಡಿದ ಗೌರವ ಪಡೆದರು. 2016 ಮತ್ತು 2017ರಲ್ಲಿ ಮೈಸೂರಿನ ಉದ್ಯಮಿ ಸೋಮಣ್ಣ ಕ್ರಮವಾಗಿ ₹ 60 ಲಕ್ಷ ಹಾಗೂ ₹71 ಲಕ್ಷಕ್ಕೆ ಮುಕ್ತಿಬಾವುಟವನ್ನು ಖರೀದಿಸಿದ್ದರು. ಈ ವರ್ಷ ಹರಾಜಿನಲ್ಲಿ ಹಿರಿಯೂರು ಶಾಸಕ ಡಿ. ಸುಧಾಕರ್ ಪೈಪೋಟಿ ನೀಡಿದ್ದರು. ಸುಧಾಕರ್ ಅವರು 2015ರಲ್ಲಿ ₹ 20 ಲಕ್ಷಕ್ಕೆ ಮುಕ್ತಿಬಾವುಟ ಹರಾಜಿನಲ್ಲಿ ಖರೀದಿಸಿದ್ದರು.

ಮುಕ್ತಿಬಾವುಟದ ಹರಾಜಿನ ನಂತರ, ಅದೇ ಬಾವುಟವನ್ನು ರಥಕ್ಕೆ ತೊಡಿಸಿ, ರಥೋತ್ಸವಕ್ಕೆ ಚಾಲನೆ ನೀಡಲಾಗುತ್ತದೆ. ರಥದ ಮುಕ್ತಿ ಬಾವುಟ ಪಡೆದರೆ ಆರೋಗ್ಯ, ಸಂಪತ್ತು, ವ್ಯಾಪಾರ, ವ್ಯವಹಾರ ವೃದ್ಧಿಯಾಗುತ್ತದೆ ಎಂಬ ನಂಬಿಕೆ ಇದೆ. ಹೀಗಾಗಿ ಉದ್ಯಮಿಗಳು, ರಾಜಕಾರಣಿಗಳು ಇದನ್ನು ಪಡೆಯಲು ಪ್ರತಿ ವರ್ಷ ಪೈಪೋಟಿ ನಡೆಸುತ್ತಾರೆ.

ಈ ವರ್ಷ ಬಾವುಟ ಖರೀದಿಸಿದ ಮುಕೇಶ್ ಕುಮಾರ್ ಕೂಡ ಉದ್ಯಮಿ. ಜತೆಗೆ, ಇನ್ನು ಕೆಲವೇ ಸಮಯದಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿ ಚಿತ್ರದುರ್ಗ ಕ್ಷೇತ್ರದಿಂದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ. ರಥೋತ್ಸವಕ್ಕೆ ರಾಜ್ಯದ ವಿವಿಧ ಜಿಲ್ಲೆಗಳಿಂದ ಹಾಗೂ ನೆರೆಯ ಆಂಧ್ರಪ್ರದೇಶದಿಂದ ಲಕ್ಷಾಂತರ ಭಕ್ತರು ಬಂದಿದ್ದರು.

ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಖಾತೆ ಸಚಿವ ಎಚ್.ಆಂಜನೇಯ, ಸಂಸದ ಬಿ.ಎನ್. ಚಂದ್ರಪ್ಪ, ಶಾಸಕರಾದ ಡಿ. ಸುಧಾಕರ್, ಎಸ್. ತಿಪ್ಪೇಸ್ವಾಮಿ. ಟಿ.ರಘುಮೂರ್ತಿ, ಜಿಲ್ಲಾಧಿಕಾರಿ ವಾಸಿರೆಡ್ಡಿ ವಿಜಯಾ ಜ್ಯೋತ್ಸ್ನಾ ಮತ್ತು ಗಣ್ಯರು ರಥೋತ್ಸವದ ಸಂದರ್ಭದಲ್ಲಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT