ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿವನ ತಾಣಕ್ಕೆ ಇರುಳ ಚಾರಣ

Last Updated 9 ಫೆಬ್ರುವರಿ 2018, 19:30 IST
ಅಕ್ಷರ ಗಾತ್ರ

ಶಿವರಾತ್ರಿ ದಿನದಂದು ಶಿವಭಕ್ತರಿಗೆ ಪ್ರಿಯವಾದ ಬೆಟ್ಟಕ್ಕೆ ಚಾರಣ ಮಾಡಬೇಕೆಂದು ಸ್ನೇಹಿತರು ತೀರ್ಮಾನಿಸಿಕೊಂಡಿದ್ದೆವು. ರಾತ್ರಿ ಚಾರಣ ಹೋಗಲು ಯಾವ ಬೆಟ್ಟ ಸೂಕ್ತ ಎಂದು ಚರ್ಚೆ ನಡೆಸಿದಾಗ ಮಾಕಳಿದುರ್ಗದ ಹೆಸರು ಪ್ರಸ್ತಾಪವಾಯಿತು. ಅಲ್ಲಿ ಶಿವನ ದೇವಸ್ಥಾನ ಇದೆ. ಹೆಚ್ಚು ಜನರೂ ಸೇರುವುದಿಲ್ಲ. ಬೆಟ್ಟ ಪ್ರಶಾಂತವಾಗಿರುತ್ತದೆ ಎಂಬ ಕಾರಣಕ್ಕೆ ಮಾಕಳಿದುರ್ಗವನ್ನೇ ಆರಿಸಿಕೊಂಡೆವು.

ನನ್ನ ಸ್ನೇಹಿತ ಶಿವಪ್ರಸಾದ್ ಬೀರೂರು ಎಂಬುವವರು ಮಾಕಳಿದುರ್ಗದ ಪಕ್ಕದ ಹಳ್ಳಿಯಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರು. ಹೀಗಾಗಿ ಅವರ ಮೂಲಕ ಮಾಕಳಿ ಊರಿನ ನಾಗರಾಜ್ ಅವರನ್ನು ಸಂಪರ್ಕಿಸಿ ವಿವರ ಪಡೆದುಕೊಂಡೆವು. ನಮ್ಮ ತಂಡದಲ್ಲಿ ಒಟ್ಟು 15 ಮಂದಿ ಇದ್ದೆವು. ಎಲ್ಲರೂ ರಾಜಾಜಿನಗರ, ವಿಜಯನಗರ, ನಾಗರಬಾವಿ ಭಾಗದವರು. ಕಾರು ಹಾಗೂ ಬೈಕ್‌ಗಳಲ್ಲಿ ಮಾಕಳಿದುರ್ಗಕ್ಕೆ ಹೋಗಲು ತೀರ್ಮಾನಿಸಿದೆವು.

ಕಳೆದ ವರ್ಷ ಮಹಾಶಿವರಾತ್ರಿ ಹಿಂದಿನ ದಿನ ರಾತ್ರಿ 9 ಗಂಟೆಗೆ ಹೊರಟೆವು. ಬೆಂಗಳೂರಿನಿಂದ ಒಂದರಿಂದ ಒಂದೂವರೆ ತಾಸು ಪ್ರಯಾಣ. ಯಲಹಂಕ, ದೊಡ್ಡಬಳ್ಳಾಪುರ ಮಾರ್ಗವಾಗಿ ಘಾಟಿಸುಬ್ರಹ್ಮಣ್ಯ, ಅಲ್ಲಿಂದ ಬಲಕ್ಕೆ ಗೌರಿಬಿದನೂರು ಹೋಗುವ ದಾರಿಯಲ್ಲಿ ಮಾಕಳಿದುರ್ಗಕ್ಕೆ ಹೋಗುವ ರೈಲ್ವೆ ಸ್ಟೇಷನ್ ಹಿಂದೆಯೇ ಮಾಕಳಿ ಗ್ರಾಮಕ್ಕೆ ಹೋಗುವ ಮಾರ್ಗ ಸಿಗುತ್ತದೆ.

ಮುಖ್ಯರಸ್ತೆಯಿಂದ ಹೆಚ್ಚು ಕಡಿಮೆ ಅರ್ಧ ಕಿ.ಮೀ ದೂರ ಹೋಗಿ ಮಾಕಳಿ ಊರಿಗೆ ನಾವು ತಲುಪಿದ್ದೆವು. ಆಗ ಗಂಟೆ ಸುಮಾರು 11.30. ನಾಗರಾಜ್ ಅವರ ಮನೆ ಸಮೀಪವೇ ನಮ್ಮ ವಾಹನಗಳನ್ನು ನಿಲ್ಲಿಸಿದೆವು. ನಮ್ಮ ಬ್ಯಾಗ್‌ಗಳನ್ನು ಹೆಗಲಿಗೇರಿಸಿಕೊಂಡು ಬೆಟ್ಟದ ಬುಡಕ್ಕೆ ಕಾಲ್ನಡಿಗೆಯಲ್ಲಿಯೇ ಹೋದೆವು. ನಾಗರಾಜ್ ಅವರು ಊರಿನ ಬಗ್ಗೆ, ಬೆಟ್ಟದ ಬಗ್ಗೆ ಮಾಹಿತಿ ನೀಡುತ್ತಿದ್ದರು. ಗದ್ದಲ ಮಾಡದೇ ಬೆಟ್ಟ ಹತ್ತಲು ಆರಂಭಿಸಿದೆವು.

ಬೆಟ್ಟವನ್ನು ಒಂದೂವರೆ ಗಂಟೆ ಸಮಯದಲ್ಲಿ ಹತ್ತಬಹುದು. ಅಷ್ಟೇನು ಕಡಿದಾಗಿಲ್ಲ. ಬೆಟ್ಟದ ಹಾದಿಯಲ್ಲಿ ಕುರುಚಲು ಗಿಡಗಳಿವೆ. ಬೆಟ್ಟದ ತುತ್ತ ತುದಿಯಲ್ಲಿ ಕಾಡು ಮಲ್ಲೇಶ್ವರ ದೇವಸ್ಥಾನವಿದೆ. ಶಿವರಾತ್ರಿಯಂದು ಅಭಿಷೇಕ ಹಾಗು ಬೆಳಗ್ಗಿನ ಜಾವದ ತನಕ ಭಜನೆ ನಡೆಯುತ್ತದೆ. ಆ ದಿನವೂ ಅಲ್ಲಿ 30–40 ಜನ ರಾತ್ರಿಯಿಡೀ ಭಜನೆ ನಿರತರಾಗಿದ್ದರು.

ನಾವು ಬೆಟ್ಟ ಹತ್ತಲು ಆರಂಭಿಸಿದ್ದು ಹಳ್ಳಿಯ ಜನರು ದೇವಸ್ಥಾನಕ್ಕೆ ಹೋಗಲು ಬಳಸುವ ಕಾಲು ದಾರಿ ಮೂಲಕ. ಮಾಮೂಲಾಗಿ ಚಾರಣಕ್ಕೆ ಹೋಗುವವರು ಬೆಂಗಳೂರಿನಿಂದ ರೈಲಿನಲ್ಲಿ ಮಾಕಳಿ ರೈಲು ನಿಲ್ದಾಣ ತಲುಪುತ್ತಾರೆ. ರೈಲ್ವೆ ಸ್ಟೇಷನ್‌ನಿಂದ ಮಾಕಳಿ ಬೆಟ್ಟಕ್ಕೆ ನೇರ ಮಾರ್ಗ ಇದೆ. ಆದರೆ ಈ ದಾರಿ ಸ್ವಲ್ಪ ಕಠಿಣ. ಬಂಡೆಗಲ್ಲುಗಳು ಈ ದಾರಿಯಲ್ಲಿವೆ. ರಾತ್ರಿ ಚಾರಣ ಹೋಗುವವರಿಗೆ ಈ ದಾರಿ ಸೂಕ್ತವಲ್ಲ. ಹಳ್ಳಿಜನರ ಕಾಲುಹಾದಿ ಬೆಟ್ಟ ಹತ್ತಲು ಸುಲಭದ ದಾರಿ. ಇದು ಜಿಗ್ ಜಾಗ್ ಮಾದರಿಯಲ್ಲಿದೆ. ಸ್ವಲ್ಪ ಸುತ್ತು ಹಾಕಿಕೊಂಡು ಹೋಗಬೇಕು. ನಾವು ರಾತ್ರಿ ಚಾರಣಕ್ಕೆ ಸುರಕ್ಷತೆ ದೃಷ್ಟಿಯಿಂದ ಈ ದಾರಿಯನ್ನೇ ಆಯ್ದುಕೊಂಡೆವು.

ಚಾಕು, ತಲಾ ಎರಡು ಲೀಟರ್ ನೀರು, ಕುರುಕಲು ತಿಂಡಿ, ಹಣ್ಣುಗಳನ್ನು ಕೊಂಡೊಯ್ದಿದ್ದೆವು. ದಟ್ಟ ಅರಣ್ಯದ ನಡುವೆ ರಾತ್ರಿ ಬರೀ ಟಾರ್ಚ್ ಲೈಟ್‌ನ ಬೆಳಕಿನಲ್ಲಿ ನಡೆಯುತ್ತಾ ಸಾಗುವುದೇ ಖುಷಿ. ಬೆಟ್ಟದ ಸುಮಾರು ಮುಕ್ಕಾಲು ಭಾಗದಲ್ಲಿ ದೇವಸ್ಥಾನಕ್ಕಿಂತ ಒಂದು ಕಿ.ಮೀ ಹಿಂದೆ ಸಣ್ಣ ತೊರೆ ಹರಿಯುತ್ತದೆ. ಇದು ಆ ಬೆಟ್ಟದಲ್ಲಿ ಹುಟ್ಟಿ ಹರಿಯುವ ತೊರೆ. ಅಲ್ಲಿ ದಣಿವಾರಿಸಿಕೊಂಡೆವು. ಆ ನೀರು ತುಂಬಾ ಶುದ್ಧ. ಸಿಹಿಯೋ ಸಿಹಿ. ಹೊಟ್ಟೆ ತುಂಬಾ ನೀರು ಕುಡಿದು ಬಾಟಲಿಗಳಲ್ಲಿಯೂ ತುಂಬಿಸಿಕೊಂಡೆವು. ಈ ತೊರೆ ಕಾಲುಹಾದಿಯಲ್ಲಿ ಬೆಟ್ಟ ಹತ್ತಿದರೆ ಮಾತ್ರ ಸಿಗುತ್ತದೆ.

ಬೆಟ್ಟದ ಮೇಲೆ ನೀರು ಸಂಗ್ರಹಿಸೋಕೆ ಕಲ್ಲುಗಳ ಮಧ್ಯೆ ಕಟ್ಟಿರುವ ಪುರಾತನ ಎರಡು ಚಿಕ್ಕ ದೊಣೆಗಳು (ಚಿಕ್ಕ ಅಣೆಕಟ್ಟು) ಸಿಗುತ್ತವೆ. ಕಾಲುಹಾದಿಯಲ್ಲಿ ಎಕೆ ದೊಣೆ ಸಿಕ್ಕರೆ, ಕೋಟೆಯೊಳಗೆ ಗಾರೆ ದೊಣೆ ಇದೆ. ಬೆಟ್ಟ ಹತ್ತುವಾಗ ಸಾಮಾನ್ಯವಾಗಿ ನವಿಲು, ನರಿ, ಕಾಡು ಕೋಳಿ, ಮೊಲ ಸೇರಿದಂತೆ ಸಣ್ಣಪುಟ್ಟ ಕಾಡು ಪ್ರಾಣಿಗಳು ಕಣ್ಣಿಗೆ ಬೀಳುತ್ತವೆ. ಆದರೆ ಅವತ್ತು ಬೆಟ್ಟದಲ್ಲಿ ಜನ ಸೇರಿದ್ದರಿಂದ ನಮಗೆ ಯಾವ ಸಣ್ಣ ಪ್ರಾಣಿಗಳಾದರೂ ನೋಡಲು ಸಿಗಲಿಲ್ಲ.

ಮಧ್ಯರಾತ್ರಿ 2 ಗಂಟೆ ಸುಮಾರಿಗೆ ದೇವಸ್ಥಾನ ತಲುಪಿದೆವು. ಶಿವರಾತ್ರಿ ಹಬ್ಬವನ್ನು ಆ ದೇವಸ್ಥಾನದಲ್ಲಿ ಬಹಳ ಭಕ್ತಿಯಿಂದ ರಾತ್ರಿಪೂತ್ರಿ ಆಚರಣೆ ಮಾಡುತ್ತಾರೆ. ಸ್ಥಳೀಯರ ಭಜನೆ ಮುಂದುವರಿದಿತ್ತು. ನಾವು ದೇವಸ್ಥಾನ ನೋಡಿ, ದೇವರಿಗೆ ನಮಸ್ಕರಿಸಿದೆವು. ಬೆಟ್ಟದ ಮೇಲೆ ಪಾಳೆಗಾರರು ನಿರ್ಮಿಸಿದ್ದ ಕೋಟೆ ಇದೆಯಾದರೂ ಈಗ ಅದು ನಾಶವಾಗಿದೆ. ಮಳೆ ಬಂದರೆ ರಕ್ಷಣೆ ಪಡೆಯಲು ಹಾಗೂ ಅಡುಗೆ ಮಾಡಿಕೊಂಡು ಕುಳಿತು ಊಟ ಮಾಡಲು ಕೋಟೆಯಲ್ಲಿ ಸ್ಥಳಾವಕಾಶವಿದೆ. ನಾವು ದೇವಸ್ಥಾನದಿಂದ ಸ್ವಲ್ಪ ದೂರದಲ್ಲಿರುವ ಕೋಟೆಯ ಆವರಣದಲ್ಲಿ ಫೈರ್ ಕ್ಯಾಂಪ್ ಹಾಕಿದೆವು.

ಬೆಟ್ಟದ ಕೆಳಗೆ, ಅರಣ್ಯದ ಒಳಗೆ ಚಳಿಯ ಅನುಭವ ಆಗಲೇ ಇಲ್ಲ. ಆದರೆ ಮೇಲಕ್ಕೆ ಹೋದಂತೆ ಚಳಿ ಗೊತ್ತಾಗುತ್ತಿತ್ತು. ಬೆಟ್ಟದ ತುತ್ತತುದಿಯಲ್ಲಿ ವಿಪರೀತ ಚಳಿ. ಮೂರು ತಾಸು ಅಲ್ಲಿ ಕಳೆದು ಮುಂಜಾನೆ 5 ಗಂಟೆ ಹೊತ್ತಿಗೆ ಬೆಟ್ಟ ಹತ್ತಿದ್ದ ಕಾಲು ಹಾದಿಯ ಮೂಲಕವೇ ಕೆಳಗಿಳಿಯಲು ಆರಂಭಿಸಿದೆವು. 7 ಗಂಟೆಗೆ ಬೆಟ್ಟದ ಕೆಳಗಿದ್ದೆವು. ಈ ಬೆಟ್ಟದ ಮೇಲೆ ನೀರು ಬಿಟ್ಟರೆ ಏನೂ ಸಿಗಲ್ಲ. ಎಲ್ಲ ಅಗತ್ಯ ಸಾಮಗ್ರಿಗಳನ್ನು ಕೊಂಡೊಯ್ಯಬೇಕು. ರಾತ್ರಿ ಚಾರಣಕ್ಕೆ ಹೋಗುವವರು ಬೆಳಕಿಗಾಗಿ ಮೇಣದ ಬತ್ತಿಗಳನ್ನು ತೆಗೆದುಕೊಂಡು ಹೋಗಬೇಕು. ಬೆಟ್ಟದ ಮೇಲೆ ಯಾವುದೇ ಪ್ಲಾಸ್ಟಿಕ್‌ ವಸ್ತುಗಳನ್ನು ಬಿಸಾಡಬಾರದು.

ಬೆಂಗಳೂರಿಗೆ ಹತ್ತಿರದಲ್ಲಿ ತುಂಬಾ ಚೆನ್ನಾಗಿರುವ ಕಾಡು ಪ್ರದೇಶಗಳಲ್ಲಿ ಮಾಕಳಿದುರ್ಗವೂ ಒಂದು. ಶಿವರಾತ್ರಿಗೆ ಎಲ್ಲರೂ ಜಾಗರಣೆ ಮಾಡುತ್ತಾರೆ. ನಾವು ಚಾರಣ ಜಾಗರಣೆ ಮಾಡಬೇಕು ಎಂಬ ಉದ್ದೇಶದಿಂದ ಈ ಚಾರಣ ಕೈಗೊಂಡಿದ್ದೆವು. 2016ರ ಶಿವರಾತ್ರಿ ದಿನ ತುಮಕೂರು ಸಮೀಪದ ಶಿವಗಂಗೆ ಬೆಟ್ಟಕ್ಕೆ ಹೋಗಿದ್ದೆವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT