ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಬಿ’ ವಲಯಕ್ಕೆ ಜಾರಿದ ಆತಿಥೇಯರು

ಫಿಬಾ ಮಹಿಳೆಯರ ಏಷ್ಯಾಕಪ್ ಬ್ಯಾಸ್ಕೆಟ್‌ಬಾಲ್ ಟೂರ್ನಿ
Last Updated 27 ಸೆಪ್ಟೆಂಬರ್ 2019, 19:45 IST
ಅಕ್ಷರ ಗಾತ್ರ

ಬೆಂಗಳೂರು: ಎರಡು ವರ್ಷಗಳ ಹಿಂದೆ ಅಜೇಯ ಓಟದ ಮೂಲಕ ‘ಎ’ ವಲಯಕ್ಕೆ ಬಡ್ತಿ ಪಡೆದ ಕಂಠೀರವ ಕ್ರೀಡಾಂಗಣದಲ್ಲೇ ಭಾರತ ಮಹಿಳೆಯರ ಬ್ಯಾಸ್ಕೆಟ್‌ಬಾಲ್ ತಂಡ ಶುಕ್ರವಾರ ನಿರಾಸೆ ಕಂಡಿತು. ಮಧ್ಯಾಹ್ನ ನಡೆದ ಫಿಬಾ ಮಹಿಳೆಯರ ಏಷ್ಯಾಕಪ್ ಬ್ಯಾಸ್ಕೆಟ್‌ಬಾಲ್ ಟೂರ್ನಿಯ ಪಂದ್ಯದಲ್ಲಿ ಫಿಲಿಪ್ಪಿನ್ಸ್‌ಗೆ 78–92ರಲ್ಲಿ ಮಣಿದ ಭಾರತ ‘ಬಿ’ ವಲಯಕ್ಕೆ ಹಿಂಬಡ್ತಿ ಪಡೆಯಿತು. ಹೀಗಾಗಿ ‘ಎ’ ವಲಯದ ಗೌರವ ಒಂದೇ ಅವಧಿಯಲ್ಲಿ ಕಳೆದುಕೊಂಡಿತು.

‘ಎ’ ವಲಯದಲ್ಲೇ ಉಳಿಯಬೇಕಾದರೆ ಎಡಡೂ ತಂಡಗಳಿಗೆ ಶುಕ್ರವಾರದ ಪಂದ್ಯದಲ್ಲಿ ಗೆಲುವು ಅನಿಯವಾರ್ಯವಾಗಿತ್ತು. 2004ರಿಂದ 2015ರ ವರೆಗೆ ಏಷ್ಯನ್ ಚಾಂಪಿಯನ್‌ಷಿಪ್‌ನಲ್ಲಿ ಉಭಯ ತಂಡಗಳು 4 ಬಾರಿ ಮುಖಾಮುಖಿಯಾಗಿದ್ದವು. ಮೊದಲ ಮೂರು ಪಂದ್ಯಗಳಲ್ಲಿ ಭಾರತ ಗೆದ್ದಿದ್ದರೆ, 2015ರಲ್ಲಿ ಫಿಲಿಪ್ಪಿನ್ಸ್‌ ಜಯಿಸಿತ್ತು. ಹೀಗಾಗಿ ಸೇಡು ತೀರಿಸಿಕೊಳ್ಳುವ ಉದ್ದೇಶವೂ ಭಾರತ ತಂಡಕ್ಕಿತ್ತು. ಆದರೆ ಎರಡನೇ ಕ್ವಾರ್ಟರ್‌ ಬಿಟ್ಟು ಉಳಿದೆಲ್ಲ ಅವಧಿಯಲ್ಲೂ ಫಿಲಿಪ್ಪಿನ್ಸ್‌ ಮೇಲುಗೈ ಸಾಧಿಸಿತು.

ಪಂದ್ಯದ ಆರಂಭದಲ್ಲೇ ಭಾರತದ ಆಸೆಗೆ ಎದುರಾಳಿ ತಂಡದವರು ತಣ್ಣೀರು ಸುರಿದರು. ಆಫ್ರಿಲ್ ಬೆರ್ನಾಡಿನೊ ಮತ್ತು ಜಾನಿ ಪೆಂಟೊಜೊಸ್ ಅವರ ಅಮೋಘ ಆಟಕ್ಕೆ ಭಾರತ ತಂಡ ಕಕ್ಕಾಬಿಕ್ಕಿಯಾಯಿತು. ಲಭಿಸಿದ ಅವಕಾಶಗಳನ್ನು ಕೈಚೆಲ್ಲದ ಫಿಲಿಪ್ಪಿನ್ಸ್ ಗೋಲುಗಳನ್ನು ಗಳಿಸುತ್ತ ಮುನ್ನುಗ್ಗಿದರೆ, ಭಾರತಕ್ಕೆ ಯಾವ ವಿಭಾಗದಲ್ಲೂ ನಿರೀಕ್ಷೆಗೆ ತಕ್ಕ ಸಾಮರ್ಥ್ಯ ತೋರಲಾಗಲಿಲ್ಲ. 3 ಪಾಯಿಂಟ್ ಗಳಿಸುವ ಐದೂ ಅವಕಾಶಗಳನ್ನೂ ಕೈಚೆಲ್ಲಿತು. ಇದು, ಮೊದಲ ಕ್ವಾರ್ಟರ್‌ನಲ್ಲೇ ಹಿನ್ನಡೆಗೆ ಕಾರಣವಾಯಿತು.

ಎರಡನೇ ಕ್ವಾರ್ಟರ್‌ನಲ್ಲಿ ಭಾರತ ಚೇತರಿಕೆ ಕಂಡಿತು. ಆದರೂ ಮುನ್ನಡೆ ಬಿಟ್ಟುಕೊಡಲು ಪ್ರವಾಸಿ ತಂಡ ಸಿದ್ಧವಿರಲಿಲ್ಲ. ಎರಡು ಬಾರಿ ಮೂರು ಪಾಯಿಂಟ್ ಗಳಿಸಿದ ಆತಿಥೇಯರು 18 ಫ್ರೀ ಥ್ರೋಗಳ ಪೈಕಿ 8ರಲ್ಲಿ ಯಶಸ್ಸು ಕಂಡರು. ಕ್ವಾರ್ಟರ್‌ನ ಕೊನೆಯ ನಿಮಿಷದ ವರೆಗೂ ಭಾರತ 34–41ರ ಹಿನ್ನಡೆಯಲ್ಲಿತ್ತು. ಈ ಸಂದರ್ಭದಲ್ಲಿ ಶಿರೀನ್ ಲಿಮಯೆ ಮೂರು ಪಾಯಿಂಟ್ ಗಳಿಸಿ ಹಿನ್ನಡೆ ತಗ್ಗಿಸಿದರು. ಕೊನೆಯಲ್ಲಿ ಲಭಿಸಿದ ಎರಡು ಫ್ರೀ ಥ್ರೋಗಳಲ್ಲಿ ಒಂದ‌ನ್ನಷ್ಟೇ ಗೋಲಾಗಿ ಪರಿವರ್ತಿಸಲು ಲಿಮಯೆಗೆ ಸಾಧ್ಯವಾಯಿತು.

ಮುನ್ನಡೆ ಬಿಟ್ಟುಕೊಡದ ಪ್ರವಾಸಿ ತಂಡ: ಕೇವಲ ಮೂರು ಪಾಯಿಂಟ್‌ಗಳ ಹಿನ್ನಡೆಯೊಂದಿಗೆ ದ್ವಿತೀಯಾರ್ಧದಲ್ಲಿ ಕಣಕ್ಕೆ ಇಳಿದ ರಾಜಪ್ರಿಯದರ್ಶಿನಿ ಬಳಗ ರಕ್ಷಣೆಯಲ್ಲಿ ಮೋಹಕ ಆಟವಾಡಿತು. ಚುರುಕಿನ ಪಾಸಿಂಗ್‌ಗಳೂ ಮುದ ನೀಡಿದವು. ಸಮಬಲ ಸಾಧಿಸುವತ್ತ ತಂಡ ದಾಪುಗಾಲು ಇಡುತ್ತಿದ್ದಂತೆ ಎದುರಾಳಿಗಳು ತಿರುಗೇಟು ನೀಡಿದರು. ಅನಾ ಅಲಿಸಿಯಾ ಮತ್ತು ರಿಯಾ ಜಾಯ್‌ ಒಟ್ಟು ಮೂರು ಬಾರಿ 3 ಪಾಯಿಂಟ್‌ ಗಳಿಸಿ ಫಿಲಿಪ್ಪಿನ್ಸ್ ಮುನ್ನಡೆಯನ್ನು ಉಳಿಸಿಕೊಳ್ಳಲು ನೆರವಾದರು.

ಕೊನೆಯ ಕ್ವಾರ್ಟರ್‌ನಲ್ಲಿ ಜಿದ್ದಾಜಿದ್ದಿಯ ಪೈಪೋಟಿ ಕಂಡು ಬಂತು. 6 ಪಾಯಿಂಟ್‌ಗಳ ಮುನ್ನಡೆಯ ಬಲದಲ್ಲಿ ಕೆಚ್ಚೆದೆಯಿಂದ ಆಡಿದ ಫಿಲಿಪ್ಪಿನ್ಸ್‌ ಕೊನೆಯ 5 ನಿಮಿಷ ಬಾಕಿ ಇದ್ದಾಗ ಮುನ್ನಡೆಯನ್ನು 13 ಪಾಯಿಂಟ್‌ಗಳಿಗೆ ಹೆಚ್ಚಿಸಿತು. ಒತ್ತಡ ಹೆಚ್ಚಿದಂತೆ, ಫ್ರೀ ಥ್ರೋಗಳನ್ನು ಕೂಡ ಭಾರತ ಕೈಚೆಲ್ಲಿತು. ಫಿಲಿಪ್ಪಿನ್ಸ್‌ನ ಬ್ಯಾಸ್ಕೆಟ್‌ ಗೋಲುಗಳಿಂದ ತುಂಬಿ ತುಳುಕಿತು. ಆಟಗಾರ್ತಿಯರ ಮುಖದಲ್ಲಿ ನಗು ಅರಳಿತು. ಭಾರತದ ಶಿರೀನ್ ಲಿಮಯೆ 23 ಮತ್ತು ಬಾಂಧವ್ಯ 12 ಪಾಯಿಂಟ್ ಗಳಿಸಿದರೆ, ಫಿಲಿಪ್ಪಿನ್ಸ್‌ನ ಜಾನಿ ಪೆಂಟೆಜೋಸ್ 18 ಪಾಯಿಂಟ್ ಕಲೆ ಹಾಕಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT