ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೆಮಿಗೆ ಶಿವ ಥಾಪಾ, ಅಮಿತ್‌ ಪಂಘಾಲ್‌

ಇಂಡಿಯಾ ಓಪನ್‌ ಬಾಕ್ಸಿಂಗ್‌ ಟೂರ್ನಿ: ಭಾರತದ ಸ್ಪರ್ಧಿಗಳ ಗೆಲುವಿನ ಓಟ
Last Updated 22 ಮೇ 2019, 17:01 IST
ಅಕ್ಷರ ಗಾತ್ರ

ಗುವಾಹಟಿ: ಭಾರತದ ಶಿವ ಥಾಪಾ ಮತ್ತು ಅಮಿತ್‌ ಪಂಘಾಲ್‌ ಅವರು ಇಂಡಿಯಾ ಓಪನ್‌ ಬಾಕ್ಸಿಂಗ್‌ ಟೂರ್ನಿಯಲ್ಲಿ ಸೆಮಿಫೈನಲ್‌ ಪ್ರವೇಶಿಸಿದ್ದಾರೆ.

ಬುಧವಾರ ನಡೆದ 60 ಕೆ.ಜಿ.ವಿಭಾಗದ ಮೊದಲ ಸುತ್ತಿನ ಹಣಾಹಣಿಯಲ್ಲಿ ಶಿವ ಥಾಪಾ 5–0ಪಾಯಿಂಟ್ಸ್‌ನಿಂದ ಮಾರಿಷಸ್‌ನ ಹೆಲೆನ್‌ ಡೆಮಿಯೆನ್‌ ಅವರನ್ನು ಸೋಲಿಸಿದರು.

ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಕಂಚಿನ ಪದಕ ಜಯಿಸಿದ ಹಿರಿಮೆ ಹೊಂದಿರುವ ಭಾರತದ ಬಾಕ್ಸರ್‌, ಶರವೇಗದ ಪಂಚ್‌ಗಳ ಮೂಲಕ ಎದುರಾಳಿಯನ್ನು ಕಂಗೆಡಿಸಿದರು.

ಸೆಮಿಫೈನಲ್‌ನಲ್ಲಿ ಶಿವ, ಪೋಲೆಂಡ್‌ನ ಡಿ ಕ್ರಿಸ್ಟಿಯನ್‌ ಜೆಪಾನ್‌ಸ್ಕಿ ವಿರುದ್ಧ ಸೆಣಸಲಿದ್ದಾರೆ.ಇದೇ ವಿಭಾಗದಲ್ಲಿ ರಿಂಗ್‌ಗೆ ಇಳಿದಿದ್ದ ಅಂಕಿತ್ ಮತ್ತು ಮನೀಷ್‌ ಕೌಶಿಕ್‌ ಅವರೂ ನಾಲ್ಕರ ಘಟ್ಟ ಪ್ರವೇಶಿಸಿದ್ದಾರೆ.

52 ಕೆ.ಜಿ. ವಿಭಾಗದ ಪ್ರಥಮ ಸುತ್ತಿನ ಪೈಪೋಟಿಯಲ್ಲಿ ಪಂಘಾಲ್‌ 5–0ರಲ್ಲಿ ಥಾಯ್ಲೆಂಡ್‌ನ ಚಾಕಾಪೊಂಗ್‌ ಚಾನ್‌ಪಿರೋಮ್ ಎದುರು ವಿಜಯಿಯಾದರು.

ಪಂಘಾಲ್‌ ಅವರು ಹೋದ ವರ್ಷ ನಡೆದಿದ್ದ ಏಷ್ಯನ್‌ ಚಾಂಪಿಯನ್‌ಷಿಪ್‌ನಲ್ಲಿ ಚಿನ್ನದ ಪದಕ ಜಯಿಸಿದ್ದರು. ಈ ವರ್ಷದ ಆರಂಭದಲ್ಲಿ ಆಯೋಜನೆಯಾಗಿದ್ದ ಸ್ಟ್ರಾಂಜಾ ಸ್ಮಾರಕ ಬಾಕ್ಸಿಂಗ್‌ ಟೂರ್ನಿಯಲ್ಲೂ ಚಿನ್ನದ ಪದಕಕ್ಕೆ ಮುತ್ತಿಕ್ಕಿದ್ದರು.

ನಾಲ್ಕರ ಘಟ್ಟದ ಹೋರಾಟದಲ್ಲಿ ಪಂಘಾಲ್‌ ಅವರು ಭಾರತದ ಮತ್ತೊಬ್ಬ ಬಾಕ್ಸರ್‌, ರಾಷ್ಟ್ರೀಯ ಚಾಂಪಿಯನ್‌ ಪಿ.ಎಲ್‌. ಪ್ರಸಾದ್‌ ಎದುರು ಸೆಣಸಲಿದ್ದಾರೆ.

52 ಕೆ.ಜಿ.ವಿಭಾಗದಲ್ಲಿ ಕಣದಲ್ಲಿದ್ದ ಸಚಿನ್‌ ಸಿವಾಚ್‌ ಕೂಡಾ ಸೆಮಿಫೈನಲ್‌ಗೆ ಲಗ್ಗೆ ಇಟ್ಟರು.ಮೊದಲ ಸುತ್ತಿನಲ್ಲಿ ಸಚಿನ್‌ 4–1ಯಿಂದ ಫಿಲಿಪ್ಪೀನ್ಸ್‌ನ ರೇಗನ್‌ ಲೇಡನ್‌ ಅವರನ್ನು ಮಣಿಸಿದರು.

ಹೋದ ವರ್ಷ ಅಸ್ತಾನದಲ್ಲಿ ನಡೆದಿದ್ದ ಪ್ರೆಸಿಡೆಂಟ್ಸ್‌ ಕಪ್‌ ಟೂರ್ನಿಯ ಕ್ವಾರ್ಟರ್‌ ಫೈನಲ್‌ನಲ್ಲಿ ರೇಗನ್‌ ಅವರು ಸಚಿನ್‌ ಎದುರು ಗೆದ್ದಿದ್ದರು. ಭಾರತದ ಆಟಗಾರ ಹಿಂದಿನ ಸೋಲಿಗೆ ಮುಯ್ಯಿ ತೀರಿಸಿಕೊಂಡರು.

ಮುಂದಿನ ಸುತ್ತಿನಲ್ಲಿ ಸಚಿನ್‌ ಅವರು ಭಾರತದವರೇ ಆದ ಗೌರವ್‌ ಸೋಳಂಕಿ ಎದುರು ಪೈಪೋಟಿ ನಡೆಸಲಿದ್ದಾರೆ.ಮೊದಲ ಸುತ್ತಿನ ಇನ್ನೊಂದು ಪೈಪೋಟಿಯಲ್ಲಿ ಗೌರವ್‌ 5–0ಯಿಂದ ಮಾರಿಷಸ್‌ನ ಲೂಯಿಸ್‌ ಫ್ಲೀವರ್ಟ್‌ ಎದುರು ಗೆದ್ದರು.ಗೌರವ್‌ ಅವರು ಕಾಮನ್‌ವೆಲ್ತ್‌ ಕ್ರೀಡಾಕೂಟದಲ್ಲಿ ಚಿನ್ನದ ಪದಕ ಗೆದ್ದ ಸಾಧನೆ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT