ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬ್ಯಾಡ್ಮಿಂಟನ್ ಟೂರ್ನಿ: ಸೇನ್‌ಗೆ ಒಲಿದ ಇಂಡಿಯಾ ಓಪನ್‌ ಪಟ್ಟ

ವಿಶ್ವ ಚಾಂಪಿಯನ್‌ ಲೊಹ್‌ ಕೀನ್‌ ಯಿವ್‌ಗೆ ಸೋಲು
Last Updated 16 ಜನವರಿ 2022, 18:17 IST
ಅಕ್ಷರ ಗಾತ್ರ

ನವದೆಹಲಿ: ಭಾರತದ ಯುವ ಪ್ರತಿಭೆ ಲಕ್ಷ್ಯ ಸೇನ್‌, ಇಂಡಿಯಾ ಓಪನ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಮೋಡಿ ಮಾಡಿದರು.

ಭಾನುವಾರ ನಡೆದ ಫೈನಲ್‌ನಲ್ಲಿ ಲಕ್ಷ್ಯ, ವಿಶ್ವ ಚಾಂಪಿಯನ್ ಸಿಂಗಪುರದ ಲೊಹ್ ಕೀನ್ ಯಿವ್ ಅವರನ್ನು ಮಣಿಸಿ ತಮ್ಮ ಮೊದಲ ಸೂಪರ್‌ 500 ಟ್ರೋಫಿ ಗೆದ್ದರು.

ಡಬಲ್ಸ್ ವಿಭಾಗದಲ್ಲಿ ಸಾತ್ವಿಕ್ ಸಾಯಿರಾಜ್ ರಣಕಿರೆಡ್ಡಿ– ಚಿರಾಗ್ ಶೆಟ್ಟಿ ಕೂಡ ಐತಿಹಾಸಿಕ ಸಾಧನೆ ಮಾಡಿದರು.ಡಬಲ್ಸ್ ವಿಭಾಗದಲ್ಲಿ ಇಂಡಿಯಾ ಓಪನ್ ಟ್ರೋಫಿ ಜಯಿಸಿದ ದೇಶದ ಮೊದಲ ಜೋಡಿ ಎಂಬ ಶ್ರೇಯ ಗಳಿಸಿದರು.

20 ವರ್ಷದ ಲಕ್ಷ್ಯ, ಕಳೆದ ತಿಂಗಳು ಸ್ಪೇನ್‌ನಲ್ಲಿ ನಡೆದ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಕಂಚಿನ ಪದಕ ಗೆದ್ದುಕೊಂಡಿದ್ದರು.

ಇಲ್ಲಿ ನಡೆದ ಪುರುಷರ ಸಿಂಗಲ್ಸ್ ವಿಭಾಗದ ಪ್ರಶಸ್ತಿ ಸುತ್ತಿನಲ್ಲಿ24-22, 21-17ರಿಂದ ಲೊಹ್‌ ಕೀನ್‌ ಅವರನ್ನು ಪರಾಭವಗೊಳಿಸಿದರು. 54 ನಿಮಿಷಗಳ ಪೈಪೋಟಿಯಲ್ಲಿ ಜಯ ಒಲಿಸಿಕೊಂಡರು.

ಭಾನುವಾರ ಆಕ್ರಮಣಕಾರಿ ಆಟದ ಮೂಲಕ ಗಮನಸೆಳೆದ ಲಕ್ಷ್ಯ, ಅದಕ್ಕೆ ಸೂಕ್ತ ಫಲವನ್ನೂ ಪಡೆದರು.

ಲಕ್ಷ್ಯ ಅವರಿಗೆ ಇದು ವೃತ್ತಿಜೀವನದ ಅತಿದೊಡ್ಡ ಪ್ರಶಸ್ತಿಯಾಗಿದೆ.

ಅವರು ಈ ಹಿಂದೆ ಎರಡು ಸೂಪರ್ 100 (ಡಚ್‌ ಮತ್ತು ಸಾರ್‌ಲೊರ್‌ಲಕ್ಷ್‌ ಓಪನ್‌) ಮತ್ತು ಮೂರು ಇಂಟರ್‌ನ್ಯಾಷನಲ್‌ ಚಾಲೆಂಜ್ (ಬೆಲ್ಜಿಯಂ, ಸ್ಕಾಟ್ಲೆಂಡ್‌ ಮತ್ತು ಬಾಂಗ್ಲಾದೇಶ) ಟೂರ್ನಿಗಳಲ್ಲಿ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದಾರೆ. ಕೋವಿಡ್‌ ಕಾರಣ ಅವರ ಯಶಸ್ಸಿನ ಓಟಕ್ಕೆ ಸ್ವಲ್ಪ ಹಿನ್ನಡೆಯಾಗಿತ್ತು.

ಕಳೆದ ವರ್ಷ ಹೈಲೊ ಓಪನ್ ಟೂರ್ನಿಯಲ್ಲಿ ಸೆಮಿಫೈನಲ್‌, ವಿಶ್ವ ಟೂರ್ ಫೈನಲ್ಸ್‌ನಲ್ಲಿ ನಾಕೌಟ್‌ ಹಂತ ಪ್ರವೇಶಿಸಿದ್ದರು.

ಚಿರಾಗ್‌– ಸಾತ್ವಿಕ್‌ ಚಾರಿತ್ರಿಕ ಸಾಧನೆ

ಮೂರು ಬಾರಿಯ ಚಾಂಪಿಯನ್‌ಗಳ ಸವಾಲು ಮೀರಿದ ಭಾರತದ ಸಾತ್ವಿಕ್ ಸಾಯಿರಾಜ್ ರಣಕಿರೆಡ್ಡಿ ಪುರುಷರ ಡಬಲ್ಸ್ ವಿಭಾಗದಲ್ಲಿ ಪ್ರಶಸ್ತಿಗೆ ಮುತ್ತಿಕ್ಕಿದರು.

ವಿಶ್ವ ಕ್ರಮಾಂಕದಲ್ಲಿ 10ನೇ ಸ್ಥಾನದಲ್ಲಿರುವ ಸಾತ್ವಿಕ್– ಚಿರಾಗ್‌ ಭಾನುವಾರ ಜಿದ್ದಾಜಿದ್ದಿನ ಫೈನಲ್‌ನಲ್ಲಿ21-16, 26-24ರಿಂದ ಮೊಹಮ್ಮದ್ ಎಹಸಾನ್‌ ಮತ್ತು ಹೆಂಡ್ರಾ ಸೆಟಿಯಾವಾನ್ ಅವರನ್ನು ಮಣಿಸಿದರು.

ಈ ಜೋಡಿಯ ಎದುರು ಈ ಹಿಂದೆ ಆಡಿದ ನಾಲ್ಕು ಪಂದ್ಯಗಳಲ್ಲಿ ಕೇವಲ ಒಂದರಲ್ಲಿ ಭಾರತದ ಆಟಗಾರರು ಜಯ ಸಾಧಿಸಿದ್ದರು. ಆದರೆ ಇಲ್ಲಿ ವೀರೋಚಿತ ಗೆಲುವು ಅವರಿಗೆ ಒಲಿಯಿತು.

ಒಂದು ಹಂತದಲ್ಲಿ ತಪ್ಪು ಕೋವಿಡ್‌ ಫಲಿತಾಂಶದ ಕಾರಣ ಟೂರ್ನಿಯಲ್ಲಿ ಆಡುವ ಅವಕಾಶವನ್ನೇ ಕಳೆದುಕೊಳ್ಳಲಿದ್ದ ಜೋಡಿಯು ಪ್ರಶಸ್ತಿ ಗೆಲುವಿನವರೆಗೆ ಮುನ್ನಡೆಯಿತು.

ಮೊದಲ ಗೇಮ್‌ನ ವಿರಾಮದ ವೇಳೆಗೆ ಎರಡು ಪಾಯಿಂಟ್ಸ್ ಮಂದಿದ್ದ ಸಾತ್ವಿಕ್‌– ಚಿರಾಗ್‌ ನಂತರವೂ ಅದೇ ಲಯದೊಂದಿಗೆ ಮುಂದುವರಿದರು. ದೀರ್ಘ ರ‍್ಯಾಲಿಗಳು ಕಂಡ ಗೇಮ್‌ನಲ್ಲಿ 18–13ರಿಂದ ಮುನ್ನಡೆ ಸಾಧಿಸಿದರು. ಇಂಡೊನೇಷ್ಯಾ ಜೋಡಿ 16–18ಕ್ಕೆ ಹಿನ್ನಡೆ ತಗ್ಗಿಸಿಕೊಂಡರೂ ಮೊದಲ ಗೇಮ್‌ ಭಾರತದ ಆಟಗಾರರ ಕೈವಶವಾಗುವುದನ್ನು ತಪ್ಪಿಸಲಾಗಲಿಲ್ಲ.

ಎರಡನೇ ಗೇಮ್‌ನಲ್ಲಿ ಎಹಸಾನ್ –ಸೆಟಿಯಾವಾನ್‌ ಪ್ರಬಲ ಸ್ಪರ್ಧೆಯೊಡ್ಡಿದರು. ಆರಂಭದಲ್ಲಿ 9–6ರಿಂದ ಮುಂದಿದ್ದರು. ಆದರೆ ತಿರುಗೇಟು ನೀಡಿದ ಭಾರತದ ಜೋಡಿ ವಿರಾಮದ ಹೊತ್ತಿಗೆ 11–10ರ ಮೇಲುಗೈ ಸಾಧಿಸಿತು. ರ‍್ಯಾಲಿಗಳಲ್ಲಿ ಚುರುಕುತನ ಕಾಯ್ದುಕೊಂಡ ಸಾತ್ವಿಕ್– ಚಿರಾಗ್‌ 15–13ರಿಂದ ಮುನ್ನಡೆದರು. 17–17, 19–19ರಿಂದ ಸಮಬಲದಲ್ಲಿ ಸಾಗಿದ್ದ ಗೇಮ್‌ನಲ್ಲಿ ಇಂಡೊನೇಷ್ಯಾ ಜೋಡಿಯು ಐದು ಗೇಮ್‌ ಪಾಯಿಂಟ್ಸ್ ಕಳೆದುಕೊಂಡಿದ್ದು, ಭಾರತದ ಆಟಗಾರರಿಗೆ ವರದಾನವಾಯಿತು. ಪಂದ್ಯದೊಂದಿಗೆ ಟ್ರೋಫಿಯೂ ಕೈವಶವಾಯಿತು.

2019ರಲ್ಲಿ ಥಾಯ್ಲೆಂಡ್ ಓಪನ್ ಸೂಪರ್ 500 ಟೂರ್ನಿಯಲ್ಲಿ ಚಿರಾಗ್‌– ಸಾತ್ವಿಕ್‌ ಪ್ರಶಸ್ತಿ ಜಯಿಸಿದ್ದರು. ಅದೇ ವರ್ಷ ಫ್ರೆಂಚ್ ಓಪನ್ ಟೂರ್ನಿಯಲ್ಲಿ ಪ್ರಶಸ್ತಿ ಗೆದ್ದಿದ್ದರು. ಟೋಕಿಯೊ ಒಲಿಂಪಿಕ್ಸ್‌ಗೂ ಅರ್ಹತೆ ಗಳಿಸಿದ್ದರು.

ಪುರುಷರ ಸಿಂಗಲ್ಸ್ ಫೈನಲ್‌

ಗೇಮ್‌ ವಿವರ

ಲಕ್ಷ್ಯ ಸೇನ್‌ 24 21

ಲೊಹ್‌ ಕೀನ್ ಯಿವ್ 22 17

ಪುರುಷರ ಡಬಲ್ಸ್ ಫೈನಲ್‌

ಗೇಮ್‌ ವಿವರ

ಸಾತ್ವಿಕ್– ಚಿರಾಗ್‌ 21 26

ಎಹಸಾನ್ –ಸೆಟಿಯಾವಾನ್‌ 16 24

ಇಂಡಿಯಾ ಓಪನ್ ಟೂರ್ನಿಯಲ್ಲಿ ಭಾರತದ ಸಾಧನೆ (ಪ್ರಶಸ್ತಿ ವಿಜೇತರು)

ಪುರುಷರ ಸಿಂಗಲ್ಸ್

ಪ್ರಕಾಶ್‌ ಪಡುಕೋಣೆ (1981)

ಕಿದಂಬಿ ಶ್ರೀಕಾಂತ್‌ (2015)

ಲಕ್ಷ್ಯ ಸೇನ್‌ (2022)

ಮಹಿಳಾ ಸಿಂಗಲ್ಸ್

ಸೈನಾ ನೆಹ್ವಾಲ್‌ (2010, 2015)

ಪಿ.ವಿ.ಸಿಂಧು (2017)

ಮಿಶ್ರ ಡಬಲ್ಸ್

ವಿ.ದಿಜು– ಜ್ವಾಲಾ ಗುಟ್ಟಾ (2010)

ಪುರುಷರ ಡಬಲ್ಸ್

ಸಾತ್ವಿಕ್ ಸಾಯಿರಾಜ್ ರಣಕಿರೆಡ್ಡಿ– ಚಿರಾಗ್ ಶೆಟ್ಟಿ (2022)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT