ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಯದ ಮುನ್ನುಡಿ ಬರೆದ ಭಾರತ

ಮೊದಲ ಕ್ವಾರ್ಟರ್‌ನಲ್ಲೇ ಎರಡು ಗೋಲು; ಸಿಮ್ರನ್‌ ಜೀತ್ ಸಿಂಗ್‌ಗೆ ಎರಡು ಗೋಲುಗಳು
Last Updated 28 ನವೆಂಬರ್ 2018, 19:03 IST
ಅಕ್ಷರ ಗಾತ್ರ

ಭುವನೇಶ್ವರ: ದೇವಾಲಯಗಳ ನಗರಿಯಲ್ಲಿ ಬುಧವಾರ ಸಂಜೆ ಆತಿಥೇಯ ಭಾರತ ಹಾಕಿ ತಂಡದ ಆಟಗಾರರು ಭರ್ಜರಿ ಆಟವಾಡಿದರು. ತವರಿನ ಪ್ರೇಕ್ಷಕರನ್ನು ಮೋಹಕ ಗೋಲುಗಳ ಮೂಲಕ ರಂಜಿಸಿದ ಭಾರತದ ಆಟಗಾರರು 5–0ಯಿಂದ ದಕ್ಷಿಣ ಆಫ್ರಿಕಾ ಬಳಗವನ್ನು ಸೋಲಿಸಿ, ವಿಶ್ವಕಪ್ ಹಾಕಿ ಟೂರ್ನಿಯಲ್ಲಿ ಶುಭಾರಂಭ ಮಾಡಿದರು.

ಇಲ್ಲಿನ ಕಳಿಂಗ ಕ್ರೀಡಾಂಗಣದಲ್ಲಿ ಬುಧವಾರ ರಾತ್ರಿ ನಡೆದ ಪಂದ್ಯದಲ್ಲಿ ಎರಡು ಗೋಲು ಗಳಿಸಿದ ಸಿಮ್ರನ್‌ಜೀತ್ ಸಿಂಗ್ ಮತ್ತು ತಲಾ ಒಂದೊಂದು ಗೋಲು ಗಳಿಸಿದ ಮನದೀಪ್ ಸಿಂಗ್, ಆಕಾಶದೀಪ್ ಸಿಂಗ್ ಮತ್ತು ಲಲಿತ್ ಉಪಾಧ್ಯಾಯ ಜಯದ ರೂವಾರಿ ಎನಿಸಿದರು.

ವಿಶ್ವಕಪ್‌ನಲ್ಲಿ ಭಾರತ ಮತ್ತು ದಕ್ಷಿಣ ಆಫ್ರಿಕಾ ತಂಡಗಳು ಈ ಹಿಂದೆ ಒಟ್ಟು ನಾಲ್ಕು ಬಾರಿ ಮುಖಾಮುಖಿಯಾಗಿದ್ದವು. ಈ ಪೈಕಿ ಮೂರು ಪಂದ್ಯಗಳು ಡ್ರಾದಲ್ಲಿ ಮುಕ್ತಾಯಗೊಂಡಿದ್ದರೆ ಒಂದರಲ್ಲಿ ಭಾರತ ಗೆದ್ದಿತ್ತು.

ಗೋಲು ಗಳಿಕೆಯಲ್ಲಿ ಉಭಯ ತಂಡಗಳು ಸಮಬಲವನ್ನು ಹಂಚಿಕೊಂಡಿದ್ದವು. ಭಾರತ ಒಟ್ಟು ಏಳು ಗೋಲು ಗಳಿಸಿದ್ದರೆ ದಕ್ಷಿಣ ಆಫ್ರಿಕಾ ಆರು ಗೋಲು ಗಳಿಸಿತ್ತು. ಕಳೆದ ಬಾರಿಯ ವಿಶ್ವಕಪ್ ನಂತರ ಉಭಯ ತಂಡಗಳು ಎರಡು ಬಾರಿ ಸೆಣಸಿವೆ. ಎರಡಲ್ಲಿಯೂ ಭಾರತ ಗೆದ್ದಿದೆ. ಈ ಪಂದ್ಯಗಳಲ್ಲಿ ಭಾರತ ಒಟ್ಟು ಏಳು ಬಾರಿ ಚೆಂಡನ್ನು ಗುರಿಮುಟ್ಟಿಸಿತ್ತು.

ಬುಧವಾರದ ಪಂದ್ಯದಲ್ಲೂ ಭಾರತ ಪಾರಮ್ಯ ಮೆರೆಯಿತು. ವಿಶ್ವ ರ‍್ಯಾಂಕಿಂಗ್‌ನಲ್ಲಿ 15ನೇ ಸ್ಥಾನದಲ್ಲಿರುವ ಹರಿಣಗಳ ನಾಡಿನ ತಂಡವನ್ನು ಐದನೇ ಸ್ಥಾನದಲ್ಲಿರುವ ಭಾರತ ಆರಂಭದಲ್ಲೇ ಕಾಡಿತು. ಮೊದಲ ಕ್ವಾರ್ಟರ್‌ನಲ್ಲೇ ಎರಡು ಗೋಲು ಗಳಿಸಿ ಮೇಲುಗೈ ಸಾಧಿಸಿತು. ಆದರೆ ಎರಡನೇ ಕ್ವಾರ್ಟರ್‌ನಲ್ಲಿ ದಕ್ಷಿಣ ಆಫ್ರಿಕಾದ ಬಲಿಷ್ಠ ರಕ್ಷಣಾ ಗೋಡೆ ಕೆಡವಲು ಭಾರತಕ್ಕೆ ಸಾಧ್ಯವಾಗಲಿಲ್ಲ. ಮೂರನೇ ಕ್ವಾರ್ಟರ್‌ನಲ್ಲಿ ಮತ್ತೆ ಪ್ರಬಲ ದಾಳಿ ನಡೆಸಿ ಮುನ್ನಡೆಯನ್ನು ಹೆಚ್ಚಿಸಿಕೊಂಡಿತು.

ಖಾತೆ ತೆರೆದ ಮನದೀಪ್‌: 10ನೇ ನಿಮಿಷದಲ್ಲಿ ಲಭಿಸಿದ ಪೆನಾಲ್ಟಿ ಕಾರ್ನರ್‌ ಅವಕಾಶದಲ್ಲಿ ಮೋಹಕ ಗೋಲು ಗಳಿಸಿದ ಮನದೀಪ್ ಸಿಂಗ್‌ ಭಾರತದ ಖಾತೆ ತೆರೆದರು. ಎರಡು ನಿಮಿಷಗಳ ನಂತರ ಚೆಂಡನ್ನು ಗುರಿ ಸೇರಿಸಿದ ಆಕಾಶದೀಪ್ ಸಿಂಗ್‌ ಮುನ್ನಡೆಯನ್ನು ಹೆಚ್ಚಿಸಿದರು. ಅಂತರರಾಷ್ಟ್ರೀಯ ಹಾಕಿಯಲ್ಲಿ ಆಕಾಶ ಅವರ 60ನೇ ಗೋಲು ಆಗಿತ್ತು ಇದು.

ದ್ವಿತೀಯಾರ್ಧದಲ್ಲಿ ಭರ್ಜರಿ ಆಟ: ದ್ವಿತೀಯಾರ್ಧದಲ್ಲಿ ಆತಿಥೇಯರು ಎದುರಾಳಿಗಳನ್ನು ಕಂಗೆಡಿಸಿದರು. ಮೂರನೇ ಕ್ವಾರ್ಟರ್‌ನಲ್ಲಿ ಸಿಮ್ರನ್‌ಜೀತ್ ಸಿಂಗ್‌ ಭಾರತದ ಮುನ್ನಡೆಯನ್ನು ಹೆಚ್ಚಿಸಿದರು. 43ನೇ ನಿಮಿಷದಲ್ಲಿ ಅವರು ಫೀಲ್ಡ್ ಗೋಲು ಗಳಿಸಿದರು. ಈ ಕ್ವಾರ್ಟರ್‌ನ ಕೊನೆಯ ನಿಮಿಷದಲ್ಲಿ ಲಲಿತ್‌ ಉಪಾಧ್ಯಾಯ ಗಳಿಸಿದ ಗೋಲಿನ ಮೂಲಕ ಭಾರತ 4–0 ಮುನ್ನಡೆಯೊಂದಿಗೆ ಸಂಭ್ರಮಿಸಿತು. ಕೊನೆಯ ಕ್ವಾರ್ಟರ್‌ನ ಮೊದಲ ನಿಮಿಷದಲ್ಲಿ ಸಿಮ್ರನ್‌ಜೀತ್‌ ಸಿಂಗ್ ಮತ್ತೊಮ್ಮೆ ಚೆಂಡನ್ನು ಗುರಿ ಸೇರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT