ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾಕಿ ವಿಶ್ವಕಪ್‌: ಗತವೈಭವ ಮರಳಿ ಪಡೆಯುವ ಯತ್ನ, ಭಾರತಕ್ಕೆ ಸ್ಪೇನ್ ಸವಾಲು

Last Updated 12 ಜನವರಿ 2023, 19:30 IST
ಅಕ್ಷರ ಗಾತ್ರ

ರೂರ್ಕೆಲಾ: ಹಾಕಿ ಕ್ರೀಡೆಯ ಗತವೈಭವ ಮರಳಿ ಪಡೆಯಬೇಕೆಂಬ ಗುರಿ ಹೊಂದಿರುವ ಭಾರತ ತಂಡ ಎಫ್‌ಐಎಚ್‌ ವಿಶ್ವಕಪ್‌ ಟೂರ್ನಿಯಲ್ಲಿ ಪ್ರಶಸ್ತಿಯೆಡೆಗಿನ ಅಭಿಯಾನವನ್ನು ಶುಕ್ರವಾರ ಆರಂಭಿಸಲಿದೆ.

ರೂರ್ಕೆಲಾದ ಬಿರ್ಸಾ ಮುಂಡಾ ಕ್ರೀಡಾಂಗಣದಲ್ಲಿ ನಡೆಯಲಿರುವ ‘ಡಿ’ ಗುಂಪಿನ ಮೊದಲ ಪಂದ್ಯದಲ್ಲಿ ಹರ್ಮನ್‌ಪ್ರೀತ್‌ ಸಿಂಗ್‌ ಬಳಗ, ಸ್ಪೇನ್‌ ತಂಡದ ಸವಾಲು ಎದುರಿಸಲಿದೆ.

ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಕಂಚು ಗೆದ್ದಿದ್ದ ಭಾರತ ತಂಡ, ವಿಶ್ವಕಪ್‌ನಲ್ಲೂ ಅದೇ ರೀತಿಯ ಪ್ರದರ್ಶನ ನೀಡುವ ವಿಶ್ವಾಸದಲ್ಲಿದೆ. ಒಲಿಂಪಿಕ್ಸ್‌ನಲ್ಲಿ ನಾಲ್ಕು ದಶಕಗಳ ಪದಕದ ಬರ ನೀಗಿಸುವಲ್ಲಿ ಭಾರತ ಯಶಸ್ವಿಯಾಗಿತ್ತು.

ವಿಶ್ವಕಪ್‌ ಟೂರ್ನಿಯಲ್ಲಿ ಪದಕ ಲಭಿಸದೆ 48 ವರ್ಷಗಳೇ ಕಳೆದಿವೆ. 1975 ರಲ್ಲಿ ಅಜಿತ್‌ ಪಾಲ್‌ ಸಿಂಗ್‌ ನೇತೃತ್ವದ ತಂಡ ಚಾಂಪಿಯನ್‌ ಆಗಿತ್ತು. ಆ ಬಳಿಕ ಪದಕ ಗೆಲ್ಲಲು ಆಗಿಲ್ಲ.

1978 ರಿಂದ 2014ರ ವರೆಗಿನ ಅವಧಿಯಲ್ಲಿ ನಡೆದಿದ್ದ 10 ಟೂರ್ನಿಗಳಲ್ಲಿ ಭಾರತ ತಂಡ ಗುಂಪು ಹಂತವನ್ನೇ ದಾಟಿರಲಿಲ್ಲ. ಈ ಬಾರಿ ತವರು ನೆಲದಲ್ಲಿ ನಡೆಯುವ ಟೂರ್ನಿಯಲ್ಲಿ ಶ್ರೇಷ್ಠ ಪ್ರದರ್ಶನ ನೀಡುವ ವಿಶ್ವಾಸದಲ್ಲಿದೆ.

ಹರ್ಮನ್‌ಪ್ರೀತ್‌ ಸಿಂಗ್‌ ನೇತೃತ್ವದ ತಂಡ ಯುವ ಹಾಗೂ ಅನುಭವಿ ಆಟಗಾರರನ್ನು ಒಳಗೊಂಡಿದ್ದು, ಎಫ್‌ಐಎಚ್‌ ವಿಶ್ವ ರ್‍ಯಾಂಕಿಂಗ್‌ನಲ್ಲಿ ಆರನೇ ಸ್ಥಾನದಲ್ಲಿದೆ. ಇತ್ತೀಚೆಗೆ ಆಸ್ಟ್ರೇಲಿಯಾದಲ್ಲಿ ನಡೆದಿದ್ದ ಐದು ಪಂದ್ಯಗಳ ಸರಣಿಯನ್ನು ಭಾರತ 1–4 ರಲ್ಲಿ ಸೋತಿದ್ದರೂ, ಎದುರಾಳಿ ತಂಡಕ್ಕೆ ಭಾರಿ ಪೈಪೋಟಿ ಒಡ್ಡಿತ್ತು.

ನಾಲ್ಕು ವರ್ಷಗಳ ಹಿಂದೆ ಭುವನೇಶ್ವರದಲ್ಲಿ ನಡೆದಿದ್ದ ವಿಶ್ವಕಪ್‌ನಲ್ಲಿ ಭಾರತ, ಕ್ವಾರ್ಟರ್‌ ಫೈನಲ್‌ನಲ್ಲಿ ನೆದರ್ಲೆಂಡ್ಸ್‌ ಎದುರು ಮಣಿದಿತ್ತು. ಈ ಬಾರಿ ಕನಿಷ್ಠ ಸೆಮಿಫೈನಲ್‌ ಪ್ರವೇಶಿಸುವ ಗುರಿ ಇಟ್ಟುಕೊಂಡಿದೆ.

ಗ್ರಹಾಂ ರೀಡ್‌ ಅವರು 2019 ರಲ್ಲಿ ಕೋಚ್‌ ಆಗಿ ನೇಮಕಗೊಂಡ ಬಳಿಕ ತಂಡದ ಪ್ರದರ್ಶನದಲ್ಲಿ ಗಮನಾರ್ಹ ಸುಧಾರಣೆ ಕಂಡುಬಂದಿದೆ. ಎಫ್‌ಐಎಚ್‌ ಪ್ರೊ ಹಾಕಿ ಲೀಗ್‌ನಲ್ಲಿ 2021–22ರ ಋತುವಿನಲ್ಲಿ ಭಾರತ ತಂಡ ಮೂರನೇ ಸ್ಥಾನ ಗಳಿಸಿತ್ತು. ಆ ಸಾಧನೆ ಸಹಜವಾಗಿ ಆಟಗಾರರ ಆತ್ಮವಿಶ್ವಾಸ ಹೆಚ್ಚಿಸಿದೆ.

ಶುಭಾರಂಭದ ನಿರೀಕ್ಷೆ: ಸ್ಪೇನ್‌ ವಿರುದ್ಧ ನಡೆಯಲಿರುವ ಪಂದ್ಯದಲ್ಲಿ ಆತಿಥೇಯ ತಂಡ ಶುಭಾರಂಭದ ನಿರೀಕ್ಷೆಯಲ್ಲಿದೆ. ಗುಂಪಿನಲ್ಲಿ ಅಗ್ರಸ್ಥಾನ ಪಡೆದು ನೇರವಾಗಿ ಕ್ವಾರ್ಟರ್‌ ಫೈನಲ್‌ ಪ್ರವೇಶಿಸುವುದು ತಂಡದ ಗುರಿ. ಇಂಗ್ಲೆಂಡ್‌ ಮತ್ತು ವೇಲ್ಸ್‌ ‘ಡಿ’ ಗುಂಪಿನಲ್ಲಿರುವ ಇತರ ತಂಡಗಳು.

ನಾಯಕ ಹಾಗೂ ಎಫ್‌ಐಎಚ್‌ ವರ್ಷದ ಆಟಗಾರ ಗೌರವ ಪಡೆದಿರುವ ಹರ್ಮನ್‌ಪ್ರೀತ್‌ ಸಿಂಗ್, ಗೋಲ್‌ಕೀಪರ್‌ ಪಿ.ಆರ್‌.ಶ್ರೀಜೇಶ್, ಮಿಡ್‌ಫೀಲ್ಡರ್‌ಗಳಾದ ಮನ್‌ಪ್ರೀತ್‌ ಸಿಂಗ್‌ ಮತ್ತು ಹಾರ್ದಿಕ್‌ ಸಿಂಗ್‌ ಅವರು ತಂಡದ ಭರವಸೆ ಎನಿಸಿಕೊಂಡಿದ್ದಾರೆ. ಡಿಫೆಂಡರ್‌ ಅಮಿತ್‌ ರೋಹಿದಾಸ್‌ ಮತ್ತು ಫಾರ್ವರ್ಡ್‌ ಆಟಗಾರ ಆಕಾಶ್‌ದೀಪ್‌ ಸಿಂಗ್‌ ಅವರೂ ಉತ್ತಮ ಫಾರ್ಮ್‌ನಲ್ಲಿದ್ದಾರೆ.

ವಿಶ್ವ ರ್‍ಯಾಂಕಿಂಗ್‌ನಲ್ಲಿ 8ನೇ ಸ್ಥಾನದಲ್ಲಿರುವ ಸ್ಪೇನ್‌ ತಂಡವು ಭಾರತಕ್ಕೆ ಪ್ರಬಲ ಪೈಪೋಟಿ ನೀಡುವ ಸಾಧ್ಯತೆಯಿದೆ. ಯೂರೋಪ್‌ನ ಈ ತಂಡ ಒಮ್ಮೆಯೂ ವಿಶ್ವಕಪ್‌ ಜಯಿಸಿಲ್ಲ. 1971 ಮತ್ತು 1998 ರಲ್ಲಿ ರನ್ನರ್ಸ್‌ ಅಪ್‌ ಆಗಿದ್ದರೆ, 2006 ರಲ್ಲಿ ಕಂಚು ಗೆದ್ದುಕೊಂಡಿತ್ತು.

ಭಾರತ ತಂಡ: ಹರ್ಮನ್‌ಪ್ರೀತ್‌ ಸಿಂಗ್‌ (ನಾಯಕ), ಅಮಿತ್‌ ರೋಹಿದಾಸ್‌ (ಉಪನಾಯಕ), ಅಭಿಷೇಕ್‌, ಸುರೇಂದರ್ ಕುಮಾರ್, ಮನ್‌ಪ್ರೀತ್‌ ಸಿಂಗ್, ಹಾರ್ದಿಕ್ ಸಿಂಗ್, ಜರ್ಮನ್‌ಪ್ರೀತ್‌ ಸಿಂಗ್, ಮನ್‌ದೀಪ್‌ ಸಿಂಗ್, ಲಲಿತ್‌ ಉಪಾಧ್ಯಾಯ, ಕೃಷ್ಣ ಪಾಠಕ್, ನೀಲಂ ಸಂಜೀಪ್ ಸೆಸ್, ಪಿ.ಆರ್‌.ಶ್ರೀಜೇಶ್, ನೀಲಕಂಠ ಶರ್ಮ, ಶಂಶೇರ್‌ ಸಿಂಗ್, ವರುಣ್‌ ಕುಮಾರ್, ಆಕಾಶ್‌ದೀಪ್‌ ಸಿಂಗ್, ವಿವೇಕ್‌ ಸಾಗರ್‌ ಮತ್ತು ಸುಖ್‌ಜೀತ್‌ ಸಿಂಗ್

ಪಂದ್ಯ ಆರಂಭ: ಸಂಜೆ 7

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT