ಮಂಗಳವಾರ, ಅಕ್ಟೋಬರ್ 26, 2021
20 °C
ಉತ್ತಮ ಗೋಲ್‌ಕೀಪರ್ ಪ್ರಶಸ್ತಿ ಶ್ರೀಜೇಶ್‌, ಸವಿತಾ ಮುಡಿಗೆ

ಎಫ್ಐಎಚ್‌ ಪ್ರಶಸ್ತಿ ಘೋಷಣೆ: ಹರ್ಮನ್‌ಪ್ರೀತ್, ಗುರ್ಜೀತ್ ಶ್ರೇಷ್ಠ ಹಾಕಿಪಟುಗಳು

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಲಾಸೇನ್: ಅಂತರರಾಷ್ಟ್ರೀಯ ಹಾಕಿ ಫೆಡರೇಷನ್ (ಎಫ್‌ಐಎಚ್‌) ವಾರ್ಷಿಕ ಪ್ರಶಸ್ತಿಗಳನ್ನು ಘೋಷಿಸಿದ್ದು ಪ್ರಮುಖ ಪ್ರಶಸ್ತಿಗಳು ಭಾರತದ ಪುರುಷ ಮತ್ತು ಮಹಿಳಾ ತಂಡದ ಹಾಕಿಪಟುಗಳಿಗೆ ಲಭಿಸಿವೆ. ಮತದಾನದ ಮೂಲಕ ಪ್ರಶಸ್ತಿಗೆ ಆಯ್ಕೆ ನಡೆದಿದೆ. ಪುರುಷ ಮತ್ತು ಮಹಿಳಾ ತಂಡದ ಆರು ಹಾಕಿಪಟುಗಳು ಹಾಗೂ ಒಲಿಂಪಿಕ್ಸ್‌ನಲ್ಲಿ ಎರಡೂ ತಂಡಗಳ ಕೋಚ್‌ಗಳಿಗೆ ಗೌರವ ಸಂದಿದೆ.

ಆದರೆ, ಪುರುಷರ ವಿಭಾಗದಲ್ಲಿ ಒಲಿಂಪಿಕ್‌ ಚಾಂಪಿಯನ್ ಆಗಿರುವ ಬೆಲ್ಜಿಯಂ ಪ್ರಶಸ್ತಿ ವಿಷಯದಲ್ಲಿ ತಕರಾರು ಎತ್ತಿದ್ದು ಮತದಾನದಲ್ಲಿ ಎಫ್‌ಐಎಚ್‌ ವೈಫಲ್ಯ ಕಂಡಿದೆ ಎಂದು ಆರೋಪಿಸಿದೆ.

ಹರ್ಮನ್‌ಪ್ರೀತ್ ಸಿಂಗ್ ವರ್ಷದ ಶ್ರೇಷ್ಠ ಆಟಗಾರ ಪ್ರಶಸ್ತಿ ಗಳಿಸಿದ್ದು ಗುರ್ಜೀತ್ ಕೌರ್ ವರ್ಷದ ಉತ್ತಮ ಆಟಗಾರ್ತಿ ಎನಿಸಿಕೊಂಡಿದ್ದಾರೆ. ಪಿ.ಆರ್.ಶ್ರೀಜೇಶ್ ಮತ್ತು ಸವಿತಾ ಪೂನಿಯಾ ಅತ್ಯುತ್ತಮ ಗೋಲ್‌ಕೀಪರ್ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಶರ್ಮಿಳಾ ದೇವಿ ಮತ್ತು ವಿವೇಕ್ ಸಾಗರ್ ಪ್ರಸಾದ್ ಆತ್ಯುತ್ತಮ ಉದಯೋನ್ಮುಖ ಹಾಕಿಪಟುಗಳು ಪ್ರಶಸ್ತಿಯನ್ನು ಗೆದ್ದುಕೊಂಡಿದ್ದಾರೆ.

ಡ್ರ್ಯಾಗ್ ಫ್ಲಿಕ್ ಪರಿಣಿತರಾದ ಹರ್ಮನ್‌ಪ್ರೀತ್ ಸಿಂಗ್ ಮತ್ತು ಗುರ್ಜೀತ್ ಕೌರ್ ಅವರು ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಭಾರತ ತಂಡಗಳ ಪರವಾಗಿ ಅತಿಹೆಚ್ಚು ಗೋಲು ಗಳಿಸಿದ ಸಾಧನೆ ಮಾಡಿದ್ದರು. ಪುರುಷರ ತಂಡದ ಕೋಚ್ ಗ್ರಹಾಂ ರೀಡ್ ಮತ್ತು ಮಹಿಳಾ ತಂಡದ ಕೋಚ್ ಆಗಿದ್ದ ಶೊರ್ಡ್ ಮ್ಯಾರಿಜ್ ಉತ್ತಮ ಕೋಚ್‌ ಪ್ರಶಸ್ತಿ ಗಳಿಸಿದ್ದಾರೆ. ಗ್ರಹಾಂ ರೀಡ್ ಈಗ ತಂಡದ ಜೊತೆ ಇದ್ದಾರೆ. ಮ್ಯಾರಿಜ್ ಅವರ ಅವಧಿ ಒಲಿಂಪಿಕ್ಸ್‌ ನಂತರ ಮುಕ್ತಾಯಗೊಂಡಿತ್ತು. 

ರಾಷ್ಟ್ರೀಯ ತಂಡಗಳ ನಾಯಕರು ಮತ್ತು ಕೋಚ್‌ಗಳ ಮತಗಳು ಒಟ್ಟಾರೆ ಮತಗಳ 50 ಶೇಕಡಾ ಪಾಲು ಹೊಂದಿದ್ದು ಆಟಗಾರರು ಮತ್ತು ಅಭಿಮಾನಿಗಳ ಮತಗಳು 25 ಶೇಕಡಾ ಮತ್ತು ಮಾಧ್ಯಮಗಳ ಮತಗಳು 25 ಶೇಕಡಾ ಇದ್ದವು. ವಿವಿಧ ರಾಷ್ಟ್ರೀಯ ಪ್ರತಿನಿಧಿಗಳ ಒಟ್ಟು 79 ಮತಗಳು ದಾಖಲಾಗಿದ್ದವು.

ಪುರುಷ ಮತ್ತು ಮಹಿಳಾ ವಿಭಾಗದಲ್ಲಿ ಅತ್ಯುತ್ತಮ ಹಾಕಿಪಟುಗಳ ಆಯ್ಕೆಗೆ ಬೆಲ್ಜಿಯಂನಿಂದ ಹೆಸರು ಶಿಫಾರಸು ಆಗಿತ್ತು. ಆದರೆ ಮತಗಳ ಎಣಿಕೆಯಾದಾಗ ಭಾರತ ಮೇಲುಗೈ ಸಾಧಿಸಿತ್ತು. ಬೆಲ್ಜಿಯಂ 2020–21ರ ಎಫ್‌ಐಎಚ್‌ ಹಾಕಿ ಪ್ರೊ ಲೀಗ್‌ನ ಪ್ರಶಸ್ತಿಯನ್ನೂ ಗೆದ್ದುಕೊಂಡಿತ್ತು. ಅಲೆಕ್ಸಾಂಡರ್ ಹೆನ್ರಿಕ್ಸ್ ಮತ್ತು ಆರ್ಥರ್ ವ್ಯಾನ್ ಡೊರೆನ್  ಉತ್ತಮ ಆಟಗಾರರಿಗಾಗಿ ನಡೆದ ಮತದಾನದಲ್ಲಿ ಕ್ರಮವಾಗಿ ಎರಡು ಮತ್ತು ಮೂರನೇ ಸ್ಥಾನ ಗಳಿಸಿದರು. ಬೆಲ್ಜಿಯಂನ ವಿನ್ಸೆಂಟ್ ವನಶ್ ಎರಡನೇ ಅತ್ಯುತ್ತಮ ಗೋಲ್‌ಕೀಪರ್ ಮತ್ತು ನ್ಯೂಜಿಲೆಂಡ್‌ನ ಶೇನ್ ಮೆಕ್‌ಲೀಡ್ ಮೂರನೇ ಉತ್ತಮ ಗೋಲ್ ಕೀಪರ್ ಎನಿಸಿಕೊಂಡರು.

ಅತ್ಯುತ್ತಮ ಆಟಗಾರ್ತಿಯರ ಪ್ರಶಸ್ತಿಯ ಎರಡು ಮತ್ತು ಮೂರನೇ ಸ್ಥಾನ ಕ್ರಮವಾಗಿ ನೆದರ್ಲೆಂಡ್ಸ್‌ನ ಇವಾ ಡಿ ಜೋಡ್ ಮತ್ತು ಫ್ರೆಡ್ರಿಕ್ ಮಟ್ಲಾ ಅವರ ಪಾಲಾಯಿತು. 

 

ಎಫ್‌ಐಎಚ್ ಹಾಕಿ ಪ್ರಶಸ್ತಿಗಳ ಬಗ್ಗೆ ತಿಳಿದು ತುಂಬ ಬೇಸರವಾಗಿದೆ. ಹಾಕಿಯಲ್ಲಿ ಚಿನ್ನ ಗೆದ್ದ ತಂಡದ ಅನೇಕ ಆಟಗಾರರ ಹೆಸರನ್ನು ಕಳುಹಿಸಲಾಗಿತ್ತು. ಆದರೆ ಒಂದು ಪ್ರಶಸ್ತಿ ಕೂಡ ಲಭಿಸಲಿಲ್ಲ. ಇದರಿಂದಾಗಿ ಮತದಾನ ವ್ಯವಸ್ಥೆ ಬಗ್ಗೆ ಬೇಸರ ಮೂಡುವಂತಾಗಿದೆ. ಇದು ಸರಿಯಾದ ವಿಧಾನವಲ್ಲ. ಫಲಿತಾಂಶವು ಈ ಕ್ರೀಡೆಯ ಗೌರವಕ್ಕೆ ಧಕ್ಕೆ ತಂದಿದೆ. ವ್ಯವಸ್ಥೆಯನ್ನು ಉತ್ತಮಪಡಿಸಲು ಎಫ್‌ಐಎಚ್ ಜೊತೆಗೂಡಿ ಪ್ರಯತ್ನಿಸಲಾಗುವುದು.

ಹಾಕಿ ಬೆಲ್ಜಿಯಂ

ದಾಖಲಾದ ಮತಗಳ ವಿವರ

ಖಂಡ;ಸದಸ್ಯರು;ಮತಗಳು

ಆಫ್ರಿಕಾ;25;11

ಏಷ್ಯಾ;33;29

ಯೂರೋಪ್‌;42;19

ಒಷಿನಿಯಾ;8;3

ಪ್ಯಾನ್ ಅಮೆರಿಕ;30;17

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು