ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎ‍ಫ್‌ಐಎಚ್ ಪ್ರೊ ಲೀಗ್ ಹಾಕಿ: ಭಾರತಕ್ಕೆ ‘ರೆಡ್ ಲಯನ್ಸ್‌’ ಸವಾಲು

ವಿಶ್ವ ಚಾಂಪಿಯನ್ ಬೆಲ್ಜಿಯಂ ವಿರುದ್ಧ ಇಂದು ಪಂದ್ಯ
Last Updated 7 ಫೆಬ್ರುವರಿ 2020, 18:07 IST
ಅಕ್ಷರ ಗಾತ್ರ

ಭುವನೇಶ್ವರ: ಆತಿಥೇಯ ಭಾರತ ತಂಡಕ್ಕೆ ಎಫ್‌ಐಎಚ್‌ ಪ್ರೊ ಲೀಗ್ ಹಾಕಿ ಟೂರ್ನಿಯ ಎರಡನೇ ಸುತ್ತಿನ ಪಂದ್ಯದಲ್ಲಿ ಕಠಿಣ ಸವಾಲು ಎದುರಾಗಿದೆ. ಇಲ್ಲಿನ ಕಳಿಂಗ ಕ್ರೀಡಾಂಗಣದಲ್ಲಿ ಶನಿವಾರ ನಡೆಯಲಿರುವ ಎರಡನೇ ಸುತ್ತಿನ ಮೊದಲ ಪಂದ್ಯದಲ್ಲಿ ಭಾರತ, ವಿಶ್ವ ಚಾಂಪಿಯನ್ ಬೆಲ್ಜಿಯಂ ತಂಡವನ್ನು ಎದುರಿಸಲಿದೆ.

ಭಾರತ ಈ ಬಾರಿ ಉತ್ತಮ ಆರಂಭ ಕಂಡಿದೆ. ನೆದರ್ಲೆಂಡ್ಸ್ ಎದುರಿನ ಎರಡೂ ಪಂದ್ಯಗಳನ್ನು ಗೆದ್ದು ಐದು ಪಾಯಿಂಟ್ ಕಲೆ ಹಾಕಿದೆ. ಮೊದಲ ಸುತ್ತಿನ ಮೊದಲ ಪಂದ್ಯದಲ್ಲಿ ಭರ್ಜರಿ ಜಯ ಗಳಿಸಿದ್ದ ತಂಡ ಎರಡನೇ ಪಂದ್ಯದಲ್ಲಿ ಶೂಟ್ಔಟ್‌ನಲ್ಲಿ ರೋಚಕ ಜಯ ದಾಖಲಿಸಿತ್ತು.

ಮೊದಲ ಸುತ್ತಿನ ಕೊನೆಯ ಪಂದ್ಯ ಮುಗಿದು ಮೂರು ವಾರಗಳ ನಂತರ ಭಾರತ ಮತ್ತೆ ಕಣಕ್ಕೆ ಇಳಿಯುತ್ತಿದೆ. ಬೆಲ್ಜಿಯಂ ಈಗಾಗಲೇ ನಾಲ್ಕು ಪಂದ್ಯಗಳನ್ನು ಆಡಿ 11 ಪಾಯಿಂಟ್ ಕಲೆ ಹಾಕಿದೆ. ಇಷ್ಟೇ ಪಂದ್ಯಗಳನ್ನು ಆಡಿರುವ ನೆದರ್ಲೆಂಡ್ಸ್‌ ಏಳು ಪಾಯಿಂಟ್‌ಗಳೊಂದಿಗೆ ಎರಡನೇ ಸ್ಥಾನದಲ್ಲಿದೆ. ಆಸ್ಟ್ರೇಲಿಯಾ ಮತ್ತು ಜರ್ಮನಿ ಕ್ರಮವಾಗಿ ಮೂರು ಹಾಗೂ ನಾಲ್ಕನೇ ಸ್ಥಾನಗಳಲ್ಲಿವೆ.

ಉತ್ತಮ ಆರಂಭ ಕಂಡಿದ್ದರೂ ಬೆಲ್ಜಿಯಂ ವಿರುದ್ಧ ಗೆಲುವು ಸಾಧಿಸಬೇಕಾದರೆ ಕಠಿಣ ಪ್ರಯತ್ನ ನಡೆಸುವ ಭಾರ ಭಾರತದ ಮೇಲೆ ಇದೆ. ‘ರೆಡ್ ಲಯನ್ಸ್‌’ ಎಂದೇ ಕರೆಯಲಾಗುವ ಬೆಲ್ಜಿಯಂ ಕಳೆದ ಬಾರಿ ನಡೆದಿದ್ದ ಪ್ರೊ ಹಾಕಿ ಲೀಗ್‌ನಲ್ಲಿ ಇದೇ ಅಂಗಣದಲ್ಲಿ ಪ್ರಶಸ್ತಿ ಎತ್ತಿಹಿಡಿದಿತ್ತು.

ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್ ಎದುರಿನ ಪಂದ್ಯಗಳಲ್ಲಿ ಅಮೋಘ ಜಯ ಸಾಧಿಸಿದ ಬೆಲ್ಜಿಯಂ ತಂಡ ವಿಶ್ವ ರ‍್ಯಾಂಕಿಂಗ್‌ನಲ್ಲಿ ಆಸ್ಟ್ರೇಲಿಯಾವನ್ನು ಎರಡನೇ ಸ್ಥಾನಕ್ಕೆ ತಳ್ಳಿ ಅಗ್ರ ಕ್ರಮಾಂಕವನ್ನು ಗಳಿಸಿತ್ತು. ಆದರೂ ಭಾರತದ ವಿರುದ್ಧ ಗೆಲುವು ಸುಲಭವಲ್ಲ ಎಂದು ತಂಡದ ನಾಯಕ ಥಾಮಸ್ ಬ್ರೀಲ್ಸ್‌ ಅಭಿಪ್ರಾಯಪಟ್ಟಿದ್ದಾರೆ.

ಆರಂಭ: ಸಂಜೆ 5.00

ಸ್ಥಳ: ಕಳಿಂಗ ಕ್ರೀಡಾಂಗಣ, ಭುವನೇಶ್ವರ

ರ‍್ಯಾಂಕಿಂಗ್

ಬೆಲ್ಜಿಯಂ 1

ಭಾರತ 5

ಕಳಿಂಗದಲ್ಲಿ ಭಾರತ–ಬೆಲ್ಜಿಯಂ

ಪಂದ್ಯಗಳು 10

ಭಾರತಕ್ಕೆ ಜಯ 8

ಡ್ರಾ 2

ಮೊದಲ ಸುತ್ತಿನ ಪಂದ್ಯಗಳಲ್ಲಿ ಭಾರತ

ಎದುರಾಳಿ; ಫಲಿತಾಂಶ; ಅಂತರ

ನೆದರ್ಲೆಂಡ್ಸ್; ಜಯ; 5–2

ನೆದರ್ಲೆಂಡ್ಸ್; ಡ್ರಾ; 3–3

ನೆದರ್ಲೆಂಡ್ಸ್ ವಿರುದ್ಧ ಗೋಲು ಗಳಿಸಿದವರು

ಮೊದಲ ಪಂದ್ಯ

ಗುರುಜಂತ್ ಸಿಂಗ್ (1ನೇ ನಿಮಿಷ)

ರೂಪಿಂದರ್ ಪಾಲ್ ಸಿಂಗ್ (12, 46ನೇ ನಿ)

ಮನ್‌ದೀಪ್ ಸಿಂಗ್ (34ನೇ ನಿ)

ಲಲಿತ್ ಕುಮಾರ್ (36ನೇ ನಿ)

ಎರಡನೇ ಪಂದ್ಯ

ಲಲಿತ್ ಕುಮಾರ್ (25ನೇ ನಿ)

ಮನ್‌ದೀಪ್ ಸಿಂಗ್ (51ನೇ ನಿ)

ರೂಪಿಂದರ್ ಪಾಲ್ ಸಿಂಗ್ (55ನೇ ನಿ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT