ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೂನಿಯರ್ ಮಹಿಳೆಯರ ವಿಶ್ವಕಪ್ ಹಾಕಿ ಟೂರ್ನಿ: ಎಂಟರ ಘಟ್ಟದಲ್ಲಿ ಕೊರಿಯಾ ಎದುರಾಳಿ

ಭಾರತ ಮಹಿಳೆಯರಿಗೆ ಸೆಮಿಫೈನಲ್ ಕನಸು
Last Updated 7 ಏಪ್ರಿಲ್ 2022, 13:40 IST
ಅಕ್ಷರ ಗಾತ್ರ

ಪೊಚೆಫ್‌ಸ್ಟ್ರೂಮ್: ಅಜೇಯ ಓಟದಲ್ಲಿರುವ ಭಾರತ ತಂಡ ಜೂನಿಯರ್ ಮಹಿಳೆಯರ ವಿಶ್ವಕಪ್ ಹಾಕಿ ಟೂರ್ನಿಯಲ್ಲಿ ಕೊರಿಯಾವನ್ನು ಶುಕ್ರವಾರ ಎದುರಿಸಲಿದೆ. ರ‍್ಯಾಂಕಿಂಗ್‌ನಲ್ಲಿ ಎದುರಾಳಿ ತಂಡ ತನಗಿಂತ ಕೆಳಕ್ರಮಾಂಕದಲ್ಲಿ ಇರುವುದರಿಂದ ಭಾರತ ಭರವಸೆಯಲ್ಲಿದೆ.

ಮೂರು ಪಂದ್ಯಗಳಲ್ಲಿ ಒಟ್ಟು 9 ಪಾಯಿಂಟ್‌ಗಳನ್ನು ಕಲೆ ಹಾಕಿರುವ ಭಾರತ ತಂಡ ‘ಡಿ’ ಗುಂಪಿನ ಅಗ್ರಸ್ಥಾನದಲ್ಲಿದೆ. ವೇಲ್ಸ್ ವಿರುದ್ಧ 5–1ರಲ್ಲಿ, ಜರ್ಮನಿ ಎದುರು 2–1ರಲ್ಲಿ ಮತ್ತು ಮಲೇಷ್ಯಾ ವಿರುದ್ಧ 4–0ಯಿಂದ ತಂಡ ಜಯ ಗಳಿಸಿದೆ. ಕೊರಿಯಾ ಖಾತೆಯಲ್ಲಿ ಕೇವಲ 3 ಪಾಯಿಂಟ್‌ಗಳು ಇವೆ. ಅದರೆ ಉತ್ತಮ ಗೋಲು ಸರಾಸರಿಯಿಂದಾಗಿ ‘ಸಿ’ ಗುಂಪಿನಲ್ಲಿ ಎರಡನೇ ಸ್ಥಾನ ಗಳಿಸಲು ತಂಡಕ್ಕೆ ಸಾಧ್ಯವಾಗಿದೆ.

ಕೊರಿಯಾ ಎದುರು ಈ ವರೆಗೆ ಆಡಿರುವ 13 ಪಂದ್ಯಗಳ ಪೈಕಿ ಭಾರತ 11ರಲ್ಲಿ ಜಯ ಗಳಿಸಿದೆ. ಆದ್ದರಿಂದ ಶುಕ್ರವಾರದ ಪಂದ್ಯದಲ್ಲೂ ಸುಲಭ ಜಯ ಸಾಧಿಸಿ ಸೆಮಿಫೈನಲ್‌ ಪ್ರವೇಶಿಸುವ ಹುಮ್ಮಸ್ಸಿನಲ್ಲಿದೆ.

ಒಲಿಂಪಿಕ್ಸ್‌ನಲ್ಲಿ ಆಡಿದ ಅನುಭವವಿರುವ ನಾಯಕಿ ಸಲಿಮಾ ಟೆಟೆ, ಸ್ಟ್ರೈಕರ್‌ಗಳಾದ ಶರ್ಮಿಳಾ ದೇವಿ ಮತ್ತು ಲಾಲ್‌ರೆಮ್ಸಿಯಾಮಿ ಅವರ ಬಲ ಭಾರತ ತಂಡಕ್ಕಿದೆ. ಹೀಗಾಗಿ ಈ ವರೆಗಿನ ಎಲ್ಲ ಪಂದ್ಯಗಳಲ್ಲೂ ಆಧಿಪತ್ಯ ಸ್ಥಾಪಿಸಲು ತಂಡಕ್ಕೆ ಸಾಧ್ಯವಾಗಿದೆ. ಯುವ ಆಟಗಾರ್ತಿ ಮುಮ್ತಾಜ್ ಖಾನ್ ಅವರು ಅಮೋಘ ಸಾಮರ್ಥ್ಯ ತೋರಿದ್ದಾರೆ. ಈ ವರೆಗೆ ಅವರು 5 ಗೋಲುಗಳನ್ನು ಗಳಿಸಿದ್ದಾರೆ. ಮಲೇಷ್ಯಾ ಎದುರಿನ ಪಂದ್ಯದಲ್ಲಿ ಹ್ಯಾಟ್ರಿಕ್‌ನೊಂದಿಗೆ ಮಿಂಚಿದ್ದಾರೆ.

ಲಾಲ್‌ರೆಮ್ಸಿಯಾಮಿ ಮತ್ತು ಲಾಲ್‌ರಿಂಡಿಕಿ ಕೂಡ ತಂಡದ ಭರವಸೆ ಎನಿಸಿದ್ದಾರೆ. ಅವರು ತಲಾ ಎರಡು ಗೋಲು ಗಳಿಸಿದ್ದಾರೆ. ಸಂಗೀತಾ ಕುಮಾರಿ ಮತ್ತು ಡ್ರ್ಯಾಗ್ ಫ್ಲಿಕ್ಕರ್ ದೀಪಿಕಾ ಒಂದೊಂದು ಗೋಲು ಗಳಿಸಿ ತಂಡದಲ್ಲಿ ನಿರೀಕ್ಷೆ ಮೂಡಿಸಿದ್ದಾರೆ. ಉಪನಾಯಕಿ ಇಶಿಕಾ ಚೌಧರಿ ಅವರ ಮೇಲೆಯೂ ಭರವಸೆ ಇದೆ.

ಕ್ವಾರ್ಟರ್ ಫೈನಲ್ ಹಣಾಹಣಿ

ಭಾರತ–ಕೊರಿಯಾ

ಆರಂಭ:12.30

ನೆದರ್ಲೆಂಡ್ಸ್‌–ದಕ್ಷಿಣ ಆಫ್ರಿಕಾ

ಆರಂಭ: 2.45

ಇಂಗ್ಲೆಂಡ್‌–ಅಮೆರಿಕ

ಆರಂಭ: 7.15

ಅರ್ಜೆಂಟೀನಾ–ಜರ್ಮನಿ

9.30

(ಸಮಯ: ಭಾರತೀಯ ಕಾಲಮಾನ)

ನೇರ ಪ್ರಸಾರ: https://watch.hockey

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT