ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪರೀಕ್ಷೆ, ಪ್ರಶ್ನೆಪತ್ರಿಕೆ, ಕೃಪಾಂಕ

Last Updated 28 ಮಾರ್ಚ್ 2018, 19:30 IST
ಅಕ್ಷರ ಗಾತ್ರ

ಪ್ರಶ್ನೆಪತ್ರಿಕೆಯಲ್ಲಿ ದೋಷವಿದ್ದ ಕಾರಣ ದ್ವಿತೀಯ ಪಿ.ಯು. ಭೌತಶಾಸ್ತ್ರ ಮತ್ತು ಇಂಗ್ಲಿಷ್ ವಿಷಯದಲ್ಲಿ ಕ್ರಮವಾಗಿ ಆರು, ಮೂರು ಕೃಪಾಂಕ ನೀಡಲು ಪ. ಪೂ. ಶಿಕ್ಷಣ ಇಲಾಖೆ ಮುಂದಾಗಿದೆ (ಪ್ರ.ವಾ., ಮಾ. 23). ನಮ್ಮ ಶಿಕ್ಷಣ ಪದ್ಧತಿ, ಪರೀಕ್ಷೆ ಕುರಿತ ಜಿಜ್ಞಾಸೆಗಳು ಹಲವು. ವರ್ಷವಿಡೀ ವಿದ್ಯಾರ್ಥಿಗಳು ಕಲಿತಿದ್ದನ್ನು ಮೂರು ತಾಸುಗಳ ಅವಧಿಯಲ್ಲಿ ಅವರು ದಾಖಲಿಸುವ ಉತ್ತರಗಳಿಂದ ಅಳೆಯುವುದು ಸಾಧ್ಯವೇ, ಸರಿಯೇ ಎಂಬ ಪ್ರಶ್ನೆ ಒಂದೆಡೆ. ಪರೀಕ್ಷೆ ವಿದ್ಯಾರ್ಥಿಗಳ ನೆನಪಿನ ಶಕ್ತಿಯನ್ನಷ್ಟೆ ಅಳೆಯುತ್ತದೆ, ಜ್ಞಾನವನ್ನಲ್ಲ ಎನ್ನುವ ವಾದ ಇನ್ನೊಂದೆಡೆ. ಭಾವೀ ಪ್ರಜೆಗಳು ಕೆಲ ದಿನಗಳವರೆಗಾದರೂ ಒಂದಷ್ಟು ತಿಳಿದಿರಲು ಪರೀಕ್ಷೆ ಏಕೈಕ ಮಾರ್ಗ ಎಂಬ ವ್ಯಂಗ್ಯೋಕ್ತಿಯುಂಟು! ಪರೀಕ್ಷೆ ಮುಗಿದ ಕ್ಷಣದಿಂದಲೇ ಬಹುತೇಕ ವಿದ್ಯಾರ್ಥಿಗಳು ಆಯಾ ವಿಷಯಗಳ ಕಲಿಕೆಗೆ ಮಂಗಳ ಹಾಡುತ್ತಾರೆ, ಪರೀಕ್ಷೆಯೇ ಅನಗತ್ಯ. ಗ್ರೇಡ್, ದರ್ಜೆ ನೀಡಿದರಷ್ಟೇ ಸಾಕು ಎಂಬ ವಾದವೂ ಇದೆ.

ಪ್ರಸ್ತುತ ಪರೀಕ್ಷಾ ವ್ಯವಸ್ಥೆಯಲ್ಲಿ ಇತ್ತೀಚಿನ ವರ್ಷಗಳಲ್ಲಂತೂ ಗಂಭೀರವಾದ ದೋಷವೊಂದು ಸಾಮಾನ್ಯವಾಗಿಬಿಟ್ಟಿದೆ. ಅದುವೇ ಪ್ರಶ್ನೆಪತ್ರಿಕೆಗಳಲ್ಲಿನ ತಪ್ಪುಗಳು. ಇದು ವಿದ್ಯಾರ್ಥಿಗಳಲ್ಲಿ ಮತ್ತು ಅವರಿಗಿಂತಲೂ ಹೆಚ್ಚಾಗಿ ಪೋಷಕರಲ್ಲಿ ಆತಂಕ ಸೃಷ್ಟಿಸುವುದರಲ್ಲಿ ಎರಡು ಮಾತಿಲ್ಲ. ಕಲಿಕೆಯ ಅಷ್ಟೋ ಇಷ್ಟೋ ರೋಚಕತೆ, ಆನಂದವನ್ನು ಈಗಾಗಲೇ ಪರೀಕ್ಷಾ ಭಯ ಕಸಿದಿದೆ. ಇನ್ನು ಕೇಳಲಾಗುವ ಪ್ರಶ್ನೆಗಳಲ್ಲೇ ಲೋಪ, ಸಂದೇಹಗಳಿದ್ದರೆ ಅದು ಗೊಂದಲಗಳ ಸರಣಿಯನ್ನೇ ಸೃಷ್ಟಿಸುತ್ತದೆ. ತಬ್ಬಿಬ್ಬಿನಿಂದ ಅವರಲ್ಲಿ ಕೊರಗು ಕಾಡಿ ಉಳಿದ ವಿಷಯಗಳ ಪರೀಕ್ಷೆಗಳನ್ನು ತೆಗೆದುಕೊಳ್ಳುವುದರಲ್ಲೂ ಧೈರ್ಯ ಕುಗ್ಗುತ್ತದೆ.

ಸಾಮಾನ್ಯವಾಗಿ ವಿಜ್ಞಾನ ವಿಷಯಗಳಲ್ಲಿ ಅದರಲ್ಲೂ ಗಣಿತದ ಪ್ರಶ್ನೆ ಪತ್ರಿಕೆಯಲ್ಲಿ ತಪ್ಪುಗಳಾಗುತ್ತವೆಯೆಂದು ಬೇರೆ ಹೇಳಬೇಕಿಲ್ಲ. ಪ್ಲಸ್, ಮೈನಸ್, ವರ್ಗ, ಇಂಟು, ಘಾತ ವಗೈರೆ ಚಿಹ್ನೆಗಳು ಯುಕ್ತ ಸ್ಥಳದಲ್ಲಿರದೆ ಗಲಿಬಿಲಿಯೆಬ್ಬಿಸುತ್ತವೆ. ಭಾಷಾ ವಿಷಯಕ್ಕೂ ದೋಷ ನುಸುಳಿದ್ದು ಬೇಸರದ ಸಂಗತಿ. ಅತ್ಯಾಧುನಿಕ ತಂತ್ರಜ್ಞಾನ ಲಭ್ಯವಿರುವುದರಿಂದ ಇದು ಪರಿಹರಿಸಲಾಗದ ನ್ಯೂನತೆಯೇನಲ್ಲ. ‘ಪ್ರಶ್ನೆಪತ್ರಿಕೆಯಲ್ಲಿ ತಪ್ಪುಗಳಿದ್ದವು. ಆ ಕಾರಣಕ್ಕೆ ಮರು ಪರೀಕ್ಷೆ ನಡೆಸಿ, ಇಲ್ಲವೇ ಕೃಪಾಂಕ ನೀಡಿ’ ಎಂಬ ಒತ್ತಾಯ ಸಹಜವೇ. ಪುನಃ ಪರೀಕ್ಷೆ ನಡೆಸುವುದಕ್ಕಿಂತಲೂ ಕೃಪಾಂಕ ನೀಡಿಕೆ ಸುಲಭವೆಂದು ವ್ಯವಸ್ಥೆ ಭಾವಿ
ಸಿದಂತಿದೆ. ಇದರಿಂದ ಸದ್ಯಕ್ಕೆ ಸಮಾಧಾನವೆನ್ನಿಸಬಹುದು. ಆದರೆ ಈ ನಿಲುವು ಇಂದಲ್ಲದಿದ್ದರೂ ವಿದ್ಯಾರ್ಥಿಗಳ ಭವಿತವ್ಯದಲ್ಲಿ ವ್ಯತಿರಿಕ್ತ ಪರಿಣಾಮ ಬೀರುವ ಸಾಧ್ಯತೆ ಇದ್ದೇ ಇದೆ. ಉನ್ನತ ವಿದ್ಯಾಭ್ಯಾಸ, ಸಂಶೋಧನೆ ಅಥವಾ ನೌಕರಿಗೆ ಸಂಬಂಧಿಸಿದ ಸ್ಪರ್ಧಾಪರೀಕ್ಷೆ, ಸಂದರ್ಶನವನ್ನು ಅವರು ಎದಿರಿಸುವುದಾದರೂ ಹೇಗೆ? ‘ಓ ನಿಮಗೆ ಗ್ರೇಸ್ ಕೊಟ್ಟು ತೇರ್ಗಡೆಯಾಗಿಸಲಾಯ್ತಲ್ಲ ಆ ಪರೀಕ್ಷೆಯಲ್ಲಿ ಬಂದ ಅಂಕಗಳು ತಾನೆ ಇವು?’ ಎಂದಾಗ
ಆಗುವ ಮುಜುಗರ ಎಂಥದ್ದು? ಹಾಗಾಗಿ ಎಲ್ಲ ಬಗೆಯ ತಪ್ಪುಗಳಿಂದ ಮುಕ್ತವಾದ, ಸ್ಪಷ್ಟ ಮತ್ತು ನೇರ ಪ್ರಶ್ನೆಗಳನ್ನು ಹೊತ್ತ ಪ್ರಶ್ನೆಪತ್ರಿಕೆ, ವಿದ್ಯಾರ್ಥಿಗಳ ಪಾಲಿಗೆ ಒಂದು ಕೊಡುಗೆಯೇ ಹೌದು. ಪರೀಕ್ಷಾ ಮಂಡಳಿಗೆ ಗೌಪ್ಯತೆ ಕಾಪಾಡುವಷ್ಟೇ ಗಹನವಾಗಿ ತಪ್ಪಿಲ್ಲದ ಪ್ರಶ್ನೆ ಪತ್ರಿಕೆಗಳನ್ನು ಸಿದ್ಧಪಡಿಸಿ ಒದಗಿಸುವ ಹೊಣೆಗಾರಿಕೆಯೂ ಇದೆ.

ಪಠ್ಯ ವಿಷಯ ಮಾರ್ಪಾಡಾದಂತೆ ಬೋಧಕರಿಗೆ ಆಯಾ ವಿಷಯಗಳಲ್ಲಿ ಪ್ರಶ್ನೆ ಪತ್ರಿಕೆಗಳನ್ನು ರೂಪಿಸುವ ಬಗ್ಗೆ ಪ್ರಶಿಕ್ಷಣ, ತರಬೇತಿ ಕಾರ್ಯಕ್ರಮಗಳನ್ನು ಆಯೋಜಿಸುವ ಅಗತ್ಯವಿದೆ. ವಿದ್ಯಾರ್ಥಿಗಳಲ್ಲಿ ಅವಿತ ಪ್ರತಿಭೆಯನ್ನು ಅನಾವರಣಗೊಳಿಸುವಂತಹ ಪ್ರಶ್ನೆಗಳು ಪರೀಕ್ಷೆಯ ಧ್ಯೇಯವನ್ನು ಉನ್ನತೀಕರಿಸುತ್ತವೆ. ಇಂತಹ ಪ್ರಶ್ನೆಗಳ ರಚನೆ ಸವಾಲೂ ಹೌದು, ಕೌಶಲವೂ ಹೌದು. ಪರೀಕ್ಷಕರು ವಿದ್ಯಾರ್ಥಿಗಳಿಗೆ ಅತಿ ಕಠಿಣ ಅಥವಾ ಅತಿ
ಸುಲಭವಾದ ಪ್ರಶ್ನೆಗಳನ್ನು ಕೇಳದೆ ಪ್ರಶ್ನೆ ಪ್ರತಿಕೆಯನ್ನು ಜ್ಞಾನಪ್ರದಗೊಳಿಸಬೇಕು. ಪ್ರಶ್ನೆಗಳು ಎಲ್ಲ ಅಧ್ಯಯಗಳನ್ನೂ ಒಳಗೊಂಡು ಅರಿವನ್ನು ಪ್ರಚೋದಿಸುವಂತಿರಬೇಕು. ಉತ್ತರಿಸುವ ಆ ಮೂರು ತಾಸುಗಳು ಮಕ್ಕಳಿಗೆ ರಂಜನೀಯವಾಗಿರಬೇಕೇ ಹೊರತು ಶಿಕ್ಷೆಯೆನ್ನಿಸಬಾರದು.

ಪ್ರಶ್ನೆಪತ್ರಿಕೆ ಪರೀಕ್ಷಕರ ಪಾಂಡಿತ್ಯ ಪ್ರದರ್ಶನವಲ್ಲ! ಎಂಥವರಿಗೂ ಉತ್ತರಿಸಲಾಗದಷ್ಟು ತ್ರಾಸದ ಪ್ರಶ್ನೆ ತಮ್ಮದು ಎಂದು ಬೀಗುವಂತಹದ್ದು ಒಂದು ಹಿನ್ನಡೆಯೇ. ಪ್ರಶ್ನೆ ಪತ್ರಿಕೆಗಳು ರೂಪುಗೊಂಡ ನಂತರ ಅವನ್ನು ಇನ್ನೊಂದು ಪರೀಕ್ಷಕರ ತಂಡ ಪುನರ್‌ ಪರಿಶೋಧಿಸುವ ಅಗತ್ಯವಿದೆ. ಈ ಕ್ರಮ, ದೋಷರಹಿತ ಪ್ರಶ್ನೆಪತ್ರಿಕೆಗೆ ಪರಿಣಾಮಕಾರಿ. ವಿದ್ಯಾರ್ಥಿಗಳಿಂದ ಇಂತಿಂಥ ಪ್ರಶ್ನೆಗೆ ತಾವು ಎಂಥ ಉತ್ತರ ನಿರೀಕ್ಷಿಸುತ್ತೇವೆ ಎನ್ನುವ ಪೂರ್ಣ ಚಿತ್ರಣ ಪರೀಕ್ಷಕರಲ್ಲಿರುವುದು ಬಹು ಮುಖ್ಯ.

ಊರಿಗೆ ಹೊಸದಾಗಿ ಬಂದ ಪ್ರವಾಸಿಗೆ ಬೆಟ್ಟ, ನದಿ, ನವಿಲು, ಸ್ಮಾರಕ ಮುಂತಾದವನ್ನು ತೋರಿಸ ಹೊರಟ ಮಾರ್ಗದರ್ಶಕನಿಗೇ ಅವು ಗೊತ್ತಿರದಿದ್ದರೆ ಹೇಗೆ! ಐದು ದಶಕಗಳ ಹಿಂದೆ ವಿವಿಧ ಪರೀಕ್ಷೆಗಳಿಗೆ ಕೂರುತ್ತಿದ್ದ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಿತ್ತೆಂಬ ಸಮರ್ಥನೆ ಬದಿಗಿಡೋಣ. ಆ ದಿನಗಳಲ್ಲಿ ಪರೀಕ್ಷೆಗಳ ನಿರ್ವಹಣೆಯ ಒಂದೊಂದು ಮಜಲಿನಲ್ಲೂ ವಹಿಸುತ್ತಿದ್ದ ಎಚ್ಚರ, ಅಚ್ಚುಕಟ್ಟು ನಿಜಕ್ಕೂ ಮಾದರಿ. ಅಪ್ಪಿ ತಪ್ಪಿಯೂ ಪ್ರಶ್ನೆ ಪತ್ರಿಕೆ ಬಯಲಾದುದಿಲ್ಲ. ಆಯಾ ವರ್ಷದ ಪರೀಕ್ಷೆಗಳ, ಆಯಾ ವಿಷಯಗಳ ಮೇಲಿನ ಹಳೆಯ ಪ್ರಶ್ನೆ ಪತ್ರಿಕೆಗಳು ಅಧ್ಯಾಪಕರಲ್ಲಿ, ವಿದ್ಯಾರ್ಥಿಗಳಲ್ಲಿ ಶೈಕ್ಷಣಿಕ ವರ್ಷದುದ್ದಕ್ಕೂ ಬೋಧಪ್ರದವಾಗಿ ಹೊಸ ಹೊಸ ಸಂಚಲನ ಮೂಡಿಸುತ್ತಿದ್ದವು. ವಿಷಯಾನುಕ್ರಮವಾಗಿ ಅವನ್ನು ಹೊಲಿದಿಟ್ಟುಕೊಳ್ಳುವುದೇ ಹಿಗ್ಗು. ಉತ್ಸುಕಭರಿತ ಪ್ರಶ್ನೆಗಳಿಂದ ತುಳುಕುತ್ತಿದ್ದ ಆ ಕಿರು ಹೊತ್ತಿಗೆಗಳು ಹಲವು ಉದಯೋನ್ಮುಖ ಗುರುವರ್ಯರಿಗೆ ಸಮರ್ಥ ಬೋಧನೆಗೆ ಪ್ರೇರಕ ದ್ರವ್ಯಗಳಾಗಿದ್ದವು. ಪ್ರಶ್ನೆಗಳಿಗೆ ಕಂಡುಕೊಂಡ ಉತ್ತರಗಳು ಪರಾಮರ್ಶನ ಗ್ರಂಥಗಳಾಗಿ ಆಕೃತಿ ಪಡೆಯುತ್ತಿದ್ದವು. ಪ್ರಶ್ನೆಪತ್ರಿಕೆ ಸಿದ್ಧಪಡಿಸುವ ಪ್ರಕ್ರಿಯೆಯಲ್ಲಿ ಕರಡನ್ನು ಕಣ್ಣಲ್ಲಿ ಕಣ್ಣಿಟ್ಟು ಒಂದೊಂದೂ ಪದ, ಒಕ್ಕಣೆ, ಪದೋಕ್ತಿ, ವ್ಯಾಕರಣವನ್ನು ಗಮನಿಸಿದರೆ ಆಗಬಹುದಾದ ನ್ಯೂನತೆಗಳನ್ನು ತಡೆಗಟ್ಟಲು ಸಾಧ್ಯ. ತಪ್ಪಿಲ್ಲದ ಪ್ರಶ್ನೆಪತ್ರಿಕೆಗೆ ‘ಯೋಜನೆ ತಯಾರಿಗೂ ಯೋಜನೆ ಅಗತ್ಯ’ವೆನ್ನುವಂತೆ ಕರಡಿಗೂ ಕರಡು ಬೇಕು! ಪರೀಕ್ಷಕರು ವಿದ್ಯಾರ್ಥಿಗಳ ಸ್ಥಾನದಲ್ಲಿ ನಿಂತು ಪ್ರಶ್ನೆಗಳು ಸುಲಭವಾಗಿ ಯಾವುದೇ ಸಂದಿಗ್ಧತೆಯಿಲ್ಲದೆ ಅರ್ಥೈಸಿಕೊಳ್ಳಲು ಸಾಧ್ಯವೆಂದು ಖಾತರಿಪಡಿಸಿಕೊಳ್ಳುವುದು ಬಹು ಮುಖ್ಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT